ಸೈನಿಕರು – ಕೃಷಿಕರು ನಮ್ಮ ನಿಜವಾದ ಹೀರೋಗಳು

ಸ್ವಾತಂತ್ರ್ಯ ಎನ್ನುವುದು ಸುಲಭವಾಗಿ ಪ್ರಾಪ್ತಿಯಾಗಿದ್ದಲ್ಲ. ಅದರ ಹಿಂದೆ ಎರಡೂವರೆ ಶತಮಾನಗಳ ಹೋರಾಟವಿತ್ತು. ಆ ಹೋರಾಟಗಾರರಿಗೆ ಯಾವ ಸ್ವಾರ್ಥವೂ ಇರಲಿಲ್ಲ. ಭಾರತವನ್ನು ದಾಸ್ಯದಿಂದ ಮುಕ್ತಿ ಮಾಡಬೇಕೆಂಬ ಏಕೈಕ ಹಂಬಲ ಅವರಲ್ಲಿತ್ತು.

ಸ್ವಾತಂತ್ರ್ಯ ಕೇವಲ ಶಾಂತಿ ಮಂತ್ರ ಪಠಣದಿಂದ ದೊರೆತಿದ್ದೂ ಅಲ್ಲ. ಅದರ ಹಿಂದೆ ಶ್ರೇಷ್ಠವಾದ ಕ್ರಾಂತಿಕಾರಿಗಳ ರಕ್ತ ಚೆಲ್ಲಿದ ಯಶೋಗಾಥೆಗಳು ಕೂಡ ಇವೆ. ಸ್ವಾತಂತ್ರ್ಯ ಹೋರಾಟದಲ್ಲಿ ಮಹಿಳೆಯರು ಮುಂದೆ ನಿಂತು ಹೋರಾಡಿದ ಮೊದಲ ರಾಷ್ಟ್ರ ಭಾರತ. ಜಗತ್ತಿನ ಮೊದಲ ಮಹಿಳಾ ಸ್ವಾತಂತ್ರ್ಯ ಹೋರಾಟಗಾರೆ ಅದು ನಮ್ಮ ಉಳ್ಳಾಲದ ರಾಣಿ ಅಬ್ಬಕ್ಕ.

ನಮ್ಮ ದೇಶದ ಸ್ವಾತಂತ್ರ್ಯ ಹೋರಾಟ ನಿಜವಾಗಿ ವೇಗ ಪಡೆದುಕೊಂಡಿದ್ದು 1857ರ ಮೊದಲ ಸ್ವಾತಂತ್ರ್ಯ ಸಮರದಿಂದ. ಅದನ್ನು ಬ್ರಿಟೀಷರು ಸಿಪಾಯಿ ದಂಗೆ ಎಂದು ಕರೆದರು. ಅದನ್ನು ಮೊದಲ ಸ್ವಾತಂತ್ರ್ಯ ಸಮರ ಎಂದು ಕರೆದು ಅದರ ಮಹತ್ವದ ಬಗ್ಗೆ ಪುಸ್ತಕ ಬರೆದವರು ವೀರ ಸಾವರ್ಕರ್. ಅವರ ಕೊಡುಗೆಯನ್ನು ಭಾರತ ಮರೆಯಲು ಸಾಧ್ಯವಿಲ್ಲ.

ಸ್ವಾತಂತ್ರ್ಯ ಪೂರ್ವದ ಕಾಂಗ್ರೆಸ್ ಒಂದು ರಾಜಕೀಯ ಪಕ್ಷ ಆಗಿರಲಿಲ್ಲ. ಅದನ್ನು ಬ್ರಿಟೀಷರೇ ಸ್ಥಾಪನೆ ಮಾಡಿದ್ದರು. ಅದೊಂದು ಸಿಂಡಿಕೇಟ್ ಆಗಿತ್ತು. ಗಾಂಧೀಜಿ ಅದನ್ನು ವೇದಿಕೆಯನ್ನಾಗಿ ಮಾಡಿಕೊಂಡು ಅಹಿಂಸಾ ಮಾರ್ಗ ಅನುಸರಿಸಿ ಸ್ವಾತಂತ್ರ್ಯದ ಹೋರಾಟಕ್ಕೆ ಧುಮುಕಿದರು. ಸ್ವಾತಂತ್ರ್ಯ ಬಂದಾಗ ಕಾಂಗ್ರೆಸ್ ಸಂಘಟನೆಯನ್ನು ವಿಸರ್ಜನೆ ಮಾಡಬೇಕು ಎಂದವರು ಸ್ವತಃ ಗಾಂಧೀಜಿಯವರು. ಆದರೆ, ಆಗಿನ ಕಾಂಗ್ರೆಸ್ ನಾಯಕರು ಗಾಂಧೀಜಿ ಅವರ ಮಾತನ್ನು ಕೇಳಲಿಲ್ಲ. ಅದನ್ನು ರಾಜಕೀಯ ಪಕ್ಷ ಮಾಡಿ ಮುಂದುವರಿಯುವುದು ಗಾಂಧೀಜಿ ಅವರಿಗೆ ಇಷ್ಟ ಇರಲಿಲ್ಲ.

ಭಾರತ ಸ್ವಾತಂತ್ರ್ಯ ಹೋರಾಟದಲ್ಲಿ ಒಂದು ಮರೆಯಲಾಗದ ಹೆಸರು ಎಂದರೆ ನೇತಾಜಿ ಸುಭಾಷ್ ಚಂದ್ರಬೋಸ್. ದೇಶದ ಹೊರಗೆ ಹೋಗಿ ಆಜಾದಿ ಹಿಂದೂ ಫೌಜ್ ಸಂಘಟನೆ ಸ್ಥಾಪಿಸಿ, ಬ್ರಿಟಿಷ್ ಸರಕಾರವನ್ನು ನಡುಗಿಸಿದ್ದು ಸಣ್ಣ ಸಾಧನೆ ಅಲ್ಲ. ಅವರ ಹೋರಾಟ ಇಲ್ಲದೆ ಹೋಗಿದ್ದರೆ ಭಾರತಕ್ಕೆ ಸ್ವಾತಂತ್ರ್ಯ ಇನ್ನಷ್ಟು ವಿಳಂಬವಾಗುತ್ತಿತ್ತು ಅನ್ನುವುದು ಸತ್ಯ.

ಜಗತ್ತಿನಲ್ಲಿ ಸ್ವಾತಂತ್ರ್ಯ ದೊರೆಯುವ ಸಂದರ್ಭ ಯಾವ ರಾಷ್ಟ್ರವೂ ಒಡೆದ ಉದಾಹರಣೆ ಸಿಗುವುದಿಲ್ಲ. ಆದರೆ, ಬ್ರಿಟಿಷರ ಕುತಂತ್ರದಿಂದ ಭಾರತ ವಿಭಜನೆ ಆಯಿತು. ಅದರ ಹಿಂದೆ ಕೂಡ ತುಷ್ಟೀಕರಣ ಮನಸ್ಥಿತಿ ಇತ್ತು. ಭಾರತದ ಶಕ್ತಿಗೆ ಈ ವಿಭಜನೆ ಬಹಳ ದೊಡ್ಡ ಪೆಟ್ಟು ಕೊಟ್ಟಿತು. ಆದರೆ, ದುರಂತ ಅಂದರೆ ಆ ತುಷ್ಟೀಕರಣ ನೀತಿ ಈಗಲೂ ಮುಂದುವರಿದುಕೊಂಡು ಬಂದಿರುವುದು.

ನಮ್ಮ ವಿದ್ಯಾರ್ಥಿಗಳು ಸ್ವಾತಂತ್ರ್ಯ ಪಡೆದ ಅನಂತರ ನಮ್ಮ ದೇಶದ ನೈಜ ಇತಿಹಾಸವನ್ನು ಓದಬೇಕು ಎಂದು ರಾಷ್ಟ್ರೀಯವಾದಿ ಚಿಂತಕರು ಬಯಸಿದರು. ಆದರೆ, ನಮ್ಮ ವಿದ್ಯಾರ್ಥಿಗಳು ಇಂದಿಗೂ ಸುಳ್ಳು ಇತಿಹಾಸ ಓದುವಂತಾಗಿದೆ. ಕೇಂಬ್ರಿಜ್ ವಿವಿಯಲ್ಲಿ ಓದಿಕೊಂಡು ಬಂದ ತಥಾಕಥಿತ ಲೇಖಕರು ಬರೆದ ಇತಿಹಾಸವನ್ನು ನಮ್ಮ ಮಕ್ಕಳು ಈಗಲೂ ಓದುತ್ತಿದ್ದಾರೆ. ಇದರಿಂದ ರಾಷ್ಟ್ರಪ್ರೇಮದ ಉದ್ದೀಪನ ಆಗುವುದಿಲ್ಲ ಎನ್ನುವುದು ನನ್ನ ನಿಲುವು. ನಮ್ಮ ಶಿಕ್ಷಣ ಪದ್ಧತಿ ನಮ್ಮ ದೇಶದ ನೈಜ ಇತಿಹಾಸ, ಜಾನಪದ ಮತ್ತು ಸಾಂಸ್ಕೃತಿಕ ಪರಂಪರೆಯ ಕನ್ನಡಿ ಆಗಿರಬೇಕು.

ಸೈನಿಕರು – ಕೃಷಿಕರು ದೇಶದ ಕಣ್ಣುಗಳು. ಅವರೇ ನಮ್ಮ ನಿಜವಾದ ಹೀರೊಗಳು. ಆದರೆ ನಮ್ಮ ದೇಶದ ಯುವಜನತೆ ಸಿನೆಮಾ ತಾರೆಯರನ್ನು, ಮಾಡೆಲ್‌ಗಳನ್ನು ಐಕಾನ್ ಆಗಿ ಸ್ವೀಕರಿಸುತ್ತಾರೆ. ಅದು ಅವರ ತಪ್ಪಲ್ಲ. ನಮ್ಮ ದೇಶದ ಯುವಜನತೆಗೆ ಸರಿಯಾದ ಮಾರ್ಗದರ್ಶನ ದೊರೆಯಬೇಕು. ಅದಕ್ಕೆ ರಾಷ್ಟ್ರೀಯವಾದಿ ಶಿಕ್ಷಣ ಅವಶ್ಯ.

ಸ್ವಾತಂತ್ರ್ಯ ಅಂದರೆ ಒಂದು ಕ್ಷಣದ ಸಂಗತಿಯಲ್ಲ. ಅದು ನಮ್ಮನ್ನು ಸದಾ ಜಾಗೃತವಾಗಿಡುವ ಆಚರಣೆ. ಅದು ಒಂದು ದಿನಕ್ಕೆ ಸೀಮಿತ ವಾಗಬಾರದು. ಸ್ವಾತಂತ್ರ್ಯ ಹೋರಾಟಗಾರರ ಕುರಿತು ಓದುವ, ಅವರನ್ನು ಗೌರವಿಸುವ, ಅವರನ್ನು ಐಕಾನ್‌ಗಳಾಗಿ ಸ್ವೀಕಾರ ಮಾಡುವ ಮನಸ್ಥಿತಿಯೇ ನಿಜವಾದ ಸ್ವಾತಂತ್ರ್ಯದ ಪರಿಭಾಷೆ. ಇದೇ ನಿಜವಾದ ಸ್ವಾತಂತ್ರ್ಯದ ದರ್ಶನ.
ಎಲ್ಲ ರಾಷ್ಟ್ರಪ್ರೇಮಿ ಬಾಂಧವರಿಗೆ 79ನೇ ಸ್ವಾತಂತ್ರ್ಯ ಉತ್ಸವದ ಶುಭಾಶಯಗಳು.
ಜೈ ಹಿಂದ್.

ನಾವು ಸ್ವಾತಂತ್ರ್ಯ ಪಡೆದುಕೊಂಡು ಮುಕ್ಕಾಲು ಶತಮಾನವೇ ಕಳೆದು ಹೋಯಿತು. ಯಾವುದೇ ದೇಶಕ್ಕೆ 79 ವರ್ಷ ಎಂಬುದು ಬಹಳ ಸುದೀರ್ಘ ಅವಧಿ. ನಮ್ಮಲ್ಲಿರುವ ಸಂಪನ್ಮೂಲ, ಪ್ರತಿಭೆ, ಜ್ಞಾನ, ಅಗಾಧತೆ, ನಮ್ಮ ಸಂಸ್ಕೃತಿ, ಆಚಾರ, ವಿಚಾರ, ಸಂಪ್ರದಾಯ, ಸಾಮಾಜಿಕ ವ್ಯವಸ್ಥೆ ಇವುಗಳನ್ನೆಲ್ಲ ಸರಿಯಾದ ದಿಕ್ಕಿನಲ್ಲಿ, ಸಮರ್ಪಕವಾಗಿ ಬಳಸಿಕೊಂಡಿದ್ದರೆ ನಮ್ಮ ದೇಶ ಎಂದೋ ಜಗತ್ತಿನ ಸೂಪರ್‌ ಪವರ್‌ ರಾಷ್ಟ್ರವಾಗಿ ವಿರಾಜಮಾನವಾಗುತ್ತಿತ್ತು. ಸ್ವಾತಂತ್ರ್ಯ ಎಂಬುದು ಒಬ್ಬಿಬ್ಬರ ಹೋರಾಟದಿಂದ ಬಂದಿದ್ದಲ್ಲ, ನಾನಿರುವ ಈ ಕಾರ್ಕಳದ ಮಣ್ಣಿನಿಂದ ಹಿಡಿದು ದೇಶದ ಮೂಲೆ ಮೂಲೆಗಳಲ್ಲಿ ಇದ್ದ ಅದೆಷ್ಟೋ ಸಹಸ್ರ ಸಹಸ್ರ ಜನರು ಹೋರಾಟಕ್ಕೆ ತಮ್ಮದೇ ಆದ ನೆಲೆಯಲ್ಲಿ ಕೊಡುಗೆ ನೀಡಿದ್ದಾರೆ. ಈ ಹೋರಾಟದಲ್ಲಿ ತಮ್ಮ ಸಂಪತ್ತು, ಬದುಕು, ಪ್ರಾಣ ಎಲ್ಲವನ್ನೂ ಕಳೆದುಕೊಂಡ ಅನೇಕ ಮಹನೀಯರಿದ್ದಾರೆ.









































































































error: Content is protected !!
Scroll to Top