ಮೋಹನ ಆಳ್ವರಿಗೆ ಉಡುಪಿಯ ನಂಟು – ಉಡುಪಿಯ ನೆಂಟರು

ಮಿಜಾರುಗುತ್ತು ಆನಂದ ಆಳ್ವ ಕೊಡ್ಮಾನ್‍ಗುತ್ತು ಸುಂದರಿ ಆಳ್ವ ದಂಪತಿ ಪುತ್ರ ಮೋಹನ ಆಳ್ವರದು ಅಪ್ಪಟ ಬಾಲಪ್ರತಿಭೆ. ಮಗ ಬೆಳೆದು ನಿಂತು ಪಿಯುಸಿ ಮುಗಿಸಿದಾಗ ಮುಂದಿನ ಪಥ ಏನೆಂದು ತಂದೆ ಆಲೋಚಿಸಿದರು. ತನ್ನಂತೆಯೇ ಕೃಷಿ ಸಂಸ್ಕೃತಿಯಲ್ಲಿ ಸಮಾನ ಆಸಕ್ತಿ ಇರುವ ಬಹುಕಾಲದ ಒಡನಾಡಿ ಪಳ್ಳಿ ಶ್ರೀನಿವಾಸ ಹೆಗ್ಡೆ ಅವರೊಂದಿಗೆ ಸಮಾಲೋಚಿಸಿ ಉಡುಪಿಯ ಉದ್ಯಾವರದಲ್ಲಿರುವ ಆಯುರ್ವೇದ ಕಾಲೇಜಿಗೆ ಮೋಹನ ಆಳ್ವ ಅವರನ್ನು ದಾಖಲಿಸಿದರು. ಹೀಗೆ ಮೋಹನ ಆಳ್ವ ಅವರಿಗೆ ಉಡುಪಿಯ ನಂಟು ಪ್ರಾರಂಭವಾಯಿತು. ಉಡುಪಿಯಲ್ಲಿ ಆಳ್ವರ ಪ್ರತಿಭಾ ಪ್ರದರ್ಶನಕ್ಕೆ ಹೇರಳ ಅವಕಾಶಗಳು ಲಭ್ಯವಾಗಿ ನೃತ್ಯ, ಛಧ್ಮವೇಷ, ನಾಟಕ, ಕ್ರೀಡೆ ಮೊದಲಾದ ವಿಭಾಗಗಳಲ್ಲಿ ಜಿಲ್ಲೆ, ರಾಜ್ಯ, ದಕ್ಷಿಣ ಭಾರತ ಮತ್ತು ಅಖಿಲ ಭಾರತ ಮಟ್ಟದಲ್ಲಿ, ಒಂದೇ ವರ್ಷದಲ್ಲಿ 123 ಪ್ರಶಸ್ತಿಗಳಿಗೆ ಭಾಜನರಾದರು. ಇದಕ್ಕೆ ಕಲಶ ಪ್ರಾಯದಂತೆ ಆಕ್ಸ್ ಫರ್ಡ್‌ ವಿಶ್ವವಿದ್ಯಾನಿಲಯದಿಂದ ‘ಜಗತ್ತಿನ ಅತಿ ಪ್ರತಿಭಾವಂತ ಯುವಕ’ ಎಂಬ ಗೌರವಕ್ಕೆ ಪಾತ್ರರಾದುದು ಇದೀಗ ಇತಿಹಾಸ.

ಆಚಾರ್ಯರೊಂದಿಗೆ ಆತ್ಮೀಯತೆ
ಸಾಂಸ್ಕೃತಿಕವಾಗಿ ಮುಂಚೂಣಿಯಲ್ಲಿರುವ ಉಡುಪಿ ನಗರದ ವಾಸ್ತವ್ಯ ಮೋಹನ ಆಳ್ವರ ಸುಪ್ತ ಪ್ರತಿಭೆಗೆ ಸಾಕಷ್ಟು ನೀರೆರೆಯಿತು. ಇಲ್ಲಿಯ ಎಂ.ಜಿ.ಎಂ. ಮತ್ತು ಪೂರ್ಣ ಪ್ರಜ್ಞ ಕಾಲೇಜುಗಳು, ಯಕ್ಷಗಾನ ಕೇಂದ್ರ, ರಂಗಭೂಮಿ ಆಳ್ವರ ಆಡುಂಬೊಲವಾದುವು. ಆಯುರ್ವೇದ ಕಾಲೇಜಿನ ಪ್ರಾಂಶುಪಾಲರಾಗಿದ್ದ ಡಾ. ಆರ್.ಆರ್. ಭಟ್, ಡಾ. ವಿ.ಎಸ್. ಆಚಾರ್ಯ, ಕು.ಶಿ. ಹರಿದಾಸ ಭಟ್ಟ, ಬಿ.ಆರ್. ನಾಗೇಶ್, ಉದ್ಯಾವರ ಮಾಧವ ಆಚಾರ್ಯ, ಹೇರಂಜೆ ಕೃಷ್ಣ ಭಟ್ಟ, ಡಾ. ಬಿ.ಬಿ. ಶೆಟ್ಟಿ, ಕುತ್ಪಾಡಿ ಆನಂದ ಗಾಣಿಗ ಮೊದಲಾದ ಸಮಾನ ಆಸಕ್ತರೊಂದಿಗೆ ಆತ್ಮೀಯತೆ ಬೆಳೆಯಿತು.

2013ನೇ ಇಸವಿ ಮಾ. 11 ರಂದು, ಉಡುಪಿಯ ಹಿರಿಯ ನಾಗರಿಕರ ಸಂಸ್ಥೆ ಸಿ.ಎಸ್. ರಾಯರ ನೇತೃತ್ವದಲ್ಲಿ ಆಳ್ವರಿಗೆ ಹಿರಿಯ ನಾಗರಿಕರ ಕಾರ್ಡ್‍ನ್ನು ಪ್ರದಾನಿಸಿತ್ತು ಎನ್ನುವುದು ಆ ಸಂಸ್ಥೆಗೆ ಹೆಮ್ಮೆ. ಉಡುಪಿಯ ನುಡಿಸಿರಿ ಘಟಕದ ಅಧ್ಯಕ್ಷರಾಗಿ ಜಯಕರ ಶೆಟ್ಟಿ ಇಂದ್ರಾಳಿ ಮತ್ತು ಕಾರ್ಯದರ್ಶಿಯಾಗಿ ಭುವನ ಪ್ರಸಾದ ಹೆಗ್ಡೆ ಕಾರ್ಯನಿರ್ವಹಿಸಿದ್ದಾರೆ.

2013ರ ಮಾ. 24ರಂದು, ಶ್ರೀ ಕೃಷ್ಣ ಮಠದ ವಾಹನ ತಂಗುದಾಣದಲ್ಲಿ ಸುಮಾರು 9,000ಕ್ಕೂ ಹೆಚ್ಚಿನ ಪ್ರೇಕ್ಷಕರ ಉಪಸ್ಥಿತಿಯೊಂದಿಗೆ, ನುಡಿಸಿರಿ ಘಟಕದ ಉದ್ಘಾಟನೆ ನಡೆಯಿತು. ಡಾ. ಹೆಚ್.ಎಸ್. ಬಲ್ಲಾಳರ ಅಧ್ಯಕ್ಷತೆಯಲ್ಲಿ ಡಾ. ಸಂಧ್ಯಾ ಎಸ್. ಪೈ ಅವರು ಉಡುಪಿ ಘಟಕವನ್ನು ಮತ್ತು ಸಾಂಸ್ಕøತಿಕ ವೈಭವವನ್ನು ಉದ್ಘಾಟಿಸಿದರು.

ಪರ್ಯಾಯ ದರ್ಬಾರು
ಪೇಜಾವರ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿಯವರ ಪಂಚಮ ಪರ್ಯಾಯದ ಸಂದರ್ಭದಲ್ಲಿ ಪುರ ಪ್ರವೇಶದ ಮೆರವಣಿಗೆಯ ಸಂಪೂರ್ಣ ನಿರ್ವಹಣೆಯನ್ನು ಅಭೂತಪೂರ್ವವಾಗಿ ಡಾ. ಆಳ್ವರು ಸಂಘಟಿಸಿದ್ದರು. ಪೇಜಾವರದ ಹಿರಿಯ ಮತ್ತು ಕಿರಿಯ ಸ್ವಾಮೀಜಿಯವರನ್ನು ಮತ್ತು ಧರ್ಮಸ್ಥಳದ ಡಾ. ವೀರೇಂದ್ರ ಹೆಗ್ಗಡೆಯವರನ್ನು ಆಳ್ವರು ಗುರುವಾಗಿ ಸ್ವೀಕರಿಸಿದ್ದಾರೆ. ಪೇಜಾವರ ಕಿರಿಯ ಸ್ವಾಮೀಜಿಯವರು ನಡೆಸುತ್ತಿರುವ ನೀಲಾವರ ಗೋ ಶಾಲೆಯ ವಿಶ್ವಸ್ಥರಾಗಿ ಆಳ್ವರು ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಥಮ ಬಾರಿಗೆ ರಾಜಾಂಗಣದ ಹೊರಗೆ ಪರ್ಯಾಯ ದರ್ಬಾರಿನ ವೇದಿಕೆಯನ್ನು ವಿನೂತನ ರೀತಿಯಲ್ಲಿ ಹಾಗೂ ಬಹು ಆಕರ್ಷಣೀಯವಾಗಿ ಈ ಸಂದರ್ಭದಲ್ಲಿ ಆಳ್ವರು ರಚಿಸಿದ್ದರು.

ಪರ್ಯಾಯಕ್ಕೆ ಪೂರ್ವಭಾವಿಯಾಗಿ 2016ರ ಜನವರಿ 14, 15, 16 ರಂದು ಪ್ರತಿದಿನ ಸುಮಾರು 300 ವಿದ್ಯಾರ್ಥಿ ಕಲಾವಿದರ ಭಾಗವಹಿಸುವಿಕೆಯಿಂದ ಸುಮಾರು 20,000ಕ್ಕೂ ಹೆಚ್ಚು ಪ್ರೇಕ್ಷಕರ ಉಪಸ್ಥಿತಿಯಲ್ಲಿ ಸಾಂಸ್ಕೃತಿಕ ವೈಭವ ನಡೆಯಿತು. ಅದೇ ವರ್ಷದ ಎಪ್ರಿಲ್ ತಿಂಗಳಲ್ಲಿ ಆಳ್ವಾಸ್ ಧೀಂಕಿಟ ಯಕ್ಷಗಾನ ಅಧ್ಯಯನ ಕೇಂದ್ರದಿಂದ ‘ತರಣಿ ಸೇನ ಕಾಳಗ’ ಮತ್ತು ಡಿಸೆಂಬರ್ ತಿಂಗಳಲ್ಲಿ ಮತ್ತೊಮ್ಮೆ ಸಾಂಸ್ಕೃತಿಕ ವೈಭವ ಕಾರ್ಯಕ್ರಮ ನಡೆಯಿತು.
ಡಾ. ಆಳ್ವರಿಗೆ ಪೇಜಾವರ ವಿಶ್ವೇಶ ತೀರ್ಥರು ಪರ್ಯಾಯ ಪ್ರಶಸ್ತಿಯನ್ನು ಪ್ರದಾನಿಸಿದರು. ಉಡುಪಿಯ ಯಕ್ಷಗಾನ ಕಲಾರಂಗದಿಂದ, ಯಕ್ಷಗಾನ ತರಬೇತಿ ಸಂಸ್ಥೆಗಳಿಗೆ ನೀಡುವ ಪ್ರಶಸ್ತಿಯನ್ನು, ಆಳ್ವಾಸ್ ಧೀಂಕಿಟ ಯಕ್ಷಗಾನ ಅಧ್ಯಯನ ಕೇಂದ್ರಕ್ಕೆ ನೀಡಲಾಗಿದೆ. ಯಕ್ಷ ಶಿಕ್ಷಣ ಟ್ರಸ್ಟ್ ಮೂಲಕ ವಿದ್ಯಾರ್ಥಿಗಳಿಗೆ ಯಕ್ಷಗಾನ ಶಿಕ್ಷಣ ನೀಡುತ್ತಿರುವ ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಳಿ ಕಡೆಕಾರರಿಗೆ ಆಳ್ವಾಸ್ ವಿದ್ಯಾರ್ಥಿ ಸಿರಿ ಸಮ್ಮೇಳನದಲ್ಲಿ ‘ವಿದ್ಯಾಸಿರಿ’ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಉಡುಪಿಯ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ, ಪ್ರೇಕ್ಷಕನಾಗಿ, ನಟನಾಗಿ ಆಳ್ವರು ಭಾಗವಹಿಸುತ್ತಿದ್ದರು. ನನ್ನ ಸುಪ್ತ ಪ್ರತಿಭೆಗೆ ಉಡುಪಿಯ ಸಾಂಸ್ಕೃತಿಕ ವಾತಾವರಣದಿಂದ ಮತ್ತು ಗಣ್ಯ ಮಾನ್ಯರಿಂದ ತುಂಬು ಪ್ರೋತ್ಸಾಹ ದೊರೆತಿದೆ, ನನ್ನ ಸಾಧನೆಗಳಿಗೆ ಉಡುಪಿಯ ಕೊಡುಗೆ ಮಹತ್ತರವಾದುದು. ನನ್ನ ಊರು ಮೂಡುಬಿದಿರೆಯನ್ನು ಹೊರತು ಪಡಿಸುತ್ತಿದ್ದರೆ, ನನ್ನ ಪರ್ಯಾಯ ಕಾರ್ಯಕ್ಷೇತ್ರ ಉಡುಪಿಯಾಗುತ್ತಿತ್ತು ಎಂದು ಆಳ್ವರು ಪ್ರಾಂಜಲ ಮನಸ್ಸಿನಿಂದ ತಮ್ಮ ಮನದ ಇಂಗಿತವನ್ನು ವ್ಯಕ್ತಪಡಿಸುತ್ತಾರೆ. ಬಹುಶ: ಉಡುಪಿಗಾದ ಸಾಂಸ್ಕೃತಿಕ ನಷ್ಟದ ಹತ್ತು ಪಾಲಿನಷ್ಟು ಅವರು ಮೂಡಬಿದ್ರೆಯಲ್ಲಿ ಭರಿಸಿದ್ದಾರೆ.

ಯೋಗಾಯೋಗವೆಂಬಂತೆ ಆಳ್ವರಿಗೆ ಉಡುಪಿಯ ನಂಟು ಮಾತ್ರವಲ್ಲದೇ ಅವರ ನೆಂಟರು ಕೂಡ ಉಡುಪಿಯವರೇ ಆಗಿದ್ದಾರೆ. ಉಡುಪಿಯಿಂದ 6 ಕಿ.ಮೀ. ದೂರದ ಮಣಿಪುರ ಗ್ರಾಮದ ದೆಂದೂರುಕಟ್ಟೆ ನಿವಾಸಿಗಳಾಗಿದ್ದು ಮುಂಬೈಯಲ್ಲಿ ಶೋಭಾ ರಿಫ್ರೆಶ್‍ಮೆಂಟ್ಸ್ ಎಂಬ ಹೋಟೆಲನ್ನು ನಡೆಸುವ ಉದ್ಯಮಿ ರಾಮಣ್ಣ ಶೆಟ್ಟಿ ಮತ್ತು ಲಲಿತ ಶೆಟ್ಟಿ ದಂಪತಿ ಪುತ್ರಿ ಶೋಭಾ ಅವರನ್ನು 1982 ನೇ ಇಸವಿಯಲ್ಲಿ ವಿವಾಹವಾದರು. ಬಹಳ ಆತ್ಮೀಯ ಮತ್ತು ಮಧುರ ದಾಂಪತ್ಯವನ್ನು 18 ವರ್ಷ ಕಾಲ ನಡೆಸಿದರು. ವಿವೇಕ್ ಮತ್ತು ಡಾ. ವಿನಯ್ ಇಬ್ಬರು ಗಂಡು ಮಕ್ಕಳು. ವಿವೇಕ್ ಎಂ.ಬಿ.ಎ. ಪದವೀಧರ, ಡಾ. ವಿನಯ್ ಶಸ್ತ್ರ ಚಿಕಿತ್ಸಾ ಪರಿಣತರು.

ತನ್ನ ಗಂಡನ ಎಲ್ಲಾ ಹೊಣೆಗಾರಿಕೆಗಳನ್ನು ಬಹಳ ಸಮರ್ಥವಾಗಿ ಹಂಚಿಕೊಳ್ಳುತ್ತಿದ್ದ ಶೋಭಾ ಅಕಾಲದಲ್ಲಿ ದೈವಾಧೀನರಾದರು. ಅವರ ಸ್ಮರಣೆಯನ್ನು ಆಳ್ವರು ಜತನದಿಂದ ಕಾಪಿಡುತ್ತಾ ಬಂದಿದ್ದಾರೆ. ಸುಮಾರು 100 ಎಕರೆಯಲ್ಲಿ 1,400 ಸಸ್ಯ ಪ್ರಭೇದಗಳಿರುವ ‘ಶೋಭಾವನ’ ದಲ್ಲಿ ಅಪೂರ್ವ ಔಷಧೀಯ ಸಸ್ಯಗಳಿವೆ. ವಿಭಿನ್ನ ಮಾದರಿಯಲ್ಲಿ ನಿರ್ಮಿಸಿದ ಹತ್ತಾರು ಕುಟೀರಗಳಿವೆ. ತಮ್ಮ ಪತ್ನಿಯ ಕುಟುಂಬಿಕರೊಂದಿಗೆ ಇಂದಿಗೂ ಬಹಳ ಆತ್ಮೀಯ ಸಂಬಂಧವನ್ನು ಆಳ್ವರು ಇರಿಸಿಕೊಂಡಿದ್ದಾರೆ.

ತಮ್ಮ ವಿದ್ಯಾರ್ಥಿ ದೆಸೆಯಿಂದ ಪ್ರಾರಂಭವಾದ ಉಡುಪಿಯ ನಂಟನ್ನು ಆಳ್ವರು ಇಂದು ಕೂಡ ಬಹಳ ಸಂತೋಷದಿಂದ ಕಾಯ್ದುಕೊಂಡು ಬಂದಿದ್ದಾರೆ.





























































































































error: Content is protected !!
Scroll to Top