ಕಾರ್ಕಳ : ಭಗವಾನ್ ಮಹಾವೀರರು ರಾಜ ಭೋಗಗಳನ್ನು ತ್ಯಜಿಸಿ ಅಹಿಂಸಾ ಮಾರ್ಗದ ಮೂಲಕ ಜೀವನ ಸಾಕ್ಷಾತ್ಕಾರಗೊಳಿಸಿದವರು. ಅಂತೆಯೇ ನಾವು ಅಹಿಂಸಾ ಮಾರ್ಗದಲ್ಲಿ ನಡೆದಾಗ ಜೀವನ ಸಾರ್ಥಕ್ಯವಾಗುವುದು ಎಂದು ಉಪ ತಹಶೀಲ್ದಾರ್ ಮಂಜುನಾಥ್ ನಾಯಕ್ ಹೇಳಿದರು. ಅವರು ಎ. 10 ರಂದು ಕಾರ್ಕಳ ತಾಲೂಕು ಕಚೇರಿಯಲ್ಲಿ ನಡೆದ ಮಹಾವೀರ ಜಯಂತಿ ಕಾರ್ಯಕ್ರಮದಲ್ಲಿ ದೀಪ ಬೆಳಗಿಸಿ, ಮಹಾವೀರರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.
2065 ವರ್ಷಗಳ ಹಿಂದೆ ಮಹಾವೀರರು ಬೋಧಿಸಿದ ತತ್ವಗಳ ಪರಿಪಾಲನೆಯಾದಲ್ಲಿ ಶಾಂತಿ, ನೆಮ್ಮದಿ ನೆಲೆಸಲು ಸಾಧ್ಯ. ಅಹಿಂಸೆ ಪರಮಧರ್ಮ ಎಂದು ಪ್ರತಿಪಾದಿಸುತ್ತಾ ಲೋಕಕ್ಕೆ ಶಾಂತಿಯ ಮಾರ್ಗವನ್ನು ತೋರಿದವರು ಮಹಾವೀರರು ಎಂದು ಮಂಜುನಾಥ್ ನಾಯಕ್ ಬಣ್ಣಿಸಿದರು. ಈ ಸಂದರ್ಭ ಹರಿಭಟ್, ಉಪ ನೊಂದಣಾಧಿಕಾರಿ ರೆಹಮಾನ್ ಹಾಗೂ ಕಚೇರಿ ಸಿಬ್ಬಂದಿ ಉಪಸ್ಥಿತರಿದ್ದರು.






























































