ಕಾರ್ಕಳ : ಶಿರ್ಲಾಲು ಗ್ರಾಮದ ಹಾಡಿಯಂಗಡಿ ಆಯರೆಮನೆ ಧರ್ಮರಾಜ್ ಹೆಗ್ಡೆ ಅವರ ತೋಟಕ್ಕೆ ಮೇ 27ರ ರಾತ್ರಿ ಕಾಡಾನೆ ದಾಳಿ ಮಾಡಿದ್ದು ಬೆಳೆ ಹಾಳು ಮಾಡಿತ್ತು. ಇದೀಗ ಮತ್ತೆ ಕಾಡಾನೆ ಹಾವಳಿ ಮುಂದುವರೆದಿದೆ. ಧರ್ಮರಾಜ್ ಹೆಗ್ಡೆಯವರ ತೋಟದಿಂದ ಸುಮಾರು 1 ಕೀ.ಮೀ ದೂರದಲ್ಲಿರುವ ಬೈಲು ಮನೆ ಸುಂದರ್ ನಾಯ್ಕ್ ಅವರ ತೋಟಕ್ಕೆ ನಿನ್ನೆ ರಾತ್ರಿ ಆನೆ ದಾಳಿ ಮಾಡಿ ಅಡಿಕೆ, ಬಾಳೆ ಹಾಗೂ ಇನ್ನಿತರ ಬೆಳೆ ನಾಶ ಮಾಡಿದೆ.
ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ತಪ್ಪಲಿನ ಅಂಡಾರು, ಶಿರ್ಲಾಲು, ಕೆರ್ವಾಶೆ, ನೂರಾಲ್‌ಬೆಟ್ಟು, ಮಾಳ ಪರಿಸರದಲ್ಲಿ ಕಾಡು ಪ್ರಾಣಿಗಳಾದ ಕಾಡು ಕೋಣ, ಕಾಡು ಹಂದಿ, ಜಿಂಕೆ, ಕಡವೆ ಮೊದಲಾದ ಪ್ರಾಣಿಗಳ ಹಾವಳಿ ಸಾಮಾನ್ಯವಾಗಿತ್ತು. ಆದರೆ, ಇದೀಗ ಆನೆಯ ಹಾವಳಿಯೂ ಪ್ರಾರಂಭಗೊಂಡಿದ್ದು ರೈತರು ಮತ್ತು ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದೆ. ಈಗಾಗಲೇ ಆನೆ ದಾಳಿ ಮಾಡಿರುವ ತೋಟಗಳು ವಾಸದ ಮನೆಯಿಂದ ಸಮೀಪದಲ್ಲೇ ಇದ್ದು ಜನ ಮನೆಯಿಂದ ಹೊರಬರಲು ಭಯ ಪಡುವಂತಹ ಪರಿಸ್ಥಿತಿ ಎದುರಾಗುತ್ತಿದೆ.
ಇದನ್ನೂ ಓದಿ : https://newskarkala.com/2025/05/28/elephant-attack-damages-arecanut-plantation-karkala/

ಕೂಂಬಿಂಗ್ ಕಾರ್ಯಾಚರಣೆ ಪ್ರಾರಂಭ
ಆನೆ ಇರುವಿಕೆ ಬಗ್ಗೆ ಇಲಾಖೆ ನಿಗಾ ವಹಿಸಿದ್ದು, ಈಗಾಗಲೇ ಹಾಡಿಯಂಗಡಿ ಪ್ರದೇಶದಲ್ಲಿ ಪರಿಶೀಲನೆ ಮಾಡಿದ್ದು ಇಂದಿನಿಂದ ಕೂಂಬಿಂಗ್ ಕಾರ್ಯಾಚರಣೆ ಪ್ರಾರಂಭವಾಗಲಿದೆ ಎಂದು ವಲಯ ಅರಣ್ಯಾಧಿಕಾರಿ ಪ್ರಭಾಕರ್ ಕುಲಾಲ್ ತಿಳಿಸಿದ್ದಾರೆ.






























































