ಬೆಂಗಳೂರು : ಅನುದಾನ ಸಿಗುತ್ತಿಲ್ಲ ಎಂದು ತಮ್ಮ ಸರಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದ ಸ್ವಪಕ್ಷದ ಶಾಸಕರಿಗೆ ಕೊನೆಗೂ ಅನುದಾನ ಬಿಡುಗಡೆಗೆ ಸಿಎಂ ಸಿದ್ದರಾಮಯ್ಯ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.
ಶಾಸಕರ ಅಸಮಾಧಾನಕ್ಕೆ ಮಣಿದು ಖುದ್ದು ಉಸ್ತುವಾರಿ ಸುರ್ಜೇವಾಲಾ ಅವರೇ ಬಂದು ಶಾಸಕರ ಅಹವಾಲು ಸ್ವೀಕರಿಸಿದ್ದರು. ಶಾಸಕರ ಜೊತೆ ಸುರ್ಜೇವಾಲಾ ಸಭೆ ಮಾಡಿದ ಬೆನ್ನಲ್ಲೇ ಸಿಎಂ ಅನುದಾನ ಬಿಡುಗಡೆಗೆ ಮುಂದಾಗಿದ್ದಾರೆ.
ಕಾಂಗ್ರೆಸ್ ಶಾಸಕರಿಗೆ ತಲಾ 50 ಕೋಟಿ ರೂ. ಅನುದಾನ ಬಿಡುಗಡೆಗೆ ಸಿಎಂ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಲೋಕೋಪಯೋಗಿ ಇಲಾಖೆ ಅಡಿ 37.50 ಕೋಟಿ ರೂ., ಶಾಸಕರ ವಿವೇಚನಾಧಿಕಾರದ ಅಡಿ ಹಾಗೂ ಇತರೆ ಇಲಾಖೆ ಕಾಮಗಾರಿಗೆ 12.50 ಕೋಟಿ ರೂ. ಅನುದಾನ ಬಿಡುಗಡೆ ಮಾಡುವ ಬಗ್ಗೆ ಸಿಎಂ ಎಲ್ಲಾ ಶಾಸಕರಿಗೆ ಪತ್ರ ಬರೆದಿದ್ದಾರೆ.
ಅನುದಾನ ಬಿಡುಗಡೆಗೂ ಮುನ್ನ ಸಿಎಂ ಜುಲೈ 30 ಮತ್ತು 31ರಂದು ಕಾಂಗ್ರೆಸ್ ಶಾಸಕರ ಜೊತೆ ಒನ್ ಟು ಒನ್ ಸಭೆ ನಡೆಸಲಿದ್ದಾರೆ. ಈ ಸಭೆಯಲ್ಲಿ ಶಾಸಕರು ಬೇಡಿಕೆ ಪತ್ರದೊಂದಿಗೆ ಕಾಮಗಾರಿ ವಿವರಗಳನ್ನು ನೀಡುವಂತೆ ಸಿಎಂ ತಿಳಿಸಿದ್ದಾರೆ. ಶಾಸಕರ ಜೊತೆ ಸಭೆ ಬಳಿಕ ಅನುದಾನ ಬಿಡುಗಡೆ ಆಗುವ ಸಾಧ್ಯತೆ ಇದೆ.






















