ಬೆಂಗಳೂರು : ಬಿಜೆಪಿಯ 18 ಶಾಸಕರನ್ನು ಆರು ತಿಂಗಳ ಕಾಲ ಅಮಾನತು ಮಾಡಿರುವ ಸ್ಪೀಕರ್ ಕ್ರಮವನ್ನು ಖಂಡಿಸಿ, ಅಮಾನತು ಹಿಂಪಡೆಯಲು ಒತ್ತಾಯಿಸಿ ಬೆಂಗಳೂರಿನ ವಿಧಾನಸೌಧದ ಕೆಂಗಲ್ ಹನುಮಂತಯ್ಯ ಪ್ರತಿಮೆ ಬಳಿ ಇಂದು ರಾಜ್ಯ ಬಿಜೆಪಿ ಧರಣಿ ನಡೆಸುತ್ತಿದೆ.
ಈ ಸಂದರ್ಭ ಮಾಧ್ಯಮದವರ ಜೊತೆ ಮಾತನಾಡಿದ ವಿಜಯೇಂದ್ರ, ಬಿಜೆಪಿಯ 18 ಶಾಸಕರ ಅಮಾನತು ಕ್ರಮ ಸಂವಿಧಾನಬಾಹಿರ. ವಿಧಾನಸಭೆಯ ಸ್ಪೀಕರ್ ಕಾಂಗ್ರೆಸ್ ಪಕ್ಷದ ಕೈಗೊಂಬೆಯಾಗಿ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು.
ಅಮಾನತು ಹಿಂಪಡೆಯುವುದಾಗಿ ಹೇಳಿಕೆ ನೀಡಿದ್ದ ಸ್ಪೀಕರ್ ಯಾತಕ್ಕೋಸ್ಕರ ಕಾಯುತ್ತಿದ್ದಾರೆ ಎಂದು ಪ್ರಶ್ನಿಸಿದ ವಿಜಯೇಂದ್ರ, ತಮ್ಮ ನಿರ್ಣಯ ಸಂವಿಧಾನ ವಿರೋಧಿ ಎಂಬುದು ಸ್ಪೀಕರ್ ಅವರಿಗೂ ಅರ್ಥವಾಗಿದೆ. ಆದರೂ ಆಡಳಿತ ಪಕ್ಷದ ಒತ್ತಡಕ್ಕೆ ಮಣಿದು ಸ್ಪೀಕರ್ ಅವರು ವರ್ತಿಸುತ್ತಿದ್ದಾರೆ ಎಂದರು.






































