ರಾಜಕೀಯ ಪಕ್ಷಗಳ ಉಚಿತ ಕೊಡುಗೆಗಳ ಘೋಷಣೆಗೆ ಸುಪ್ರೀಂ ಕೋರ್ಟ್ ಅಸಮ್ಮತಿ

ದೆಹಲಿ : ರಾಜಕೀಯ ಪಕ್ಷಗಳು ಚುನಾವಣೆಗೂ ಮುನ್ನ ಉಚಿತ ಕೊಡುಗೆಗಳನ್ನು ಘೋಷಿಸುವ ಪದ್ಧತಿಗೆ ಸುಪ್ರೀಂ ಕೋರ್ಟ್ ಫೆ.12ರಂದು ಅಸಮ್ಮತಿ ಸೂಚಿಸಿದೆ. ಉಚಿತ ಪಡಿತರ ಮತ್ತು ಹಣವನ್ನು ನೀಡುವುದರಿಂದ ಜನರು ಕೆಲಸ ಮಾಡಲು ಸಿದ್ಧರಿರುವುದಿಲ್ಲ ಎಂದು ಹೇಳಿದೆ.

ನಗರ ಪ್ರದೇಶಗಳಲ್ಲಿನ ನಿರಾಶ್ರಿತ ವ್ಯಕ್ತಿಗಳಿಗೆ ಆಶ್ರಯ ಕಲ್ಪಿಸುವ ಹಕ್ಕಿನ ಕುರಿತಾದ ಅರ್ಜಿಯ ವಿಚಾರಣೆ ನಡೆಸುತ್ತಿದ್ದ ನ್ಯಾಯಮೂರ್ತಿಗಳಾದ ಬಿಆರ್ ಗವಾಯಿ ಮತ್ತು ಅಗಸ್ಟಿನ್ ಜಾರ್ಜ್ ಮಸಿಹ್ ಅವರಿದ್ದ ಪೀಠ ಈ ರೀತಿ ಅಭಿಪ್ರಾಯಪಟ್ಟಿದೆ.
ದುರದೃಷ್ಟವಶಾತ್, ಈ ಉಚಿತಗಳಿಂದಾಗಿ ಜನರು ಕೆಲಸ ಮಾಡಲು ಸಿದ್ಧರಿರುವುದಿಲ್ಲ. ಬದಲಿಗೆ ಅವರು ಉಚಿತವಾಗಿ ನೀಡುವ ಪಡಿತರವನ್ನು ಪಡೆಯುತ್ತಿದ್ದಾರೆ ಮತ್ತು ಹಣವನ್ನು ಪಡೆಯುತ್ತಿದ್ದಾರೆ. ಹೀಗಾಗಿ ಅವರು ಯಾವುದೇ ಕೆಲಸ ಮಾಡುತ್ತಿಲ್ಲ ಎಂದು ನ್ಯಾಯಮೂರ್ತಿ ಗವಾಯಿ ಹೇಳಿದರು.

ಅವರ ಬಗ್ಗೆ ನಿಮ್ಮ ಕಾಳಜಿ ನಮಗೆ ಅರ್ಥವಾಗುತ್ತದೆ ಮತ್ತು ನಾವು ಅದನ್ನು ಶ್ಲಾಘಿಸುತ್ತೇವೆ. ಆದರೆ, ಅವರನ್ನು ಸಮಾಜದ ಮುಖ್ಯವಾಹಿನಿಗೆ ಕರೆತರುವುದು ಮತ್ತು ರಾಷ್ಟ್ರದ ಅಭಿವೃದ್ಧಿಗೆ ಕೊಡುಗೆ ನೀಡಲು ಅವರಿಗೆ ಅವಕಾಶ ನೀಡುವುದು ಉತ್ತಮವಾಗಿದೆ ಎಂದು ಪೀಠ ಹೇಳಿದೆ. ಕೇಂದ್ರ ಸರಕಾರವು ನಗರ ಬಡತನ ನಿರ್ಮೂಲನೆ ಅಭಿಯಾನ ಕೈಗೊಳ್ಳಲು ಕೊನೆಯ ಹಂತದ ಸಿದ್ಧತೆಯನ್ನು ಮಾಡಿಕೊಳ್ಳುತ್ತಿದೆ. ಇದರಿಂದ ನಗರ ಪ್ರದೇಶಗಳಳ್ಲಿನ ವಸತಿ ರಹಿತರಿಗೆ ಸೂರು ಒದಗಿಸುವುದು ಸೇರಿದಂತೆ ವಿವಿಧ ಸಮಸ್ಯೆಗಳು ದೂರಾಗಲಿವೆ ಎಂದು ಅಟಾರ್ನಿ ಜನರಲ್ ಆರ್ ವೆಂಕಟರಮಣಿ ಪೀಠಕ್ಕೆ ಮನವರಿಕೆ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಲಯ, ನಗರ ಬಡತನ ನಿರ್ಮೂಲನೆ ಅಭಿಯಾನವು ಪೂರ್ಣಗೊಳ್ಳಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂದು ಪರಿಶೀಲನೆ ನಡೆಸುವಂತೆ ಕೇಂದ್ರಕ್ಕೆ ಸೂಚಿಸಿತು. ಮುಂದಿನ ವಿಚಾರಣೆಯನ್ನು ಆರು ವಾರ ಮುಂದೂಡಿತು.





























































































































error: Content is protected !!
Scroll to Top