ಇಂದು ಗುರು ಪೂರ್ಣಿಮಾ, ಮಹರ್ಷಿ ವೇದವ್ಯಾಸರ ಜನ್ಮದಿನ

ಇಂದು ಗುರುಪೂರ್ಣಿಮೆ. ಇದು ಹಿಂದೂಗಳಿಗೆ ನಿಜವಾದ ಶಿಕ್ಷಕರ ದಿನ. ಆಷಾಢ ಮಾಸದ ಹುಣ್ಣಿಮೆ ಎಂದರೆ ಅದು ವೇದವ್ಯಾಸರು ಹುಟ್ಟಿದ ದಿನ. ಭಾರತವು ಇಡೀ ಜಗತ್ತಿಗೆ ಜ್ಞಾನದ ಬೆಳಕನ್ನು ಕೊಟ್ಟಿತು ಎಂದು ನಾವು ನಂಬುವುದಾದರೆ ಅದು ವೇದವ್ಯಾಸರ ಕೊಡುಗೆ ಎನ್ನುವುದರಲ್ಲಿ ಎರಡನೇ ಮಾತಿಲ್ಲ.

ವ್ಯಾಸೋಚ್ಚಿಸ್ಟಮ್ ಜಗತ್ ಸರ್ವಂ..
ಇಡೀ ಜಗತ್ತು ವೇದವ್ಯಾಸರು ಬಿಟ್ಟುಹೋದ ಜ್ಞಾನವನ್ನು ಬಳಸಿಕೊಳ್ಳುತ್ತಿದೆ ಎನ್ನುವುದು ಅದರ ಅರ್ಥ. ಇಂದು ನಾವು ಭಾರತೀಯರು ಆರಾಧಿಸುತ್ತಿರುವ ನಾಲ್ಕು ವೇದಗಳು, ಮಹಾಭಾರತ, ಮದ್ಭಾಗವತ ಮೊದಲಾದ 18 ಮಹಾಪುರಾಣಗಳನ್ನು ರಚನೆ ಮಾಡಿದವರು ವೇದವ್ಯಾಸರು. ಅದರಲ್ಲಿಯೂ ಭಾರತದ ಜ್ಞಾನ ಪರಂಪರೆಯ ಆಧಾರಸ್ತಂಭಗಳು ಎಂದೇ ಕರೆಯಲ್ಪಡುವ ವೇದಗಳನ್ನು ರಚನೆ ಮಾಡಿದ್ದು ವ್ಯಾಸರು ಎಂಬಲ್ಲಿಗೆ ಭಾರತವು ಅವರಿಗೆ ಎಷ್ಟು ಋಣಿಯಾಗಿರಬೇಕು ಹೇಳಿ! ಜಗತ್ತಿನ ಅತೀ ದೊಡ್ಡ ಮಹಾಕಾವ್ಯವಾದ ಮಹಾಭಾರತ, ಅದರಲ್ಲಿ ಒಂದು ಲಕ್ಷಕ್ಕೂ ಅಧಿಕ ಶ್ಲೋಕಗಳಿವೆ, ಅದು ವೇದವ್ಯಾಸರ ಅತೀ ದೊಡ್ಡ ಕೊಡುಗೆ. ಅದು ಮೂರು ತಲೆಮಾರುಗಳ ಕಥೆ. ಅವರೇ ಬರೆದ ಮಹಾಭಾರತದಲ್ಲಿ ಒಂದು ಪಾತ್ರವಾಗಿ ಬರುವ ವೇದವ್ಯಾಸರು ಪಾಂಡವ ಮತ್ತು ಕೌರವರ ವಂಶವಲ್ಲರಿಯನ್ನು ವಿಸ್ತರಿಸುವ ಕೆಲಸವನ್ನೂ ಮಾಡುತ್ತಾರೆ. ಅದರ ಮುಂದಿನ ಭಾಗವಾಗಿ ಬರುವ ಮದ್ಭಾಗವತವನ್ನು ಒಂದು ಸುಂದರ ಮಹಾಕಾವ್ಯವಾಗಿ ರೂಪಿಸಿದ ರೀತಿ ತುಂಬಾ ಅದ್ಭುತವಾಗಿಯೇ ಇದೆ. ಆದ್ದರಿಂದ ಜಗತ್ತಿನ ಸಂಪೂರ್ಣ ಜ್ಞಾನವನ್ನು ವೇದವ್ಯಾಸರು ರೂಪಿಸಿದರು ಅಂದರೆ ಅದು ಉತ್ಪ್ರೇಕ್ಷೆಯ ಮಾತಲ್ಲ.

ಭಾರತವು ಸಾಕ್ಷಾತ್ ಗುರುಪರಂಪರೆಯ ರಾಷ್ಟ್ರ
ಭಾರತವು ಬೆಳಗಿದ್ದೇ ಗುರು ಪರಂಪರೆಯಿಂದ. ಅತೀ ಅದ್ಭುತ ಶಿಕ್ಷಣ ಪದ್ಧತಿಯಾದ ಗುರುಕುಲ ಪರಂಪರೆಯನ್ನು ಸಾವಿರಾರು ವರ್ಷಗಳ ಕಾಲ ಪೋಷಣೆ ಮಾಡಿಕೊಂಡು ಬಂದ ರಾಷ್ಟ್ರವೇ ಭಾರತ. ಆ ಶಿಕ್ಷಣ ಪದ್ಧತಿಯು ಅತ್ಯಂತ ಮನೋವೈಜ್ಞಾನಿಕವೆ ಆಗಿತ್ತು ಎಂದು ವಿದೇಶದ ವಿದ್ವಾಂಸರು ಹಾಡಿ ಹೊಗಳಿದ್ದಾರೆ. ಜಗತ್ತಿನ ಮೊಟ್ಟಮೊದಲ ವಿವಿಗಳಾದ ತಕ್ಷಶಿಲಾ, ನಳಂದಾ ಮೊದಲಾದವು ಅರಳಿ ಬೆಳಗಿದ್ದು ಭಾರತದಲ್ಲಿ. ಭಾರತದಲ್ಲಿ ಜ್ಞಾನ ಹುಟ್ಟಿದ್ದು, ಬೆಳಗಿದ್ದು ಮತ್ತು ಹರಡಿದ್ದು ಆ ವಿವಿಗಳಲ್ಲಿ. ಅದರಲ್ಲಿಯೂ ಹೆಚ್ಚಿನ ಜ್ಞಾನವು ಮೌಖಿಕವಾಗಿಯೇ ಪ್ರಸಾರ ಆಗಿತ್ತು. ವೇದಗಳು ಶ್ರವಣ ಮಾಧ್ಯಮದ (Listening) ಮೂಲಕ ಪೀಳಿಗೆಯಿಂದ ಪೀಳಿಗೆಗೆ ಹರಡಿದ ಕಾರಣ ಅವುಗಳನ್ನು ಸ್ಮೃತಿಗಳು ಎಂದೇ ನಮ್ಮ ಹಿರಿಯರು ಕರೆದರು. ಆ ಕಾಲಕ್ಕೆ ಭಾರತೀಯರ ಮೆಮೊರಿ ಪವರ್ ಜಗತ್ತಿನ ಗಮನವನ್ನು ಸೆಳೆದಿತ್ತು. ಅದಕ್ಕೆಲ್ಲ ಕಾರಣವೇನೆಂದರೆ ಗುರುವಿನ ಸ್ಪರ್ಷ. ಆದ್ದರಿಂದ ಇಂದಿನ ಗುರುಪೂರ್ಣಿಮೆ ಅತ್ಯಂತ ಮಹತ್ವಪೂರ್ಣವಾಗಿದೆ.

ಪ್ರಜಾಲಿತೋ ಜ್ಞಾನಮಯ ಪ್ರದೀಪಃ
ನಮ್ಮ ಪುರಾಣದ ಕಾಲದಲ್ಲಿ ಯಾವುದೇ ವ್ಯಕ್ತಿಯು ತನ್ನ ಪರಿಚಯವನ್ನು ಹೇಳುವಾಗ ತಾನು ಇಂತಹ ಗುರುವಿನ ಶಿಷ್ಯ ಎಂದು ಅಭಿಮಾನದಲ್ಲಿ ಮತ್ತು ಗೌರವದಲ್ಲಿ ಹೇಳಿಕೊಳ್ಳುತ್ತಿದ್ದರು. ಉದಾಹರಣೆಗೆ ಶ್ರೀರಾಮನು ತನ್ನನ್ನು ಪರಿಚಯಿಸುವಾಗ ‘ನಾನು ವಿಶ್ವಾಮಿತ್ರನ ಶಿಷ್ಯ’ ಎಂದೇ ಹೇಳುತ್ತಿದ್ದನು. ಶ್ರೀಕೃಷ್ಣನು ‘ನಾನು ಸಾಂದೀಪನಿಯ ಶಿಷ್ಯ ‘ ಎಂದು ಹೇಳದೇ ಪರಿಚಯವು ಪೂರ್ಣವಾಗುತ್ತಲೇ ಇರಲಿಲ್ಲ. ಶ್ರೀರಾಮ, ಶ್ರೀಕೃಷ್ಣ ಮೊದಲಾದ ದೇವರೂ ಗುರುಕುಲಕ್ಕೆ ಹೋಗಿಯೇ ಗುರುಮುಖೇನ ಕಲಿತವರು!

ಈಗಲೂ ಭರತನಾಟ್ಯ, ಶಾಸ್ತ್ರೀಯ ಸಂಗೀತ ಮೊದಲಾದ ವಿಭಾಗಗಳಲ್ಲಿ ಕಲಾವಿದರನ್ನು ಪರಿಚಯ ಮಾಡುವಾಗ ಅವರು ಇಂತವರ ಶಿಷ್ಯ/ ಶಿಷ್ಯೆ ಎಂದೇ ಹೇಳುತ್ತಾರೆ. ಅಲ್ಲಿ ಇಂದಿಗೂ ಗುರು ಶಿಷ್ಯರ ಸಂಬಂಧವು ಭಾವಪೂರ್ಣ ಮತ್ತು ಗೌರವಪೂರ್ಣ ಆಗಿವೆ. ಅಲ್ಲಿ ಗುರುವು ಯಾವುದೇ ಇಗೋ ಕೂಡ ಇಟ್ಟುಕೊಳ್ಳದೆ ಶಿಷ್ಯಾತ್ ಇಚ್ಛೇತ್ ಪರಾಜಯಂ ( ಅರ್ಹ ಶಿಷ್ಯನಿಂದ ನನಗೆ ಪರಾಜಯ ಉಂಟಾಗಲಿ)ಅನ್ನುತ್ತಿದ್ದರು.

ಗುರು ಅಂದರೆ ಎಲ್ಲವೂ..!
ಗುರು ಅಂದರೆ ಭಾರ ಎಂದರ್ಥ. ಗುರು ಅಂದರೆ ಜ್ಞಾನಸ್ವರೂಪಿ ಎಂದರ್ಥ. ಗುರು ಎಂದರೆ ವಾತ್ಸಲ್ಯದ ಪ್ರತಿರೂಪ ಎಂದರ್ಥ. ಗುರು ಅಂದರೆ ಜ್ಞಾನಚಕ್ಷುವನ್ನು ತೆರೆಯುವವನು ಎಂದರ್ಥ. ಗುರು ಅಂದರೆ ಎಲ್ಲವೂ ಹೌದು. ಅಂತಹ ಗುರುವಿನ ಕೃಪೆ ಮತ್ತು ಆಶೀರ್ವಾದ ಎಲ್ಲರಿಗೂ ದೊರೆಯಲಿ ಅನ್ನುವುದು ಇಂದಿನ ಹಾರೈಕೆ. ಎಲ್ಲರಿಗೂ ಗುರು ಪೂರ್ಣಿಮೆಯ ಶುಭಾಶಯಗಳು.









































































































error: Content is protected !!
Scroll to Top