ಅಕ್ಟೋಬರ್‌ ಗೆ ಪುರಸಭೆ ಆಡಳಿತ ಅವಧಿ ಪೂರ್ಣ

7 ವರ್ಷಗಳ ಅನಂತರ ನಡೆಯಲಿದೆ ಚುನಾವಣೆ

ಕಾರ್ಕಳ : ಪ್ರಸ್ತುತವಿರುವ ಪುರಸಭೆ ಆಡಳಿತ ಮಂಡಳಿ ಅವಧಿ ಅಕ್ಟೋಬರ್‌ಗೆ ಕೊನೆಯಾಗಲಿದೆ. ಹೀಗಾಗಿ 7 ವರ್ಷಗಳ ಅನಂತರ ಪುರಸಭೆಗೆ ಚುನಾವಣೆ ನಡೆಯಲಿದೆ. 2018ರಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆದು ಸರಕಾರ ಮೀಸಲಾತಿ ಪ್ರಕಟಿಸಿದ್ದಾಗ್ಯೂ ಈ ಪಟ್ಟಿಯನ್ನು ಪ್ರಶ್ನಿಸಿ ರಾಜ್ಯಾದ್ಯಂತ ಕೆಲ ಸ್ಥಳೀಯ ಸಂಸ್ಥೆಗಳ ಸದಸ್ಯರು ನ್ಯಾಯಾಲಯದ ಮೆಟ್ಟಿಲೇರಿದ್ದ ಪರಿಣಾಮ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ವಿಳಂಬವಾಯಿತು. ತದನಂತರ 2020ರ ಅಕ್ಟೋಬರ್‌ ತಿಂಗಳಲ್ಲಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ನಡೆಯಿತು. ಪುರಸಭೆ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಎ ಮಹಿಳೆಗೆ ಮೀಸಲಾಗಿದ್ದು, ಸುಮಾ ಕೇಶವ್‌ ಅಧ್ಯಕ್ಷರಾಗಿ, ಪಲ್ಲವಿ ಪ್ರವೀಣ್‌ ಉಪಾಧ್ಯಕ್ಷರಾಗಿ ಆಯ್ಕೆಯಾದರು. 2024 ಎ. 27ರಂದು ಅವರ ಅಧಿಕಾರವಧಿ ಕೊನೆಗೊಂಡಿದ್ದು, ಯೋಗೀಶ್‌ ದೇವಾಡಿಗ ಅಧ್ಯಕ್ಷರಾಗಿ, ಪ್ರಶಾಂತ್‌ ಕೋಟ್ಯಾನ್‌ ಉಪಾಧ್ಯಕ್ಷರಾಗಿ ಆಯ್ಕೆಯಾದರು.

23 ಸದಸ್ಯರು
ಕಾರ್ಕಳ ಪುರಸಭೆ 23 ಸದಸ್ಯರನ್ನುಹೊಂದಿದೆ. ಪ್ರಸ್ತುತ 11 ಮಂದಿ ಬಿಜೆಪಿ, 11 ಮಂದಿ ಕಾಂಗ್ರೆಸ್‌ ಹಾಗೂ ಒಬ್ಬರು ಪಕ್ಷೇತರ ಸದಸ್ಯರಿದ್ದಾರೆ. ಬಿಜೆಪಿ, ಕಾಂಗ್ರೆಸ್‌ ಸಮಬಲದ ಸ್ಥಾನ ಹೊಂದಿರುವ ಕಾರಣ ಪಕ್ಷೇತರ ಸದಸ್ಯ ಲಕ್ಷ್ಮೀನಾರಾಯಣ ಮಲ್ಯ ಕಿಂಗ್‌ ಮೇಕರ್‌ ಆಗಬೇಕಿತ್ತು. ಆದರೆ, ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಯಲ್ಲಿ ಶಾಸಕ, ಸಂಸದರ ಮತ ಗಣನೆಗೆ ಇರುವುದರಿಂದ ಅವರ ಮತವೇ ನಿರ್ಣಾಯಕವಾಯಿತು.

ಪ್ರಸ್ತುತ ಸದಸ್ಯರು
ಮೂರನೇ ಅವಧಿಗೆ ಪುರಸಭಾ ಸದಸ್ಯರಾಗಿರುವ ಶೋಭಾ ಆರ್. ದೇವಾಡಿಗ, ಎರಡನೇ ಅವಧಿಗೆ ಸದಸ್ಯರಾಗಿರುವ ಯೋಗೀಶ್‌ ದೇವಾಡಿಗ ಮೊದಲನೇ ಬಾರಿಗೆ ಸದಸ್ಯರಾಗಿರುವ ಪ್ರಶಾಂತ್‌ ಕೋಟ್ಯಾನ್‌, ಪ್ರದೀಪ್‌ ರಾಣೆ, ಮಮತಾ ಅಂಚನ್‌, ಸುಮಾ ಕೇಶವ್‌, ಶಶಿಕಲಾ ಶೆಟ್ಟಿ, ಪಲ್ಲವಿ ಪ್ರವೀಣ್‌, ನೀತಾ ಆಚಾರ್ಯ, ಮೀನಾಕ್ಷಿ ಗಂಗಾಧರ್‌, ಭಾರತೀ ಅಮೀನ್‌ ಬಿಜೆಪಿ ಸದಸ್ಯರು.

ನಾಲ್ಕನೇ ಅವಧಿಗೆ ಸದಸ್ಯರಾಗಿರುವ ಸೀತಾರಾಮ, ಅಸ್ಪಕ್‌ ಅಹಮ್ಮದ್‌, ರೆಹಮತ್‌ ಶೇಖ್‌, ಮೂರನೇ ಅವಧಿಗೆ ಸದಸ್ಯರಾಗಿರುವ ಶುಭದ ರಾವ್‌, ಪ್ರತೀಮಾ ರಾಣೆ, ನಳಿನಿ ಆಚಾರ್ಯ, ವಿನ್ನಿ ಬೋಲ್ಡ್‌, ಪ್ರಥಮ ಅವಧಿಗೆ ಸದಸ್ಯರಾಗಿರುವ ಪ್ರಭಾ ಕಿಶೋರ್‌, ಪ್ರವೀಣ್‌ ಶೆಟ್ಟಿ, ಸೋಮನಾಥ ನಾಯಕ್‌, ಹರೀಶ್‌ ದೇವಾಡಿಗ ಕಾಂಗ್ರೆಸ್‌ ಸದಸ್ಯರು. ಲಕ್ಷ್ಮೀನಾರಾಯಣ ಮಲ್ಯ ಅವರು ಪಕ್ಷೇತರ ಸದಸ್ಯರು.

ಇವರೆಲ್ಲರ ಅಧಿಕಾರವಧಿ ಅಕ್ಟೋಬರ್‌ಗೆ ಪೂರ್ಣವಾಗಲಿದೆ. ಬಳಿಕ ಚುನಾವಣೆ ನಡೆಯಲಿರುವ ದಿನಾಂಕವನ್ನು ಚುನಾವಣಾ ಆಯೋಗ ನಿರ್ಧರಿಸಲಿದೆ. ಚುನಾವಣೆ ನಡೆದು ನೂತನ ಅಧ್ಯಕ್ಷ – ಉಪಾಧ್ಯಕ್ಷರ ಆಯ್ಕೆಯಾಗುವವರೆಗೆ ಸಹಾಯಕ ಆಯುಕ್ತರು ಪುರಸಭೆಯ ಆಡಳಿತಾಧಿಕಾರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.















































































error: Content is protected !!
Scroll to Top