ಮಂಗಳೂರು : ವಿದೇಶದಲ್ಲಿ ಉದ್ಯೋಗ ಕೊಡಿಸುವ ನೆಪದಲ್ಲಿ ಖಾಸಗಿ ಸಂಸ್ಥೆಯಿಂದ ಕೋಟಿ ಕೋಟಿ ವಂಚನೆ

ಮಂಗಳೂರು : ವಿದೇಶದಲ್ಲಿ ಉದ್ಯೋಗ ಕೊಡಿಸುವ ಆಮಿಷವೊಡ್ಡಿ Hire Glow Elegent overseas international Private Ltd ಎಂಬ ಹೆಸರಿನ ಖಾಸಗಿ ಸಂಸ್ಥೆಯೊಂದು ಕೋಟ್ಯಂತರ ರೂಪಾಯಿ ವಂಚನೆ ಮಾಡಿರುವ ಘಟನೆ ಮಂಗಳೂರಿನಲ್ಲಿ ಸಂಭವಿಸಿದೆ. ಇದೀಗ ವಂಚನೆಗೊಳಗಾದ 185 ಜನ ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ಮಂಗಳೂರಿನ ಕಂಕನಾಡಿಯಲ್ಲಿ ಕಚೇರಿಯನ್ನು ‌ಹೊಂದಿದ್ದ ಈ ಸಂಸ್ಥೆ ನ್ಯೂಜಿಲೆಂಡ್​​ನ VALARIS ಕಂಪೆನಿಯಲ್ಲಿ ಉದ್ಯೋಗ ಕೊಡಿಸುವ ಬಗ್ಗೆ ಭರವಸೆ ನೀಡಿತ್ತು. ಹೀಗಾಗಿ ದಕ್ಷಿಣ ಕನ್ನಡ ಜಿಲ್ಲೆಯ 185ಕ್ಕೂ ಹೆಚ್ಚು ಮಂದಿ ಕಂಪನಿಯನ್ನು ಉದ್ಯೋಗಕ್ಕಾಗಿ‌ ಸಂಪರ್ಕಿಸಿದ್ದರು. ಉಡುಪಿ ಜಿಲ್ಲೆ, ಕೇರಳ ಸೇರಿದಂತೆ ಹೊರರಾಜ್ಯಗಳಿಂದ ಸುಮಾರು ‌300ಕ್ಕೂ ಹೆಚ್ಚು ಮಂದಿ ಉದ್ಯೋಗಕ್ಕಾಗಿ ಸಂಸ್ಥೆಯನ್ನು ಸಂಪರ್ಕಿಸಿದ್ದರು. ಸಂಸ್ಥೆಯು 185ಕ್ಕೂ ಹೆಚ್ಚು ವ್ಯಕ್ತಿಗಳಿಂದ ತಲಾ 1ಲಕ್ಷದ 85 ಸಾವಿರ ರೂ., ಎಜೆಂಟ್​​ಗಳ ಮುಖಾಂತರ ಸುಮಾರು 60 ಮಂದಿಯಿಂದ ತಲಾ 3 ಲಕ್ಷ ರೂಪಾಯಿ ಹಾಗೂ ಬೇರೆ ಬೇರೆ ರಾಜ್ಯದ ಏಜೆನ್ಸಿಗಳ ಮೂಲಕ ತಲಾ 5ಲಕ್ಷ ರೂಪಾಯಿ ಸಂಗ್ರಹಿಸಿತ್ತು. ಒಟ್ಟಾರೆಯಾಗಿ 300ಕ್ಕೂ ಹೆಚ್ಚು ಮಂದಿಯಿಂದ ಸುಮಾರು ‌8 ಕೋಟಿ ರೂಪಾಯಿಗೂ‌ ಅಧಿಕ ಹಣ ಪಡೆದಿರುವ ಆರೋಪ ಸಂಸ್ಥೆಯ ಮೇಲಿದೆ. ಉದ್ಯೋಗಕಾಂಕ್ಷಿಗಳು ಎಲ್ಲಾ ಹಣವನ್ನು ಆನ್​​ಲೈನ್ ಮುಖಾಂತರವೇ ಹೈರ್ ಗ್ಲೋ ಕಂಪೆನಿಗೆ ಪಾವತಿಸಿದ್ದಾರೆ.

ಕಳೆದ ನವೆಂಬರ್ ತಿಂಗಳಿನಲ್ಲಿ ಉದ್ಯೋಗಾಕಾಂಕ್ಷಿಗಳ ಸಂದರ್ಶನ ನಡೆಸಿದ್ದ ಸಂಸ್ಥೆ, ಅದೇ ತಿಂಗಳ ಕೊನೆಯಲ್ಲಿ ಫಿಟ್​​ನೆಟ್ ಟೆಸ್ಟ್ ಕೂಡ ಮಾಡಿಸಿತ್ತು. ಜನವರಿ ತಿಂಗಳ ಮೊದಲ ವಾರದಲ್ಲಿ ಉದ್ಯೋಗಾಕಾಂಕ್ಷಿಗಳಿಂದ ಕೆಲಸಕ್ಕೆ ಸೇರಲು ಕಾಂಟ್ರಾಕ್ಟ್​​ಗೆ ಸಹಿ ಹಾಕಿಸಲಾಗಿತ್ತು. ಮಾರ್ಚ್ ತಿಂಗಳ ಕೊನೆಯಲ್ಲಿ ಭಾವಚಿತ್ರ, ವೀಸಾ ಅಪ್ಲಿಕೇಶನ್ ಫಾರ್ಮ್, ಬಾಕಿ ಉಳಿದ ಮೊತ್ತವನ್ನು ಕಚೇರಿಯಲ್ಲಿ ನೀಡಲು ಸಂಸ್ಥೆ ತಿಳಿಸಲಾಗಿತ್ತು. ಎಪ್ರಿಲ್‌ ಮೊದಲ ವಾರದಲ್ಲಿ ಟಿಕೆಟ್ ಮೊತ್ತದ ಹಣವನ್ನು ಪಾವತಿಸುವಂತೆ ಸೂಚನೆ ನೀಡಲಾಗಿತ್ತು. ಅಲ್ಲದೆ, ಕೊರಿಯರ್ ಮೂಲಕ ವೀಸಾ ಬರಲಿದೆ ಎಂದು ತಿಳಿಸಿತ್ತು. ಎಪ್ರಿಲ್ ಕೊನೆಯ ವಾರದಲ್ಲಿ ಉದ್ಯೋಗಾಕಾಂಕ್ಷಿಗಳಿಗೆ ಕೊರಿಯರ್‌ ಬಂದಿತ್ತು. ಅದನ್ನು ತೆರೆದು ನೋಡಿದಾಗ, ತಾವೇ ನೀಡಿದ್ದ ಪಾಸ್‌ಪೋರ್ಟ್, ಫೋಟೋ, ಆನ್ವಲಪ್ ನೋಡಿ ಅವರು ಶಾಕ್ ಆಗಿದ್ದರು. ಆಗ, ತಾವು ಮೋಸ ಹೋಗಿರುವ ಬಗ್ಗೆ ಉದ್ಯೋಗಕಾಂಕ್ಷಿಗಳಿಗೆ ಮನವರಿಕೆಯಾಗಿದೆ. ಸದ್ಯ ಸಂಸ್ಥೆಯ ವಿರುದ್ಧ ಸಂತ್ರಸ್ತರು ಕದ್ರಿ ಪೊಲೀಸ್ ಠಾಣೆಯಲ್ಲಿ ಸಂಸ್ಥೆಯ ಪ್ರಮುಖ ಮಸೀಉಲ್ಲಾ ಅತೀಉಲ್ಲಾ ಖಾನ್, ಗ್ರೆಟಲ್ ಕ್ವಾಡ್ರಸ್, ಅಶ್ವಿನಿ ಆಚಾರ್ಯ ವಿರುದ್ಧ ದೂರು ನೀಡಿದ್ದಾರೆ. ಅದರಂತೆ, ಪ್ರಕರಣ ದಾಖಲಾಗಿದೆ. ಪ್ರಮುಖ ಆರೋಪಿ ಅತೀಉಲ್ಲಾ ಖಾನ್ ಮುಂಬೈ ಮೂಲದವ ಎನ್ನಲಾಗಿದೆ.

















































error: Content is protected !!
Scroll to Top