ಬೆಂಗಳೂರು : ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಎರಡು ವರ್ಷದಲ್ಲಿ ಯಾವುದೇ ಅಭಿವೃದ್ಧಿ ಚಟುವಟಿಕೆ ಮಾಡಿಲ್ಲ. ಸರಕಾರ ಅನುದಾನ ನೀಡದಿರುವ ಕಾರಣ ಶಾಸಕರು ತಲೆ ಎತ್ತದೆ ಓಡಾಡುವಂತಾಗಿದೆ ಎಂದು ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ಅವರು ಇಂದು ಸದನದಲ್ಲಿ ರಾಜ್ಯ ಸರಕಾರದ ವಿರುದ್ಧ ಹರಿಹಾಯ್ದಿದ್ದಾರೆ.
ಗುರುವಾರ ವಿಧಾನಸಭೆಯಲ್ಲಿ ನಿಯಮ 69 ರಡಿಯಲ್ಲಿ ಅನುದಾನದ ಬಗ್ಗೆ ಮಾತನಾಡಿದ ಬಿಜೆಪಿ ಶಾಸಕರು, ಇತ್ತೀಚೆಗೆ ಸು ಪ್ರಮ್ ಸೋ ಸಿನಿಮಾ ಪ್ರಸಿದ್ಧವಾಗಿದೆ. ಆದರೆ ನಾನು ಈ ಸರಕಾರವನ್ನು ಬಿ ಪ್ರಮ್ ಸಿ ಎಂದು ಹೇಳುತ್ತೇನೆ. ಬೋಗಸ್ ಫ್ರಮ್ ಕಾಂಗ್ರೆಸ್. ಕಳೆದ ಎರಡು ವರ್ಷದಲ್ಲಿ ಬೋಗಸ್ ಹೇಳಿದ್ದು ಬಿಟ್ಟರೆ ಬೇರೆ ಏನೂ ಮಾಡಿಲ್ಲ ಎಂದು ಟೀಕೆ ಮಾಡಿದರು.
ರಸ್ತೆಗೆ ಮಣ್ಣು ಹಾಕಲೂ ಈ ಸರಕಾರ ಹಣ ನೀಡುತ್ತಿಲ್ಲ. ಒಂದೇ ಒಂದು ಕಿ.ಮೀ. ಹೊಸ ರಸ್ತೆ ನಿರ್ಮಾಣವಾಗಿಲ್ಲ. ಶಾಸಕರು ಓಡಾಡಲು ಆಗದ ಪರಿಸ್ಥಿತಿಯಿದೆ ಎಂದ ಸುನಿಲ್ ಕುಮಾರ್ ಈ ಮುಖ್ಯಮಂತ್ರಿ ಅಧಿಕಾರದಲ್ಲಿರುವಾಗಲೇ ಶಾಸಕರಿಗೆ ಅನುದಾನ ಕೊಡುತ್ತೀರೋ ಅಥವಾ ನವೆಂಬರ್ ಬಳಿಕ ಬದಲಾಗುವ ಮುಖ್ಯಮಂತ್ರಿಯಿಂದ ಅನುದಾನ ಕೊಡಿಸುತ್ತೀರೋ ಎಂದು ಪ್ರಶ್ನೆ ಮಾಡಿದರು.

ಮಾತೆತ್ತಿದರೆ ಬಡವರ ಪರ ಎನ್ನುತ್ತಾರೆ. ಆದರೆ, ವಸತಿ ಯೋಜನೆಯಲ್ಲಿ ಕಳೆದ ಎರಡು ವರ್ಷದಲ್ಲಿ ಒಂದೇ ಒಂದು ಮನೆ ಕೊಟ್ಟಿಲ್ಲ. ಹೀಗಾದರೆ ವಸತಿ ಇಲಾಖೆ ಇರುವುದು ಯಾಕೆ ಎಂದು ಪ್ರಶ್ನಿಸಿದ ಅವರು ನಿಗಮ ಮಂಡಳಿಗಳಿಗೆ ಸರಕಾರ ಅನುದಾನ ನೀಡುತ್ತಿಲ್ಲ ಎಂದರು.





















