ಶಿರ್ಲಾಲಿನಲ್ಲಿ ತೋಟಕ್ಕೆ ಆನೆ ದಾಳಿ – ಬೆಳೆ ಹಾನಿ – ಆತಂಕದಲ್ಲಿ ಸ್ಥಳೀಯರು

ಕಾರ್ಕಳ : ಶಿರ್ಲಾಲು ಗ್ರಾಮದ ಹಾಡಿಯಂಗಡಿ ಆಯರೆಮನೆ ಧರ್ಮರಾಜ್‌ ಹೆಗ್ಡೆ ಅವರ ತೋಟಕ್ಕೆ ಮೇ 27ರ ರಾತ್ರಿ ಆನೆ ದಾಳಿ ಮಾಡಿದ್ದು ಬೆಳೆ ಹಾಳು ಮಾಡಿದೆ. ಪಶ್ಚಿಮಘಟ್ಟದ ಕಾಡಿನಿಂದ ಒಂಟಿ ಆನೆಯೊಂದು ತೋಟಕ್ಕೆ ನುಗ್ಗಿ ಅಡಿಕೆ, ಬಾಳೆ ಗಿಡ ಹಾನಿ ಮಾಡಿದೆ. ಸುಮಾರು 20 ಅಡಿವರೆಗೆ ಎತ್ತರದಲ್ಲಿದ್ದ ಹಲಸಿನ ಕಾಯಿ ತಿಂದು ತೆರಳಿದೆ ಎಂದು ಸ್ಥಳೀಯರಾದ ಪ್ರಶಾಂತ್‌ ಜೈನ್‌ ನ್ಯೂಸ್‌ ಕಾರ್ಕಳಕ್ಕೆ ತಿಳಿಸಿದ್ದಾರೆ.

ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ತಪ್ಪಲಿನ ಅಂಡಾರು, ಶಿರ್ಲಾಲು, ಕೆರ್ವಾಶೆ, ನೂರಾಲ್‌ಬೆಟ್ಟು, ಮಾಳ ಪರಿಸರ ದಟ್ಟ ಅರಣ್ಯದಿಂದ ಕೂಡಿರುವ ಪ್ರದೇಶಗಳಾಗಿದ್ದರೂ ಈ ಪರಿಸರದಲ್ಲಿ ಆನೆ ದಾಳಿ ಮಾಡಿರುವುದು ವಿರಳ. ಇಲ್ಲಿನ ಜನತೆ ಹೆಚ್ಚಾಗಿ ಕೃಷಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು ಕಾಡು ಪ್ರಾಣಿಗಳಾದ ಕಾಡು ಕೋಣ, ಕಾಡು ಹಂದಿ, ಜಿಂಕೆ, ಕಡವೆ ಮೊದಲಾದ ಪ್ರಾಣಿಗಳ ಹಾವಳಿಯಿಂದ ಕಂಗಾಲಾಗಿದ್ದರು. ಇದೀಗ ಆನೆ ದಾಳಿ ಮಾಡಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಆನೆಯನ್ನು ಹಿಡಿದು ಬೇರೆಡೆ ಸ್ಥಳಾಂತರಿಸುವಂತೆ ಅರಣ್ಯ ಅಧಿಕಾರಿಗಳನ್ನು ರೈತರು ಒತ್ತಾಯಿಸುತ್ತಿದ್ದಾರೆ.

ಆಗುಂಬೆ ತಪ್ಪಲಿನ ಪ್ರದೇಶಗಳಾದ ಹೆಬ್ರಿ ತಾಲೂಕಿನ ಹೆಬ್ರಿ, ನಾಡ್ಪಾಲು, ಸೋಮೇಶ್ವರ ಅಭಯಾರಣ್ಯದಲ್ಲಿ ಆನೆಗಳು ಕಾಣಸಿಗುತ್ತಿದ್ದವು. ಆದರೆ, ಕಾರ್ಕಳ ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿ ಆನೆಗಳು ಕಾಣಸಿಕ್ಕಿರುವುದು ಕಡಿಮೆ.











































































error: Content is protected !!
Scroll to Top