ಕಾರ್ಕಳ : ಉದಯ ಕುಮಾರ್ ಶೆಟ್ಟಿಯವರು ಪರಶುರಾಮ ಮೂರ್ತಿಯ ಪುನರ್ ನಿರ್ಮಾಣ ಮಾಡಲು ಹೈಕೋರ್ಟ್ನಲ್ಲಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಬೆಂಬಲವಾಗಿ ಪರಶುರಾಮ ಥೀಮ್ ಪಾರ್ಕ್ ಹಿತರಕ್ಷಣಾ ಸಮಿತಿಯನ್ನು ಬರ್ಖಾಸ್ತುಗೊಳಿಸಿರುವುದಾಗಿ ಹಿತರಕ್ಷಣಾ ಸಮಿತಿ ಅಧ್ಯಕ್ಷ ಕೃಷ್ಣ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾರ್ಕಳ ಪರಶುರಾಮ ಥೀಮ್ ಪಾರ್ಕ್ ಹಿತರಕ್ಷಣಾ ಸಮಿತಿಯು ರಾಜಕೀಯೇತರ ಸಮಿತಿಯಾಗಿದ್ದು, ಬೈಲೂರಿನ ಉಮಿಕ್ಕಲ್ ಬೆಟ್ಟದಲ್ಲಿ ಕಂಚಿನ ಪರಶುರಾಮ ಮೂರ್ತಿಯನ್ನು ಪುನರ್ ಸ್ಥಾಪಿಸುವ ಧಾರ್ಮಿಕ ಶ್ರದ್ದೆಯ ಸದುದ್ದೇಶವನ್ನು ಹೊಂದಿ ಅಸ್ತಿತ್ವಕ್ಕೆ ಬಂದಿರುತ್ತದೆ. ಇದೀಗ ಕಾಂಗ್ರೆಸ್ ನ ಹಿರಿಯ ನಾಯಕ ಉದಯ ಕುಮಾರ್ ಶೆಟ್ಟಿಯವರು ನಮ್ಮ ಸಮಿತಿಯು ಹೊಂದಿದ್ದ ಸದುದ್ದೇಶವನ್ನೇ ಇಟ್ಟುಕೊಂಡು ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿರುವುದರಿಂದ ಈ ಸಂದರ್ಭ ಸಮಿತಿಯು ಯಾವುದೇ ನಿರ್ಣಯವನ್ನು ಕೈಗೊಂಡರೆ ಕಾನೂನಿನ ತೊಡಕಾಗುವ ಸಾಧ್ಯತೆಯಿದೆ. ಇದು ಉದಯ ಕುಮಾರ್ ಶೆಟ್ಟಿಯವರ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ತೊಂದರೆಯಾಗುವ ಸಂಭವ ಇರುವುದರಿಂದ ಅವರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಪೂರ್ಣವಾಗಿ ಬೆಂಬಲವನ್ನು ನೀಡುವ ಉದ್ದೇಶದಿಂದ ಸಮಿತಿಯನ್ನು ಬರ್ಖಾಸ್ತುಗೊಳಿಸುವ ನಿರ್ಣಯವನ್ನು ಹಿತರಕ್ಷಣಾ ಸಮಿತಿಯು ಸಭೆ ಸೇರಿ ನಿರ್ಧರಿಸಿದೆ ಎಂದವರು ತಿಳಿಸಿದ್ದಾರೆ.
ಸಂಪೂರ್ಣ ಬೆಂಬಲ
ಪರಶುರಾಮ ಥೀಮ್ ಪಾರ್ಕ್ ಹಿತರಕ್ಷಣಾ ಸಮಿತಿಯ ಎಲ್ಲ ಪದಾಧಿಕಾರಿಗಳು ಮತ್ತು ಸದಸ್ಯರು ಉದಯ ಕುಮಾರ್ ಶೆಟ್ಟಿಯವರ ನಿಲುವಿಗೆ ಮತ್ತು ಕಾನೂನಾತ್ಮಕ ಹೋರಾಟಕ್ಕೆ ಸಂಪೂರ್ಣ ಬೆಂಬಲವನ್ನು ನೀಡುವುದಾಗಿ ನಿರ್ಣಯಿಸಲಾಗಿದೆ. ಇನ್ನು ಮುಂದೆ ಕಾರ್ಕಳ ಪರಶುರಾಮ ಥೀಮ್ ಪಾರ್ಕ್ ಹಿತರಕ್ಷಣಾ ಸಮಿತಿಯು ಅಸ್ತಿತ್ವದ್ಲಲಿ ಇರುವುದಿಲ್ಲ ಎಂದವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.








































