ಮಂಗಳೂರಿನಲ್ಲಿ ಸ್ಥಾಪಿಸಿರುವ ಸ್ಪೆಷಲ್ ಆ್ಯಕ್ಷನ್ ಫೋರ್ಸ್ ಶಾಶ್ವತವಲ್ಲ – ಜಿ. ಪರಮೇಶ್ವರ್‌

ಉಡುಪಿ : ಮಂಗಳೂರಿನಲ್ಲಿ ಕೋಮು ಸಂಘರ್ಷವನ್ನು ತಡೆಗಟ್ಟುವ ಸಲುವಾಗಿ ರಾಜ್ಯ ಸರಕಾರದಿಂದ ಸ್ಥಾಪಿಸಿರುವ ‘ಸ್ಪೆಷಲ್ ಆ್ಯಕ್ಷನ್ ಫೋರ್ಸ್​​’ ವಿಶೇಷ ತಂಡ ಶಾಶ್ವತವಾಗಿರುವುದಿಲ್ಲ ಎಂದು ಗೃಹ ಸಚಿವ ಜಿ. ಪರಮೇಶ್ವರ್‌ ತಿಳಿಸಿದ್ದಾರೆ.
ಮಂಗಳವಾರ ಕಾರ್ಕಳ ತಾಲೂಕಿನ ಬೆಳ್ಮಣ್‌ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದ್ದ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇತ್ತೀಚೆಗೆ ಕೊಲೆಗಳು ನಡೆದಿದೆ. ಇದನ್ನು ತಡೆಗಟ್ಟಲು ಸ್ಪೆಷಲ್ ಆ್ಯಕ್ಷನ್ ಫೋರ್ಸ್​​ ಪ್ರಾರಂಭಿಸಿದ್ದೇವೆ. ಅಲ್ಲದೆ ಕೆಲ ಅಧಿಕಾರಿಗಳನ್ನು ಬದಲಾಯಿಸಿದ್ದೇವೆ. ಕರಾವಳಿಯಲ್ಲಿ ಶಾಂತಿ ನೆಲೆಸಿದರೆ ಆ ವಿಭಾಗ ಮತ್ತೆ ಯಾಕೆ ಬೇಕು. ನಂತರ ಅವರಿಗೆ ಕೆಲಸನೇ ಇರಲ್ಲ ಎಂದ ಗೃಹ ಸಚಿವರು ಈ ವಿಭಾಗ ಶಾಶ್ವತವಾಗಿ ಉಳಿಯಬಾರದು, ಇಲ್ಲಿ ಶಾಂತಿ ನೆಲೆಯಾಗಬೇಕು ಎಂಬುದು ನಮ್ಮ ಆಶಯವೆಂದರು.

ಶಾಂತಿ ಸಭೆ
ಸಮಾಜಕ್ಕೆ ಶಾಂತಿಯ ಸಂದೇಶ ನೀಡಲು ಮಂಗಳೂರಿನಲ್ಲಿ ಶಾಂತಿ ಸಭೆ ನಡೆಸಲು ಉದ್ದೇಶಿಸಲಾಗಿತ್ತು. ಜು. 9ರಂದು ಮಂಗಳೂರಿನಲ್ಲಿ ಶಾಂತಿ ಸಭೆ ನಡೆಯಲಿದೆ. ಪಕ್ಷಾತೀತವಾಗಿ, ಜಾತ್ಯಾತೀತವಾಗಿ, ಧರ್ಮಾತೀತವಾಗಿ ಸಭೆ ನಡೆಯಲಿದ್ದು, ಧಾರ್ಮಿಕ ಮುಖಂಡರು, ಜನಪ್ರತಿನಿಧಿಗಳು, ಸಾರ್ವಜನಿಕರು ಈ ಸಭೆಯಲ್ಲಿ ಭಾಗವಹಿಸುತ್ತಾರೆ ಎಂದು ಹೇಳಿದರು.

2012-13ರಲ್ಲಿ ಬೆಳ್ಮಣ್‌ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದಿದ್ದೆ. ನಮ್ಮ ಸರಕಾರ ಅಧಿಕಾರಕ್ಕೆ ಬರಬೇಕೆಂದು ಪ್ರಾರ್ಥನೆ ಮಾಡಿದ್ದೆ. ಇದೀಗ ನಮ್ಮ ಸರಕಾರ ಅಧಿಕಾರಕ್ಕೆ ಬಂದಿದೆ. ಹಾಗಾಗಿ ತಾಯಿಯ ದರ್ಶನ ಮಾಡಿ ಜನಸಮುದಾಯದ ಶಾಂತಿ, ನೆಮ್ಮದಿಗಾಗಿ ಪ್ರಾರ್ಥನೆ ಸಲ್ಲಿಸಿದೆ ಎಂದರು.

ಇತ್ತೀಚಿನ ದಿನಗಳಲ್ಲಿ ನೀವು ಬೇಸರದಿಂದಿದ್ದೀರಿ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ನನಗೆ ಯಾವುದೇ ಬೇಸರವಿಲ್ಲ. ರಾಜ್ಯದ ಗೃಹ ಖಾತೆಯನ್ನು ನೀಡಿದ್ದಾರೆ. ಇದು ಮೂರನೇ ಬಾರಿಗೆ ಈ ಖಾತೆಯನ್ನು ನಿರ್ವಹಿಸುತ್ತಿದ್ದೇನೆ. ಜವಾಬ್ದಾರಿಯಿಂದ ಕೆಲಸ ಮಾಡುತ್ತಿದ್ದೇನೆ. ಇದರಲ್ಲಿ ಬೇಸರ ಆಗುವಂತಹ ಪ್ರಶ್ನೆ ಯಾವುದೂ ಇಲ್ಲ ಎಂದರು.

ಸಿಎಂ ಬದಲಾವಣೆ ಪ್ರಶ್ನೆಗೆ ಉತ್ತರಿಸಿ, ನಾನು ಧಾರ್ಮಿಕ ಕ್ಷೇತ್ರದಲ್ಲಿ ನಿಂತುಕೊಂಡು ಯಾವುದೇ ರಾಜಕೀಯ ಮಾತನಾಡಲು ಹೋಗುವುದಿಲ್ಲ. ಆದರೂ ನೀವು ಕೇಳಿದ ಪ್ರಶ್ನೆಗೆ ಉತ್ತರಿಸುತ್ತೇನೆ. ಇವತ್ತು‌ ನಾವು ಯಾವುದೇ ರೀತಿಯ ಬದಲಾವಣೆಗಳನ್ನು ಬಯಸುತ್ತಿಲ್ಲ. ಈಗಾಗಲೇ ನಂದಿಬೆಟ್ಟದಲ್ಲಿ ನಡೆದ ಸಂಪುಟ ಸಭೆಯಲ್ಮಿ ಮಾನ್ಯ ಮುಖ್ಯಮಂತ್ರಿಗಳು ಮಾತನಾಡುವಾಗ ಹೇಳಿದ್ದರು 5 ವರ್ಷ ನಾನೇ ಮುಖ್ಯಮಂತ್ರಿಯಾಗಿ ಇರುತ್ತೇನೆ ಎಂದು. ಹಾಗಾಗಿ ಪದೇ ಪದೆ ನಾವು ಅದರ ಬಗ್ಗೆ ಚರ್ಚೆ ಮಾಡುವುದು ಅನಗತ್ಯ ಎಂದರು.

ಗ್ಯಾರಂಟಿ ಯೋಜನೆ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು ಗ್ಯಾರಂಟಿಯಿಂದಾಗಿ ಯಾವುದೇ ತೊಂದರೆಯಾಗಿಲ್ಲ. ಮುಖ್ಯಮಂತ್ರಿಗಳು ಬಜೆಟ್‌ನಲ್ಲಿ 52,000 ಕೋಟಿ ರೂಪಾಯಿ ಪ್ರತ್ಯೇಕ ಹಣ ಇಟ್ಟಿದ್ದಾರೆ. ಕಳೆದ ಬಾರಿ 3.71 ಲಕ್ಷ ಕೋಟಿ ರೂ. ಇದ್ದ ಬಜೆಟ್ ಈ ಬಾರಿ 30 ಸಾವಿರ ಕೋಟಿ ರೂ. ಏರಿಕೆ ಕಂಡಿದೆ. ಕೇವಲ 16 ಸಾವಿರ ಕೋಟಿ ವ್ಯತ್ಯಾಸವಿದ್ದು, ಅದನ್ನು ನಿರ್ವಹಣೆ ಮಾಡುವ ಶಕ್ತಿ ನಮಗೆ ಇದೆ ಎಂದರು.









































































































error: Content is protected !!
Scroll to Top