ದಕ್ಷಿಣ ಭಾರತದ ಜನಪ್ರಿಯ ಸಿನೆಮಾ ನಿರ್ದೇಶಕ ಕೆ. ಬಾಲಚಂದರ್

ದಕ್ಷಿಣ ಭಾರತದಲ್ಲಿ ಅತೀ ಹೆಚ್ಚು ಕಮರ್ಷಿಯಲ್ ಹಿಟ್ ಸಿನೆಮಾಗಳನ್ನು ನಿರ್ದೇಶನ ಮಾಡಿದವರು ಯಾರು?

ಅತೀ ಹೆಚ್ಚು ರಾಷ್ಟ್ರಪ್ರಶಸ್ತಿಗಳನ್ನು ಪಡೆದಿರುವ ಸಿನೆಮಾ ನಿರ್ದೇಶಕ ಯಾರು?

ಕಮಲಹಾಸನ್, ರಜನೀಕಾಂತ್, ಶ್ರೀದೇವಿ, ಜಯಪ್ರದಾ, ನಾಸೇರ್, ಜಯಸುಧಾ, ರಮೇಶ್ ಅರವಿಂದ್, ಸರಿತಾ, ಚಿರಂಜೀವಿ, ಪ್ರಕಾಶ್ ರಾಜ್ ( ರೈ), ಸುಜಾತ ಮೊದಲಾದ ದಿಗ್ಗಜ ಕಲಾವಿದರನ್ನು ಬೆಳ್ಳಿತೆರೆಗೆ ಪರಿಚಯ ಮಾಡಿದ ನಿರ್ದೇಶಕ ಯಾರು?

ಕನ್ನಡದಲ್ಲಿ ಎರಡು ರೇಖೆಗಳು, ಬೆಂಕಿಯಲ್ಲಿ ಅರಳಿದ ಹೂವು, ಸುಂದರ ಸ್ವಪ್ನಗಳು ಮೊದಲಾದ ಐದು ಮಹಾನ್ ಚಿತ್ರಗಳನ್ನು ನೀಡಿದ ಸ್ಟಾರ್ ನಿರ್ದೇಶಕರು ಯಾರು?

ಕೇವಲ ಕಮಲಹಾಸನ್ ಎಂಬ ಮಹಾ ಕಲಾವಿದನ 37 ಶ್ರೇಷ್ಟ ಸಿನೆಮಾಗಳನ್ನು ನಿರ್ದೇಶನ ಮಾಡಿದವರು ಯಾರು?

ಹಿಂದಿಯಲ್ಲಿ ಆಲ್ ಟೈಮ್ ಹಿಟ್ ಆಗಿರುವ ಏಕ್ ದೂಜೇ ಕೆಲಿಯೆ, ಏಕ್ ನಯಿ ಪಹೇಲಿ, ಆಯಿನಾ ಮೊದಲಾದ ಸಿನೆಮಾಗಳನ್ನು ಸಮರ್ಪಣೆ ಮಾಡಿದ ನಿರ್ದೇಶಕ ಯಾರು?

ಈ ಎಲ್ಲ ಪ್ರಶ್ನೆಗಳಿಗೂ ಒಂದೇ ಉತ್ತರ!

ಹೌದು, ಅದು ಕೆ. ಬಾಲಚಂದರ್!

ದಕ್ಷಿಣ ಭಾರತದ ಚಿತ್ರರಂಗವು ಅವರನ್ನು ‘ಮಹಾ ಗುರು’ ಎಂದು ಗೌರವದಿಂದ ಕರೆಯಿತು.

ಅಕೌಂಟೆಂಟ್ ಜನರಲ್ ಆಫೀಸಿನ ಒಬ್ಬ ಸಾಮಾನ್ಯ ಗುಮಾಸ್ತ.
ವಿಜ್ಞಾನದಲ್ಲಿ ಪದವಿ ಶಿಕ್ಷಣವನ್ನು ಮುಗಿಸಿ ಚೆನ್ನೈಯ ಅಕೌಂಟೆಂಟ್ ಜನರಲ್ ಆಫೀಸಿನ ಒಬ್ಬ ಸಾಮಾನ್ಯ ಗುಮಾಸ್ತನಾಗಿ ಕೆಂಪು ಪಟ್ಟಿಯ ಫೈಲುಗಳ ಧೂಳಿನ ನಡುವೆ ಕಳೆದುಹೋಗುತ್ತಿದ್ದ ಈ ಅದ್ಭುತ ಪ್ರತಿಭೆಯು ಬಾಲ್ಯದಿಂದಲೂ ನಾಟಕ, ಸಿನೆಮಾ ಎಂದೆಲ್ಲ ಹುಚ್ಚು ಅಂಟಿಸಿಕೊಂಡು ಬೆಳೆದಿತ್ತು.

ಆಗಲೇ ತಮಿಳು ನಾಟಕ ಕಂಪನಿ ಕಟ್ಟಿಕೊಂಡು ನಾಟಕ ರಚನೆ ಮತ್ತು ನಿರ್ದೇಶನಕ್ಕೆ ಇಳಿದವರು ಅವರು. ಅವರ ತಂಡದಲ್ಲಿ ಸಾಹುಕಾರ್ ಜಾನಕಿ ಅಂತಹ ಮಹಾ ನಟ, ನಟಿಯರು ಇದ್ದರು. ಮುಂದೆ ಅವರು ಬರೆದ ಕತೆಗಳು ಬೇಡಿಕೆ ಪಡೆದಂತೆ ಅವರು ಸ್ವತಃ ತಮಿಳು ಸಿನೆಮಾರಂಗಕ್ಕೆ ಅನಿವಾರ್ಯವಾಗಿ ಕತೆಗಾರ, ಸ್ಕ್ರಿಪ್ಟ್ ರೈಟರ್, ನಿರ್ದೇಶಕ ಎಲ್ಲವೂ ಆದರು. ಮುಂದೆ ಐವತ್ತು ವರ್ಷಗಳ ಕಾಲ ತನ್ನ ಸಿನೆಮಾಗಳ ಮೂಲಕ ದಕ್ಷಿಣ ಭಾರತ ಚಿತ್ರರಂಗದ ಚಿತ್ರಣವನ್ನೇ ಬದಲಾಯಿಸಿದರು. ತಮ್ಮದೇ ‘ಕವಿತಾಲಯ’ ಎಂಬ ಚಿತ್ರಸಂಸ್ಥೆ ಸ್ಥಾಪನೆ ಮಾಡಿ ಸಿನೆಮಾ ನಿರ್ಮಾಣ ಕೂಡ ಮಾಡಿದರು.

ಭರ್ತಿ ನೂರು ಸಿನೆಮಾಗಳು – ಎಲ್ಲವೂ ಕ್ಲಾಸಿಕ್!
1965ರಲ್ಲಿ ನೀರ್ ಕುಮಿಳಿ ಎಂಬ ತಮಿಳು ಸಿನೆಮಾ ನಿರ್ದೇಶನ ಮಾಡುವುದರ ಮೂಲಕ ಸಿನೆಮಾ ರಂಗಕ್ಕೆ ಪದಾರ್ಪಣೆ ಮಾಡಿದ ಕೆ. ಬಾಲಚಂದರ್ ಮುಂದಿನ ಐವತ್ತು ವರ್ಷಗಳ ಮುಟ್ಟಿದ್ದೆಲ್ಲವೂ ಚಿನ್ನ ಆಯಿತು. ಇರು ಕೊಡುಗಲ್, ಮೂನ್ರು ಮುಡಿಚ್ಚು, ಕಲ್ಕಿ, ಮರೊ ಚರಿತ್ರ, ಅವಳ್ ಒರು ತೊಡರ್ ಕತೈ, ಭಾಮಾ ವಿಜಯಮ್, ತಣ್ಣೀರ್ ತಣ್ಣೀರ್, ಅಪೂರ್ವ ರಾಗಂಗಳ, ಮನ್ಮಥ ಲೀಲೈ, 47 ನಾಟ್ಗಲ್……ಈ ಸಿನೆಮಾಗಳು ಸೂಪರ್ ಹಿಟ್ ಆದವು! ಅವುಗಳು ಗೆದ್ದಿರುವುದು ಅದ್ಭುತವಾದ ಕಥೆ, ಚಿತ್ರಕಥೆ, ನಿರೂಪಣೆ, ಪಾತ್ರ ಪೋಷಣೆ ಮತ್ತು ಹಿನ್ನೆಲೆ ಸಂಗೀತದ ಬಲದಿಂದ!

ಎಲ್ಲವೂ ಮಧ್ಯಮ ವರ್ಗದ ನವಿರು ಕಥೆಗಳು
ಬಾಲಚಂದರ್ ಆರಿಸುತ್ತ ಇದ್ದದ್ದು ಮದ್ಯಮ ವರ್ಗದ ಕೌಟುಂಬಿಕ ಕಥೆಗಳನ್ನು. ಅವರ ಸಿನೆಮಾಗಳು ಕೌಟುಂಬಿಕ ಜೀವನ, ಸೂಕ್ಷ್ಮ ಭಾವನೆಗಳು, ಕ್ರಾಂತಿಕಾರಿ ಆದ ವಿಚಾರಗಳು, ಸಾಮಾಜಿಕ ಕಳಕಳಿ ಮತ್ತು ಅತ್ಯಂತ ಸರಳವಾದ ನಿರೂಪಣೆಗಳಿಂದ ಗೆಲ್ಲುತ್ತಾ ಹೋದವು. ಎಂ.ಎಸ್ ವಿಶ್ವನಾಥನ್, ಇಳಯರಾಜ, ಎ ಆರ್ ರೆಹಮಾನ್ ಮೊದಲಾದ ಸಂಗೀತ ನಿರ್ದೇಶಕರು ಅವರ ಸಿನೆಮಾಗಳಲ್ಲಿ ಕ್ಲಾಸಿಕ್ ಹಾಡುಗಳನ್ನು ಕೊಟ್ಟಿದ್ದಾರೆ.

ಬಾಲಚಂದರ್ ಸಿನೆಮಾಗಳು ಅಂದರೆ ಅದು ಅದ್ಭುತ ಹಾಡುಗಳ ಮೆರವಣಿಗೆ ಅನ್ನುವುದು ಎಲ್ಲ ಕಾಲಕ್ಕೂ ಸಾಬೀತು ಆಗಿದೆ. ಅವರ ಅಷ್ಟೂ ಸಿನೆಮಾಗಳು ಆ ಕಾಲಕ್ಕೆ ‘ಅಹೆಡ್ ಆಫ್ ಟೈಮ್ ‘ ಎಂದು ವಿಮರ್ಶಕರಿಂದ ಕರೆಸಿಕೊಂಡಿವೆ.

ಹಾಲಿವುಡ್ ರಂಗದಲ್ಲಿ ಧಮಾಕಾ ಕ್ರಿಯೇಟ್ ಮಾಡಿದರು
ತಮಿಳುರಂಗದಲ್ಲಿ ಹಿಟ್ ಆಗಿದ್ದ ಆರಂಗ್ರೆಟಮ್ ಸಿನೆಮಾವನ್ನು ಹಿಂದಿಯಲ್ಲಿ ಆಯಿನಾ ಎಂದವರು ತೆರೆಗೆ ತಂದರು. ಅದು ವೇಶ್ಯಾವಾಟಿಕೆಯ ಕತೆ. ಆ ಕಾಲಕ್ಕೆ ಅಸ್ಪ್ರಶ್ಯ ಎಂದು ಕರೆದುಕೊಂಡ ವಿಷಯ ಅದು. ಮುಂದೆ ತಮ್ಮ ತೆಲುಗಿನ ಸೂಪರ್ ಹಿಟ್ ಆದ ಮರೋ ಚರಿತ್ರಮ್ ಸಿನೆಮಾವನ್ನು ಹಿಂದಿಗೆ ‘ಏಕ್ ದೂಜೆ ಕೆಲಿಯೇ’ ಎಂದು ತೆರೆಗೆ ತಂದರು. ಆ ಸಿನೆಮಾ ಸೂಪರ್ ಹಿಟ್ ಆಯ್ತು. ಕಮಲಹಾಸನ್, ರತಿ ಅಗ್ನಿಹೋತ್ರಿ, ಮಾಧವಿ ಮೊದಲಾದವರಿಗೆ ಅದು ಸ್ಟಾರ್ ವ್ಯಾಲ್ಯೂ ತಂದುಕೊಟ್ಟಿತು. ಮುಂದೆ ಏಕ್ ನಯಿ ಪಹೇಲಿ ಮೊದಲಾದ ಹಿಂದೀ ಸಿನೆಮಾ ಮಾಡಿದರು. ಆದರೆ ಬಾಲಿವುಡ್ ಮಂದಿ ದಕ್ಷಿಣ ಭಾರತದ ಕಲಾವಿದರನ್ನು ನೋಡುತ್ತಿದ್ದ ತಾರತಮ್ಯ ಧೋರಣೆಯು ಅವರಿಗೆ ಇಷ್ಟ ಆಗಲಿಲ್ಲ. ಇನ್ನು ಹಿಂದೀ ಸಿನೆಮಾ ಮಾಡುವುದಿಲ್ಲ ಎಂದು ಗಟ್ಟಿಯಾಗಿ ಹೇಳಿ ಮತ್ತೆ ದಕ್ಷಿಣಕ್ಕೆ ಹಿಂದೆ ಬಂದರು.

ಏಕ್ ದೂಜೇ ಕೇಲೀಯೇ ಮತ್ತು ಎಸ್ ಪಿ ಬಾಲು.
1981ರಲ್ಲಿ ತನ್ನ ಹಿಟ್ ಸಿನೆಮಾ ಮರೋ ಚರಿತ್ರಮನ್ನು ಹಿಂದಿಯಲ್ಲಿ ಏಕ್ ದೂಜೇ ಕೆಲಿಯೇ ಎಂದು ಬಾಲಚಂದರ್ ನಿರ್ದೇಶನ ಮಾಡಲು ಹೊರಟರು. ಆ ಹೊತ್ತಿಗೆ ಆ ಸಿನೆಮಾದ ನಿರ್ಮಾಪಕರಾದ ಎಲ್. ವಿ. ಪ್ರಸಾದ್ ಅವರು ಬಾಲಚಂದರ್ ಅವರನ್ನು ಮುಂದೆ ಕೂರಿಸಿ ಕಮಲಹಾಸನ್ ಬದಲು ರಾಜೇಶ್ ಖನ್ನಾ ಅವರನ್ನು ಹಾಕೋಣ ಅಂದರು. ಸಂಗೀತ ನಿರ್ದೇಶಕ ಜೋಡಿ ಲಕ್ಷ್ಮೀಕಾಂತ್ ಪ್ಯಾರೆಲಾಲ್ ಅವರು ಹಾಡುಗಳನ್ನು ಎಸ್. ಪಿ ಬಾಲಸುಬ್ರಹ್ಮಣ್ಯಂ ಅವರ ಬದಲಾಗಿ ಹಿಂದೀ ಗಾಯಕರಿಂದ ಹಾಡಿಸೋಣ ಅಂದರು. ಬಾಲಚಂದರ್ ಅವರಿಗೆ ಸಿಟ್ಟು ನೆತ್ತಿಗೆರೀತು. ನಾನು ಆ ಸಿನೆಮಾ ಮಾಡುವುದಿಲ್ಲ ಎಂದು ಎದ್ದರು!

ಕೊನೆಗೆ ಅವರ ಹಠವೇ ಗೆದ್ದಿತು. ಸಿನೆಮಾ ಸೂಪರ್ ಹಿಟ್ ಆಯ್ತು. ಕಮಲಹಾಸನ್ ಅವರಿಗೆ ಅತ್ಯುತ್ತಮ ನಟ ಫಿಲ್ಮ್ ಫೇರ್ ಪ್ರಶಸ್ತಿ ದೊರೆಯಿತು. ಬಾಲಸುಬ್ರಹ್ಮಣ್ಯಮ್ ಅವರು ‘ತೇರೆ ಮೇರೆ ಬೀಚ್ ಮೇ’ ಹಾಡಿಗಾಗಿ ಅತ್ಯುತ್ತಮ ಗಾಯಕ ರಾಷ್ಟ್ರಪ್ರಶಸ್ತಿಯನ್ನು ಪಡೆದರು!

ಕೆ. ಬಾಲಚಂದರ್ ಅವರು ತಮ್ಮ ಹಠವನ್ನು ಮತ್ತು ತಮ್ಮ ನಂಬಿಕೆಯ ಕಲಾವಿದರನ್ನು ಬಿಟ್ಟುಕೊಟ್ಟ ಒಂದು ಪ್ರಸಂಗವೂ ದೊರೆಯುವುದಿಲ್ಲ. ತನ್ನ ಕಲಾವಿದರಿಂದ ಅಭಿನಯ ತೆಗೆಯುವುದು ಹೇಗೆ ಎಂದು ಅವರಿಗೆ ಚೆನ್ನಾಗಿ ಗೊತ್ತಿತ್ತು.

ನೂರಾರು ಹೊಸ ಮುಖಗಳ ಪರಿಚಯ. ಮುಂದೆ ಅವರೆಲ್ಲರೂ ಸ್ಟಾರ್ ಆದರು!
ಹೊಸ ಮುಖಗಳನ್ನು ಪರಿಚಯ ಮಾಡುವುದರಲ್ಲಿ ಕೆ. ಬಾಲಚಂದರ್ ಅವರಿಗೆ ಅವರೇ ಉಪಮೆ ಎಂದು ಹೇಳಬಹುದು. ರಜನೀಕಾಂತ್ ಮತ್ತು ಕಮಲಹಾಸನ್ ಅವರನ್ನು ಅಪೂರ್ವ ರಾಗಂಗಲ್ ಎಂಬ ಸಿನೆಮಾದ ಮೂಲಕ ಮಹಾನ್ ಸ್ಟಾರ್ ಆಗಿ ಪರಿಚಯ ಮಾಡಿದ್ದು ಇದೇ ಬಾಲಚಂದರ್. ಮುಂದೆ ಕಮಲಹಾಸನ್ ಅವರ 37 ಸಿನೆಮಾಗಳನ್ನು ಅವರು ನಿರ್ದೇಶನ ಮಾಡಿದರು.

ಬಾಲನಟಿಯಾಗಿ ಮಿಂಚಿದ್ದ ಶ್ರೀದೇವಿಯನ್ನು ಮೂನ್ರು ಮುಡಿಚ್ಚು ಸಿನೆಮಾದ ಮೂಲಕ ಸ್ಟಾರ್ ಮಾಡಿದ್ದು ಅವರೇ. ಅದೇ ರೀತಿ ಜಯಪ್ರದಾ, ಜಯಸುಧಾ, ಚಿರಂಜೀವಿ, ಸರಿತಾ, ರೇಣುಕಾ, ನಾಸೇರ್, ಪ್ರಕಾಶ್ ರಾಜ್ ( ರೈ), ರಮೇಶ್ ಅರವಿಂದ್, ವಿವೇಕ್, ಸುಜಾತ ಮೊದಲಾದ ಶ್ರೇಷ್ಟ ಕಲಾವಿದರನ್ನು ತೆರೆಗೆ ಮೊದಲು ಪರಿಚಯ ಮಾಡಿ ಮುಂದೆ ಸ್ಟಾರ್ ಪಟ್ಟಕ್ಕೆ ಏರಿದಿದ್ದು ಇದೇ ಮಹಾಗುರು! ಅದರಲ್ಲಿಯೂ ಕಮಲ್ ಮತ್ತು ಸರಿತಾ ಅವರ ಕವಿತಾಲಯ ಸಂಸ್ಥೆಯ ಆಸ್ಥಾನ ಕಲಾವಿದರೇ ಆಗಿಹೋದರು!

ಮುಂದೆ ಕೆ. ಬಾಲಚಂದರ್ ಅವರ ಎಂಬತ್ತನೇ ವರ್ಷದ ಸಂದರ್ಭದಲ್ಲಿ ಕಮಲ್ ಮತ್ತು ರಜನಿಕಾಂತ್ ಸೇರಿ ತಮ್ಮ ಮಹಾಗುರುವಿಗೆ ಸುವರ್ಣ ಅಭಿಷೇಕ ಮಾಡಿ ಸನ್ಮಾನ ಮಾಡಿದ್ದು ಇದೇ ಕಾರಣಕ್ಕೆ!

ಕನ್ನಡದಲ್ಲಿ ಕೆ ಬಾಲಚಂದರ್ ಅವರ ಸಿನೆಮಾಗಳು
ಅವರ ಹತ್ತಾರು ಕತೆಗಳು ಕನ್ನಡದಲ್ಲಿ ಸಿನೆಮಾ ಆಗಿವೆ. ಆದರೆ ಅವರು ನಿರ್ದೇಶನ ಮಾಡಿದ್ದು ಕನ್ನಡದಲ್ಲಿ ಐದು ಮುತ್ತಿನಂತಹ ಸಿನೆಮಾಗಳನ್ನು. ಸರಿತಾ ಮತ್ತು ರಜನೀಕಾಂತ್ ಅಭಿನಯ ಮಾಡಿದ ತಪ್ಪಿದ ತಾಳ, ಸುಹಾಸಿನಿ ಅವರಿಗೆ ಭಾರೀ ಕೀರ್ತಿ ತಂದು ಕೊಟ್ಟ ಬೆಂಕಿಯಲ್ಲಿ ಅರಳಿದ ಹೂವು, ಸರಿತಾ, ಗೀತಾ ಅವರ ಅಭಿನಯಕ್ಕೆ ಸಾಣೆ ಹಿಡಿದ ಎರಡು ರೇಖೆಗಳು, ರಮೇಶ್ ಅರವಿಂದ್ ಮತ್ತು ಕಮಲಹಾಸನ್ ಅಭಿನಯದ ಸುಂದರ ಸ್ವಪ್ನಗಳು ಇವುಗಳು ಭಾರೀ ಜನಪ್ರಿಯತೆ ಗಳಿಸಿದ ಕನ್ನಡ ಸಿನೆಮಾಗಳು. ಮುಗಿಲ ಮಲ್ಲಿಗೆ ಅವರ ಐದನೇ ಕನ್ನಡ ಸಿನೆಮಾ.

ಸಾಲು ಸಾಲು ಪ್ರಶಸ್ತಿಗಳು ಮಹಾ ಗುರುವಿಗೆ
ಅವರ ಒಟ್ಟು ನೂರು ಸಿನೆಮಾಗಳಲ್ಲಿ ಕೆ. ಬಾಲಚಂದರ್ ನಿರ್ದೇಶನ ಮಾಡಿದ್ದು ಎಂಬತ್ತು ಸಿನೆಮಾಗಳನ್ನು. ಅದರಲ್ಲಿ 9 ರಾಷ್ಟ್ರ ಪ್ರಶಸ್ತಿ, 13 ಫಿಲ್ಮ್ ಫೇರ್ ಪ್ರಶಸ್ತಿಗಳನ್ನು ಅವರು ಪಡೆದಿದ್ದಾರೆ! ಇಷ್ಟೊಂದು ಪ್ರಶಸ್ತಿಗಳನ್ನು ಪಡೆದ ಇನ್ನೊಬ್ಬ ನಿರ್ದೇಶಕ ನಮಗೆ ಭಾರತದಲ್ಲಿಯೇ ಸಿಗುವುದಿಲ್ಲ! ಅವರ ಸಿನಿಮಾಗಳ ಸಕ್ಸಸ್ ರೇಟ್ ಕೂಡ 90% ಇದೆ ಅನ್ನುವುದು ಮಹಾಗುರುವಿನ ಹೆಗ್ಗಳಿಕೆ!

ಅವರಿಗೆ ಸಿನೆಮಾರಂಗದ ಮಹಾ ಪ್ರಶಸ್ತಿ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ, 1987ರ ಪದ್ಮಶ್ರೀ ಪ್ರಶಸ್ತಿ ಇವುಗಳೆಲ್ಲವೂ ದೊರೆತಿವೆ.
2014ರ ಡಿಸೆಂಬರ್ 23ರಂದು ಅವರು ನಮ್ಮನ್ನು ಆಗಲಿದರೂ ತಮ್ಮ ನೂರಾರು ಅತ್ಯುತ್ತಮ ಸಿನೆಮಾಗಳ ಮೂಲಕ ಮಹಾಗುರು ಕೆ. ಬಾಲಚಂದರ್ ನಮ್ಮೊಳಗೆ ಜೀವಂತ ಆಗಿದ್ದಾರೆ.









































































































error: Content is protected !!
Scroll to Top