ವಿಕೇಂದ್ರೀಕರಣ ಕೇವಲ ಪರಿಕಲ್ಪನೆಯಲ್ಲ, ಕರ್ನಾಟಕದಲ್ಲಿ ವಾಸ್ತವವಾಗಿದೆ – ಸಿದ್ದರಾಮಯ್ಯ
ಬೆಂಗಳೂರು : ಭಾರತೀಯ ಸಾರ್ವಜನಿಕ ಆಡಳಿತ ಸಂಸ್ಥೆ (ಐಐಪಿಎ) ಮತ್ತು ಪಂಚಾಯತ್ ರಾಜ್ ಸಚಿವಾಲಯದ ಅಧ್ಯಯನದ ಪ್ರಕಾರ ಪಂಚಾಯಿತಿಗಳಿಗೆ ಅಧಿಕಾರ ವಿಕೇಂದ್ರೀಕರಣ ಶ್ರೇಯಾಂಕದಲ್ಲಿ ಕರ್ನಾಟಕ (72.23) ಮೊದಲ ಸ್ಥಾನದಲ್ಲಿದೆ.
ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಸಿಎಂ ಸಿದ್ಧರಾಮಯ್ಯ ಭಾರತೀಯ ಸಾರ್ವಜನಿಕ ಆಡಳಿತ ಸಂಸ್ಥೆ (IIPA) ಮತ್ತು ಪಂಚಾಯತ್ ರಾಜ್ ಸಚಿವಾಲಯದ ಅಧ್ಯಯನದ ಪ್ರಕಾರ, ಪಂಚಾಯಿತಿಗಳಿಗೆ ಅಧಿಕಾರ ವಿಕೇಂದ್ರೀಕರಣ ಮಾಡಿರುವುದರಲ್ಲಿ ಕರ್ನಾಟಕವು 1ನೇ ಸ್ಥಾನದಲ್ಲಿದೆ. ಆರ್ಥಿಕ ಸ್ವಾಯತ್ತತೆ ಮತ್ತು ಹೊಣೆಗಾರಿಕೆಯಲ್ಲಿ ರಾಷ್ಟ್ರವನ್ನು ಮುನ್ನಡೆಸಿದೆ ಎಂದು ಹಂಚಿಕೊಳ್ಳಲು ಹೆಮ್ಮೆಪಡುತ್ತೇನೆ ಎಂದು ಹೇಳಿದ್ದಾರೆ.

ಸಚಿವ ಪ್ರಿಯಾಂಕ್ ಖರ್ಗೆ ಅವರ ನೇತೃತ್ವದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಗ್ರಾಮೀಣ ಭಾಗದ ಪ್ರಗತಿಯನ್ನು ಹೆಚ್ಚಿಸಲು ಪಂಚಾಯಿತಿಗಳಿಗೆ ಸಂಪನ್ಮೂಲಗಳು ಮತ್ತು ಸ್ವಾಯತ್ತತೆ ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ವಿಕೇಂದ್ರೀಕರಣವು ಕೇವಲ ಪರಿಕಲ್ಪನೆಯಲ್ಲ-ಇದು ಕರ್ನಾಟಕದಲ್ಲಿ ವಾಸ್ತವವಾಗಿದೆ. ದೃಢವಾದ ಪಂಚಾಯತ್ ವ್ಯವಸ್ಥೆ ಎಂದರೆ ಬಲವಾದ ಗ್ರಾಮೀಣ ಅಭಿವೃದ್ಧಿ, ಸಹಭಾಗಿತ್ವದ ಪ್ರಜಾಪ್ರಭುತ್ವ ಮತ್ತು ಅಂತರ್ಗತ ಬೆಳವಣಿಗೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.
ಸಿದ್ದರಾಮಯ್ಯ ಅವರು ತಮ್ಮ ಪೋಸ್ಟ್ನೊಂದಿಗೆ ಹಂಚಿಕೊಂಡ ದಾಖಲೆಯಲ್ಲಿ, ಕರ್ನಾಟಕವು ಪಂಚಾಯಿತಿಗಳಿಗೆ ಅಧಿಕಾರ ವಿಕೇಂದ್ರೀಕರಣ ಮಾಡಿರುವುದರಲ್ಲಿ ಅನುದಾನ ಹಂಚಿಕೆ, ಕಾರ್ಯಗಳು ಮತ್ತು ಕಾರ್ಯನಿರ್ವಾಹಕರ ವಿಷಯದಲ್ಲಿ ಮೊದಲ ಸ್ಥಾನದಲ್ಲಿದೆ. ನಂತರ ಕೇರಳ, ತಮಿಳುನಾಡು, ಮಹಾರಾಷ್ಟ್ರ ಮತ್ತು ಉತ್ತರಪ್ರದೇಶ ಸ್ಥಾನ ಪಡೆದಿವೆ.






























































