ಮೋದಿ ಸೇರಿದಂತೆ ಹಲವು ಗಣ್ಯರಿಂದ ಸಂತಾಪ
ಬೆಂಗಳೂರು : ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್ಸಿಬಿ ವಿಜಯೋತ್ಸವದ ವೇಳೆ ದೊಡ್ಡ ದುರಂತ ಸಂಭವಿಸಿದೆ. ಕಾಲ್ತುಳಿತದಲ್ಲಿ 11 ಜನರು ಮೃತಪಟ್ಟಿದ್ದು 33 ಜನರು ಗಾಯಗೊಂಡಿದ್ದಾರೆ. ರಾಷ್ಟ್ರಪತಿ ದೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಸೇರಿ ಹಲವು ಮಂದಿ ಗಣ್ಯರು ದುರ್ಘಟನೆ ಬಗ್ಗೆ ತೀವ್ರ ವಿಷಾದ ವ್ಯಕ್ತಪಡಿಸಿದ್ದಾರೆ.
ಆಘಾತಕಾರಿ ವಿಚಾರ – ರಾಷ್ಟ್ರಪತಿ ಮುರ್ಮು
ಈ ದುರ್ಘಟನೆ ಬಗ್ಗೆ ತೀವ್ರ ಸಂತಾಪ ವ್ಯಕ್ತಪಡಿಸಿದ ರಾಷ್ಟ್ರಪತಿ ದೌಪದಿ ಮುರ್ಮು ಆರ್ಸಿಬಿ ವಿಜಯೋತ್ಸವ ಸಂದರ್ಭದಲ್ಲಿ ಎಂ. ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ಸಂಭವಿಸಿದ ಜೀವಹಾನಿಯ ಈ ಘಟನೆ “ಆಘಾತಕಾರಿ ಮತ್ತು ಹೃದಯವಿದ್ರಾವಕ” ಎಂದು ವಿಷಾದ ವ್ಯಕ್ತಪಡಿಸಿದ ಅವರು, ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸಿದರು ಮತ್ತು ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸಿದ್ದಾರೆ

ಹೃದಯ ವಿದ್ರಾವಕ ಘಟನೆ – ಮೋದಿ
ಈ ಘಟನೆಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಕೂಡ ಸಂತಾಪ ಸೂಚಿಸಿದ್ದಾರೆ. ಬೆಂಗಳೂರಿನಲ್ಲಿ ನಡೆದ ಅಪಘಾತ ನಿಜಕ್ಕೂ ಹೃದಯವಿದ್ರಾವಕ. ಈ ದುರಂತದ ಸಮಯದಲ್ಲಿ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಎಲ್ಲರಿಗೂ ನನ್ನ ಅನುಕಂಪವಿದೆ. ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ನಾನು ಪ್ರಾರ್ಥಿಸುತ್ತೇನೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ನೆರವಿಗೆ ಬದ್ಧ – ಮಲ್ಲಿಕಾರ್ಜುನ ಖರ್ಗೆ
ಬೆಂಗಳೂರಿನಲ್ಲಿ ಸಂಭವಿಸಿದ ದುರಂತದಿಂದ ನಾನು ತೀವ್ರ ದುಃಖಿತನಾಗಿದ್ದೇನೆ. ಪ್ರೀತಿಪಾತ್ರರ ಕಳೆದುಕೊಂಡ ಕುಟುಂಬಗಳೊಂದಿಗೆ ನನ್ನ ಸಂತಾಪ ಮತ್ತು ಪ್ರಾರ್ಥನೆಗಳಿವೆ ಮತ್ತು ಗಾಯಗೊಂಡವರು ಶೀಘ್ರ ಚೇತರಿಸಿಕೊಳ್ಳಲಿ ಎಂದು ನಾನು ಬಯಸುತ್ತೇನೆ. ಕಾಂಗ್ರೆಸ್ ಪಕ್ಷವು ಬೆಂಗಳೂರಿನ ಜನರೊಂದಿಗೆ ಒಗ್ಗಟ್ಟಿನಲ್ಲಿ ನಿಲ್ಲುತ್ತದೆ ಮತ್ತು ಕರ್ನಾಟಕ ಸರಕಾರದಿಂದ ಪೀಡಿತ ಕುಟುಂಬಗಳಿಗೆ ಪರಿಹಾರ, ವೈದ್ಯಕೀಯ ಸಹಾಯ ಮತ್ತು ನೆರವು ನೀಡುವ ಎಲ್ಲ ಪ್ರಯತ್ನಗಳನ್ನು ಬೆಂಬಲಿಸಲು ಬದ್ಧವಾಗಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ರಾಹುಲ್ ಸಂತಾಪ
ಕಾಂಗ್ರೆಸ್ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ, ಈ ಸಂಬಂಧ ನೇರವಾಗಿ ಸಿಎಂ ಸಿದ್ದರಾಮಯ್ಯ ಅವರಿಗೆ ಫೋನ್ ಕರೆ ಮಾಡಿ ಬೇಸರ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. “ಸಂಭ್ರಮಾಚರಣೆ ವೇಳೆ ನಡೆದ ಕಾಲ್ತುಳಿತ ಘಟನೆಯು ಒಂದು ಅತ್ಯಂತ ವಿಷಾದಕರ ಮತ್ತು ಹೃದಯವಿದ್ರಾವಕವಾಗಿದೆ. ಈ ಘಟನೆ ನಡೆಯಬಾರದಾಗಿತ್ತು. ಕೂಡಲೇ ಸರಕಾರ ಇದರ ಬಗ್ಗೆ ಕೂಲಂಕಷ ತನಿಖೆ ನಡೆಸಬೇಕು. ಅದಕ್ಕೂ ಮುನ್ನ ಮೃತರ ಕುಟುಂಬಕ್ಕೆ ಪರಿಹಾರ ಕಲ್ಪಿಸಬೇಕು. ದುರ್ಘಟನೆಯಲ್ಲಿ ಗಾಯಗೊಂಡವರ ಬಗ್ಗೆಯೂ ಸ್ವತಃ ತಾವು ಮುತುವರ್ಜಿ ವಹಿಸಬೇಕು’ ಎಂದು ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶ – ಪರಿಹಾರ ಘೊಷಣೆ
ಘಟನೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ನಿವಾಸ ಕಾವೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಬೆಂಗಳೂರು ಜಿಲ್ಲಾಧಿಕಾರಿಯಿಂದ ಮ್ಯಾಜಿಸ್ಟ್ರೇಟಿಯಲ್ ತನಿಖೆಗೆ ಆದೇಶಿಸಿದ್ದು ಮೃತರ ಕುಟುಂಬಗಳಿಗೆ ತಲಾ 10 ಲಕ್ಷ ರೂ.ಗಳ ಪರಿಹಾರವನ್ನು ನೀಡುವುದಾಗಿ ಘೋಷಿಸಿದರು. ಇನ್ನು ಮ್ಯಾಜಿಸ್ಟ್ರೇಟಿಯಲ್ ತನಿಖೆಯಲ್ಲಿ ಕ್ರಿಕೆಟ್ ಅಸೋಸಿಯೇಷನ್ನವರ ವೈಫಲ್ಯವಿದೆಯೋ?, ಭದ್ರತಾ ವೈಫಲ್ಯವಿದೆಯೋ? ಅಥವಾ ಬೇರೆ ಏನಾದರೂ ಕಾರಣಗಳಿವೆಯೋ ಎಲ್ಲವೂ ಹೊರಗೆ ಬರಲಿದೆ. 15 ದಿನಗಳ ಒಳಗಾಗಿ ವರದಿ ನೀಡುವಂತೆ ಜಿಲ್ಲಾಧಿಕಾರಿಗೆ ಸೂಚನೆ ನೀಡುತ್ತೇನೆ ಎಂದು ಹೇಳಿದರು.
ಸುನಿಲ್ ಕುಮಾರ್ ಆಕ್ರೋಶ
ಘಟನೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಕಾರ್ಕಳ ಶಾಸಕ, ಕರ್ನಾಟಕ ಸರಕಾರ ವಿ. ಸುನಿಲ್ ಕುಮಾರ್, ” ಆರ್ಸಿಬಿ ಗೆಲುವಿನ ಸಂಭ್ರಮದ ನೆಪದಲ್ಲಿ ಸರ್ಕಾರ ಪೂರ್ವಸಿದ್ಧತೆ ಇಲ್ಲದೆ ನಡೆಸಿದ ಕಾರ್ಯಕ್ರಮದಲ್ಲಿ ಕಾಲ್ತುಳಿತ ಹಾಗೂ ಉಸಿರುಗಟ್ಟಿ ಅಭಿಮಾನಿಗಳು ಮರಣಹೊಂದಿರುವುದಕ್ಕೆ ಸರ್ಕಾರವೇ ನೇರ ಹೊಣೆ. ಇದು ಸರ್ಕಾರಿ ಪ್ರಾಯೋಜಿತ ಹತ್ಯಾಕಾಂಡ ” ಎಂದು ತನ್ನ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
ಮೂರು ಲಕ್ಷ ಜನ ಭಾಗಿ
ಸಂಭ್ರಮಾಚರಣೆ ವೇಳೆ ಸುಮಾರು 2 ರಿಂದ 3 ಲಕ್ಷ ಭಾಗವಹಿಸಿದ್ದು, ಜನದಟ್ಟಣೆ ನಿರ್ವಹಣೆ ಬಗ್ಗೆ ಸೂಕ್ತ ರೀತಿಯಲ್ಲಿ ಕ್ರಮ ಕೈಗೊಳ್ಳದಿರುವದು ದುರಂತಕ್ಕೆ ಕಾರಣವಾಗಿದೆ.






























































