ಉಗ್ರ ಸಂಚು – ಬಂಧಿತ ಮೂವರು ಆರೋಪಿಗಳು 6 ದಿನ ಕಸ್ಟಡಿಗೆ

ಬೆಂಗಳೂರು : ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಸರಣಿ ಬಾಂಬ್​ ಸ್ಫೋಟ ಪ್ರಕರಣ ಪ್ರಮುಖ ಆರೋಪಿ, ಲಷ್ಕರೆ ತೊಯ್ಬಾ (ಎಲ್‌ಇಟಿ) ಉಗ್ರ ಟಿ. ನಾಸೀರ್‌ನೊಂದಿಗೆ ನಂಟು ಹೊಂದಿದ್ದ ಆರೋಪ ಸಂಬಂಧ ಬಂಧಿಸಲಾಗಿರುವ ಪಿಎಸ್‌ಐ ಸೇರಿ ಮೂವರು ಶಂಕಿತ ಉಗ್ರರನ್ನು ಹೆಚ್ಚಿನ ವಿಚಾರಣೆಗೆ ಎನ್‌ಐಎ ಅಧಿಕಾರಿಗಳು ಆರು ದಿನ ಕಸ್ಟಡಿಗೆ ಪಡೆದುಕೊಂಡಿದ್ದಾರೆ.

ಆರೋಪಿಗಳಾದ ಪರಪ್ಪನ ಅಗ್ರಹಾರ ಜೈಲಿನ ಮನೋವೈದ್ಯ ಡಾ. ನಾಗರಾಜ್‌, ಸಶಸ್ತ್ರ ಮೀಸಲು ಪಡೆ ಪಿಎಸ್‌ಐ ಚಾನ್‌ಪಾಷಾ, ಕೋಲಾರದ ಅನೀಸಾ ಫಾತೀಮಾಳನ್ನು ಬುಧವಾರ ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಮೂವರು ಆರೋಪಿಗಳು ಎಲ್‌ಇಟಿ ಚಟುವಟಿಕೆಗಳಿಗೆ ಸಹಕಾರ ನೀಡಿದ್ದ ಸಂಬಂಧ ಸಾಕ್ಷ್ಯಾಧಾರಗಳ ಸಮೇತ ರಿಮ್ಯಾಂಡ್‌ ಅರ್ಜಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ ಎನ್‌ಐಎ ಅಧಿಕಾರಿಗಳು, ಹೆಚ್ಚಿನ ವಿಚಾರಣೆ ನಡೆಸಲು ಆರೋಪಿಗಳನ್ನು ಕಸ್ಟಡಿಗೆ ನೀಡುವಂತೆ ಮನವಿ ಮಾಡಿದರು. ನ್ಯಾಯಾಲಯ ಮೂವರು ಆರೋಪಿಗಳನ್ನು ಆರು ದಿನ ಕಸ್ಟಡಿಗೆ ನೀಡಿತು. ಎನ್‌ಐಎ ಪರ ವಿಶೇಷ ಸರಕಾರಿ ಅಭಿಯೋಜಕ ಪಿ. ಪ್ರಸನ್ನಕುಮಾರ್‌ ವಾದ ಮಂಡಿಸಿದ್ದರು.

ಪರಾರಿಗೆ ಸಿನಿಮೀಯ ರೀತಿ ಸಂಚು
ಸಿನಿಮೀಯ ರೀತಿಯಲ್ಲಿ ನಾಸೀರ್ ತಪ್ಪಿಸಿಕೊಳ್ಳಲು ಸಂಚು ಸಿದ್ಧವಾಗಿತ್ತು. ಅದಕ್ಕೆ ಎಎಸ್​ಐ ಚಾಂದ್ ಪಾಷಾ ಪ್ರಮುಖ ಸೂತ್ರಧಾರರಾಗಿದ್ದರು. ಚಾಂದ್ ಪಾಷಾಗೆ ನಾಸೀರ್‌ನನ್ನು ಕೋರ್ಟ್‌ಗೆ ಕರೆದೊಯ್ಯುವ ಜವಾಬ್ದಾರಿ ಇತ್ತು. ನಾಸೀರ್​​​ನನ್ನು ಕೋರ್ಟ್​​ಗೆ ಕರೆದೊಯ್ಯಲು ಒಂದು ಜೀಪ್, ಒಬ್ಬ ಇನ್ಸ್​​ಪೆಕ್ಟರ್ ಅಥವಾ ಪಿಎಸ್​ಐ ನಿಯೋಜನೆ ಮಾಡಲಾಗುತ್ತಿತ್ತು. ಆ ಸಂದರ್ಭದಲ್ಲಿ ಮಾರ್ಗ ಮಧ್ಯೆ ಗ್ರೆನೇಡ್ ಸ್ಫೋಟಿಸಿ ಪೊಲೀಸರ ಗಮನ ಬೇರೆಡೆ ಸೆಳೆಯುವಂತೆ ಮಾಡಿ ನಾಸೀರ್ ಪರಾರಿಯಾಗುವಂತೆ ಮಾಡುವುದು ಸಂಚಿನ ಭಾಗವಾಗಿತ್ತು.

ಪುತ್ರನ ಪರ ತಾಯಿ ಕೆಲಸ
ರಾಜ್ಯದಲ್ಲಿ ಎಲ್‌ಇಟಿ ಚಟುವಟಿಕೆ ನಡೆಸಲು ಶಸ್ತ್ರಾಸ್ತ್ರ ಸಂಗ್ರಹ, ದೇಣಿಗೆ ಸಂಗ್ರಹಿಸುತ್ತಿದ್ದ ತಲೆಮರೆಸಿಕೊಂಡಿದ್ದ ಶಂಕಿತ ಉಗ್ರ ಜುನೈದ್‌ ಅಹ್ಮದ್‌ನ ತಾಯಿ ಅನೀಸಾ ಫಾತೀಮಾ, ಆರ್‌.ಟಿ. ನಗರದ ಸಮೀಪದ ಭುವನೇಶ್ವರಿ ನಗರದಲ್ಲಿ ನೆಲೆಸಿದ್ದರು. ಪುತ್ರ ಜುನೈದ್‌ ಹಾಗೂ ಉಗ್ರ ನಜೀರ್‌ನ ಸಂಪರ್ಕ ಕೊಂಡಿಯಾಗಿ ಫಾತೀಮಾ ಕಾರ್ಯನಿರ್ವಹಿಸುತ್ತಿದ್ದರು ಮತ್ತು ಎಲ್‌ಇಟಿ ಸಂಘಟನೆಯಲ್ಲಿ ಭಾಗಿಯಾಗಿದ್ದ ಆರೋಪಿಗಳಿಗೆ ಹಣಕಾಸು ವಹಿವಾಟಿಗೆ ಸಹಕಾರ ನೀಡುತ್ತಿದ್ದರು ಎಂಬುದನ್ನು ಎನ್​ಐಎ ಪತ್ತೆ ಮಾಡಿದೆ.
ಉಗ್ರ ಜುನೈದ್‌ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಅನುಮಾನವಿದ್ದು, ಪುತ್ರನ ಜತೆಗೂ ನಿರಂತರ ಸಂಪರ್ಕ ಹೊಂದಿದ್ದ ಶಂಕೆಯಿದೆ. ಆರೋಪಿ ಫಾತೀಮಾ ಎಷ್ಟು ವರ್ಷಗಳಿಂದ ಎಲ್‌ಇಟಿ ಸಂಘಟನೆಗೆ ಹಣಕಾಸು ವಹಿವಾಟಿನ ವ್ಯವಹಾರ ನಡೆಸುತ್ತಿದ್ದರು ಎಂಬುದರ ಬಗ್ಗೆ ವಿಸ್ತೃತ ತನಿಖೆ ನಡೆಯುತ್ತಿದೆ. ಬ್ಯಾಂಕ್‌ ಖಾತೆಗಳ ಪರಿಶೀಲನೆ ಮುಂದುವರಿದಿದೆ ಎಂದು ಎನ್‌ಐಎ ಮೂಲಗಳು ಹೇಳಿವೆ.

ಉಗ್ರನ ಹಣಕ್ಕೆ ಮನಸೋತನ ಮನೋವೈದ್ಯ
ಪರಪ್ಪನ ಅಗ್ರಹಾರ ಜೈಲಿನಲ್ಲಿ ಮನೋವೈದ್ಯರಾಗಿದ್ದ ಡಾ.ನಾಗರಾಜ್‌ ಅನೇಕ ವರ್ಷಗಳಿಂದ ಅಲ್ಲಿಯೇ ಕೆಲಸ ಮಾಡುತ್ತಿದ್ದಾರೆ. ಜೈಲಿನೊಳಗಡೆ ಕ್ಲಾಸ್‌ -1 ಸಮಾನಾಂತರದ ಹುದ್ದೆಯನ್ನಾಗಿ ವೈದ್ಯರನ್ನು ಪರಿಗಣಿಸಲಾಗಿದೆ. ಇವರಿಗೆ ಜೈಲಿನ ಒಳಗಡೆ ಮೊಬೈಲ್‌ ತೆಗೆದುಕೊಂಡು ಹೋಗಲು ವಿನಾಯಿತಿ ಇತ್ತು. ಹೀಗಾಗಿ ವೈದ್ಯ ನಾಗರಾಜ್‌, ಉಗ್ರ ನಜೀರ್‌ನ ಪ್ರಭಾವ ಹಾಗೂ ಅಕ್ರಮ ಲಾಭದ ಆಸೆಗೆ ಬಿದ್ದು ಕಳ್ಳಮಾರ್ಗದ ಮೂಲಕ ಮೊಬೈಲ್‌ ತೆಗೆದುಕೊಂಡು ಹೋಗಿ ನಾಸೀರ್‌ಗೆ ನೀಡುತ್ತಿದ್ದರು. ಇದಕ್ಕೆ ನಾಗರಾಜ್‌ ಸಹಾಯಕಿ ಪವಿತ್ರಾ ಸಹಕಾರ ನೀಡುತ್ತಿದ್ದರು.

ಸಿಮ್​ ಕಾರ್ಡ್ ನೀಡಿದ್ದ ಸತೀಶ್ ಗೌಡ
ಇನ್ನು ಉಗ್ರ ನಾಸೀರ್​ ಬಳಸುತ್ತಿದ್ದ ಮೊಬೈಲ್​ ಸಿಮ್​ ಕಾರ್ಡ್‌ನ್ನು ಕೋಲಾರ ತಾಲೂಕು ಭಟ್ರಹಳ್ಳಿಯ ಸತೀಶ್​ ಗೌಡ ನೀಡಿದ್ದಾನೆ ಎಂದು ತಿಳಿದುಬಂದಿದೆ. ಕಳೆದ ಮೂರು ವರ್ಷಗಳ ಹಿಂದೆ ಬೆಂಗಳೂರಿನ ಹೊಸೂರು ರಸ್ತೆಯ ಏರ್​ ಟೆಲ್​ ಕಂಪನಿಯಲ್ಲಿ ಕೆಲಸ ಮಾಡುವ ವೇಳೆ ಸಿಮ್​ ಕಾರ್ಡ್ ನೀಡಿರುವ ಆರೋಪದ ಹಿನ್ನೆಲೆಯಲ್ಲಿ ಎನ್‌ಐಎ ಅಧಿಕಾರಿಗಳು ಸತೀಶ್​ ಗೌಡ ಮನೆಗೆ ಭೇಟಿ ನೀಡಿದ್ದರು. ಆದರೆ ಸತೀಶ್ ಗೌಡ ನಾಪತ್ತೆಯಾಗಿದ್ದ ಹಿನ್ನೆಲೆ ನೋಟೀಸ್ ಜಾರಿ ಮಾಡಿ ವಿಚಾರಣೆಗೆ ಬರುವಂತೆ ನೋಟೀಸ್ ನೀಡಿದ್ದಾರೆ.









































































































error: Content is protected !!
Scroll to Top