ಗ್ಯಾರಂಟಿಗಳಿಗೆ ಹಣದ ಹೊಳೆ ಹರಿಸುವ ಸರಕಾರ ಅಭಿವೃದ್ಧಿಗೆ ಕೊಡುತ್ತಿಲ್ಲ – ನವೀನ್ ನಾಯಕ್
ಕಾರ್ಕಳ : ಚುನಾವಣೆಯಲ್ಲಿ ಅಧಿಕಾರ ಹಿಡಿಯಲು ಘೋಷಿಸಿದ ಗ್ಯಾರಂಟಿ ಯೋಜನೆಗಳಿಗೆ ಹಣದ ಹೊಳೆ ಹರಿಸುತ್ತಿರುವ ರಾಜ್ಯದ ಕಾಂಗ್ರೆಸ್ ಸರಕಾರ ಅಭಿವೃದ್ದಿ ಕಾರ್ಯಗಳಿಗೆ ಹಣ ನೀಡದೆ ವಂಚಿಸುತ್ತಿದೆ. ಬೃಹತ್ ನೀರಾವರಿ ಇಲಾಖೆಯಿಂದ ತಾಲೂಕಿನ ಅಭಿವೃದ್ದಿಗೆ 16 ಕೋ.ರೂ. ಬಿಡುಗಡೆಯಾಗಬೇಕಿದ್ದು, ಆ ಹಣವನ್ನು ಸರಕಾರ ತಡೆ ಹಿಡಿದಿದೆ. ಈ ಕೂಡಲೆ ಹಣ ಬಿಡುಗಡೆಗೊಳಿಸಬೇಕೆಂದು ಕಾರ್ಕಳ ಬಿಜೆಪಿ ಕ್ಷೇತ್ರಾಧ್ಯಕ್ಷ ನವೀನ್ ನಾಯಕ್ ಆಗ್ರಹಿಸಿದ್ದಾರೆ.
ನಿಕಟಪೂರ್ವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರಕಾರದ 2022-23ನೇ ಸಾಲಿನಲ್ಲಿ ಕಾರ್ಕಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅಭಿವೃದ್ಧಿ ಕಾಮಗಾರಿಗಳಿಗೆ ಬೃಹತ್ ನೀರಾವರಿ ಇಲಾಖೆಯಿಂದ (ವಾರಾಹಿ) 16 ಕೋ.ರೂ. ಮಂಜೂರಾತಿ ನೀಡಿತ್ತು. ಟೆಂಡರ್ ಪ್ರಕ್ರೀಯೆಯೂ ನಡೆದಿದೆ. ಆದರೆ ಕಾಮಗಾರಿ ಕೈಗೆತ್ತಿಕೊಳ್ಳಲು ಕಾಂಗ್ರೆಸ್ ಸರಕಾರ ಹಣ ಬಿಡುಗಡೆಗೊಳಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ.

ಹಣವಿಲ್ಲದೆ ಕಾಮಗಾರಿಗಳು ನಡೆಯದೆ ಗ್ರಾಮೀಣ ಭಾಗದ ಜನ ಇಕ್ಕಟ್ಟಿಗೆ ಸಿಲುಕಿದ್ದಾರೆ. ಬೃಹತ್ ನೀರಾವರಿ ಸೇರಿ ಕ್ಷೇತ್ರಕ್ಕೆ ಸುಮಾರು 75 ಕೋ. ರೂ. ಅಧಿಕ ಮೊತ್ತದ ಅನುದಾನ ಬಿಡುಗಡೆಯಾಗಬೇಕಿದೆ. ಇದೆಲ್ಲದಕ್ಕೂ ತಡೆ ನೀಡಿರುವ ಕಾಂಗ್ರೆಸ್ ಸರಕಾರ ಕ್ಷೇತ್ರದ ಅಭಿವೃದ್ದಿಯಲ್ಲಿ ತಾರತಮ್ಯ ಮಾಡುತ್ತಿದೆ ಎಂದು ಕಿಡಿಕಾರಿದ್ದಾರೆ.
ಶಾಸಕ ವಿ.ಸುನಿಲ್ ಕುಮಾರ್ ಸಚಿವರಾಗಿದ್ದ ವೇಳೆ ನಿರಂತರ ಪ್ರಯತ್ನದಿಂದ ಕ್ಷೇತ್ರಕ್ಕೆ ಸಾಕಷ್ಟು ಅನುದಾನಗಳು ಲಭ್ಯವಾಗಿ ಅಭಿವೃದ್ದಿ ಕೆಲಸಗಳಾಗಿವೆ. ಕಾಂಗ್ರೆಸ್ ಸರಕಾರ ಬಂದ ಬಳಿಕ ಕ್ಷೇತ್ರದ ಅಭಿವೃದ್ದಿಗೆ ಕಿಂಚಿತ್ತು ಹಣ ಬಿಡುಗಡೆಯಾಗಿಲ್ಲ. ಸುನಿಲ್ ಕುಮಾರ್ ಕ್ಷೇತ್ರಕ್ಕೆ ಮಂಜೂರಾತಿಗೊಳಿಸಿದ ಹಣ ಬಿಡುಗಡೆಗೊಳಿಸುವಂತೆ ಮತ್ತು ಕ್ಷೇತ್ರದ ಅಭಿವೃದ್ದಿಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡುವಂತೆ ಈಗಾಗಲೇ ಕಾಂಗ್ರೆಸ್ ಸರಕಾರದ ಮೇಲೆ ಒತ್ತಡ ಹೇರಿದ್ದೇವೆ. ಹಿಂದಿನ ಸರಕಾರದ ಅವಧಿಯಲ್ಲಿ ಟೆಂಡರ್ ನಡೆದು ತಡೆಹಿಡಿದ ಬಾಕಿ ಹಣದ ಬಿಡುಗಡೆಯ ನಿರೀಕ್ಷೆಯಲ್ಲಿ ಕ್ಷೇತ್ರದ ಜನರಿದ್ದಾರೆ ಎಂದಿದ್ದಾರೆ.






























































