ಕಾರ್ಕಳ ಹೆಬ್ರಿ ಸೇರಿದಂತೆ ಜಿಲ್ಲೆಯಲ್ಲಿ 207 ಕಡೆಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆ – ಎಸ್ಪಿ ಹರಿರಾಮ್ ಶಂಕರ್

ಉಡುಪಿ : ಜಿಲ್ಲೆಯಲ್ಲಿ ಅಪರಾಧ ಚಟುವಟಿಕೆಗಳ ಕಣ್ಗಾವಲು ನಡೆಸುವುದಕ್ಕೆ ಕೋಮು ಸೂಕ್ಷ್ಮ ಮತ್ತು ಆಯಕಟ್ಟಿನ 207 ಪ್ರದೇಶಗಳಲ್ಲಿ 601 ಸಿಸಿ ಕ್ಯಾಮೆರಗಳನ್ನು ಅಳವಡಿಸುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಎಸ್‌ಪಿ ಹರಿರಾಂ ಶಂಕರ್ ತಿಳಿಸಿದ್ದಾರೆ.
ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಯೋಜನೆಯ ಬಗ್ಗೆ ಮಾಹಿತಿ ನೀಡಿದರು. ಸುಮಾರು 2.50 ಕೋಟಿ ರೂ. ವೆಚ್ಚದ ಈ ಯೋಜನೆಗೆ ಛೇಂಬರ್‌ ಆಫ್‌ ಕಾಮರ್ಸ್ ಕೈಜೋಡಿಸಿದೆ. ಮೊದಲ ಹಂತದಲ್ಲಿ ಯೋಜನೆಯ ಆರಂಭಿಕ ಹಂತದಲ್ಲಿ ಜಿಲ್ಲೆಯ ಗಡಿ ಪ್ರದೇಶಗಳು, ಮತೀಯ ಸೂಕ್ಷ್ಮ ಸ್ಥಳಗಳನ್ನು ಆಯ್ಕೆ ಮಾಡಲಾಗಿದೆ. ಈ ಕ್ಯಾಮೆರಾಗಳ ಮೂಲಕ ಸ್ಥಳೀಯ ಪೊಲೀಸ್ ಠಾಣೆ ಹಾಗೂ ಜಿಲ್ಲಾ ಪೊಲೀಸ್ ಕಂಟ್ರೋಲ್ ರೂಮ್‌ನಲ್ಲಿ ನಿರಂತರವಾಗಿ ವೀಕ್ಷಣೆ ನಡೆಸಲಾಗುವುದು ಎಂದರು.
ಕಳ್ಳತನದಂತಹ ಪ್ರಕರಣಗಳನ್ನು ತಡೆಯುವ ಉದ್ದೇಶದಿಂದ 50 – 100 ಮನೆಗಳಿರುವ ವಠಾರಕ್ಕೆ ತರಬೇತಿ ಪಡೆದ ಗಾರ್ಡ್ ಗಳನ್ನು ನೇಮಿಸುವ ದೃಷ್ಟಿ ಯೋಜನೆ ಜಾರಿಗೊಳಿಸಲಾಗುವುದು ಎಂದರು.

166 ಕಾಲೇಜುಗಳಲ್ಲಿ ಎಡಿಎಸಿ
ಡ್ರಗ್ಸ್ ಮುಕ್ತ ಉಡುಪಿ ಧ್ಯೇಯವಾಕ್ಯದೊಂದಿಗೆ ಶಾಲಾ ಕಾಲೇಜುಗಳಲ್ಲಿ ಮಾದಕ ವಸ್ತು ನಿಯಂತ್ರಿಸಲು ಆ್ಯಂಟಿ ಡ್ರಗ್ ಅವೆರ್‌ನೆಸ್ ಕಮಿಟಿ ಆರಂಭಿಸಲಾಗಿದೆ. ಜಿಲ್ಲೆಯ 120 ಪಿಯು ಕಾಲೇಜು ಹಾಗೂ 46 ವೃತ್ತಿಪರ ಕಾಲೇಜು ಸೇರಿದಂತೆ 166 ಕಾಲೇಜುಗಳಲ್ಲಿ ಕಮಿಟಿಯನ್ನು ರಚಿಸಲಾಗಿದೆ. ಈ ಕಮಿಟಿಯಲ್ಲಿ ಕಾಲೇಜಿನ ಪ್ರಿನ್ಸಿಪಾಲ್, ಇಬ್ಬರು ಸಿಬ್ಬಂದಿ ಹಾಗೂ ಪ್ರತಿ ತರಗತಿಯ ಓರ್ವ ವಿದ್ಯಾರ್ಥಿಗಳಿರುತ್ತಾರೆ, ಸ್ಥಳೀಯ ಠಾಣಾಧಿಕಾರಿ ನೋಡಲ್ ಅಧಿಕಾರಿಯಾಗಿರುತ್ತಾರೆ.

ಕಥಾನ್‌ನಂತಹ ಜಾಗೃತಿ ಕಾರ್ಯಕ್ರಮ, ಪ್ರತಿ 3 ತಿಂಗಳಿಗೊಮ್ಮೆ ನೋಡಲ್ ಅಧಿಕಾರಿಯ ಸಭೆ, ತಜ್ಞ ವೈದ್ಯರಿಂದ ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ, ಮಾದಕ ವಸ್ತು ಸೇವನೆ ಪತ್ತೆಯಾದ ವಿದ್ಯಾರ್ಥಿಗಳಿಗೆ ಆಪ್ತ ಸಮಾಲೋಚನೆ, ಮಾದಕ ವಸ್ತು ಪೂರೈಕೆದಾರರ ಪತ್ತೆ ಮಾಡಿ ಕಾನೂನು ಕ್ರಮ ಕೈಗೊಳ್ಳುವಂತೆ ತಿಳಿಸಲಾಗಿದೆ ಎಂದರು.

ಎಲ್ಲೆಲ್ಲಿ ಕ್ಯಾಮೆರ ಅಳವಡಿಕೆ ?
ಕಾರ್ಕಳ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಮಾಳ, ಹೊಸ್ಮಾರು, ಸಚ್ಚರಿಪೇಟೆ, ಕಾರ್ಕಳ ನಗರ ಠಾಣಾ ವ್ಯಾಪ್ತಿಯ ಸಾಣೂರು, ಹೆಬ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ಸೋಮೆಶ್ವರಗಳಲ್ಲಿ ಸ್ವಯಂ ಚಾಲಿತ ನಂಬರ್ ಪ್ಲೇಟ್ ರೀಡರ್ ಕ್ಯಾಮೆರ, ಕಾರ್ಕಳ ಉಪವಿಭಾಗ ವ್ಯಾಪ್ತಿಯ ಬಾರಾಡಿ ಮತ್ತು ನಾರಾವಿ ಸ್ಥಳಗಳಲ್ಲಿ ಉತ್ತಮ ಗುಣಮಟ್ಟದ ಕ್ಯಾಮರ ಅಳವಡಿಸಲಾಗುವುದು ಎಂದವರು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಎಎಸ್ಪಿ ಸುಧಾಕರ್ ಎಸ್. ನಾಯ್ಕ್, ಜಿಲ್ಲಾ ಛೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಅಮ್ಮುಂಜೆ ಪ್ರಭಾಕರ್ ನಾಯಕ್, ಕಾರ್ಯದರ್ಶಿ ಡಾ. ವಿಜಯೇಂದ್ರ ಉಪಸ್ಥಿತರಿದ್ದರು.

































































































error: Content is protected !!
Scroll to Top