ಉಡುಪಿಯಲ್ಲಿ ಜಿಲ್ಲಾ ಬಿಜೆಪಿ ವತಿಯಿಂದ ಜನಾಕ್ರೋಶ ಯಾತ್ರೆ

ರಾಜ್ಯ ಸರಕಾರದಿಂದ ಕರಾವಳಿಯ ಸಂಪೂರ್ಣ ನಿರ್ಲಕ್ಷ್ಯ – ವಿಜಯೇಂದ್ರ

ಉಡುಪಿ : ರಾಜ್ಯ ಕಾಂಗ್ರೆಸ್‌ ಸರಕಾರ ಕರಾವಳಿ ಕುರಿತು ಸಂಪೂರ್ಣವಾಗಿ ನಿರ್ಲಕ್ಷ್ಯ ತಾಳಿದೆ. ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದ ವೇಳೆ ಕರಾವಳಿ ಭಾಗಕ್ಕೆ 19,500 ಕೋಟಿ ರೂ. ವಿಶೇಷ ಅನುದಾನ ಒದಗಿಸಿದ್ದರು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಹೇಳಿದರು.

ಅವರು ಎ. 10ರಂದು ಬೆಲೆ ಏರಿಕೆ ವಿರೋಧಿಸಿ ಜಿಲ್ಲಾ ಬಿಜೆಪಿ ವತಿಯಿಂದ ಉಡುಪಿಯಲ್ಲಿ ನಡೆದ ಜನಾಕ್ರೋಶ ಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದರು.

ಬಿಜೆಪಿ ಸರಕಾರವಿದ್ದಾಗ ಅಭಿವೃದ್ಧಿಯಲ್ಲಿ ಗುಜರಾತ್ ಅನಂತರದ ಸ್ಥಾನ ಕರ್ನಾಟಕದ್ದಾಗಿತ್ತು. ಈಗ ಭ್ರಷ್ಟಾಚಾರದಲ್ಲಿ ಕರ್ನಾಟಕ ನಂಬರ್ ಒನ್ ಸ್ಥಾನಕ್ಕೆ ಏರಿದೆ. ಅದರ ಕೀರ್ತಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಸಲ್ಲುತ್ತದೆ ಎಂದು ಕುಟುಕಿದರು.

ರಾಜೀನಾಮೆ ನೀಡಬೇಕಿತ್ತು
ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರೇ ಕರ್ನಾಟಕ ಭ್ರಷ್ಟಾಚಾರದಲ್ಲಿ ನಂಬರ್ ವನ್‌ ಸ್ಥಾನದಲ್ಲಿದೆ ಎಂದಿದ್ದಾರೆ. ಸಚಿವ ಸುಧಾಕರ್ ಅವರು ಎರಡು ವರ್ಷದ ಅನಂತರ ಸರಕಾರ ಟೇಕಾಫ್ ಆಗಿದೆ ಅಂತಾರೆ. ಸರಕಾರದ ವೈಫಲ್ಯಕ್ಕೆ ಕಾಂಗ್ರೆಸ್‌ನವರ ಈ ಹೇಳಿಕೆಯೇ ಸಾಕ್ಷಿ ಎಂದು ಸುನಿಲ್‌ ಕುಮಾರ್‌ ಹೇಳಿದರು.

ಕಿವುಡು, ಕುರುಡು ರಾಜ್ಯ ಸರಕಾರದಿಂದಾಗಿ ಜನಸಾಮಾನ್ಯರಿಗೆ ಬದುಕಲು ಸಾಧ್ಯವಿಲ್ಲದಂತಾಗಿದೆ. ಸದನದಲ್ಲಿ ಹೋರಾಟ ಮಾಡಿದರೆ ಮಾರ್ಷಲ್ ಗಳ‌ ಮೂಲಕ ಹೊರ ಹಾಕುತ್ತಾರೆ. ದರ ಏರಿಕೆಯಿಂದ ಜನಸಾಮಾನ್ಯರು ಕಂಗಾಲಾಗಿದ್ದರೆ ರಾಜ್ಯ ಸಚಿವ ಸಂಪುಟದ ಸದಸ್ಯರು ಭ್ರಷ್ಟಾಚಾರದಲ್ಲಿ ಪೈಪೋಟಿ ನಡೆಸುತ್ತಿದ್ದಾರೆ ಎಂದು ಬಿಜೆಪಿ ನಾಯಕ ಶ್ರೀರಾಮುಲು ವ್ಯಂಗ್ಯವಾಡಿದರು.

ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ಮಾತನಾಡಿ, ಮುಂದಿನ ಬಾರಿ ನಾವು ಅಧಿಕಾರಕ್ಕೆ ಬರಲ್ಲಾಂತ ಕಾಂಗ್ರೆಸ್ ಗೆ ಸ್ಪಷ್ಟವಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಇಷ್ಟಾಚಾರ ಮತ್ತು ಭ್ರಷ್ಟಾಚಾರ ಮಾಡುತ್ತಿದೆ. ಪ. ಜಾತಿ, ಪಂಗಡಕ್ಕೆ ಮೀಸಲಿಟ್ಟ ಹಣ ದುರ್ಬಳಕೆ ಮಾಡಿದ್ದಾರೆ ಎಂದು ಹೇಳಿದರು.

ಜನಾಕ್ರೋಶ ಯಾತ್ರೆ ಅಂಗವಾಗಿ ಕಲ್ಸಂಕದಿಂದ ಕಡಿಯಾಳಿ ಬಿಜೆಪಿ ಕಚೇರಿವರೆಗೆ ಮೆರವಣಿಗೆ ನಡೆಯಿತು. ಪ್ರತಿಭಟನಾ ಮೆರವಣಿಗೆಗೆ ಮಾಜಿ ಶಾಸಕ ಹಾಲಾಡಿ ಶ್ರೀನಿವಾಸ್ ಶೆಟ್ಟಿ ಬಿಜೆಪಿ ಧ್ವಜವನ್ನು ಹಸ್ತಾಂತರ ಮೂಲಕ ಚಾಲನೆ ನೀಡಿದರು. ಬಿ.ವೈ ವಿಜಯೆಂದ್ರ ಎತ್ತಿಗಾಡಿಯಲ್ಲಿ ಕುಳಿತು ಸ್ವಲ್ಪ ದೂರ ಸಾಗಿ, ಅನಂತರ ಕಾರ್ಯಕರ್ತರ ಜೊತೆ ಕಾಲ್ನಡಿಗೆಯಲ್ಲಿ ಸಾಗಿದರು. ಯಾತ್ರೆಯಲ್ಲಿ ಉಡುಪಿ ಜಿಲ್ಲೆಯ ಶಾಸಕರು, ವಿವಿಧ ಸ್ತರದ ಬಿಜೆಪಿ ಜನಪ್ರತಿನಿಧಿಗಳು, ಪಕ್ಷದ ಮುಖಂಡರು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.









































































































error: Content is protected !!
Scroll to Top