ಉತ್ತಮ ಶಿಕ್ಷಣದೊಂದಿಗೆ ದೇಶಪ್ರೇಮ ಮೂಡಿಸುವ ಕಾರ್ಯ ಪ್ರಶಂಸನೀಯ – ಕೋಟ
ಕೋಟಿ ರೂ. ವಿದ್ಯಾರ್ಥಿ ವೇತನದೊಂದಿಗೆ ಸೈನ್ಯಕ್ಕೆ ದೇಣಿಗೆ ಆದರ್ಶಪ್ರಾಯ – ಸುನಿಲ್ ಕುಮಾರ್
ಕಾರ್ಕಳ : ಜ್ಞಾನಸುಧಾ ಸಂಸ್ಥೆಯು ಡಾ. ಸುಧಾಕರ್ ಶೆಟ್ಟಿ ಅವರ ನೇತೃತ್ವದಲ್ಲಿ ಉತ್ತಮ ಶಿಕ್ಷಣದ ಜೊತೆಗೆ ದೇಶಪ್ರೇಮಿಗಳನ್ನು ನಿರ್ಮಿಸುತ್ತಿರುವ ಕಾರ್ಯ ಪ್ರಶಂಸನೀಯ ಎಂದು ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಅಭಿಪ್ರಾಯಪಟ್ಟರು.

ಅವರು ಮೇ 30ರಂದು ಕಾರ್ಕಳ ಜ್ಞಾನಸುಧಾದ ಶ್ರೀ ಮಹಾಗಣಪತಿ ದೇವಸ್ಥಾನದ ಅಷ್ಟಬಂಧ ಹಾಗೂ ಬ್ರಹ್ಮಕಲಶೋತ್ಸವದ ಸಂದರ್ಭ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟಿನ ವತಿಯಿಂದ ನಡೆದ ಪ್ರತಿಭಾ ಪುರಸ್ಕಾರ ಹಾಗೂ ಮೊದಲ ಹಂತದ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ವಿ. ಸುನಿಲ್ ಕುಮಾರ್ ಮಾತನಾಡಿ, ಜ್ಞಾನಸುಧಾ ಮೌಲ್ಯಗಳನ್ನು ಮತ್ತು ಸಂಸ್ಕಾರವನ್ನು ವಿದ್ಯಾರ್ಥಿಗಳಲ್ಲಿ ಮೈಗೂಡಿಸುವಲ್ಲಿ ಬಹಳ ದೊಡ್ಡ ಹೆಜ್ಜೆಯನ್ನಿಡುತ್ತಿದೆ. ಕೋಟಿ ರೂ. ವಿದ್ಯಾರ್ಥಿ ವೇತನದೊಂದಿಗೆ ಜ್ಞಾನಸುಧಾ ಸಂಸ್ಥೆ ಸೈನ್ಯಕ್ಕೂ ದೇಣಿಗೆ ನೀಡುತ್ತಿರುವುದು ಆದರ್ಶಪ್ರಾಯವೆಂದರು.
ಮಂಗಳೂರು ವಿ.ವಿ. ಉಪಕುಲಪತಿ ಪ್ರೊಫೆಸರ್ ಡಾ. ಪಿ.ಎಲ್. ಧರ್ಮ ಮಾತನಾಡಿ, ಯುವಮನಸುಗಳಲ್ಲಿ ದೇಶಪ್ರೇಮವನ್ನು ತುಂಬುವ ಕಾರ್ಯದ ಜೊತೆಗೆ, ಜ್ಞಾನಸುಧಾ ಪರಿವಾರ ವಿದ್ಯಾರ್ಥಿಗಳನ್ನು ಅತ್ಯುತ್ತಮ ನಾಗರಿಕರನ್ನಾಗಿ ಬೆಳೆಸುತ್ತಿದೆ ಎಂದರು.
ಸೇನೆಗೆ ನೆರವು
ಇದೇ ಸಂದರ್ಭ ಆಪರೇಷನ್ ಸಿಂದೂರ್ ಯಶಸ್ಸಿನ ಹಿನ್ನಲೆಯಲ್ಲಿ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ ಹಾಗೂ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ವತಿಯಿಂದ ರೂ. 2 ಲಕ್ಷ ಮೊತ್ತವನ್ನು ಭಾರತೀಯ ಸೇನೆಗೆ ದೇಣಿಗೆಯಾಗಿ ಸಂಸದರಾದ ಕೋಟ ಶ್ರೀನಿವಾಸ ಪೂಜಾರಿಯವರ ಮೂಲಕ ಹಸ್ತಾಂತರಿಸಲಾಯಿತು.
ಸಾಧಕರಿಗೆ ಸನ್ಮಾನ
ಎಸ್.ಎಸ್.ಎಲ್.ಸಿ.ಯಲ್ಲಿ 625 ಅಂಕಗಳನ್ನು ಗಳಿಸಿ ರಾಜ್ಯಕ್ಕೆ ಪ್ರಥಮ ರ್ಯಾಂಕ್ ಗಳಿಸಿದ ಸ್ವಸ್ತಿ ಕಾಮತ್ ಅವರಿಗೆ ಟ್ರಸ್ಟಿನ ವತಿಯಿಂದ ರೂ. 2 ಲಕ್ಷ ನಗದು ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ಜೊತೆಗೆ ಕೆ.ಸಿ.ಇ.ಟಿ ಇಂಜಿನಿಯರಿಂಗ್ ವಿಭಾಗದಲ್ಲಿ ರಾಜ್ಯಕ್ಕೆ 6ನೇ ರ್ಯಾಂಕ್ ಗಳಿಸಿದ ತರುಣ್ ಸುರಾನರನ್ನು, ಜೆ.ಇ.ಇ ಮೈನ್ ಬಿ. ಪ್ಲಾನಿಂಗ್ ವಿಭಾಗದಲ್ಲಿ 99.9855627 ಪರ್ಸಂಟೈಲ್ ಪಡೆದು ಜನರಲ್ ವಿಭಾಗದಲ್ಲಿ 6ನೇ ಹಾಗೂ ಇ.ಡಬ್ಲು.ಎಸ್ ವರ್ಗದಲ್ಲಿ 1ನೇ ರ್ಯಾಂಕ್ ಮತ್ತು ಬಿ.ಆರ್ಕ್ ವಿಭಾಗದಲ್ಲಿ 99.8881752 ಪರ್ಸಂಟೈಲ್ (ಗಣಿತಶಾಸ್ತ್ರದಲ್ಲಿ 100 ಪರ್ಸಂಟೈಲ್) ಪಡೆದು ಇ.ಡಬ್ಲು.ಎಸ್. ವರ್ಗದಲ್ಲಿ 6ನೇ ಮತ್ತು ಜನರಲ್ ಮೆರಿಟ್ ವಿಭಾಗದಲ್ಲಿ 83ನೇ ರ್ಯಾಂಕ್ ಪಡೆದ ಮನೋಜ್ ಕಾಮತ್ರವರನ್ನು, ಜೊತೆಗೆ ಪ್ರಥಮ ಹಾಗೂ ದ್ವಿತೀಯ ಪಿ.ಯು.ಸಿಯ ಸಾಧಕರನ್ನೂ ಅಭಿನಂದಿಸಲಾಯಿತು.

ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟಿನ ವತಿಯಿಂದ 2024-25ರ ವಾರ್ಷಿಕ ಪರೀಕ್ಷೆಯ ಸಾಧಕ ವಿದ್ಯಾರ್ಥಿಗಳಿಗೆ ರೂ. 64 ಲಕ್ಷದ 22 ಸಾವಿರ, ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ರೂ.18 ಲಕ್ಷದ 78 ಸಾವಿರ, ಸಂಸ್ಥೆಯ ಉದ್ಯೋಗಿಗಳ ಮಕ್ಕಳ ಉಚಿತ ಶಿಕ್ಷಣಕ್ಕೆ ರೂ. 14 ಲಕ್ಷದ 87 ಸಾವಿರ, ಇಲಾಖಾ ಪರೀಕ್ಷೆಗಳಲ್ಲಿ ವಿದ್ಯಾರ್ಥಿ ಗಳಿಸುವ ಪ್ರತೀ ನೂರು ಅಂಕಗಳಿಗೆ ವಿದ್ಯಾರ್ಥಿಗೆ ಹಾಗೂ ಉಪನ್ಯಾಸಕರಿಗೆ ತಲಾ ರೂ ಒಂದು ಸಾವಿರದಂತೆ ರೂ. 7 ಲಕ್ಷದ 21 ಸಾವಿರವೂ ಸೇರಿದಂತೆ ಒಟ್ಟು ರೂ. 1 ಕೋಟಿ 5 ಲಕ್ಷದಷ್ಟು ವಿದ್ಯಾರ್ಥಿ ವೇತನವನ್ನು ನೀಡಲಾಯಿತು.
ಗೌರವಾರ್ಪಣೆ
ಈ ವರ್ಷ ಸಂಸ್ಥೆಯಲ್ಲಿ ಹತ್ತು ವರ್ಷಗಳ ಸೇವೆ ಪೂರ್ಣಗೊಳಿಸಿದ 10 ಮಂದಿ ಬೋಧಕ-ಬೋಧಕೇತರ ಸಿಬ್ಬಂದಿ ವರ್ಗದವರಿಗೆ ತಲಾ 10 ಸಾವಿರ ನಿಶ್ಚಿತ ಠೇವಣಿಯನ್ನು ನೀಡಲಾಯಿತು. ದೇವಸ್ಥಾನದ ಸೇವೆಯಲ್ಲಿ ತೊಡಗಿಸಿಕೊಂಡ ವೇದಮೂರ್ತಿ ಭಗೀರಥ ಭಟ್ ಮತ್ತು ವಿಷ್ಣು ಮೂರ್ತಿ ಭಟ್‍ರವರನ್ನು ಹಾಗೂ ಶ್ರೀ ಮಹಾಗಣಪತಿ ದೇವಾಸ್ಥಾನದ ಭಜನಾ ಮಂಡಳಿಯ ಅಧ್ಯಕ್ಷ ಕಮಲಾಕ್ಷ ನಾಯಕ್‍ರವರನ್ನು ಸಂಸ್ಥೆಯ ವತಿಯಿಂದ ಗೌರವಿಸಲಾಯಿತು.
2011 ರಿಂದ 2025ರವರೆಗೆ ಜ್ಞಾನಸುಧಾ ಬೆಳೆದು ಬಂದ ದಾರಿಯ ಹೊತ್ತಗೆ ‘ಅಗಣಿತ-ಸುಧಾಸ್ಪರ್ಷ’ವನ್ನು ಹಾಗೂ ಜ್ಞಾನಸುಧಾ ಪತ್ರಿಕೆ-39ನ್ನು ಬಿಡುಗಡೆಗೊಳಿಸಲಾಯಿತು.

ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟಿನ ಅಧ್ಯಕ್ಷ ಡಾ. ಸುಧಾಕರ್ ಶೆಟ್ಟಿ ಸ್ವಾಗತಿಸಿದರು. ಆಂಗ್ಲಭಾಷಾ ಉಪನ್ಯಾಸಕಿ ಸಂಗೀತಾ ಕುಲಾಲ್ ನಿರೂಪಿಸಿ, ವಂದಿಸಿದರು.






























































