ಕಾರ್ಕಳದಲ್ಲಿ ಸ್ವಾತಂತ್ರ್ಯದ ಹೆಜ್ಜೆಗುರುತು

ಭಾರತದ ಪುಣ್ಯನೆಲ ಸಾವಿರಾರು ಸಲ ಪರಕೀಯರ ಆಕ್ರಮಣ ಮತ್ತು ದಬ್ಬಾಳಿಕೆಗೆ ಒಳಗಾಗಿ ನರಳಿದ್ದು ಈಗ ಇತಿಹಾಸ. ಅದರಲ್ಲಿಯೂ ಸ್ವಾರ್ಥಿ ಬ್ರಿಟಿಷರ ಆಡಳಿತಕ್ಕೆ ಒಳಪಟ್ಟು ಭಾರತ ಒದ್ದಾಡಿದ್ದು, ಅದೊಂದು ಕಹಿನೆನಪು. ನಮ್ಮ ದೇಶಭಕ್ತ ಹಿರಿಯರು ಲಾಠಿ ಏಟುಗಳಿಗೆ, ಸೆರೆಮನೆಯ ಕಠಿಣ ಶಿಕ್ಷೆಗಳಿಗೆ ಬೆದರದೆ ನಮಗಾಗಿ ಎಲ್ಲವನ್ನೂ ಎದುರಿಸಿ ನಿಂತು, ಅಹಿಂಸಾತ್ಮಕ ಹೋರಾಟ ನಡೆಸಿದ್ದು ನಮಗೀಗ ದಿವ್ಯ ಸ್ಮರಣೆ. ಪ್ರಸ್ತುತ ವಿದೇಶಿಗರ ದಾಸ್ಯ ಸಂಕೋಲೆಯನ್ನು ಕಳಚಿಕೊಂಡು ಪ್ರಜಾಪ್ರಭುತ್ವ ವ್ಯವಸ್ಥೆಯಡಿಯಲ್ಲಿ ಎಲ್ಲರೂ ಸ್ವತಂತ್ರರಾಗಿ ಜೀವನ ನಡೆಸಲು ಆರಂಭಿಸಿ 79 ವರ್ಷಗಳು ಕಳೆದವು. ಆಗಸ್ಟ್ 15 ರಂದು ಪ್ರತಿವರ್ಷ ಆ ಸಂಭ್ರಮವನ್ನು ಆಚರಿಸುತ್ತಾ ಅಮೃತ ಮಹೋತ್ಸವವನ್ನು ಮುಗಿಸಿ ಮುನ್ನಡೆಯುತ್ತಿದ್ದೇವೆ. ಈ ಸಂದರ್ಭದಲ್ಲಿ ನಮ್ಮ ಕಾರ್ಕಳದ ಪವಿತ್ರ ಮಣ್ಣಿನಲ್ಲಿ ಹುಟ್ಟಿದ ಅನೇಕ ಮಹಾಪುರುಷರು ತಾಯಿ ಭಾರತಾಂಬೆಯ ದಾಸ್ಯ ವಿಮೋಚನೆಗಾಗಿ ಸಮರ್ಪಣಾಭಾವದಿಂದ ನಡೆಸಿದ ಹೋರಾಟವನ್ನು ನೆನಪು ಮಾಡಿಕೊಳ್ಳುವುದು ಒಂದು ಅಭಿಮಾನದ ಸಂಗತಿಯಾಗಿದೆ.

ಸಜ್ಜನರು ಯಾವತ್ತೂ ತಮ್ಮ ಸಾಧನೆಗಳನ್ನು ಹೇಳಿಕೊಳ್ಳುವುದಿಲ್ಲ, ದಾಖಲಿಸುವುದೂ ಇಲ್ಲ. ಹೀಗಾಗಿ ಕಾರ್ಕಳದ ನೆಲದಲ್ಲಿ ನಡೆದ ಸ್ವಾತಂತ್ರ್ಯ ಹೋರಾಟದ ಸಂಗತಿಗಳನ್ನು ಸಂಗ್ರಹಿಸುವುದು ಅಷ್ಟು ಸುಲಭದ ಕೆಲಸವಲ್ಲ. ಆದರೂ, ಇಂದಿಗೂ ಅಂದಿನ ಹೋರಾಟವನ್ನು ಕಂಡ ಅಥವಾ ಅದರ ಬಗ್ಗೆ ನೇರವಾಗಿ ಕೇಳಿದ ಕೆಲವು ಮಂದಿ ಹಿರಿಯರಾದರೂ ಸಿಗುವುದು ನಮ್ಮ ಭಾಗ್ಯ. 1857ರ ಪ್ರಥಮ ಸ್ವಾತಂತ್ರ ಸಂಗ್ರಾಮದಿಂದ 1947 ಆಗಸ್ಟ್ 15ರ ಸ್ವಾತಂತ್ರ್ಯೋತ್ಸವದವರೆಗೆ ನಡೆದ 90 ವರ್ಷಗಳ ಸ್ವಾತಂತ್ರ್ಯ ಚಳವಳಿ ಒಂದು ಅವಿಸ್ಮರಣೀಯ ಚರಿತ್ರೆ. ಇದರಲ್ಲಿ ಮೊದಲ 60 ವರ್ಷಗಳಲ್ಲಿ ಸ್ವಾತಂತ್ರ್ಯ ಹೋರಾಟ ಇಡೀ ದೇಶದಲ್ಲಿ ಕೆಲವೇ ವ್ಯಕ್ತಿಗಳು, ಕೆಲವೇ ಪ್ರದೇಶಗಳಲ್ಲಿ ನಡೆದ ಹೋರಾಟವಾಗಿತ್ತು. ಉದಾಹರಣೆಗೆ ಬ್ರಿಟಿಷರಿಗೂ ಮುಂಚೆ ಪೊರ್ಚುಗೀಸರ ವಿರುದ್ಧವಾಗಿ ಕಾರ್ಕಳದ ಒಂದು ಭಾಗವೇ ಆಗಿದ್ದ ಮೂಡುಬಿದಿರೆಯ ಚೌಟರಸರ ವಂಶದ ಕುಡಿ ರಾಣಿ ಅಬ್ಬಕ್ಕ ಮಂಗಳೂರಿನಲ್ಲಿ ನಡೆಸಿದ ಅವಿಸ್ಮರಣೀಯ ಹೋರಾಟ ಈಗಲೂ ದೇಶಾಭಿಮಾನಿಗಳಿಗೆ ಬಹು ಅಭಿಮಾನದ ವಿಷಯವೆನಿಸಿದೆ. ಆದರೆ, ಕಾರ್ಕಳದ ಮಣ್ಣಿನಲ್ಲಿ ನಿಜವಾದ ಸ್ವಾತಂತ್ರ್ಯ ಸಮರ ಆರಂಭವಾದದ್ದು ಮಹಾತ್ಮಗಾಂಧಿಯವರು ದೇಶದ ಚಳವಳಿಯ ನೇತೃತ್ವ ವಹಿಸಿದ ಮೇಲೆಯೇ.

ಕರಾವಳಿಗೆ ಗಾಂಧೀಜಿ ಆಗಮನ
1920ರಲ್ಲಿ ಗಾಂಧೀಜಿ ಮಂಗಳೂರಿಗೆ ಬಂದರು. ಇಲ್ಲಿಯ ಜನರಲ್ಲಿ ದೇಶಾಭಿಮಾನದ ಕಿಚ್ಚು ಹಚ್ಚಿದರು. ಬಳಿಕ ಅಸಹಕಾರ ಚಳವಳಿ ಪ್ರಾರಂಭವಾಯಿತು. 1921ರಲ್ಲಿ ನಡೆದ ಅಹಮದಾಬಾದ್ ಕಾಂಗ್ರೆಸ್ ಅಧಿವೇಶನದಲ್ಲಿ ನಿರ್ಣಯಿಸಿದಂತೆ ಹಲವರು ತಮ್ಮ ವಕೀಲ ವೃತ್ತಿಯನ್ನು ತ್ಯಜಿಸಿದರು.

ಕಾರ್ಕಳದಲ್ಲಿ ಚಳವಳಿಯ ಕಾವು
ಕಾರ್ಕಳದ ನೆಲದಲ್ಲಿ ಹೀಗೆ ವೃತ್ತಿ ತ್ಯಜಿಸಿ ಸ್ವಾತಂತ್ರ್ಯ ಹೋರಾಟಕ್ಕೆ ಧುಮಿಕಿದ ಮೊದಲಿಗರೆಂದರೆ ಪ್ರಭಾಕರ ಕಾಮತ್. ಗಾಂಧಿವಾದಿಯಾಗಿ ಖಾದಿ ತೊಟ್ಟ ಅವರು ಕಾರ್ಕಳದಲ್ಲಿ ಅನೇಕರನ್ನು ಸ್ವಾತಂತ್ರ್ಯ ಚಳವಳಿಗೆ ಪ್ರೇರೇಪಿಸಿದರು. ಅಸಹಕಾರ ಚಳವಳಿಯಲ್ಲಿ ಕಾರ್ಕಳದಲ್ಲಿ ಭಾಗವಹಿಸುವವರ ಸಂಖ್ಯೆ ಹೆಚ್ಚಾಯಿತು. 1930ರಲ್ಲಿ ಗಾಂಧೀಜಿ ಉಪ್ಪಿನ ಸತ್ಯಾಗ್ರಹಕ್ಕೆ ಕರೆ ನೀಡಿದರು. ಎಪ್ರಿಲ್ 13ರಂದು ಕರಾವಳಿಯಲ್ಲಿ ಉಪ್ಪಿನ ಸತ್ಯಾಗ್ರಹ ಬಿರುಸಾಗಿ ನಡೆಯಿತು. ಕಾರ್ಕಳದ ಸತ್ಯಾಗ್ರಹಿಗಳ ತಂಡ ಪಡುಬಿದ್ರಿ-ಮೂಲ್ಕಿ ಸಮುದ್ರ ತೀರದಲ್ಲಿ ಉಪ್ಪು ತಯಾರಿಸಲು ಸಿದ್ಧವಾಗಿ ಹೊರಟಾಗ ಅವರಿಗೆ ಹೂಹಾರ ಹಾಕಿ ಬೀಳ್ಕೊಡಲಾಯಿತು. ಆದರೆ, ಅಲ್ಲಿ ಪೊಲೀಸರ ಲಾಠಿ ಏಟಿಗೆ ಮೈಯೊಡ್ಡಬೇಕಾದಾಗ, ದೇಶಕ್ಕೆ ಜಯಕಾರ ಹಾಕುತ್ತಲೇ ಸಹಿಸಿಕೊಂಡರು. ಸ್ವಾತಂತ್ರ್ಯ ಹೋರಾಟದ ಅಂಗವಾಗಿ ವಿದೇಶಿ ಬಟ್ಟೆಗಳನ್ನು ಸುಡುವ, ಖಾದಿ ವಸ್ತ್ರ ತೊಡುವ ಚಳವಳಿ ನಡೆದೇ ಇತ್ತು. ಕಾರ್ನಾಡು ಸದಾಶಿವರಾಯರ ಪುತ್ರಿ ಈ ಹೋರಾಟದಲ್ಲಿ ತೊಡಗಿದಾಗ ಅವರ ಜತೆಗಿದ್ದು ಬೆಂಬಲಿಸಿದವರು ಕಾರ್ಕಳದ ಕಾಮಾಕ್ಷಿಯಮ್ಮ. 1930 ಮೇ 10ರಂದು ಕಾರ್ನಾಡು ಸದಾಶಿವ ರಾಯರ ಬಂಧನವನ್ನು ವಿರೋಧಿಸಿ ಮಂಗಳೂರಿನಲ್ಲಿ ಬೃಹತ್ ಮೆರವಣಿಗೆ ಹಾಗೂ ಸಭೆ ನಡೆದಾಗ ಸೇರಿದ ಸಾವಿರಾರು ಮಂದಿಯಲ್ಲಿ ಕಾರ್ಕಳದವರು ಇದ್ದರು. ಮೇ 11ರಂದು ಗಾಂಧಿಯವರ ಬಂಧನವಾದಾಗ ಅದನ್ನು ವಿರೋಧಿಸಿ ಕಾರ್ಕಳದಲ್ಲಿ ಹರತಾಳ ನಡೆಯಿತು.

ಮಕ್ಕಳಿಂದಲೂ ಖಾದಿ ಚಳವಳಿ
ಖಾದಿ ಬಟ್ಟೆ ಧರಿಸುವುದು ದೇಶಭಕ್ತಿಯ ಸಂಕೇತವಾಗಿತ್ತು. ಅದು ಹೋರಾಟದ ಒಂದು ಭಾಗವೂ ಆಗಿತ್ತು. ದೊಡ್ಡವರು ಮೊದಲೇ ಖಾದಿ ಧರಿಸುತ್ತಿದ್ದರು. ಅನಂತರ ಮಕ್ಕಳೂ ಧರಿಸತೊಡಗಿದರು. ಶಾಲೆಗೆ ಹೋಗುವ ಮಕ್ಕಳು ಕೈಯಲ್ಲಿ ತಕಲಿ ಹಿಡಿದುಕೊಂಡು ಹೋಗಿ ಶಾಲೆಯಲ್ಲಿ ನೂಲು ತೆಗೆಯುವ, ಬಟ್ಟೆ ನೇಯುವ ಕಾರ್ಯ ಮಾಡತೊಡಗಿದರು. 1931ರಲ್ಲಿ ಬ್ರಿಟಿಷರ ಕಣ್ಣು ಈ ಖಾದಿಯ ಮೇಲೆ ಬಿತ್ತು. ಖಾದಿಪ್ರಿಯ ವಿದ್ಯಾರ್ಥಿಗಳನ್ನು ದಂಡಿಸುವ ಕೆಲಸವನ್ನು ಬ್ರಿಟಿಷ್ ಸರಕಾರ ಪ್ರಾರಂಭಿಸಿತು. ಕಾರ್ಕಳದಲ್ಲಿ ಹೀಗೆ ಶಿಕ್ಷೆಗೆ ಗುರಿಯಾದ ವಿದ್ಯಾರ್ಥಿಗಳಲ್ಲಿ ಒಬ್ಬರು ಸೋಮನಾಥ ಗೋಖಲೆಯವರು.

ಮದ್ಯಪಾನ ವಿರೋಧಿ ಆಂದೋಲನ
ಖಾದಿ ಪ್ರಚಾರದೊಂದಿಗೆ ಬ್ರಿಟಿಷರು ಕಲಿಸಿದ ಮದ್ಯಪಾನವನ್ನು ನಿಷೇಧಿಸುವ ಚಳವಳಿಯೂ ನಡೆಯಿತು. ಕಾರ್ಕಳದಲ್ಲಿ ಪ್ರಮುಖವಾಗಿ ಇದರ ನೇತೃತ್ವ ವಹಿಸಿದವರು ಮಹಾಬಲ ಹೆಗ್ಗಡೆಯವರು. ಅವರೊಂದಿಗೆ ಇನ್ನಷ್ಟು ಜನ ಸೇರಿಕೊಂಡು ಪ್ರತಿ ಊರಿನ ಹೆಂಡದಂಗಡಿಗಳ ಮುಂದೆ ನಿರಂತರವಾಗಿ ಚಳವಳಿ ನಡೆಸಿದರು.

ಶಬರಿ ಆಶ್ರಮ ಆರಂಭ
ಇದೇ ಸಂದರ್ಭದಲ್ಲಿ ಅನೇಕ ಸಮಾಜೋದ್ಧಾರದ ಕಾರ್ಯಗಳ ಜತೆಗೆ ಸಾಬರಮತಿ ಆಶ್ರಮವನ್ನು ಸ್ಮರಿಸುವ ರೀತಿಯಲ್ಲಿ ಗಾಂಧಿವಾದಿ ತತ್ವನಿಷ್ಠರ ಮುತುವರ್ಜಿಯಿಂದ ಶಬರಿ ಆಶ್ರಮ ಕಾರ್ಕಳದಲ್ಲಿ ಪ್ರಾರಂಭವಾಯಿತು. ಈ ಕಾಲದಲ್ಲಿ ದೇವಸ್ಥಾನ ಪ್ರವೇಶ ಚಳವಳಿ ನಡೆಯಿತು. 1920ರಿಂದ ದೇಶ ಸೇವೆಯಲ್ಲಿ ತೊಡಗಿದ್ದ ಕೆ. ವೆಂಕಟೇಶ ಪ್ರಭುಗಳ ನೇತೃತ್ವದಲ್ಲಿ ಅನಂತಶಯನ, ವೆಂಕಟರಮಣ ದೇವಸ್ಥಾನಗಳಿಗೆ ಸರ್ವರ ಪ್ರವೇಶ ನಡೆಯಿತು.

ಗಾಂಧಿ ಅಪ್ಪಾ ಎಂಬ ಅದ್ಭುತ ಸಂಘಟಕ
ರಾಷ್ಟ್ರಸೇವೆಯ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದ ಕಾರ್ಕಳದ ವಿಶಿಷ್ಟ ವ್ಯಕ್ತಿ ರೆಂಜಾಳ ಮಂಜುನಾಥ ಶೆಣೈಯವರು. ಇವರು ತಮ್ಮ ಸ್ನೇಹಿತ ಇನ್ನ ಭುಜಂಗರಾಯರೊಂದಿಗೆ ಸೇರಿಕೊಂಡು ಅನಂತಶಯನ ದೇವಸ್ಥಾನದಲ್ಲಿ ಹಿಂದಿ ತರಗತಿಗಳನ್ನು ನಡೆಸಿದರು. ಕಂಚಿನ ಕಂಠದ ಶೆಣೈಯವರು ಪ್ರಚಾರ ಕಾರ್ಯ ಎಲ್ಲೇ ಇದ್ದರೂ ಅಲ್ಲಿ ಹಾಜರಾಗುತ್ತಿದ್ದರು. ಖಾದಿ ಬಟ್ಟೆ, ಗಾಂಧಿ ಟೋಪಿ ಧರಿಸಿ ಬರುತ್ತಿದ್ದ ಇವರನ್ನೂ ಎಲ್ಲರೂ “ಗಾಂಧಿ ಅಪ್ಪಾ” ಎಂದೇ ಕರೆಯುತ್ತಿದ್ದರು. ಅನ್ಯರನ್ನು ಒಟ್ಟುಗೂಡಿಸುವ ಸಂಘಟನಾ ಶಕ್ತಿ ಶೆಣೈಯವರಿಗೆ ವಿಶೇಷವಾಗಿ ಸಿದ್ಧಿಸಿತ್ತು.

ದುರ್ಗ ಮುದ್ರಾಡಿಯಲ್ಲಿ ಕಾಂಗ್ರೆಸ್ ಶಾಖೆ
1934ರಲ್ಲಿ ಗಾಂಧೀಜಿ ಮತ್ತೆ ಮಂಗಳೂರಿಗೆ ಬಂದರು. ಅವರ ಆಗಮನದಿಂದ ಉತ್ಸಾಹಿತರಾಗಿ ದೇಶಭಕ್ತ ಹೋರಾಟಗಾರರು ಕಾರ್ಕಳದ ದುರ್ಗ, ಮುದ್ರಾಡಿಗಳಲ್ಲಿ ರಾಷ್ಟ್ರೀಯ ಕಾಂಗ್ರೆಸ್‍ನ ಶಾಖೆಗಳನ್ನು ಆರಂಭಿಸಿ ಅನೇಕ ಮಂದಿ ಉತ್ಸಾಹಿಗಳನ್ನು ನೊಂದಾಯಿಸಿಕೊಂಡು ಕಾರ್ಯನಿರ್ವಹಿಸತೊಡಗಿದರು.

ಸ್ವಾತಂತ್ರ್ಯ ದೀವಿಗೆಗೆ ತೈಲವಾದವರು
ಈಗಾಗಲೇ ಚಳವಳಿಯ ಮುಂಚೂಣಿಯಲ್ಲಿದ್ದ ಕೆ. ವೆಂಕಟೇಶ ಪ್ರಭು, ಮುದ್ರಾಡಿ ಕೃಷ್ಣಯ್ಯ ಶೆಟ್ಟಿ, ವಕೀಲ ಕೆ. ಪದ್ಮನಾಭ ಕಾಮತ್, ವೆಂಕಟೇಶ ಭಟ್, ಲಕ್ಷ್ಮಣ ಕುಡ್ವ, ಎಂ. ಎಸ್. ಅಧಿಕಾರಿ, ವಾಸುದೇವ ಉಪಾಧ್ಯಾಯ, ಕೇಶವ ರಾಮಚಂದ್ರ ಶೆಣೈ, ಸದಾಶಿವ ಭಟ್, ನಂಜಪ್ಪ ಶೆಟ್ಟಿ ಮುಂತಾದ ಹಿರಿಯ ಪ್ರಮುಖರ ಜೊತೆಗೆ ಉತ್ಸಾಹಿ ಯುವ ನೇತಾರರಾದ ಎಂ. ಡಿ. ಅಧಿಕಾರಿ, ಡಾ| ಕೆ. ಜಿ. ಕಾಮತ್, ಕೆ. ಪಿ. ರಾಮ ಪೊದುವಾಳ್, ಕಾಡುಹೊಳೆ ವಾಮನ ಪೈ, ಸೋಮನಾಥ ಗೋಖಲೆ, ನೀಲಕಂಠ ಪಾಟಕ್, ಕೆ. ಪಾಂಡುರಂಗ ಪೈ, ಕೆ. ರಾಮದಾಸ್ ನಾಯಕ್, ನಕ್ರೆ ಶಾಮರಾಯ ನಾಯಕ್, ಶಬರಿ ಆಶ್ರಮದ ಕೃಷ್ಣ, ಓಬಯ್ಯ ಹೆಗ್ಡೆ, ಸಾಣೂರು ಮಂಜುನಾಥ ಕುಡ್ವ, ನಾರಾಯಣ ಚಿಪ್ಲೂಣ್ಕರ್, ಟಿ. ಅನಂತರಾಮ ಭಟ್, ನಾರಾಯಣ ಮರಾಠೆ, ನೀಲಕಂಠ ರಾಮ್, ಮಹಾಬಲ ಅಡ್ಯಂತಾಯ, ಪದ್ಮನಾಭ ಮೇಸ್ತ್ರಿ, ಎಂ. ಭೋಜರಾಜ ಶೆಟ್ಟಿ, ಎಂ. ವಾದಿರಾಜ ಕಲ್ಕೂರ, ಮಹಾಬಲ ಹೆಗಡೆ, ಇನ್ನ ಭುಜಂಗರಾಯರು, “ಗಾಂಧಿ ಅಪ್ಪಾ” ರೆಂಜಾಳ ಮಂಜುನಾಥ ಶೆಣೈ, ಉಮಾನಾಥ ಪ್ರಭು, ಎಸ್.ಎನ್. ಮಲ್ಯ… ಹೀಗೆ ಇನ್ನೂ ಅನೇಕ ಮಂದಿ ಸೇರಿ ಸ್ವಾತಂತ್ರ್ಯ ಹೋರಾಟವನ್ನು ಇಲ್ಲಿ ಬಿರುಸುಗೊಳಿಸಿದರು.

ಕಾರ್ಕಳಕ್ಕೆ ಬಂದ ನೆಹರೂ
1935 ನಂತರ ಹಲವು ರಾಜಕೀಯ ಸ್ಥಿತ್ಯಂತರಗಳು ನಡೆದವು. ಭಾರತೀಯರನ್ನು ಒಳಗೊಂಡ ಕೇಂದ್ರ ಸರಕಾರ ರಚನೆಗೆ ಬ್ರಿಟಿಷರು ಮುಂದಾದರು. 1937ರಲ್ಲಿ ಚುನಾವಣಾ ಪ್ರಚಾರಕ್ಕಾಗಿ ಜವಾಹರಲಾಲ್ ನೆಹರೂ ಕಾರ್ಕಳಕ್ಕೆ ಬಂದರು. ಪೇಟೆಯಲ್ಲಿ ತೆರೆದ ಜೀಪಿನಲ್ಲಿ ಅವರ ಮೆರವಣಿಗೆ ನಡೆದು, ಸ್ವರಾಜ್ಯ ಮೈದಾನದಲ್ಲಿ ಜನರನ್ನುದ್ದೇಶಿಸಿ ನೆಹರೂ ಭಾಷಣ ಮಾಡಿದರು. 1939ರಲ್ಲಿ ವಿಶ್ವ ಮಹಾಯುದ್ಧ ಪ್ರಾರಂಭವಾಯಿತು. ಇತ್ತ ಭಾರತದಲ್ಲಿ ಬ್ರಿಟಿಷರ ವಿರುದ್ಧ ಸರದಿ ಸತ್ಯಾಗ್ರಹ ನಡೆಸುವ ನಿರ್ಧಾರವಾಯಿತು. ಕಾರ್ಕಳದಲ್ಲೂ ಸತ್ಯಾಗ್ರಹಿಗಳ ಪಟ್ಟಿ ಸಿದ್ಧವಾಯಿತು. ಎಂ. ಡಿ. ಅಧಿಕಾರಿ, ಕಮಲಾ ಅಧಿಕಾರಿ, ವೆಂಕಟೇಶ ಪ್ರಭು, ಡಾ| ಕೆ. ಜಿ. ಕಾಮತ್, ಸೋಮನಾಥ ಗೋಖಲೆ ಅವರಲ್ಲಿ ಪ್ರಮುಖರಾಗಿದ್ದರು.

ನ್ಯಾಯಾಧೀಶರಿಗೆ ಗಾಂಧಿ ಟೋಪಿ ತೊಡಿಸಿದರು
ಇದೇ ಸಂದರ್ಭದಲ್ಲಿ ಯುದ್ಧ ವಿರೋಧಿ ಹಾಗೂ ಬ್ರಿಟಿಷ್ ವಿರೋಧಿ ಪ್ರಚಾರ ಕಾರ್ಯ ನಡೆಯಿತು. ಸೋಮನಾಥ ಗೋಖಲೆಯವರು ಬಜಗೋಳಿಯಿಂದಲೂ, ನೀಲಕಂಠ ಪಾಠಕ್ ಕಾರ್ಕಳದ ಸ್ವರಾಜ್ಯ ಮೈದಾನದಿಂದಲೂ ಪ್ರಚಾರ ಕಾರ್ಯ ಆರಂಭಿಸಿದರು. ಆಮೇಲೆ ಗುರುವಾಯನಕೆರೆ, ಉಪ್ಪಿನಂಗಡಿ, ಮಂಗಳೂರು ಮೂಲಕ ಭಟ್ಕಳ ತಲುಪಿದಾಗ ಬಂಧಿಸಲಾಯಿತು. ಕಾರ್ಕಳದಲ್ಲೂ ಹಲವರು ಬಂಧಿಸಲ್ಪಟ್ಟರು. ವಕೀಲ ಪದ್ಮನಾಭ ಕಾಮತ್ ಅವರೊಂದಿಗೆ ಸೇರಿ ಇವರೆಲ್ಲ ನ್ಯಾಯಾಲಯದಲ್ಲಿ ಪಿಕೆಟಿಂಗ್ ನಡೆಸಿದರು. ಅಷ್ಟೇ ಅಲ್ಲ ನ್ಯಾಯಾಧೀಶರಿಗೆ ಇವರು ಗಾಂಧಿ ಟೊಪ್ಪಿ ಹಾಕಿದ್ದರಿಂದ ಸಿಟ್ಟಾದ ನ್ಯಾಯಾಧೀಶರು ಆ ದಿನ ನ್ಯಾಯಾಲಯಕ್ಕೆ ರಜೆ ಘೋಷಿಸಿದರು. ಸತ್ಯಾಗ್ರಹಿಗಳು ಸೆರೆಮನೆಯಿಂದ ಬಿಡುಗಡೆಗೊಂಡ ಕೂಡಲೇ ಮತ್ತೆ ಸತ್ಯಾಗ್ರಹ ಮುಂದುವರಿಸಿದರು. ಹೀಗೆ ಎಂ. ಡಿ. ಅಧಿಕಾರಿಯವರು ಪದೇ ಪದೆ ಸೆರೆಮನೆ ಸೇರುತ್ತಿದ್ದರು. ಅತ್ತ ರಾಜಾಜಿಯವರ ಬಂಧನವಾದಾಗ ಇಡೀ ಕಾರ್ಕಳದಲ್ಲಿ ಹರತಾಳ ನಡೆಯಿತು.

ಕಾರ್ಕಳ ನಗರ ಬಂದ್
1942ರ “ಕ್ವಿಟ್ ಇಂಡಿಯಾ” ಚಳವಳಿ, ಭಾರತದ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ಬಹಳ ಪ್ರಮುಖವಾದ ಘಟ್ಟ. ಇದು ನಮ್ಮ ಅವಿಭಜಿತ ದ.ಕ. ಜಿಲ್ಲೆಯಲ್ಲಿ ಬಿರುಸಾಗಿತ್ತು. ಮುಖ್ಯವಾಗಿ 1942 ಆಗಸ್ಟ್ 8ರ ರಾತ್ರಿ ಬ್ರಿಟಿಷರು ಗಾಂಧಿಜೀಯವರನ್ನು ಬಂಧಿಸಿದರು. ಇದನ್ನು ವಿರೋಧಿಸಿ ಆಗಸ್ಟ್ 9, 10 ರಂದು ಕಾರ್ಕಳದಲ್ಲಿ ವಿದ್ಯಾರ್ಥಿಗಳ ಮೆರವಣಿಗೆ ಹಾಗೂ ಇಡೀ ನಗರ ಬಂದ್ ಆಯಿತು.

ಲಾಠಿ ಏಟು ಸಹಿಸಿ ಧ್ವಜಸ್ತಂಭವನ್ನು ಅಪ್ಪಿ ಹಿಡಿದು ಭಾಷಣ ಮಾಡಿದ ಎಂ. ಡಿ. ಅಧಿಕಾರಿ
ಸೆಪ್ಟೆಂಬರ್ 9 ಮರೆಯಲಾಗದ ದಿನ. ತಿಂಗಳಾದರೂ ಗಾಂಧೀಜಿ ಬಿಡುಗಡೆ ಆಗದಿರುವುದು ಮತ್ತು ಕ್ವಿಟ್ ಇಂಡಿಯಾ ಚಳವಳಿ ಬಿರುಸುಗೊಳಿಸುವ ಉದ್ದೇಶದಿಂದ ಮಂಗಳೂರಿನ ಮೈದಾನದಲ್ಲಿ (ಈಗಿನ ನೆಹರೂ ಮೈದಾನ) ಕರಾವಳಿಯ ಅಸಂಖ್ಯಾತ ಹೋರಾಟಗಾರರು ಸಭೆ ಸೇರಿದರು. ಕಾರ್ಕಳ ವರಂಗದ ಎಂ. ಡಿ. ಅಧಿಕಾರಿಯವರು ಜನರ ಮೈನವಿರೇಳಿಸುವಂತೆ ಭಾಷಣ ಮಾಡತೊಡಗಿದರು. ಲಾಠಿ ಚಾರ್ಜ್ ಪ್ರಾರಂಭವಾಯಿತು. ಈ ಸಂದರ್ಭವನ್ನು ಬಿ. ಎಂ. ಇದಿನಬ್ಬ ಹೀಗೆ ವಿವರಿಸುತ್ತಾರೆ, “ಮಲಬಾರ್ ಪೊಲೀಸರು ಹಸಿದ ತೋಳಗಳಂತೆ ಸಭಿಕರಿಗೆ ಲಾಠಿ ಏಟು ಕೊಟ್ಟ ದೃಶ್ಯ ಅಮಾನವೀಯ. ಎಂ. ಡಿ. ಅಧಿಕಾರಿಯವರಿಗೆ ಪೆಟ್ಟೇ ಪೆಟ್ಟು ! ಆದರೆ, ಅಧಿಕಾರಿಯವರು ಪತಾಕೆ ಧ್ವಜಸ್ತಂಭವನ್ನು ಅಪ್ಪಿ ಹಿಡಿದುಕೊಂಡು ಮಾತನಾಡುತ್ತಲೇ ಇದ್ದರು. ಮತ್ತೂ ಹೊಡೆದರು. ಮೂಳೆ ಮುರಿತಕ್ಕೆ ಒಳಗಾದ ಅಧಿಕಾರಿಯವರು ಧ್ವಜಸ್ತಂಭ ಹಿಡಿದಲ್ಲೇ ನೆಲಕ್ಕೆ ಬಿದ್ದರು. ಸಭಿಕರೆಲ್ಲಾ ಚೆಲ್ಲಾಪಿಲ್ಲಿಯಾಗಿ ಓಡಿದರು. ಆಗಲೇ ಲೋಕಯ್ಯ ಶೆಟ್ಟರು ಜಿಂಕೆಯಂತೆ ಹಾರಿಬಂದು ನೆಲಕ್ಕೆ ಬಿದ್ದ ಅಧಿಕಾರಿಯವರನ್ನು ಹೆಗಲಿಗೆ ಹಾಕಿಕೊಂಡು ರಾಮಕೃಷ್ಣ ನರ್ಸಿಂಗ್‌ ಹೋಂಗೆ ಓಡಿದರು”.

ಹರತಾಳ, ಮೆರವಣಿಗೆ, ನಿಷೇಧಾಜ್ಞೆ, ಲಾಠಿ ಪ್ರಹಾರ…
ಈ ಘಟನೆಯನ್ನು ವಿರೋಧಿಸಿ ಸೆಪ್ಟೆಂಬರ್ 10 ರಂದು ಕಾರ್ಕಳದಲ್ಲಿ ಹರತಾಳ ನಡೆಯಿತು. ವಿದ್ಯಾರ್ಥಿಗಳೂ ಮುಷ್ಕರ ನಡೆಸಿದರು. ಸೆಪ್ಟೆಂಬರ್ 26 ರಂದು ವೆಂಕಟೇಶ ಪ್ರಭು, ಕೇಶವ ಶೆಣೈ ಹಾಗೂ ಸುಬ್ರಾಯ ನಾರಾಯಣ ಮಲ್ಯರು ಚಿಕಿತ್ಸೆ ಪಡೆಯುತ್ತಿದ್ದ ಎಂ. ಡಿ. ಅಧಿಕಾರಿಯವರನ್ನು ಕಂಡು, ಆರೋಗ್ಯ ವಿಚಾರಿಸಿ, ಹೋರಾಟಕ್ಕೆ ಇನ್ನಷ್ಟು ಸ್ಫೂರ್ತಿ ಪಡೆದು ಬಂದರು. ಅಕ್ಟೋಬರ್ 9ಕ್ಕೆ ಹೋರಾಟ ಪ್ರತಿಭಟನೆ ನಡೆಸುವ ನಿರ್ಧಾರವಾಯಿತು. ಕಾರ್ಕಳದ ಸದಾಶಿವರಾಯರ ಹಾಳುಬಿದ್ದ ಮನೆಯನ್ನು “ಸ್ವರಾಜ್ಯ ಭವನ” ವನ್ನಾಗಿಸಿಕೊಂಡು ಸತ್ಯಾಗ್ರಹಿಗಳು ಅಲ್ಲಿ ಒಟ್ಟು ಸೇರಿ “ಮಾಡು ಇಲ್ಲವೇ ಮಡಿ” ಎಂಬ ಸಂಕಲ್ಪದೊಂದಿಗೆ ಹೋರಾಟ ನಡೆಸಲು ಸಿದ್ದರಾದರು. ಚಳವಳಿ ತಡೆಯಲು ಅಕ್ಟೋಬರ್ 9ಕ್ಕೆ ಕಾರ್ಕಳದಲ್ಲಿ ನಿಷೇಧಾಜ್ಞೆ ಹೇರಲಾಯಿತು. ಆದರೆ ಸತ್ಯಾಗ್ರಹಿಗಳು ಹಿಂಜರಿಯಲಿಲ್ಲ. ಅಂದು ಬೆಳಿಗ್ಗೆ ಅನಂತಶಯನದ ದೇವಾಲಯದಿಂದ ವೆಂಕಟೇಶ ಪ್ರಭುಗಳ ನೇತೃತ್ವದಲ್ಲಿ ಮೆರವಣಿಗೆ ಹೊರಟಿತು. ಬಸ್ ನಿಲ್ದಾಣದ ಬಳಿ ಲಾಠಿ ಪ್ರಹಾರ ನಡೆಯಿತು. “ಭಾರತ ಮಾತಾಕಿ ಜೈ” ಎಂಬ ಘೋಷಣೆ ಮುಗಿಲು ಮುಟ್ಟಿತು. ಅನೇಕರು ನೆಲಕ್ಕುರುಳಿದರು. ರಕ್ತದೋಕುಳಿ ಹರಿಯಿತು. ವಿಚಿತ್ರವೆಂದರೆ ಅಂದು ಈ ಲಾಠಿಪ್ರಹಾರಕ್ಕೆ ಆದೇಶ ನೀಡಿದ ವಲಯ ಪೊಲೀಸರು ಅಧಿಕಾರಿ ಅಣ್ಣಪ್ಪಯ್ಯ ಕಾರ್ಕಳದವರೇ ಆಗಿದ್ದರು ! ಸ್ಮೃತಿ ತಪ್ಪಿ ಬಿದ್ದವರಿಗೆ ನೀರೆರಚಿ ಉಪವಾಸ ಮಾಡಲು ಹೋದ ಯುವ ಸತ್ಯಾಗ್ರಹಿ ಸುಬ್ರಾಯ ನಾರಾಯಣ ಮಲ್ಯರಿಗೂ ಲಾಠಿ ಏಟು ಬಿತ್ತು. ಅಂದು ಪೆಟ್ಟು ತಿಂದವರಲ್ಲಿ ಪ್ರಮುಖರಾದ ಕೆ. ವೆಂಕಟೇಶ ಪ್ರಭು, ಸಿ. ಪದ್ಮನಾಭ ಕಾಮತ್, ಕೆ. ವಾಮನ ಪೈ, ಗೋಪಾಲಕೃಷ್ಣ ಕಿಣಿ, ಸೂಡ ಕೃಷ್ಣ ಪ್ರಭು, ತಾರಾನಾಥ ಕಾಮತ್, ರಂಗನಾಥ ಪ್ರಭು, ಸಿ. ಕೃಷ್ಣ ಕಾಮತ್, ಕೆ. ಗಣಪತಿ ಭಟ್, ಸದಾನಂದ ಜೋಶಿ, ಮಾಧವ ಪುರಾಣಿಕ್ ಮತ್ತು ಲಾಠಿ ಚಾರ್ಜ್ ಸಂದರ್ಭದಲ್ಲಿ ಮೆರವಣಿಗೆಯಲ್ಲಿ ಸೇರಿದ ಬೋರ್ಡ್ ಹೈಸ್ಕೂಲ್ ವಿದ್ಯಾರ್ಥಿ ಆನಂದ ಶೆಟ್ಟಿ ಇವರಿಗೆ ಪ್ರಥಮ ಚಿಕಿತ್ಸೆ ನೀಡಿ, ಬಂಧಿಸಿ, ಬಳ್ಳಾರಿಯ ಅಲ್ಲಪುರಂ ಜೈಲಿಗೆ ಕಳುಹಿಸಲಾಯಿತು.

ಕ್ರಾಂತಿಯ ಕಿಡಿ
ಇದೇ ಸಂದರ್ಭದಲ್ಲಿ ಕಾರ್ಕಳದ ನೆಲದಲ್ಲಿ ಅಹಿಂಸಾತ್ಮಕ ಮಾತ್ರವಲ್ಲ, ಕ್ರಾಂತಿಕಾರಿ ಹೋರಟವೂ ನಡೆದವು. ಕಾರ್ಕಳ-ಮಂಗಳೂರು ಮಾರ್ಗದ ತಂತಿ ಸಂಪರ್ಕ ಕಡಿತ, ಬಜಗೋಳಿ ಸಮೀಪ ಸೇತುವೆ ಧ್ವಂಸ, ಟಪ್ಪಾಲು ಪೆಟ್ಟಿಗೆ, ಮೈಲುಕಲ್ಲುಗಳನ್ನು ತೆಗೆದೆಸೆಯುವ ಕಾರ್ಯಗಳೂ ನಡೆದವು. ಕೆ. ಪದ್ಮನಾಭ ಕಾಮತ್, ದುರ್ಗ ನೀಲಕಂಠ ಪಾಠಕ್, ಮುದ್ರಾಡಿ ಕೃಷ್ಣಯ್ಯ ಶೆಟ್ಟಿ ಮುಂತಾದವರು ಇಂತಹ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದರು.

ಹೋರಾಟಗಾರರಿಗೆ ಆಶ್ರಯ
ಕಾರ್ಕಳದ ಪುಣ್ಯನೆಲ ಕೇವಲ ಸ್ವಾತಂತ್ರ್ಯ ಹೋರಾಟಕ್ಕೆ ಮಾತ್ರವಲ್ಲ, ಪರವೂರಿನ ಹೋರಾಟಗಾರರಿಗೂ ಸುರಕ್ಷಿತ ಆಶ್ರಯ ತಾಣವೆನಿಸಿತ್ತು. ಕೇರಳದ ನಾರಾಯಣ ಕುರುಪ್, ಆಂಧ್ರದ ಬೆಜವಾಡದ ವೆಂಕಟರಾಮಯ್ಯ, ಮಂಗಳೂರಿನ ವಿದ್ಯಾರ್ಥಿ ನಾಯಕ ಗೋಪಾಲಕೃಷ್ಣ ಭಂಡಾರ್ಕರ್‍ಗೆ ಇಲ್ಲಿ ಆಶ್ರಯ ನೀಡಲಾಗಿತ್ತು. 1943ರಲ್ಲಿ ಸ್ವಾತಂತ್ರ್ಯ ಹೋರಾಟಗಾರರಾದ ಆರ್. ಆರ್. ದಿವಾಕರ್, ಚನ್ನಬಸಪ್ಪ ಅಂಬಲಿ ಭೂಗತರಾಗಿ ಇಲ್ಲಿಗೆ ಬಂದಾಗ ಅವರಿಗೆ ರಕ್ಷಣೆ ನೀಡಲಾಯಿತು. ಅವರಿಗೆ ಮಾರ್ಗದರ್ಶಕರಾಗಿ ಸುಬ್ರಾಯ ನಾರಾಯಣ ಮಲ್ಯ ನೆರವಾಗಿದ್ದರು. ಸ್ವಾತಂತ್ರ್ಯ ಹೋರಾಟಗಾರರ ಪಟ್ಟಿಯಲ್ಲಿ ಕಾರ್ಕಳದ ಶ್ರೀನಿವಾಸ ಕಾಮತ್ ಹೆಸರೂ ಕೇಳಿ ಬಂದಿದೆ.

ಇತಿಹಾಸದಲ್ಲಿ ದಾಖಲಾಗದವರಿಗೂ ನಮನ…
ಸತ್ಕಾರ್ಯಗಳನ್ನು ಮಾಡುವವರೂ ಯಾರೂ ತಮ್ಮ ಕೆಲಸಗಳಿಗೆ ದಾಖಲೆಗಳನ್ನು ಇಡುತ್ತಾ ಹೋಗುವುದಿಲ್ಲ. ಯಾರಾದರೂ ತಮ್ಮನ್ನು ನೆನಪಿಟ್ಟುಕೊಳ್ಳಬೇಕು ಎಂಬ ಆಶಯವೂ ಅವರಿಗೆ ಇರುವುದಿಲ್ಲ. ಹಾಗೆಯೇ ಭಾರತ ಮಾತೆಯ ದಾಸ್ಯ ವಿಮೋಚನೆಯ ಕಾಯಕದಲ್ಲಿ ನಿಸ್ವಾರ್ಥದಿಂದ ಸಮರ್ಪಿಸಿಕೊಂಡವರು ಅನೇಕರು ಇರಬಹುದು. ಇಂದು ಅವರ ಹೆಸರು ಉಲ್ಲೇಖಿಸಲು ಸಿಗದೇ ಇರಬಹುದು. ಆದರೆ, ಈ ಸಂದರ್ಭದಲ್ಲಿ ಹೆಸರು ಹೇಳಿದ ಪ್ರಮುಖರು ಎಷ್ಟು ಮುಖ್ಯವೋ, ಹೆಸರಿಸದ ಪುಣ್ಯಾತ್ಮರೂ ಅಷ್ಟೇ ಪ್ರಾಮುಖ್ಯರು. ಹೋರಾಟದ ಜನ ಸಮೂಹದಲ್ಲಿ ಉತ್ಸಾಹದಿಂದ ಪಾಲ್ಗೊಂಡ ಎಲ್ಲರ ತ್ಯಾಗ ಬಲಿದಾನ, ರಾಷ್ಟ್ರಪ್ರೇಮ ಪ್ರಾಮುಖ್ಯವೇ. ನಮ್ಮ ಇಂದಿನ ಸ್ವಾತಂತ್ರ್ಯದ ಸುಖಕ್ಕೆ ಅವರು ಕಾರಣರೆಂಬುದನ್ನು ನೆನೆಯೋಣ. ನಿತ್ಯ ನಮಿಸೋಣ



































































































error: Content is protected !!
Scroll to Top