ಕಂದಾಯ ದಾಖಲೆಗಳು ಮತ್ತು ಹಕ್ಕು ಪತ್ರಗಳ ನಡುವಿನ ವ್ಯತ್ಯಾಸ

ಯಾವುದೇ ಸ್ತಿರಾಸ್ತಿ ಅಂದರೆ ಭೂಮಿ ಅಥವಾ ಕಟ್ಟಡಗಳಿಗೆ ಸಂಬಂಧಿಸಿದಂತೆ ಎರಡು ವಿಧದ ದಾಖಲೆಗಳಿರುತ್ತದೆ. ಮೊದಲನೆಯದಾಗಿ ಕಂದಾಯ ದಾಖಲೆಗಳು (ರೆವಿನ್ಯೂ ರೆಕಾರ್ಡ್ಸ್) ಮತ್ತು ಎರಡನೇಯದಾಗಿ ಹಕ್ಕು ಪತ್ರಗಳು (ಟೈಟಲ್ ಡೀಡ್ಸ್). ಕರ್ನಾಟಕ ಭೂಕಂದಾಯ ಕಾಯಿದೆ 1964ರ ಅನ್ವಯ ಕೃಷಿ ಭೂಮಿಗೆ ಸಂಬಂಧಪಟ್ಟಂತೆ ಖಾತೆ, ಸರ್ವೆ, ತೀರ್ವೆ ಕಂದಾಯ ವಸೂಲಾತಿಗಾಗಿ ಮತ್ತು ಕಂದಾಯ ಇಲಾಖೆಯ ವಿವಿಧ ಅಧಿಕಾರಿಗಳು ಕರ್ನಾಟಕ ಭೂಕಂದಾಯ ಕಾಯಿದೆಯ ಪ್ರಕಾರ ತಾವು ಹೊಂದಿರುವ ವಿವಿಧ ಜವಾಬ್ದಾರಿಗಳನ್ನು ಮತ್ತು ಅಧಿಕಾರವನ್ನು ಆಡಳಿತಾತ್ಮಕ ರೂಪದಲ್ಲಿ ಚಲಾಯಿಸಲು ಹಾಗೂ ಕೃಷಿಯೇತರ ನಿವೇಶನಗಳು ಮತ್ತು ಕಟ್ಟಡಗಳಿಗೆ ಸಂಬಂಧಪಟ್ಟಂತೆ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್‌ರಾಜ್ ಇಲಾಖೆಯವರು ಕಡ್ಡಾಯವಾಗಿ ನಿಗದಿತ ನಮೂನೆಯಲ್ಲಿ ಇರಿಸುವ ದಾಖಲೆಗಳನ್ನು ಕಂದಾಯ ದಾಖಲೆಗಳು ಎನ್ನುತ್ತಾರೆ. ಈ ರೀತಿಯ ಕಂದಾಯ ದಾಖಲೆಗಳಲ್ಲಿ ಜಮೀನು ಅಥವಾ ಕಟ್ಟಡಕ್ಕೆ ಸಂಬಂಧಪಟ್ಟ ವಿವರಗಳನ್ನು ಅಂದರೆ ಸರ್ವೆ ನಂಬ್ರ, ವಿಸ್ತೀರ್ಣ, ಮಾಲೀಕರ ಅಥವಾ ಅನುಭೋಗದಾರರ ಹೆಸರು, ಹಕ್ಕಿನ ಸ್ವರೂಪ, ಬೆಳೆಗಳ ವಿವರ, ಸ್ವತ್ತಿನ ಮೇಲಿನ ಋಣಭಾರ, ಸಾಲ ಮತ್ತು ಜವಾಬ್ದಾರಿಗಳ ಕುರಿತು ವಿವರವನ್ನು ನಮೂದಿಸಬೇಕಾಗುತ್ತದೆ.

ಕಂದಾಯ ದಾಖಲೆಗಳಲ್ಲಿ ನಮೂದಾಗಿರುವ ವಿವರಗಳಿಂದ ಒಬ್ಬ ವ್ಯಕ್ತಿ ತನ್ನ ಹೆಸರಲ್ಲಿ ಹೊಂದಿರುವ ಯಾವುದೇ ಭೂಮಿ ಅಥವಾ ಕಟ್ಟಡದ ಸ್ವಾಧೀನತೆ ಮತ್ತು ಹಿತಾಸಕ್ತಿಯನ್ನು ಪರಿಶೀಲಿಸಬಹುದಾಗಿದೆ ಮತ್ತು ಕಂದಾಯ ದಾಖಲೆಗಳ ನಮೂದುಗಳು ಊಹನಾತ್ಮಕ ಮೌಲ್ಯವನ್ನು ಹೊಂದಿರುತ್ತದೆ. ಆದರೆ ಕಂದಾಯ ದಾಖಲೆಗಳು ಯಾವುದೇ ಭೂಮಿ ಅಥವಾ ಕಟ್ಟಡದ ಮೇಲಿನ ಕಾನೂನುಬದ್ಧ ಮಾಲೀಕತ್ವವನ್ನು ನಿರ್ಧರಿಸುವ ದಾಖಲೆಗಳಾಗಿರುವುದಿಲ್ಲ. ಭೂಮಿ ಅಥವಾ ಕಟ್ಟಡದ ಮೇಲಿನ ಮಾಲಿಕತ್ವ ಅಥವಾ ಕಾನೂನುಬದ್ಧ ಹಕ್ಕು ಅಥವಾ ಹಿತಾಸಕ್ತಿಯನ್ನು ನಿರ್ಧರಿಸಬೇಕಾದರೆ ಸಂಬಂಧಪಟ್ಟ ಭೂಮಿ ಅಥವಾ ಕಟ್ಟಡದ ಹಕ್ಕು ಪತ್ರ, ಮೂಲ ದಾಖಲೆಗಳನ್ನು(ಟೈಟಲ್ ಡೀಡ್) ಪರಿಶೀಲಿಸಬೇಕಾಗಿರುವುದು ಅತ್ಯಂತ ಅವಶ್ಯಕವಾಗಿ ಇರುತ್ತದೆ. ಹಕ್ಕು ಪತ್ರ, ಮೂಲ ದಾಖಲೆಗಳು ಯಾವುದೆಂದರೆ ಭೂಮಿ ಅಥವಾ ಕಟ್ಟಡದ ಮೇಲೆ ವ್ಯಕ್ತಿಯೊಬ್ಬ ಹೊಂದುವ ಮಾಲಿಕತ್ವದ ದಾಖಲೆ ಅಂದರೆ ಕ್ರಯ ಪತ್ರ, ಸರಕಾರದಿಂದ ಅಥವಾ ಭೂನ್ಯಾಯ ಮಂಡಳಿಯಿಂದ ನೀಡಲ್ಪಟ್ಟ ಹಕ್ಕು ಪತ್ರ, ವ್ಯವಸ್ಥಾ ಪತ್ರ, ಹಕ್ಕು ಖುಲಾಸೆ ಪತ್ರ, ವೀಲುನಾಮೆ, ಶಾಶ್ವತಗೇಣಿ ಅಂದರೆ ಮೂಲಗೇಣಿ ಪತ್ರ ಇತ್ಯಾದಿಗಳು ಸೇರಿರುತ್ತವೆ. ಅದೇ ಪ್ರಕಾರ ಮೇಲ್ಕಾಣಿಸಿದ ದಾಖಲೆಗಳ ಮೂಲಕ ಒಬ್ಬ ವ್ಯಕ್ತಿ ಇನ್ನೊಬ್ಬ ವ್ಯಕ್ತಿಗೆ ಹಕ್ಕನ್ನು ಪರಾಭಾರೆ ಮಾಡಿರುವ ಸಂದರ್ಭದಲ್ಲಿ, ಹಕ್ಕನ್ನು ಪರಾಭಾರೆ ಮಾಡಿದ ವ್ಯಕ್ತಿ ತಾನು ಹೊಂದಿದ್ದ ಹಕ್ಕಿನ ಕುರಿತು ಮೂಲ ದಾಖಲೆಯನ್ನು ಪರಿಶೀಲಿಸುವುದರಿಂದ ಭೂಮಿ ಅಥವಾ ಕಟ್ಟಡದ ಸ್ವಾಧೀನತೆಯನ್ನು ಹೊಂದಿರುವ ವ್ಯಕ್ತಿ ಆತನ ದಾಖಲೆಯಲ್ಲಿ ನಮೂದಿಸಿದ ಆಸ್ತಿಯ ಮೇಲೆ ಸಂಪೂರ್ಣವಾದ ಮತ್ತು ಕಾನೂನುಬದ್ಧವಾದ ಹಕ್ಕನ್ನು ಹೊಂದಿರುವನೋ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಬಹುದಾಗಿದೆ.

ಯಾವುದೇ ಒಂದು ಭೂಮಿ ಅಥವಾ ಕಟ್ಟಡದ ಮೇಲಿನ ಕಾನೂನುಬದ್ಧ ಹಕ್ಕನ್ನು ಮತ್ತು ಮಾಲಿಕತ್ವವನ್ನು ನಿರ್ಧರಿಸಬೇಕಾದರೆ ಅದಕ್ಕೆ ಸಂಬಂಧಪಟ್ಟಂತೆ ಹಕ್ಕಿನ ಮೂಲ ಸ್ವರೂಪವನ್ನು ಅವಶ್ಯಕವಾಗಿ ಪರಿಶೀಲಿಸಬೇಕಾಗುತ್ತದೆ. ಅನೇಕ ಸಂದರ್ಭದಲ್ಲಿ ಭೂಮಿ ಅಥವಾ ಕಟ್ಟಡಕ್ಕೆ ಸಂಬಂಧಪಟ್ಟಂತೆ ಕಾನೂನುಬದ್ದ ಹಕ್ಕನ್ನು ಹೊಂದಿರುವ ವ್ಯಕ್ತಿಯ ಹೆಸರು ಕಂದಾಯ ದಾಖಲೆಗಳಲ್ಲಿ ನಮೂದಾಗದೆ ಇರುವ ಸಾಧ್ಯತೆ ಇರುತ್ತದೆ. ಭೂಮಿಯ ಮೇಲೆ ಯಾವುದೇ ರೀತಿಯ ಕಾನೂನುಬದ್ಧ ಹಕ್ಕನ್ನು ಹೊಂದಿರದ ವ್ಯಕ್ತಿಯ ಹೆಸರು ತಪ್ಪಾಗಿ ಕಂದಾಯ ದಾಖಲೆಗಳಲ್ಲಿ ನಮೂದಾಗಿರುವ ಸಾಧ್ಯತೆ ಸಹಾ ಇರುತ್ತದೆ. ಯಾವುದೇ ಭೂಮಿಯ ಮೇಲಿನ ಕಾನೂನುಬದ್ಧ ಮಾಲಿಕತ್ವದ ಹಕ್ಕನ್ನು (ಟೈಟಲ್) ನಿರ್ಧರಿಸುವ ಅಧಿಕಾರ ಕಂದಾಯ ಅಧಿಕಾರಿಗಳಿಗೆ ಅಥವಾ ನೋಂದಣಾಧಿಕಾರಿಗಳಿಗೆ ಇರುವುದಿಲ್ಲ. ಕಂದಾಯ ದಾಖಲೆಗಳಲ್ಲಿ ನಮೂದಾಗಿರುವ ವ್ಯಕ್ತಿಗಳ ಹೆಸರು ಅಥವಾ ಇತರ ವಿವರಗಳನ್ನು ರದ್ದುಗೊಳಿಸುವ ಅಥವಾ ತಿದ್ದುಪಡಿ ಮಾಡುವ ಅಧಿಕಾರವನ್ನು ಭೂಕಂದಾಯ ಅಧಿನಿಯಮದ ಪ್ರಕಾರ ಸಂಬಂಧಪಟ್ಟ ಕಂದಾಯ ಅಧಿಕಾರಿಗಳಿಗೆ ನೀಡಲಾಗಿರುತ್ತದೆ. ಆದರೆ ಯಾವುದೇ ಭೂಮಿ ಅಥವಾ ಕಟ್ಟಡದ ಮೇಲಿನ ಮಾಲಿಕತ್ವ ಅಥವಾ ಒಡೆತನದ ಬಗ್ಗೆ ಪಕ್ಷಗಾರರೊಳಗೆ ವಿವಾದ ಉಂಟಾದಲ್ಲಿ ಪಕ್ಷಗಾರರು ಸಂಬಂಧಪಟ್ಟ ಸಿವಿಲ್ ನ್ಯಾಯಾಲಯದಲ್ಲಿ ತಮ್ಮ ಮಾಲಿಕತ್ವ ಅಥವಾ ಒಡೆತನದ ಹಕ್ಕನ್ನು ಸಾಭೀತುಪಡಿಸಬೇಕಾಗುತ್ತದೆ ಹೊರತು ಈ ಸಂದರ್ಭದಲ್ಲಿ ಕಂದಾಯ ದಾಖಲೆಗಳಲ್ಲಿ ನಮೂದಾಗಿರುವ ವಿವರಗಳು ಪಕ್ಷಗಾರರಿಗೆ ಸಹಕಾರಿಯಾಗುವುದಿಲ್ಲ. ಆದುದರಿಂದ ಯಾವುದೇ ಭೂಮಿ ಅಥವಾ ಕಟ್ಟಡವನ್ನು ಖರೀದಿಸುವ ಸಂದರ್ಭದಲ್ಲಿ ಖರೀದಿದಾರರು ಮಧ್ಯವರ್ತಿಗಳ ಅಮಿಷಕ್ಕೆ ಬಲಿಯಾಗದೇ ಭೂಮಿಗೆ ಸಂಬಂಧಪಟ್ಟ ಹಕ್ಕಿನ ಕುರಿತಾದ ಎಲ್ಲಾ ಮೂಲ ದಾಖಲೆಗಳನ್ನು (ಟೈಟಲ್ ಡೀಡ್ಸ್) ಮತ್ತು ಕಂದಾಯ ದಾಖಲೆಗಳನ್ನು ಪರಿಶೀಲಿಸಿ ಕಾನೂನು ತಜ್ಞರಿಂದ ಸೂಕ್ತ ಸಲಹೆ ಪಡೆದು ಖರೀದಿ ವ್ಯವಹಾರವನ್ನು ನಡೆಸುವುದರಿಂದ ಖರೀದಿಸುವ ಭೂಮಿ ಅಥವಾ ಕಟ್ಟಡದ ಮೇಲಿನ ಮಾಲಿಕತ್ವದ ಬಗ್ಗೆ ಮುಂದೆ ಯಾವುದೇ ಸಮಸ್ಯೆಗಳು ಉದ್ಭವಿಸುವುದಿಲ್ಲ.































































































error: Content is protected !!
Scroll to Top