ಧರ್ಮಸ್ಥಳ ಪ್ರಕರಣ – ವಿರೇಂದ್ರ ಹೆಗ್ಗಡೆಯವರಿಂದ ಮೊದಲ ಪ್ರತಿಕ್ರಿಯೆ

ಬೆಂಗಳೂರು : ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತು ಹಾಕಲಾಗಿದೆ ಎಂಬ ಪ್ರಕರಣ ಸಂಬಂಧಿಸಿದಂತೆ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಾಲಯದ ಧರ್ಮಾಧಿಕಾರಿ ಡಾ. ಡಿ. ವಿರೇಂದ್ರ ಹೆಗ್ಗಡೆಯವರು ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದಾರೆ.

ಸುದ್ದಿ ಸಂಸ್ಥೆ ಪಿಟಿಐಗೆ ನೀಡಿರುವ ಸಂದರ್ಶನದಲ್ಲಿ ಅವರು, ಸೌಜನ್ಯ ಪ್ರಕರಣ ಮತ್ತು ಎರಡು ದಶಕಗಳ ಅವಧಿಯಲ್ಲಿ ಧರ್ಮಸ್ಥಳದಾದ್ಯಂತ ನಡೆದಿರುವ ಅನೇಕ ಕೊಲೆಗಳು, ಅತ್ಯಾಚಾರಗಳು ಮತ್ತು ಸಮಾಧಿಗಳ ಆರೋಪಗಳನ್ನು ಆಧಾರರಹಿತ ಮತ್ತು ಸುಳ್ಳು ಎಂದು ತಳ್ಳಿ ಹಾಕಿದ್ದಾರೆ. ಧರ್ಮಸ್ಥಳದ ಬಗ್ಗೆ ಅನಗತ್ಯವಾಗಿ ಗೊಂದಲ ಮೂಡಿಸುತ್ತಿದ್ದು, ಸೋಶಿಯಲ್ ಮೀಡಿಯಾದಲ್ಲಿ ಅಪಪ್ರಚಾರ ಮಾಡಲಾಗುತ್ತಿದೆ. ಈ ಮೂಲಕ ಧರ್ಮಸ್ಥಳಕ್ಕೆ ಕಳಂಕ ತರಲು ಕೆಲವರು ಯತ್ನಿಸುತ್ತಿದ್ದಾರೆ. ಎಸ್‌ಐಟಿಯಿಂದ ಸತ್ಯ ಹೊರ ಬರುತ್ತದೆ. ಹೀಗಾಗಿ ಎಸ್‌ಐಟಿ ಅಧಿಕಾರಿಗಳ ತನಿಖಾ ವರದಿಗಾಗಿ ನಾವು ಕಾಯುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.

ಗೃಹ ಸಚಿವ ಜಿ ಪರಮೇಶ್ವರ ಅವರು ವಿಧಾನಸಭೆಯಲ್ಲಿ ಎಸ್‌ಐಟಿ ಸಮಸ್ಯೆಯ ಆಳಕ್ಕೆ ಹೋಗುತ್ತದೆ ಎಂದು ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿದ ಹೆಗ್ಗಡೆಯವರು, ನಾವು ಅದೇ ದಿನ ಎಸ್‌ಐಟಿಯನ್ನು ಸ್ವಾಗತಿಸಿದ್ದೇವೆ. ರಾಜ್ಯ ಸರಕಾರ ಎಸ್‌ಐಟಿ ರಚಿಸಿರುವುದು ಒಳ್ಳೆಯದು ಮತ್ತು ಸತ್ಯ ಒಮ್ಮೆ ಹೊರಬರಬೇಕು. ಆರೋಪ ಕೇಳಿಬಂದಾಗ ತನಿಖೆ ಮಾಡುವುದು ಒಳ್ಳೆಯದು. ಇಲ್ಲದಿದ್ದರೆ ಅವು ಹಾಗೆಯೇ ಉಳಿಯುತ್ತವೆ ಎಂದ ಅವರು ಎಸ್‌ಐಟಿ ಸಂಪೂರ್ಣವಾಗಿ ತನಿಖೆ ನಡೆಸಿ ತಪ್ಪಿತಸ್ಥರನ್ನು ಶಿಕ್ಷಿಸಬೇಕು ಎಂದು ಹೇಳಿದರು.

ಧರ್ಮಸ್ಥಳ ಮತ್ತು ಅದರ ಟ್ರಸ್ಟ್ ಅನ್ನು ಗುರಿಯಾಗಿಸಿಕೊಂಡು 14 ವರ್ಷಗಳಿಗೂ ಹೆಚ್ಚು ಕಾಲದಿಂದ ಸಂಘಟಿತ ಅಭಿಯಾನ ನಡೆಸಲಾಗುತ್ತಿದೆ ಆರೋಪಿಸಿದ ಅವರು ನಾವು ಮಾಡುತ್ತಿರುವ ಒಳ್ಳೆಯ ಕೆಲಸಗಳನ್ನು ಸಹಿಸಿಕೊಳ್ಳಲಾಗದ ಕೆಲವು ಶಕ್ತಿಗಳು ಸುಳ್ಳು ಪ್ರಚಾರ ನಡೆಸುತ್ತಿವೆ. ಆದರೆ ನಾವು ವಿಚಲಿತರಾಗುವುದಿಲ್ಲ ಎಂದು ಹೇಳಿದರು.

ಧರ್ಮಸ್ಥಳದಲ್ಲಿ ಶವಗಳನ್ನು ಸಮಾಧಿ ಮಾಡಿರುವುದಾಗಿ ಮುಖವಾಡ ಧರಿಸಿದ ವ್ಯಕ್ತಿಯೊಬ್ಬ ಹೇಳಿಕೊಳ್ಳುವ ಇತ್ತೀಚಿನ ವಿಡಿಯೋಗಳನ್ನು ಉಲ್ಲೇಖಿಸಿದ ಅವರು, ಇದು ಅಸಾಧ್ಯ. ಧರ್ಮಸ್ಥಳದಲ್ಲಿ ಯಾರಾದರೂ ಸತ್ತರೆ ಅವರಿಗೆ ಮೋಕ್ಷ ಸಿಗುತ್ತದೆ ಎಂಬ ಜನಪ್ರಿಯ ನಂಬಿಕೆ ಇದೆ. ಸಾವು ಸಂಭವಿಸಿದಾಗಲೆಲ್ಲಾ ನಾವು ಪಂಚಾಯತ್‌ಗೆ ತಿಳಿಸುತ್ತಿದ್ದೆವು ಮತ್ತು ಅವರು ಕಾನೂನು ಪ್ರಕಾರವೇ ಶವವನ್ನು ಹೂಳುತ್ತಾರೆ ಎಂದರು.

ಸಾಮಾಜಿಕ ಮಾಧ್ಯಮವು ಯುವ ಮನಸ್ಸುಗಳನ್ನು ಕಲುಷಿತಗೊಳಿಸಿದೆ ಎಂದು ತೀವ್ರ ಕಳವಳ ವ್ಯಕ್ತಪಡಿಸಿದ ಧರ್ಮಾಧಿಕಾರಿ
ಈ ಪ್ರಕರಣವನ್ನು ಬಿಂಬಿಸಿದ ರೀತಿ ನಮಗೆ ಆಘಾತ ಮತ್ತು ಆಶ್ಚರ್ಯವನ್ನುಂಟು ಮಾಡಿದೆ. ಸಾಮಾಜಿಕ ಮಾಧ್ಯಮವು ಅತ್ಯಂತ ಶಕ್ತಿಶಾಲಿ ಮಾಧ್ಯಮವಾಗಿದೆ ಮತ್ತು ನಮ್ಮ ಅನೇಕ ಹಿತೈಷಿಗಳು ನಮ್ಮ ಒಳ್ಳೆಯ ಕೆಲಸವನ್ನು ಪ್ರಚಾರ ಮಾಡಲು ನಾವು ಸಾಮಾಜಿಕ ಮಾಧ್ಯಮವನ್ನು ಬಳಸಿಲ್ಲ ಎಂದು ಹೇಳುತ್ತಾರೆ. ಆದರೆ, ನಾವು ವಿವಿಧ ಸಾಮಾಜಿಕ ಕಾರ್ಯಗಳ ಮೂಲಕ ಎಲ್ಲಾ ಹಳ್ಳಿಗಳನ್ನು ಮತ್ತು 55 ಲಕ್ಷ ಕುಟುಂಬಗಳನ್ನು ತಲುಪಿದ್ದೇವೆ ಎಂದರು.

ಸೌಜನ್ಯ ಕೊಲೆ ಪ್ರಕರಣದಲ್ಲಿ ನ್ಯಾಯಕ್ಕಾಗಿ ಮತ್ತೆ ಕೇಳಿಬಂದ ಕೂಗಿಗೆ ಪ್ರತಿಕ್ರಿಯಿಸಿದ ಹೆಗ್ಗಡೆ, ಅಂತಹ ಘಟನೆ ನಡೆದಿದೆ ಎಂದು ನಮಗೆ ತಿಳಿದಾಗ ನಾವು ಅದೇ ದಿನ ಸರ್ಕಾರಕ್ಕೆ ಮಾಹಿತಿ ನೀಡಿದ್ದೇವೆ. ಆದರೆ ನಮ್ಮ ಕುಟುಂಬದ ವಿರುದ್ಧದ ಆರೋಪಗಳು ಆಧಾರರಹಿತ. ನಮ್ಮ ಕುಟುಂಬ ಸದಸ್ಯರು ಶಿಕ್ಷಣಕ್ಕಾಗಿ ವಿದೇಶದಲ್ಲಿ ಇದ್ದರು ಮತ್ತು ಈ ಸಂಬಂಧ ನಾವು ದಾಖಲೆಗಳನ್ನು ಸಲ್ಲಿಸಿದ್ದೇವೆ. ಸಿಬಿಐ ತನಿಖೆಗೂ ನಾವು ಎಲ್ಲಾ ರೀತಿಯ ಸಹಕಾರ ನೀಡಿದ್ದೇವೆ ಮತ್ತು ಎಲ್ಲಾ ರೀತಿಯ ತನಿಖೆಯನ್ನು ಸ್ವಾಗತಿಸಿದ್ದೇವೆ ಎಂದು ಹೇಳಿದರು.

ಆಸ್ತಿ ದುರುಪಯೋಗದ ಆರೋಪಗಳನ್ನು ತಳ್ಳಿಹಾಕಿದ ಹೆಗ್ಗಡೆ, ನಮ್ಮ ಆಸ್ತಿ ಎಂಬುದೇ ಇಲ್ಲ. ಕುಟುಂಬವು ಬಹಳ ಕಡಿಮೆ ಆಸ್ತಿಯನ್ನು ಹೊಂದಿದೆ ಮತ್ತು ಎಲ್ಲಾ ಆಸ್ತಿಗಳು ದಾಖಲೆಗಳೊಂದಿಗೆ ಟ್ರಸ್ಟ್‌ನ ಒಡೆತನದಲ್ಲಿವೆ ಎಂದರು.

ಆಸ್ತಿಗಳ ಸ್ವಾಧೀನಕ್ಕೆ ದಾಖಲೆ ಪುರಾವೆಗಳಿವೆ. ಧರ್ಮಾಧಿಕಾರಿ(ದೇವಾಲಯದ ಪಾಲಕ) ಪ್ರಕಾರ ಟ್ರಸ್ಟ್ ಅನ್ನು ಕುಟುಂಬ ಸದಸ್ಯರು ಪಾರದರ್ಶಕ ರೀತಿಯಲ್ಲಿ ನಿರ್ವಹಿಸುತ್ತಿದ್ದಾರೆ. ನಾವು ನಾಲ್ವರು ಸಹೋದರರು ಮತ್ತು ಒಬ್ಬ ಸಹೋದರ ಬೆಂಗಳೂರಿನಲ್ಲಿ ಶಿಕ್ಷಣವನ್ನು ನೋಡಿಕೊಳ್ಳುತ್ತಾರೆ, ಇನ್ನೊಬ್ಬ ಸಹೋದರ ಸಾಮಾಜಿಕ ಕಾರ್ಯದ ಜೊತೆಗೆ ಇಲ್ಲಿ ದೇವಾಲಯವನ್ನು ನೋಡಿಕೊಳ್ಳುತ್ತಾರೆ ಮತ್ತು ನನಗೆ ಒಬ್ಬ ಸಹೋದರಿ ಇದ್ದಾಳೆ, ಅವರ ಪತಿ ಧಾರವಾಡದ ಎಸ್‌ಡಿಎಂ ವಿಶ್ವವಿದ್ಯಾಲಯದ ಕುಲಪತಿ. ಎಲ್ಲಾ ಶಿಕ್ಷಣ ಸಂಸ್ಥೆಗಳು ಟ್ರಸ್ಟ್ ಹೆಸರಿನಲ್ಲಿವೆ ಎಂದು ಅವರು ಹೇಳಿದರು.

ಜೈನ ಕುಟುಂಬವೊಂದು ಹಿಂದೂ ದೇವಾಲಯವನ್ನು ನಿರ್ವಹಿಸುತ್ತಿದೆ ಎಂಬ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಹೆಗ್ಗಡೆ, ಈ ಆರೋಪದಲ್ಲಿ ಸತ್ಯವಿದೆ ಎಂದು ನಾನು ಭಾವಿಸುವುದಿಲ್ಲ. ಎಲ್ಲಾ ಆಚರಣೆಗಳನ್ನು ಅನುಸರಿಸುವುದರಿಂದ ಜೈನರು ನಡೆಸುವ ಹಲವು ದೇವಾಲಯಗಳಿವೆ ಎಂದು ಅವರು ತಿಳಿಸಿದರು.

ಧರ್ಮಸ್ಥಳದ ವಿರುದ್ಧ ಪಿತೂರಿಯ ಬಗ್ಗೆ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹೇಳಿಕೆಯನ್ನು ಹೆಗ್ಗಡೆ ಅವರು ಸ್ವಾಗತಿಸಿದರು.

ಇನ್ನು ಧರ್ಮಸ್ಥಳದ ಮೇಲಿನ ನಂಬಿಕೆಗೆ ಯಾವುದೇ ಧಕ್ಕೆಯಾಗುವುದಿಲ್ಲ ಎಂದು ಪುನರುಚ್ಚರಿಸಿದ ಹೆಗ್ಗಡೆ, ನಾವು ಪೂಜೆ, ಆಚರಣೆಗಳನ್ನು ಎಂದಿನಂತೆ ನಡೆಸುತ್ತೇವೆ ಮತ್ತು ಜನಸಂದಣಿ ಅಥವಾ ಪದ್ಧತಿಗಳಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ಅವರು ಹೇಳಿದರು.





























































































































error: Content is protected !!
Scroll to Top