ದಿಲ್ಲಿ- ಲಾಹೋರ್‌ ಬಸ್‌ ಓಡಿಸಿದ ಚಾಲಕರೊಂದಿಗೆ ಪ್ರಯಾಗ್‌ರಾಜ್‌ಗೆ ಪ್ರಯಾಣ

ಕಾರ್ಕಳ : ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳಕ್ಕೆ ಹೋಗಿ ಪುಣ್ಯಸ್ನಾನ ಮಾಡಿದವರು ಒಂದೊಂದು ಅನುಭವದ ಮೂಟೆ ಹೊತ್ತುಕೊಂಡು ಬಂದಿದ್ದಾರೆ. ಅದರಂತೆ ಕಾರ್ಕಳದಿಂದ ಹೋದ ಯೋಗೀಶ್ ಹೆಗ್ಡೆ ಅತ್ತೂರು, ಸುಶಾಂತ್ ಬಜಗೋಳಿ, ಸಂದೀಪ್ ಕುಮಾರ್ ಮಾರ್ನಾಡ್, ಶಶಿಧರ ಕಂಟೆಬೆಟ್ಟು, ವಿಕಾಸ್ ಹೆಗ್ಡೆ ಹೆಬ್ರಿ, ರಂಜಿತ್ ಶೆಟ್ಟಿ ಮಂಗಳೂರು, ಸುಕೇಶ್ ಹೆಗ್ಡೆ ಎರ್ಲಪಾಡಿ, ಸೂರಜ್ ಹೆಗ್ಡೆ ಮಂಗಳೂರು, ಶಶಿಧರ ಎಸ್. ಹೆಗ್ಡೆ ರೆಂಜಾಳ, ಅಕ್ಷಯ ಹೆಗ್ಡೆ ಮೂಡುಬಿದಿರೆ, ರಾಕೇಶ್ ಹೆಗ್ಡೆ ಬಳಂಜ, ಸದಾಶಿವ ಹೆಗ್ಡೆ ಬೆಂಗಳೂರು, ಉದಯ್ ಹೆಗ್ಡೆ ಬೆಂಗಳೂರು, ಪ್ರಕಾಶ್ ಹೆಗ್ಡೆ ಬೆಂಗಳೂರು, ಶಿವ ಹೆಗ್ಡೆ ಬೆಂಗಳೂರು, ಧನಂಜಯ್ ಹೆಗ್ಡೆ ಬೆಂಗಳೂರು ತಂಡಕ್ಕೆ ಒಂದು ವಿಶಿಷ್ಟ ಅನುಭವವಾಗಿದೆ. ಈ ತಂಡ ಪ್ರಯಾಣಿಸಿದ ಬಸ್‌ನ ಚಾಲಕನಾಗಿದ್ದವರು ಒಂದು ಕಾಲದಲ್ಲಿ ಪಾಕಿಸ್ಥಾನಕ್ಕೆ ಭಾರತದ ಸೌಹಾರ್ದ ಬಸ್‌ ಓಡಿಸುತ್ತಿದ್ದ ಚಾಲಕ. ಈ ಅನುಭವವನ್ನು ತಂಡದವರು ನ್ಯೂಸ್‌ ಕಾರ್ಕಳ ಜೊತೆ ಹಂಚಿಕೊಂಡಿದ್ದಾರೆ.

65 ವರ್ಷದ ಸುನಿಲ್‌ ಕುಮಾರ್‌ ಸಿಂಗ್‌
ಪ್ರಯಾಗ್ ಹಾಗೂ ಕಾಶಿ ತೀರ್ಥಕ್ಷೇತ್ರದ ದೈವಿಕ ಅನುಭವದಲ್ಲಿ ನಮ್ಮ ಬಸ್ ಚಾಲಕನ ಬಗ್ಗೆ ಹೇಳದಿದ್ದರೆ ಅಪೂರ್ಣವಾಗುವುದು. ಅಟಲ್‌ ಬಿಹಾರಿ ವಾಜಪೇಯಿ ಪ್ರಧಾನಮಂತ್ರಿಯಾಗಿದ್ದ ಹಾಗೂ ನವಾಬ್ ಶರೀಫ್ ಪಾಕಿಸ್ಥಾನದ ಪ್ರಧಾನಮಂತ್ರಿಯಾಗಿದ್ದಾಗ ಎರಡು ದೇಶಗಳ ನಡುವೆ ಮೈತ್ರಿ ವೃದ್ಧಿಗಾಗಿ ದಿಲ್ಲಿ- ಲಾಹೋರ್‌ ನಡುವೆ ʼಸದಾ-ಎ-ಸರಹದ್ʼ ಎನ್ನುವ ಹೆಸರಲ್ಲಿ ವಾರದಲ್ಲಿ ಒಂದು ಬಾರಿಯಂತೆ ಬಸ್ ಸಂಚಾರವನ್ನು ಪ್ರಾರಂಭಿಸಲಾಗಿತ್ತು. ದಿಲ್ಲಿಯಿಂದ ಹೊರಡುತ್ತಿದ್ದ ಈ ಡಿಟಿಡಿಸಿ ವೋಲ್ವೊ ಬಸ್ ಚಾಲಕರಾಗಿದ್ದವರು ಸುನಿಲ್ ಕುಮಾರ್ ಸಿಂಗ್. ಈಗ ಅವರಿಗೆ 65 ವರ್ಷ. ಸುಮಾರು 40 ವರ್ಷ ವಿವಿಧ ಸಾಮರ್ಥ್ಯದ ವಾಹನಗಳನ್ನು ಚಲಾಯಿಸಿದ ಅನುಭವ. ಡ್ರೈವಿಂಗ್‌ನಲ್ಲಿ ವಿಶೇಷ ಪರಿಣತಿಯನ್ನು ಹೊಂದಿದ್ದಾರೆ. ಯುವಕರನ್ನು ನಾಚಿಸುವಂತಹ ಶಕ್ತಿ, ಸಾಮರ್ಥ್ಯ ಹಾಗೂ ತಾಳ್ಮೆ ಅವರದು.

ನಮ್ಮ ತಂಡದ ಹತ್ತು ಮಂದಿ ಬೆಂಗಳೂರಿನಿಂದ ಮತ್ತು ಆರು ಮಂದಿ ಮಂಗಳೂರಿನಿಂದ ಹೊರಟು ದೆಹಲಿ ವಿಮಾನ ನಿಲ್ದಾಣ ತಲುಪಿದೆವು. ಅಲ್ಲಿಂದ ನಾವು ಅದಾಗಲೇ ಬುಕ್ ಮಾಡಿದ್ದ ಏರ್ ಕಂಡೀಶನ್ ಬಸ್ಸಿನಲ್ಲಿ ಪ್ರಯಾಗ್ – ಕಾಶಿಯ ಪ್ರಯಾಣ ಆರಂಭಿಸಿದೆವು. ನಿಲ್ದಾಣದಲ್ಲಿ ನಮ್ಮ ಬಸ್ ಚಾಲಕ 65 ವರ್ಷದ ಸುನಿಲ್ ಕುಮಾರ್ ಸಿಂಗ್ ನಮ್ಮನ್ನು ಆತ್ಮೀಯವಾಗಿ ಬರಮಾಡಿಕೊಂಡರು. ಈ ವಯಸ್ಸಿನ ಚಾಲಕರೊಬ್ಬರು ಏಕಾಂಗಿಯಾಗಿ ನಮ್ಮನ್ನು ಅಷ್ಟು ದೂರ ಪ್ರಯಾಣಕ್ಕೆ ಕೊಂಡೊಯ್ಯುವವರಾಗಿದ್ದರು. ನಮ್ಮ ಮನಸ್ಸಿನಲ್ಲಿ ಒಂದು ರೀತಿಯ ಸಂಶಯ ಮೂಡಿತ್ತಾದರೂ ಮತ್ತು ಅದೇ ಒಂದು ಸ್ವಾರಸ್ಯಕರ ಘಟನೆ ಮತ್ತು ಅವಿಸ್ಮರಣೀಯವಾಯಿತು.

ದೆಹಲಿಯಿಂದ ಪ್ರಯಾಗ್‌ಗೆ 680 ಕಿಲೋ ಮೀಟರ್ ದೂರ. 14ರಿಂದ 15 ಗಂಟೆಗಳ ಪ್ರಯಾಣ, ಮಾರ್ಗದುದ್ದಕ್ಕೂ ಯಾರನ್ನು ನೋಡಿದರೂ, ಯಾವ ವಾಹನವನ್ನು ನೋಡಿದರೂ ಪ್ರಯಾಗದ ಕಡೆ ಸಾಗುತ್ತಿದೆಯೇನೋ ಎನ್ನುವ ಅನುಭೂತಿ. ಪ್ರಯಾಣದುದ್ದಕ್ಕೂ ಹಳೆಯ ನೆನಪುಗಳನ್ನು ಕೆದುಕುತ್ತಾ, ಹಾಸ್ಯ ಚಟಾಕಿ, ಭಜನೆ ಜೊತೆಗೆ ಕುಂಭದ ಹಿನ್ನೆಲೆ, ಇತಿಹಾಸ ಓದಿದ ಅನುಭವಗಳು ಇವುಗಳನ್ನೆಲ್ಲ ಚರ್ಚಿಸುತ್ತಾ ಮುಂದೆ ಸಾಗಿದೆವು. ದಿಲ್ಲಿ-ಲಾಹೋರ್‌ ನಡುವೆ ಸದಾ-ಎ-ಸರಹದ್ ಬಸ್‌ ಓಡಿಸಿದ ಚಾಲಕನೇ ನಮ್ಮನ್ನು ಪ್ರಯಾಗ್‌ರಾಜ್‌ಗೆ ಕರೆದುಕೊಂಡು ಹೋಗಿರುವುದು ವಿಶೇಷ.









































































































error: Content is protected !!
Scroll to Top