ಅಜೆಕಾರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಗೆ ಶಿವರಾಮ ಶೆಟ್ಟಿ ರಾಜೀನಾಮೆ

ಕಾರ್ಕಳ : ಮರ್ಣೆ ಗ್ರಾಮ ಅಜೆಕಾರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಗೆ ಧಾರ್ಮಿಕ ಮುಂದಾಳು, ಮುಂಬೈ ಉದ್ಯಮಿ ಶಿವರಾಮ ಶೆಟ್ಟಿರಾಜೀನಾಮೆ ಸಲ್ಲಿಸಿದ್ದಾರೆ. ಜು. 14ರಂದು ದೇವಸ್ಥಾನದ ಆಡಳಿತಾಧಿಕಾರಿ ಪ್ರಮೋದ್ ಸುವರ್ಣ ಅವರ ನೇತೃತ್ವದಲ್ಲಿ ನೂತನ ಆಡಳಿತ ಮಂಡಳಿಗೆ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆದಿದ್ದು, ಈ ಸಭೆಯಿಂದ ಶಿವರಾಮ ಶೆಟ್ಟಿ ಅವರು ದೂರವುಳಿದಿದ್ದರು ಎಂದು ತಿಳಿದುಬಂದಿದೆ. ಕಳೆದ 5 ದಶಕಗಳಿಂದ ದೇವಸ್ಥಾನದ ಬಹುತೇಕ ಎಲ್ಲ ಕಾರ್ಯಕ್ರಮ, ಉತ್ಸವಗಳಲ್ಲಿ ಪಾಲ್ಗೊಂಡು ದೇವಸ್ಥಾನದ ಅಭಿವೃದ್ಧಿಗಾಗಿ ಬೃಹತ್‌ ಪ್ರಮಾಣದಲ್ಲಿ ದೇಣಿಗೆ ನೀಡುತ್ತಿದ್ದ ಅಜೆಕಾರು ದೇವಸ ಶಿವರಾಮ ಶೆಟ್ಟಿಯವರು ತನ್ನ ಸದಸ್ಯತ್ವಕ್ಕೆ ರಾಜೀನಾಮೆ ಪ್ರಕಟಿಸಿದ್ದಾರೆ. ಶಿವರಾಮ ಶೆಟ್ಟಿ ಅವರು ಜಿಲ್ಲಾ ಮುಜರಾಯಿ ಇಲಾಖೆಯ ಸಹಾಯಕ ಆಯುಕ್ತರಿಗೆ ಜು. 14ರಂದೇ ತನ್ನ ರಾಜೀನಾಮೆ ಪತ್ರವನ್ನು ರವಾನಿಸಿರುತ್ತಾರೆ. ಅವರ ರಾಜೀನಾಮೆ ಭಕ್ತರ ವಲಯದಲ್ಲಿ ತೀವ್ರ ಚರ್ಚೆಗೆ ಹಾಗೂ ನಿರಾಸೆಗೆ ಕಾರಣವಾಗಿದೆ.

ಸಮಿತಿಯಲ್ಲಿರಲು ಬಯಸುವುದಿಲ್ಲ
ತನ್ನ ರಾಜೀನಾಮೆ ಪತ್ರದಲ್ಲಿ ಶಿವರಾಮ ಶೆಟ್ಟಿ ಅವರು ಕೆಲವೊಂದು ಅಂಶಗಳನ್ನು ಉಲ್ಲೇಖಿಸಿರುತ್ತಾರೆ. ಕಳೆದ 50 ವರ್ಷಗಳಿಂದ ದೇವಸ್ಥಾನದ ಆಡಳಿತ ಮೊಕ್ತೇಸರನಾಗಿ, ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷನಾಗಿ ಅತ್ಯಂತ ಭಕ್ತಿ, ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸಿರುತ್ತೇನೆ. ನನ್ನ ನೇತೃತ್ವದ ಸಮಿತಿಯ ಆಡಳಿತದ ಅವಧಿಯಲ್ಲಿ ದೇವರ ಅನುಗ್ರಹದಿಂದ, ಭಕ್ತಾಧಿಗಳ ಸಹಕಾರ, ದಾನಿಗಳ ನೆರವಿನೊಂದಿಗೆ, ನನ್ನ ಸ್ವಂತ ಹಣವನ್ನೂ ಸೇರಿಸಿ ದೇವಸ್ಥಾನದ ಜೀರ್ಣೋದ್ದಾರ ಮಾಡಲಾಗಿದೆ. ವಿಜೃಂಭಣೆಯಿಂದ ಬ್ರಹ್ಮಕಲಶೋತ್ಸವವನ್ನು ಮಾಡಿ ದೇವಸ್ಥಾನಕ್ಕೆ ಬರುವ ಭಕ್ತಾಧಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮೂಲಭೂತ ಆವಶ್ಯಕತೆಯನ್ನು ಪೂರೈಸಲಾಗಿದೆ. ಧಾರ್ಮಿಕ ಅನುಷ್ಠಾನಕ್ಕೆ ಚ್ಯುತಿಯಾಗದಂತೆ ತಂತ್ರಿಗಳ ಮಾರ್ಗದರ್ಶನದಲ್ಲಿ ಉತ್ಸವಾದಿಗಳು ವೈಭವದಿಂದ ನೆರವೇರಿದೆ. ನಿತ್ಯ ಪೂಜಾ ಕೈಂಕರ್ಯಗಳನ್ನು ಯಥಾವತ್ತಾಗಿ ಅರ್ಚಕರು ಮಾಡುವಂತೆ ವ್ಯವಸ್ಥೆ ಮಾಡಲಾಗಿದೆ. ದೇವಸ್ಥಾನದಲ್ಲಿ ರಾಜಕೀಯ ಪಕ್ಷಪಾತ, ಜಾತಿ ಭೇದವಿಲ್ಲದೇ ಸರ್ವರನ್ನು ಸಮಾನವಾಗಿ ಕಂಡು ಧಾರ್ಮಿಕ ಕ್ಷೇತ್ರದ ಪಾವಿತ್ರ್ಯತೆಯನ್ನು ಕಾಪಾಡಿದ್ದೇನೆ ಎನ್ನುವ ಆತ್ಮ ಸಂತೃಪ್ತಿ ನನ್ನಲ್ಲಿದೆ. ಈ ಕಾರ್ಯಕ್ಕೆ ಸಹಕರಿಸಿದ ಅರ್ಚಕ ವೃಂದ, ಊರ ಪರವೂರ ಭಕ್ತಾಧಿಗಳು ಹಾಗೂ ಧಾರ್ಮಿಕ ಇಲಾಖೆಗೆ ಕೃತಜ್ಞತೆಗಳನ್ನು ಸಲ್ಲಿಸುತ್ತಿದ್ದೇನೆ.

ಪ್ರಸ್ತುತ ನೂತನ ವ್ಯವಸ್ಥಾಪನಾ ಸಮಿತಿಯನ್ನು ಜಿಲ್ಲಾ ಧಾರ್ಮಿಕ ಪರಿಷತ್ ಮೂಲಕ ಆಯ್ಕೆ ಮಾಡಲಾಗಿದೆ. ನನ್ನನೂ ಸದಸ್ಯರನ್ನಾಗಿ ಆಯ್ಕೆ ಮಾಡಿರುತ್ತಿರಿ. ಆದರೆ, ಈ ಸಮಿತಿಯಲ್ಲಿ ಈ ಹಿಂದಿನ ವ್ಯವಸ್ಥಾಪನಾ ಸಮಿತಿ ಮತ್ತು ಊರವರು ದೂರು ನೀಡಿದಂತೆ ದೇವಸ್ಥಾನದ ಜಾಗವನ್ನು ಕಬಳಿಸಿ ತನ್ನ ಸ್ವಂತಕ್ಕೆ ಉಪಯೋಗಿಸಿಕೊಂಡ ವ್ಯಕ್ತಿಯನ್ನು ದೇವಸ್ಥಾನದ ವ್ಯವಸ್ಥೆಗಳನ್ನು ನೋಡುವ ಸಮಿತಿಗೆ ಆಯ್ಕೆ ಮಾಡಲಾಗಿದೆ. ಅಲ್ಲದೇ ಹಲವಾರು ವರ್ಷಗಳಿಂದ ದೇವಸ್ಥಾನದ ಸಮಿತಿಯಲ್ಲಿ ಸೇವೆಯನ್ನು ಸಲ್ಲಿಸಿರುವವರನ್ನು ಕಡೆಗಣಿಸಲಾಗಿದೆ. ರಾಜಕೀಯ ಪ್ರೇರಿತವಾಗಿ ಸಮಿತಿಯನ್ನು ರಚಿಸಲಾಗಿದೆ. ಪವಿತ್ರ ದೇವಸ್ಥಾನಗಳಲ್ಲಿ ರಾಜಕೀಯದ ಲೇಪನ ಸಮಂಜಸವಲ್ಲದ ಕಾರಣ ಈ ಸಮಿತಿಯಲ್ಲಿ ಕಾರ್ಯ ನಿರ್ವಹಿಸಲು ನನ್ನ ಮನಸ್ಸು ಒಪ್ಪುತ್ತಿಲ್ಲ. ಹೀಗಾಗಿ ನನ್ನ ಸದಸ್ಯತನಕ್ಕೆ ರಾಜೀನಾಮೆಯನ್ನು ನೀಡುತ್ತಿದ್ದೇನೆ. ನನ್ನ ರಾಜೀನಾಮೆಯನ್ನು ಅಂಗೀಕರಿಸಬೇಕಾಗಿ ಈ ಮೂಲಕ ವಿನಂತಿಸಿಕೊಳ್ಳುತ್ತೇನೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಪ್ರಸ್ತುತ ಸಮಿತಿ ಅಧ್ಯಕ್ಷರಾಗಿ ಭರತ್‌ ಶೆಟ್ಟಿ, ಸದಸ್ಯರಾಗಿ ಪ್ರಕಾಶ್‌ ಶೆಟ್ಟಿ, ವಿಶ್ವನಾಥ ಪೂಜಾರಿ, ಪ್ರಿತೇಶ್‌ ಶೆಟ್ಟಿ, ಯಶೋಧಾ ಶೆಟ್ಟಿ, ವೀಣಾ ಮಡಿವಾಳ, ಕೃಷ್ಣ ಮೂರ್ತಿ ಭಟ್‌, ಗಣೇಶ್‌ ನಾಯಕ್‌ ಇದ್ದಾರೆ.

ಊರಿನ ದೇವಸ್ಥಾನ, ಶಾಲೆ, ಸಾಮಾಜಿಕ ಕಾರ್ಯಗಳಿಗೆ ಶಿವರಾಮ ಶೆಟ್ಟಿ ಅವರ ಕೊಡುಗೆ ಅಪಾರವಾದುದು. ತನ್ನೂರಿನ ಬಗ್ಗೆ ವಿಶೇಷ ಅಭಿಮಾನ, ಪ್ರೀತಿ, ಕಾಳಜಿ ಹೊಂದಿರುವ ಕೊಡುಗೈ ದಾನಿ ಶಿವರಾಮ ಶೆಟ್ಟಿ ಅವರು ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯಲ್ಲಿರಬೇಕು ಎನ್ನುವ ಅಪೇಕ್ಷೆ ನಮ್ಮದು. ದೇವಸ್ಥಾನ ಅಭಿವೃದ್ಧಿಗಾಗಿ ದೊಡ್ಡ ಮೊತ್ತ ದೇಣಿಗೆ ನೀಡುವುದರೊಂದಿಗೆ ದೇವಸ್ಥಾನದ ಕೆಲಸ ಕಾರ್ಯಗಳಲ್ಲಿ ಎಲ್ಲರೂ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಪ್ರೇರೇಪಿಸುತ್ತಿದ್ದರು. ಅವರ ರಾಜೀನಾಮೆಯಿಂದ ಯುವಕರಲ್ಲಿನ ಉತ್ಸಾಹ ಕಡಿಮೆಯಾಗಲಿದೆ.
– ಸುರೇಶ್‌ ಶೆಟ್ಟಿ
ಸದಸ್ಯರು, ಭಜನಾ ಮಂಡಳಿ

ದೇವಸ್ಥಾನದ ಜಾಗವನ್ನು ಕಬಳಿಸಿರುವ ಪ್ರಕಾಶ್‌ ಶೆಟ್ಟಿ ಎಂಬಾತನನ್ನು ವ್ಯವಸ್ಥಾಪನಾ ಸಮಿತಿಗೆ ಆಯ್ಕೆ ಮಾಡಿರುವುದೇ ಶಿವರಾಮ ಶೆಟ್ಟಿ ಅವರ ರಾಜೀನಾಮೆಗೆ ಕಾರಣವಾಗಿದೆ. ಶಿವರಾಮ ಶೆಟ್ಟಿಯಂತಹ ವ್ಯಕ್ತಿತ್ವದವರು ದೇವಸ್ಥಾನದ ಸಮಿತಿಗಳಲ್ಲಿರಬೇಕು. ಅವರ ರಾಜೀನಾಮೆಯಿಂದ ಭಕ್ತ ಗಡಣಕ್ಕೆ ಬೇಸರವಾಗಿದೆ. ರಾಜಕೀಯ ತೆವಲಿನಿಂದ ಧಾರ್ಮಿಕ ಕೇಂದ್ರಕ್ಕೆ ಹಿನ್ನಡೆಯಾಗದಿರಲಿ.
– ಸಂತೋಷ್‌ ಶೆಟ್ಟಿ, ದೇವಸ್ಥಾನದ ಭಕ್ತ

















































error: Content is protected !!
Scroll to Top