ರಸ್ತೆ ತುಂಡರಿಸಿ ಪೈಪ್ ಅಳವಡಿಕೆ – ಸಾರ್ವಜನಿಕರಿಗೆ ತಪ್ಪದ ತೊಂದರೆ
ಕಾರ್ಕಳ : ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅವಾಂತರದಿಂದ ಕಾರ್ಕಳ ನಗರದಲ್ಲಿ ಸಂಚರಿಸುವುದೇ ಕಷ್ಟಕರವಾಗಿದೆ. ಪುರಸಭಾ ವ್ಯಾಪ್ತಿಯಲ್ಲಿ ನೀರಿನ ಪೂರೈಕೆಯಲ್ಲಿನ ಹಳೆ ವ್ಯವಸ್ಥೆ ಬದಲಾಯಿಸಿ ಸುಧಾರಿತ ವ್ಯವಸ್ಥೆ ಕಾರ್ಯಗತಗೊಳಿಸುವ ಹಿನ್ನೆಲೆಯಲ್ಲಿ (ಅಮೃತ್ ಯೋಜನೆ -2) ಅಸಮರ್ಪಕವಾಗಿ ಪೈಪ್ ಲೈನ್ ಕಾಮಗಾರಿ ನಡೆಸಲಾಗಿತ್ತು. ಪೈಪ್ ಅಳವಡಿಕೆ ಬಳಿಕ ಗುಂಡಿಯನ್ನು ಸಮರ್ಪಕವಾಗಿ ಮುಚ್ಚದೇ, ಅರೆಬರೆ ಕಾಮಗಾರಿ ನಡೆದಿತ್ತು. ಸೂಕ್ತ ಪೂರ್ವ ಸಿದ್ಧತೆಯಾಗಲಿ, ಮುಂದಾಲೋಚನೆಯಾಗಲಿ ಇಲ್ಲದೇ ಆದ ಕಾಮಗಾರಿಯಿಂದ ಡ್ರೈನೇಜ್ ಪೈಪ್ ಡ್ಯಾಮೇಜ್ ಸೇರಿದಂತೆ ಸಾಕಷ್ಟು ಅವಾಂತರ ಆಗಿತ್ತು. ಮಣ್ಣು ಅಗೆದ ಬಳಿಕ ನೀರು ಸಿಂಪಡಿಸದ ಕಾರಣ ಕಾರ್ಕಳ ನಗರ ಧೂಳುಮಯವಾಗಿತ್ತು.
ಇದೀಗ ಪೈಪ್ ಅಳವಡಿಕೆಗೆ ರಸ್ತೆಯನ್ನೇ ತುಂಡರಿಸಲಾಗುತ್ತಿದೆ. ದಾನಶಾಲೆ, ಆನೆಕೆರೆ ರಸ್ತೆ, ಸದಾನಂದ ಕಾಮತ್ ರಸ್ತೆ, ಕಾಳಿಕಾಂಬಾ ಕರಿಯಕಲ್ಲು ರಸ್ತೆ, ತೆಳ್ಳಾರು ರಸ್ತೆ ಹೀಗೆ ನಗರದ ಪ್ರಮುಖ ಡಾಮಾರು ಹಾಗೂ ಕಾಂಕ್ರೀಟ್ ರಸ್ತೆಗಳನ್ನು ತುಂಡರಿಸಲಾಗುತ್ತಿದೆ. ರಸ್ತೆ ತುಂಡರಿಸಲಾಗುತ್ತಿದೆಯೇ ಹೊರತು ಅದನ್ನು ಸಮರ್ಪಕವಾದ ರೀತಿಯಲ್ಲಿ ಮುಚ್ಚಲಾಗುತ್ತಿಲ್ಲ. ಇದರಿಂದ ವಾಹನ ಚಾಲಕರಿಗೆ ಮುಖ್ಯವಾಗಿ ದ್ವಿಚಕ್ರ ಹಾಗೂ ಆಟೋ ಚಾಲಕರಿಗೆ ಸಂಚರಿಸಲು ತ್ರಾಸದಾಯಕವಾಗಿದೆ.

ಕಬ್ಬಿಣದ ರಾಡ್
ಕಾಂಕ್ರೀಟ್ ರಸ್ತೆಯನ್ನು ತುಂಡರಿಸಿದ ಕಾರಣ ಅದರಲ್ಲಿನ ಕಬ್ಬಿಣದ ರಾಡ್ಗಳು ಮೇಲೆದ್ದಿದೆ. ಅದರ ಮೇಲೆ ವಾಹನಗಳು ಸಾಗುತ್ತಿದ್ದು ಟೈರ್ ಪಂಚರ್ ಆಗುವ ಸಂಭವವಿದೆ. ಹೊಂಡಾಗುಂಡಿಯಿಂದ ಆಟೋ ಚಾಲಕರು ದುಡಿದ ಹಣ ಆಟೋ ದುರಸ್ತಿಗೆ ವಿನಿಯೋಗ ಮಾಡಬೇಕಾಗಿದೆ ಎಂದು ಆಟೋ ಚಾಲಕರು ತಮ್ಮ ಅಳಲು ತೋಡಿಕೊಳ್ಳುತ್ತಾರೆ. ಪಾದಚಾರಿಗಳು, ದ್ವಿಚಕ್ರ ಸವಾರರು ಹಿಡಿಶಾಪ ಹಾಕಿ ಮುಂದುವರಿಯುತ್ತಿದ್ದಾರೆ.
ಶಾಪಗ್ರಸ್ತ ರಸ್ತೆ
ಆನೆಕೆರೆ ದಾನಶಾಲೆ ರಸ್ತೆಯು 27 ವರ್ಷಗಳ ಹಿಂದೆ ನಿರ್ಮಾಣವಾದ ಕಾರ್ಕಳದ ಪ್ರಥಮ ಕಾಂಕ್ರೀಟ್ ರಸ್ತೆ. ಇದೊಂದು ಶಾಪಗ್ರಸ್ತ ರಸ್ತೆ. ಪೈಪ್ ಅಳವಡಿಕೆಗಾಗಿ ಈ ರಸ್ತೆಯ ಎರಡು ಬದಿಯನ್ನು ತುಂಡರಿಸಲಾಗಿದೆ. ತುಂಡರಿಸಿದ ಒಂದು ಮಗ್ಗುಲಿನ ರಸ್ತೆ ಸರಿಪಡಿಸಲು ಎರಡು ವರ್ಷವಾಗಿದೆ. ಇದೀಗ ರಸ್ತೆಯ ಇನ್ನೊಂದು ಬದಿಯನ್ನೂ ತುಂಡರಿಸಿದ್ದು ಅದು ಸರಿಯಾಗಲು ಇನ್ನೆಷ್ಟು ವರ್ಷ ಬೇಕಾಗುವುದೋ ..
-ಪ್ರಕಾಶ್ ರಾವ್
ಸಾಮಾಜಿಕ ಮುಂದಾಳು






























































