ಮಾನವ ಹಕ್ಕುಗಳ ರಕ್ಷಣಾ ಅಧಿನಿಯಮ 1993

ಭಾರತ ದೇಶದ ಸಂವಿಧಾನದ ಮೂಲಕ ಖಾತರಿ ಪಡಿಸಲಾದ ಮತ್ತು ಅಂತರ್ ರಾಷ್ಟ್ರೀಯ ಒಡಂಬಡಿಕೆಗಳ ಸಂದರ್ಭಗಳಲ್ಲಿ ಒಳಗೊಂಡಿರುವ ಮತ್ತು ಭಾರತದ ನ್ಯಾಯಾಲಯಗಳಿಂದ ಜಾರಿಗೊಳಿಸಬಹುದಾದ ಪ್ರತಿಯೊಬ್ಬ ವ್ಯಕ್ತಿಯ ಜೀವನ, ಸ್ವಾತಂತ್ರ, ಸಮಾನತೆ ಮತ್ತು ಘನತೆಗೆ ಸಂಬಂಧಿಸಿದ ವಿವಿಧ ಹಕ್ಕುಗಳ ರಕ್ಷಣೆಗಾಗಿ ಭಾರತ ಸರಕಾರವು ಮಾನವ ಹಕ್ಕುಗಳ ರಕ್ಷಣಾ ಅಧಿನಿಯಮ 1993 ಎಂಬ ಕಾನೂನನ್ನು 8-01-1994 ರಿಂದ ದೇಶದಾದ್ಯಂತ ಜಾರಿಗೆ ತಂದಿದೆ. ಈ ಕಾನೂನು ಪ್ರತಿಯೊಬ್ಬ ಮಾನವನ ಹಕ್ಕುಗಳನ್ನು ರಕ್ಷಿಸುವಲ್ಲಿ ಅತ್ಯಂತ ಮಹತ್ವವನ್ನು ಹೊಂದಿರುತ್ತದೆ.

ಈ ಕಾನೂನಿನ ಪ್ರಕಾರ ಸರಕಾರವು ಮಾನವ ಹಕ್ಕುಗಳ ರಕ್ಷಣೆಗಾಗಿ ರಾಷ್ಟ್ರೀಯ ಮಟ್ಟದಲ್ಲಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವನ್ನು ಹಾಗೂ ರಾಜ್ಯ ಮಟ್ಟದಲ್ಲಿ ರಾಜ್ಯ ಮಾನವ ಹಕ್ಕುಗಳ ಆಯೋಗಗಳನ್ನು ಸ್ಥಾಪಿಸಿರುತ್ತದೆ. ಮಾತ್ರವಲ್ಲದೆ ಮೇಲ್ಕಾಣಿಸಿದ ಕಾನೂನಿನ ಚೌಕಟ್ಟಿನ ಅಡಿಯಲ್ಲಿ ಉದ್ಭವಿಸಬಹುದಾದ ಯಾವುದೇ ವಿವಾದ ಅಥವಾ ದೂರುಗಳನ್ನು ವಿಚಾರಣೆ ನಡಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವ ಮತ್ತು ಭಾದಿತ ವ್ಯಕ್ತಿಗಳಿಗೆ ಸೂಕ್ತ ಪರಿಹಾರ ಮತ್ತು ರಕ್ಷಣೆಯನ್ನು ನೀಡುವುದಕ್ಕಾಗಿ ಮಾನವ ಹಕ್ಕುಗಳ ನ್ಯಾಯಾಲಯಗಳನ್ನು ರಚಿಸಲಾಗಿರುತ್ತದೆ. ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದಲ್ಲಿ ಸರ್ವೋಚ್ಚ ನ್ಯಾಯಾಲಯದ ನಿವೃತ್ತ ಮುಖ್ಯ ನ್ಯಾಯಮೂರ್ತಿಗಳ ಅಧ್ಯಕ್ಷತನದಲ್ಲಿ ಒಬ್ಬ ಸರ್ವೋಚ್ಚ ನ್ಯಾಯಾಲಯದ ಹಾಗೂ ಹಾಲಿ ಅಥವಾ ನಿವೃತ್ತ ನ್ಯಾಯಾಧೀಶರು, ಒಬ್ಬ ಉಚ್ಚ ನ್ಯಾಯಾಲಯದ ಹಾಲಿ ಅಥವಾ ನಿವೃತ್ತ ಮುಖ್ಯ ನ್ಯಾಯಾಧೀಶರು ಮತ್ತು ಮಾನವ ಹಕ್ಕುಗಳಿಗೆ ಸಂಬಂಧಿಸಿದ ವಿಷಯದಲ್ಲಿ ತಿಳುವಳಿಕೆಯುಳ್ಳ ಅಥವಾ ವ್ಯವಹಾರಿಕ ಅನುಭವ ಹೊಂದಿರುವವರ ಪೈಕಿ ಇಬ್ಬರು ಸದಸ್ಯರುಗಳು ಇರುತ್ತಾರೆ. ಮೇಲ್ಕಾಣಿಸಿ ಆಯೋಗದ ಅಧ್ಯಕ್ಷರನ್ನು ಮತ್ತು ಸದಸ್ಯರುಗಳನ್ನು ದೇಶದ ಪ್ರಧಾನಮಂತ್ರಿಯವರ ಅಧ್ಯಕ್ಷತೆಯಲ್ಲಿ ಲೋಕಸಭಾ ಅಧ್ಯಕ್ಷ, ಭಾರತ ಸರಕಾರದ ಗೃಹ ವ್ಯವಹಾರಗಳ ಮಂತ್ರಾಲಯದ ಪ್ರಭಾರದಲ್ಲಿರುವ ಸಚಿವ, ಲೋಕಸಭೆಯ ವಿರೋಧ ಪಕ್ಷದ ನಾಯಕ, ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮತ್ತು ರಾಜ್ಯಸಭೆಯ ಉಪ ಸಭಾಪತಿ ಇವರನ್ನು ಒಳಗೊಂಡ ಸಮಿತಿಯ ಸಿಫಾರಸ್ಸಿನ ಮೇರೆಗೆ ರಾಷ್ಟ್ರಪತಿಯವರು ನೇಮಿಸಬೇಕಾಗಿರುತ್ತದೆ. ಮಾನವ ಹಕ್ಕುಗಳ ರಕ್ಷಣಾ ಆಯೋಗವು ಮಾನವ ಹಕ್ಕುಗಳ ಉಲ್ಲಂಘನೆ ಅಥವಾ ಅದರ ದುಷ್ಪ್ರೇರಣೆ ಕುರಿತಂತೆ ಅಥವಾ ಲೋಕನೌಕರನಿಂದ ಅಂದರೆ ಸಾರ್ವಜನಿಕ ಅಧಿಕಾರಿಯಿಂದ ಅಂತಹ ಮಾನವ ಹಕ್ಕುಗಳ ಉಲ್ಲಂಘನೆ ಅಥವಾ ದುಷ್ಪ್ರೇರಣೆ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಲ್ಲಿ ತೋರಿರುವ ನಿರ್ಲಕ್ಷತನದ ಬಗ್ಗೆ ದೂರಿನ ವಿಚಾರಣೆಯನ್ನು ನಡೆಸುವ, ನ್ಯಾಯಾಲಯದ ಮುಂದೆ ಇತ್ಯರ್ಥದಲ್ಲಿರುವ ಮಾನವ ಹಕ್ಕುಗಳ ಉಲ್ಲಂಘನೆಗೆ ಸಂಬಂಧಪಟ್ಟ ವ್ಯವಹರಣೆಯಲ್ಲಿ ನ್ಯಾಯಾಲಯದ ಅನುಮೋದನೆ ಪಡೆದು ಮಧ್ಯಪ್ರವೇಶ ಮಾಡುವ, ರಾಜ್ಯ ಸರಕಾರದ ನಿಯಂತ್ರಣದಲ್ಲಿರುವ ಯಾವುದೇ ಜೈಲು ಅಥವಾ ಇತರ ಯಾವುದೇ ಸಂಸ್ಥೆಯಲ್ಲಿ ಚಿಕಿತ್ಸೆ, ಸುಧಾರಣೆ ಅಥವಾ ರಕ್ಷಣಾ ಉದ್ದೇಶಗಳಿಗಾಗಿ ಬಂಧಿಸಿಟ್ಟಿರುವ ಅಥವಾ ತಡೆಹಿಡಿದಿಟ್ಟಿರುವ ವ್ಯಕ್ತಿಗಳ ಜೀವನದ ಸ್ಥಿತಿಗತಿಗಳನ್ನು ಅಧ್ಯಯನ ಮಾಡಲು ಮತ್ತು ಆ ಬಗ್ಗೆ ಶಿಫಾರಸ್ಸುಗಳನ್ನು ಮಾಡಲು ರಾಜ್ಯ ಸರಕಾರಕ್ಕೆ ಮಾಹಿತಿ ನೀಡಿ ಅಂತಹ ಜೈಲು ಅಥವಾ ಸಂಸ್ಥೆಗೆ ಭೇಟಿ ನೀಡುವ, ಮೇಲ್ಕಾಣಿಸಿದ ಕಾನೂನಿನ ಪ್ರಕಾರದ ರಕ್ಷಣೆಗಾಗಿ ಕೈಗೊಂಡ ವಿವಿಧ ಕ್ರಮಗಳನ್ನು ಪರಿಶೀಲಿಸುವ ಮತ್ತು ಈ ನಿಟ್ಟಿನಲ್ಲಿ ಸೂಕ್ತ ಶಿಫಾರಸ್ಸುಗಳನ್ನು ಮಾಡುವ, ಭಯೋತ್ಪಾದಕ ಕೃತ್ಯಗಳು ಸೇರಿದಂತೆ ಮಾನವ ಹಕ್ಕುಗಳನ್ನು ಅನುಭೋಗಿಸುವಲ್ಲಿ ಅಡ್ಡಿ ಉಂಟುಮಾಡುವ ಎಲ್ಲಾ ಕೃತ್ಯಗಳ ವಿರುದ್ಧ ಸೂಕ್ತ ಕ್ರಮಗಳನ್ನು ಕೈಗೊಳ್ಳುವ, ಮೇಲ್ಕಾಣಿಸಿದ ವಿಚಾರಳಿಗೆ ಸಂಬಂಧಪಟ್ಟಂತೆ ಸಂಶೋಧನೆಯನ್ನು ಕೈಗೊಳ್ಳುವದರ ಜೊತೆಗೆ ಸಮಾಜದ ವಿವಿಧ ವರ್ಗಗಳ ಜನರಿಗೆ ಮಾನವ ಹಕ್ಕುಗಳ ಕುರಿತು ಸೂಕ್ತ ಅರಿವನ್ನು ಮೂಡಿಸುವ ಮತ್ತು ಮಾನವ ಹಕ್ಕುಗಳ ಕ್ಷೇತ್ರದಲ್ಲಿ ಕಾರ್ಯನಿರತರಾಗಿರುವ ಸರ್ಕಾರೇತರ ಸಂಘಟನೆಗಳ ಮತ್ತು ಸಂಸ್ಥೆಗಳ ಪ್ರಯತ್ನಗಳಿಗೆ ಪ್ರೋತ್ಸಾಹ ನೀಡುವ ಮತ್ತು ಮಾನವ ಹಕ್ಕುಗಳ ಸಂವರ್ಧನೆಗಾಗಿ ತಾನು ಅವಶ್ಯಕವೆಂದು ಭಾವಿಸುವಂತಹ ಇತರ ಎಲ್ಲಾ ಪ್ರಕಾರ್ಯಗಳನ್ನು ನಿರ್ವಹಿಸುವ ಮುಂತಾದ ಕಾನೂನು ಬದ್ಧ ಅಧಿಕಾರಗಳನ್ನು ಹೊಂದಿರುತ್ತದೆ.

ಮಾನವ ಹಕ್ಕುಗಳ ಉಲ್ಲಂಘನೆಯಿಂದ ಉದ್ಭವಿಸುವ ಅಪರಾಧಗಳನ್ನು ತ್ವರಿತವಾಗಿ ವಿಚಾರಣೆ ನಡೆಸುವ ಉದ್ದೇಶಕ್ಕಾಗಿ ರಾಜ್ಯ ಸರಕಾರವು ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಯ ಸಹಮತಿಯೊಂದಿಗೆ ಅಧಿಸೂಚನೆ ಹೊರಡಿಸಿ ಸದರಿ ಅಪರಾಧಗಳ ವಿಚಾರಣೆಗಾಗಿ ಪ್ರತಿ ಜಿಲ್ಲೆಗೆ ಸೆಷನ್ಸ್ ನ್ಯಾಯಾಲಯದ ಮಟ್ಟದ ಜಿಲ್ಲಾ ಮಾನವ ಹಕ್ಕುಗಳ ನ್ಯಾಯಾಲಯವನ್ನು ಸ್ಥಾಪಿಸಬೇಕಾಗುತ್ತದೆ. ರಾಜ್ಯ ಮಾನವ ಹಕ್ಕುಗಳ ಆಯೋಗದಲ್ಲಿ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿಯ ಅಧ್ಯಕ್ಷತೆಯಲ್ಲಿ ಉಚ್ಚ ನ್ಯಾಯಾಲಯದ ಹಾಲಿ ಅಥವಾ ನಿವೃತ್ತ ನ್ಯಾಯಾಧೀಶರು, ಹಾಲಿ ಅಥವಾ ನಿವೃತ್ತ ಜಿಲ್ಲಾ ನ್ಯಾಯಾಧೀಶ ಮತ್ತು ಮಾನವ ಹಕ್ಕುಗಳಿಗೆ ಸಂಬಂಧಿಸಿದ ವಿಷಯದಲ್ಲಿ ತಿಳುವಳಿಕೆಯುಳ್ಳ ಅಥವಾ ವ್ಯವಹಾರಿಕ ಅನುಭವ ಹೊಂದಿರುವವರ ಪೈಕಿ ಇಬ್ಬರು ಸದಸ್ಯರುಗಳಾಗಿರುತ್ತಾರೆ.





























































































































error: Content is protected !!
Scroll to Top