ಕಾರ್ಕಳ : ರಾಜ್ಯ ಸರಕಾರ ನಕ್ಸಲರಿಗೆ ಶರಣಾಗತಿ ಪ್ಯಾಕೇಜ್ ಘೋಷಿಸಿರುವುದರಿಂದ ರಾಜ್ಯದ ಬಹುತೇಕ ನಕ್ಸಲರು ಮುಖ್ಯವಾಹಿನಿಗೆ ಆಗಮಿಸಿದ್ದಾರೆ. ಫೆ. 2ರಂದು ಕುಂದಾಪುರ ಮೂಲದ ಲಕ್ಷ್ಮೀ ತೊಂಬಟ್ಟು ಉಡುಪಿ ಜಿಲ್ಲಾಧಿಕಾರಿ ಸಮ್ಮುಖದಲ್ಲಿ ಶರಣಾಗತಿಯಾಗಿದ್ದು ಇದರೊಂದಿಗೆ ಕರ್ನಾಟಕ ನಕ್ಸಲ್ ಮುಕ್ತ ರಾಜ್ಯವಾಗಿ ಗೋಚರಿಸುತ್ತಿದೆ. ಹೆಬ್ರಿ ತಾಲೂಕಿನ ನಾಡ್ಪಾಲು ಗ್ರಾಮದಲ್ಲಿ ನ. 17ರಂದು ನಕ್ಸಲ್ ನಾಯಕ ವಿಕ್ರಂ ಗೌಡ ಎನ್‌ಕೌಂಟರ್ ಅನಂತರ ಈ ಬೆಳವಣಿಗೆಗಳು ಕಂಡುಬಂದಿದೆ. ರಾಜ್ಯ ನಕ್ಸಲ್ ಮುಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ನಕ್ಸಲ್ ನಿಗ್ರಹಕ್ಕಾಗಿಯೇ ಅಸ್ತಿತ್ವಕ್ಕೆ ಬಂದಿರುವ ಎಎನ್‌ಎಫ್ (ನಕ್ಸಲ್ ನಿಗ್ರಹ ಪಡೆ)ಯ ಮುಂದಿನ ಕಾರ್ಯವೇನು ? ಎಂಬ ಬಗ್ಗೆ ಜಿಜ್ಞಾಸೆ ಮೂಡಿದೆ.
2005ರಲ್ಲಿ ಸ್ಥಾಪನೆ
ನಕ್ಸಲ್ ಚಟುವಟಿಕೆಯನ್ನು ನಿಗ್ರಹಿಸುವ ನಿಟ್ಟಿನಲ್ಲಿ ಮತ್ತು ನಕ್ಸಲ್ ಬಾಧಿತ ಪ್ರದೇಶದ ಜನರ ಸಮಸ್ಯೆಯನ್ನು ಸರಕಾರದ ಗಮನಕ್ಕೆ ತಂದು ಪರಿಹರಿಸುವ ಸಲುವಾಗಿ 2005 ಮೇ 21ರಂದು ರಾಜ್ಯ ಸರಕಾರದ ಆದೇಶದಂತೆ ಕಾರ್ಕಳದಲ್ಲಿ ಕೇಂದ್ರ ಸ್ಥಾನ ಸ್ಥಾಪಸಿ ರಾಜ್ಯದ ವಿವಿಧೆಡೆ 13 ಎಎನ್‌ಎಫ್ ತುಕಡಿಯನ್ನು ತೆರೆಯಲಾಗಿದೆ. ಕಾರ್ಕಳ ನಗರದ ಸ್ವರಾಜ್ ಮೈದಾನ ಬಳಿ ಎಎನ್‌ಎಫ್ ಕ್ಯಾಂಪ್ ಇದ್ದು, ಕಳೆದ 20 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದೆ.
ಕುಕ್ಕುಂದೂರಿನಲ್ಲಿ ತರಬೇತಿ ಕೇಂದ್ರ
ಎಎನ್‌ಎಫ್‌ಗೆ ಸಿಬ್ಬಂದಿಗೆ ತರಬೇತಿ ನೀಡುತ್ತಿರುವುದು ಕಾರ್ಕಳ ತಾಲೂಕು ಕುಕ್ಕುಂದೂರು ಗ್ರಾಮದ ತರಬೇತಿ ಕೇಂದ್ರದಲ್ಲಿ. ಇಲ್ಲಿ ಜೇಸಿಓ ಜಂಗಲ್ ಕಾಂಬೆಟ್ ಆಪರೇಷನ್ ಹೆಸರಿನಲ್ಲಿ ತರಬೇತಿ ನೀಡಲಾಗುತ್ತಿದ್ದು ಬಳಿಕ ಅಲ್ಲಿಂದ ಘಟಕಗಳಿಗೆ ನಿಯೋಜನೆ ಮಾಡಲಾಗುತ್ತಿದೆ.

ಕಾರ್ಕಳ ತಾಲೂಕಿನ ಈದು, ಮಾಳ, ನೂರಾಲ್‌ಬೆಟ್ಟು, ಅಂಡಾರು, ಶಿರ್ಲಾಲು, ಕೆರ್ವಾಶೆ, ಹೆಬ್ರಿ ತಾಲೂಕಿನ ವರಂಗ, ಕಬ್ಬಿನಾಲೆ, ನಾಡ್ಪಾಲು ಗ್ರಾಮಗಳನ್ನು ನಕ್ಸಲ್ ಪೀಡಿತ ಗ್ರಾಮಗಳನ್ನಾಗಿ ಗುರುತಿಸಲಾಗಿದ್ದು 2016ರವರೆಗೆ ಅಲ್ಲೊಂದು ಇಲ್ಲೊಂದು ನಕ್ಸಲ್ ಚಟುವಟಿಕೆ ಕಂಡುಬಂದಿತ್ತು. 2003ರಲ್ಲಿ ಮೊದಲ ಬಾರಿಗೆ ಕಾರ್ಕಳ ತಾಲೂಕಿನ ಈದು ಗ್ರಾಮದ ಬೊಲ್ಲೊಟ್ಟು ಎಂಬಲ್ಲಿ ನಕ್ಸಲ್ ಕೃತ್ಯ ಕಂಡು ಬಂದಿತ್ತು. ಅಂದು ಪೊಲೀಸರು ಹಾಗೂ ನಕ್ಸಲ್ ತಂಡದೊಂದಿಗೆ ಗುಂಡಿನ ಚಕಮಕಿಯಾಗಿದ್ದು, ನಕ್ಸಲರಾದ ಹಾಜಿಮಾ ಮತ್ತು ಪಾರ್ವತಿ ಹತರಾಗಿದ್ದರು. 2005ರಲ್ಲಿ ಹೆಬ್ರಿ ಠಾಣಾ ವ್ಯಾಪ್ತಿಯ ಮತ್ತಾವು ಎಂಬಲ್ಲಿ ಪೊಲೀಸ್ ಜೀಪು ಗುರಿಯಾಗಿಸಿ ನೆಲಬಾಂಬ್ ಸ್ಫೋಟಿಸಿದ್ದರು. ಇದರಿಂದ ಹೆಬ್ರಿ ಠಾಣಾ ಪೊಲೀಸರು ಗಾಯಗೊಂಡಿದ್ದರು. 2008ರಂದು ಹೆಬ್ರಿಯ ಸೀತಾನದಿ ಎಂಬಲ್ಲಿ ನಕ್ಸಲರು ಭೋಜ ಶೆಟ್ಟಿ ಹಾಗೂ ಸುರೇಶ್ ಶೆಟ್ಟಿ ಎಂಬವರ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆಗೈದಿದ್ದರು. 2010ರಂದು ಅಜೆಕಾರಿನ ಮೈರೋಡಿಯಲ್ಲಿ ನಕ್ಸಲರು ಮತ್ತು ಪೊಲೀಸರ ಮಧ್ಯೆ ನಡೆದ ಗುಂಡಿನ ಚಕಮಕಿಯಲ್ಲಿ ನಕ್ಸಲ್ ಕುತ್ಲೂರು ವಸಂತ ಮೃತಪಟ್ಟಿರುತ್ತಾನೆ. 2011ರಲ್ಲಿ ಹೆಬ್ರಿ ಠಾಣಾ ಸರಹದ್ದಿನ ತಿಂಗಳಮಕ್ಕಿ ಎಂಬಲ್ಲಿ ನಕ್ಸಲರು ಸದಾಶಿವ ಎಂಬವರನ್ನು ಪೊಲೀಸ್ ಮಾಹಿತಿದಾರ ಎಂದು ಭಾವಿಸಿ ಹತ್ಯೆಗೈದಿದ್ದಾರೆ.
2024ರ ನವೆಂಬರ್‌ನಲ್ಲಿ ನಕ್ಸಲ್ ಚಟುವಟಿಕೆ ಮತ್ತೆ ಗರಿಗೆದರಿದ್ದು, ಹೆಬ್ರಿ ತಾಲೂಕು ಕೂಡ್ಲೂವಿನ ವಿಕ್ರಂ ಗೌಡ ತನ್ನ ತಂಡದೊಂದಿಗೆ ಪೀತಬೈಲಿನ ಮನೆಯೊಂದಕ್ಕೆ ಸೂರ್ಯಸ್ತ ಸಮಯದಲ್ಲಿ ಆಗಮಿಸಿದ್ದರು. ಈ ಕುರಿತು ಮಾಹಿತಿ ಪಡೆದಿದ್ದ ಎಎನ್‌ಎಫ್ ತಂಡ ನಕ್ಸಲ್ ಆಗಮನಕ್ಕಾಗಿ ಹೊಂಚು ಹಾಕಿತ್ತು. ನಕ್ಸಲ್ ಹಾಗೂ ಎಎನ್‌ಎಫ್ ತಂಡ ಮುಖಾಮುಖಿಯಾಗಿದ್ದ ವೇಳೆ ಶರಣಾಗುವಂತೆ ಪೊಲೀಸರು ಸೂಚಿಸಿದ್ದರೂ ಅದನ್ನು ನಿರಾಕರಿಸಿದ್ದರು. ಈ ವೇಳೆ ನಡೆದ ಗುಂಡಿನ ಚಕಮಕಿಯಲ್ಲಿ ವಿಕ್ರಂ ಗೌಡ ಹತನಾಗಿದ್ದು ಜೊತೆಗಿದ್ದವರು ಕಾಡಿನತ್ತ ಪರಾರಿಯಾಗಿದ್ದರು.
ರಾಜ್ಯದ ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಎಎನ್‌ಎಫ್ ಘಟಕಗಳಿದ್ದು ಕ್ಯೂಂಬಿಂಗ್ ಕಾರ್ಯಾಚರಣೆ ಇವರ ದಿನಚರಿಯಾಗಿದೆ. ರಾಜ್ಯದ ವಿವಿಧೆಡೆ ಒಟ್ಟು 400 ಮಂದಿ ಎಎನ್‌ಎಫ್ ಘಟಕದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮಡಿಕೇರಿಯ ಬಾಗಮಂಡಲ, ಕುಟ್ಟ, ವಿರಾಜಪೇಟೆ, ಮೈಸೂರಿನ ಬರ್ಗಿ, ಚಿಕ್ಕಮಗಳೂರಿನ ಕಿಗ್ಗ, ದೇವಾಲಯ, ಕೊಪ್ಪ, ಕೆರೆಕಟ್ಟೆ, ಶಿವಮೊಗ್ಗದ ಆಗುಂಬೆ, ಉಡುಪಿ ಜಿಲ್ಲೆಯ ಕಾರ್ಕಳ, ಹೆಬ್ರಿ ಮತ್ತು ಜಡ್ಡಿನಗದ್ದೆಯಲ್ಲಿ ಕ್ಯಾಂಪ್ ಇದೆ. ಕೇಂದ್ರ ಸ್ಥಾನವಾಗಿರುವ ಕಾರ್ಕಳದಲ್ಲಿ ಪ್ರಸ್ತುತ ಎಸ್‌ಪಿ, ಡಿವೈಎಸ್‌ಪಿ, ಮೂವರು ಇನ್ಸ್‌ಪೆಕ್ಟರ್, ನಾಲ್ವರು ಎಸ್‌ಐ ಸೇರಿದಂತೆ ಒಟ್ಟು 80 ಮಂದಿ ಸಿಬ್ಬಂದಿಯಿದ್ದಾರೆ.
ಸರಕಾರದ ವಿಶೇಷ ಪ್ಯಾಕೇಜ್‌ಗೆ ಪ್ರಭಾವಿತರಾದ ನಕ್ಸಲರು ಶರಣಾಗುವುದರೊಂದಿಗೆ ರಾಜ್ಯ ನಕ್ಸಲ್ ಚಟುವಟಿಕೆಯಿಂದ ಮುಕ್ತವಾದಂತೆ ಭಾಸವಾಗಿದ್ದು, ಪ್ರಸ್ತುತ ಇರುವ ಎಎನ್‌ಎಫ್ ಸಿಬ್ಬಂದಿಗೆ ಸರಕಾರ ಯಾವ ಜವಾಬ್ದಾರಿ ನೀಡಲಿದೆ ಎನ್ನುವುದೇ ಕುತೂಹಲ. ಯಾಕೆಂದರೆ ನಕ್ಸಲ್ ಸಿಬ್ಬಂದಿಯನ್ನು ಅನ್ಯ ಕಾರ್ಯಕ್ಕೆ ಬಳಕೆ ಮಾಡಬಾರದು ಎಂಬ ನಿಯಮವಿದೆ. ಹಾಗಾಗಿ ಸರಕಾರದ ನಿಲುವು ಏನು ಎನ್ನುವುದು ಇನ್ನಷ್ಟೇ ತಿಳಿಯಬೇಕಿದೆ.






























































