ಯಾವ ಪುರಷಾರ್ಥಕ್ಕಾಗಿ ಬಿಜೆಪಿ ಧರಣಿ ? ಉದಯ ಕುಮಾರ್ ಶೆಟ್ಟಿ ಪ್ರಶ್ನೆ
ವಿದ್ಯುತ್ ಬೆಲೆ ಏರಿಕೆಗೆ ಬಿಜೆಪಿ ಸರಕಾರವೇ ನೇರ ಹೊಣೆ – ಬಿಪಿನ್ಚಂದ್ರ ಪಾಲ್ ನಕ್ರೆ
ಕಾರ್ಕಳ : ಯಾವ ಪುರುಷಾರ್ಥಕ್ಕಾಗಿ ಬಿಜೆಪಿ ವತಿಯಿಂದ ಗ್ರಾಮ ಪಂಚಾಯತ್ ಮುಂದೆ ಧರಣಿ ನಡೆಸಲಾಗುತ್ತಿದೆ ಎಂದು ಕಾಂಗ್ರೆಸ್ ಮುಖಂಡ ಮುನಿಯಾಲು ಉದಯ ಕುಮಾರ್ ಶೆಟ್ಟಿ ಪ್ರಶ್ನಿಸಿದ್ದಾರೆ.

ಅವರು ಜೂ. 23ರಂದು ಕಾರ್ಕಳ ಬಸ್ ನಿಲ್ದಾಣ ಬಳಿ ಬಿಜೆಪಿ ವಿರುದ್ಧ ನಡೆದ ಪ್ರತಿಭಟನೆ ಉದ್ದೇಶಿಸಿ ಮಾತನಾಡಿ, ಆರು ಅವಧಿಗೆ ಕಾರ್ಕಳ ಶಾಸಕರಾಗಿ ವೀರಪ್ಪ ಮೊಯ್ಲಿಯವರು ಜನಮೆಚ್ಚುಗೆ ಗಳಿಸಿದ್ದಾರೆ. ಅನಂತರ ಬಂದ ಗೋಪಾಲ ಭಂಡಾರಿಯವರು ಅದನ್ನು ಮುಂದುವರಿಸಿಕೊಂಡು ಹೋಗಿದ್ದಾರೆ. ಆದರೆ, ಈಗ ಇರುವ ಶಾಸಕರು ಕಾರ್ಕಳದ ಜನರ ಮಾನ ಕಳೆದಿದ್ದಾರೆ ಎಂದರು.
ಶಾಸಕ ಸುನಿಲ್ ಕುಮಾರ್ ಅವರ ಸುಳ್ಳು ಹೊಸದೇನಲ್ಲ. ಹೆಬ್ರಿಯ ಸುಚೇತಾ ಶೆಟ್ಟಿ ಕೊಲೆ ಪ್ರಕರಣದಲ್ಲಿ ಪ್ರಾರಂಭವಾದ ಸುಳ್ಳು ಉಮಿಕ್ಕಳ ಬೆಟ್ಟದ ಪರಶುರಾಮ ಮೂರ್ತಿಯವರೆಗೆ ಬಂದು ನಿಂತಿದೆ ಎಂದವರು ಹೇಳಿದರು. ಎಲ್ಲಾ ಸರಕಾರ ನಡೆಯುವುದು ಜನರ ಟ್ಯಾಕ್ಸ್ ದುಡ್ಡಿನಿಂದಲೇ. ಆದರೆ, ಈ ಹಣವನ್ನು ಬಡಜನರಿಗೆ ನೇರವಾಗಿ ತಲುಪಿಸಬೇಕೆಂಬ ಕಲ್ಪನೆ ಹೊಂದಿದ್ದ ನಾಯಕರೆಂದರೆ ಅದು ಸಿದ್ದರಾಮಯ್ಯನವರು ಎಂದು ಉದಯ ಕುಮಾರ್ ಹೇಳಿದರು.
ಕಾಂಗ್ರೆಸ್ ಜಿಲ್ಲಾ ವಕ್ತಾರ ಬಿಪಿನ್ಚಂದ್ರ ಪಾಲ್ ನಕ್ರೆ ಮಾತನಾಡಿ, ವಿದ್ಯುತ್ ದರ ಏರಿಕೆಗೆ ಈ ಹಿಂದೆ ಆಡಳಿತ ನಡೆಸಿದ ಬಿಜೆಪಿ ಸರಕಾರವೇ ನೇರ ಹೊಣೆ. ಇಲ್ಲಿನ ವಿದ್ಯುತ್ ಉತ್ಪಾದನಾ ಘಟಕಗಳಿಗೆ ಕೇಂದ್ರದಿಂದ ಕಲ್ಲಿದ್ದಲು ಸರಬರಾಜು ಮಾಡುವಲ್ಲಿ ವಿಫಲವಾದ ಕಾರಣ ರಾಜ್ಯ ವಿದ್ಯುತ್ ನಿಗಮದ ಬೇಡಿಕೆಯಂತೆ 2022-23 ರಲ್ಲಿ ವ್ಯಯ ಸರಿದೂಗಿಸುವ ಸಲುವಾಗಿ ಸುನಿಲ್ ಕುಮಾರ್ ಇಂಧನ ಸಚಿವರಾಗಿದ್ದ ಸಂದರ್ಭ ವಿದ್ಯುತ್ ದರ ಏರಿಕೆ ಮಾಡಲಾಗಿತ್ತು ಎಂದವರು ಆರೋಪಿಸಿದರು.
9/11 ಆದೇಶ ನೀಡಿರುವುದೇ ಬೊಮ್ಮಾಯಿ ಸಿಎಂ ಆಗಿದ್ದ ಅವಧಿಯಲ್ಲಿ. ಇದೀಗ ಬಿಜೆಪಿಯವರು ಅದರ ವಿರುದ್ಧವೇ ಧರಣಿ ನಡೆಸುತ್ತಿರುವುದು ಹಾಸ್ಯಾಸ್ಪದ ಎಂದು ಬಿಪಿನ್ಚಂದ್ರ ಪಾಲ್ ನಕ್ರೆ ಹೇಳಿದರು.
ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದ ರಾವ್, ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋಪಿನಾಥ್ ಭಟ್, ಜಿಲ್ಲಾ ಉಪಾಧ್ಯಕ್ಷ ಸುಧಾಕರ್ ಕೋಟ್ಯಾನ್, ಬ್ಲಾಕ್ ಉಪಾಧ್ಯಕ್ಷ ಜಾರ್ಜ್ ಕ್ಯಾಸ್ತೋಲಿನೋ, ಗ್ಯಾರಂಟಿ ಸಮಿತಿ ಅಧ್ಯಕ್ಷ ಅಜಿತ್ ಹೆಗ್ಡೆ ಮಾಳ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಭಾನು ಭಾಸ್ಕರ್, ಕಿಸಾನ್ ಘಟಕದ ರಾಜ್ಯ ಕಾರ್ಯದರ್ಶಿ ಉದಯ ಶೆಟ್ಟಿ ಕುಕ್ಕುಂದೂರು, ಪುರಸಭಾ ಮಾಜಿ ಅಧ್ಯಕ್ಷ ಸುಬಿತ್ ಎನ್. ಆರ್., ಮುಖಂಡರಾದ ಪ್ರಭಾಕರ್ ಬಂಗೇರಾ, ಬ್ಲಾಕ್ ಕಾಂಗ್ರೆಸ್ ವಕ್ತಾರ ಪ್ರದೀಪ್ ಬೇಲಾಡಿ, ಪ್ರಕಾಶ್ ಪೂಜಾರಿ, ಪುರಸಭಾ ಸದಸ್ಯರು, ವಿವಿಧ ಘಟಕಗಳ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.







































