ಕಾರ್ಕಳ ನಗರದೆಲ್ಲೆಡೆ ಧೂಳಿನದ್ದೆ ಗೋಳು – ಜನಜೀವನ ಅಸ್ತವ್ಯಸ್ತ
ಕಾರ್ಕಳ : ಧೂಳು…ಧೂಳು…ಧೂಳು… ಕಾರ್ಕಳ ನಗರದಲ್ಲಿ ಎತ್ತ ಸಾಗಿದರೂ ನಿತ್ಯ ಧೂಳಿನದ್ದೇ ಗೋಳು. ಅಂಗಡಿ, ಕಚೇರಿಗಳಿಗೆ ರಾಚುತ್ತಿದೆ ಧೂಳು. ಇದಕ್ಕೆಲ್ಲ ಕಾರಣ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಿಂದ ನಡೆಸಲಾಗುತ್ತಿರುವ ಪೈಪ್ಲೈನ್ ಕಾಮಗಾರಿ. ಪುರಸಭಾ ವ್ಯಾಪ್ತಿಯಲ್ಲಿ ನೀರಿನ ಪೂರೈಕೆಯಲ್ಲಿನ ಹಳೆ ವ್ಯವಸ್ಥೆ ಬದಲಾಯಿಸಿ ಸುಧಾರಿತ ವ್ಯವಸ್ಥೆ ಕಾರ್ಯಗತಗೊಳಿಸಲಾಗುತ್ತಿದ್ದು ಈ ನಿಟ್ಟಿನಲ್ಲಿ ಪೈಪ್ ಲೈನ್ ಅಳವಡಿಕೆಯಾಗುತ್ತಿದೆ. ಇದಕ್ಕಾಗಿ ರಸ್ತೆ ಬದಿ ಅಗೆಯಲಾಗುತ್ತಿದ್ದು, ಪೈಪ್ ಅಳವಡಿಕೆ ಬಳಿಕ ಗುಂಡಿಯನ್ನು ಸಮರ್ಪಕವಾಗಿ ಮುಚ್ಚಲಾಗುತ್ತಿಲ್ಲ. ಕಾಮಗಾರಿ ಕೈಗೆತ್ತಿಕೊಂಡವರು ಮಾಡುವ ಅವಾಂತರದಿಂದ ಕೆಲವೊಂದು ಕಡೆ ನೀರಿನ ಸಂಪರ್ಕ ಸ್ಥಗಿತವಾಗಿದೆ. ಮತ್ತೆ ಕೆಲವೆಡೆ ಡ್ರೈನೇಜ್ ಸಂಪರ್ಕ ಕಡಿತವಾಗಿದೆ.

ಧೂಳಿನ ಗೋಳು
ಪೈಪ್ಲೈನ್ ಅಳವಡಿಕೆಯ ಕಾಮಗಾರಿ ಅಸಮರ್ಪಕವಾಗಿ ಮಾಡಲಾಗಿದ್ದು ಪ್ಲಂಬರ್ ಕೂಡ ಇಲ್ಲದೇ ಕಾಮಗಾರಿ ವಿಳಂಬವಾಗುತ್ತಿದೆ. ನಗರ ಪೂರ್ತಿ ಧೂಳುಮಯವಾಗಿದ್ದು ದ್ವಿಚಕ್ರ ಸವಾರರಿಗೆ, ಪಾದಚಾರಿಗಳಿಗೆ ಭಾರಿ ಸಮಸ್ಯೆಯಾಗುತ್ತಿದೆ. ಕೆಲ ವಾಹನಗಳ ವೇಗಕ್ಕೆ ನಡೆದಾಡಿಕೊಂಡು ಹೋಗುವ ಶಾಲಾ ಮಕ್ಕಳಿಗೆ ಧೂಳು ರಾಚುತ್ತಿದೆ. ರಸ್ತೆ ಬದಿ ಅಂಗಡಿಗಳಿಗೆ ಹೆಚ್ಚು ಧೂಳು ಬೀಸಿ ಬರುವುದರಿಂದ ಅಲ್ಲಿ ಕೆಲಸ ಮಾಡುವವರು ಹಾಗೂ ಮಾಲೀಕರು ಮೂಗಿಗೆ ಬಟ್ಟೆ ಕಟ್ಟಿಕೊಂಡೇ ಕಾರ್ಯನಿರ್ವಹಿಸಬೇಕಾದ ಅನಿವಾರ್ಯತೆಯಿದೆ. ಇದಲ್ಲದೆ ವಾಹನಗಳು ಕೂಡ ಅಪಘಾತಕ್ಕೀಡಾಗುತ್ತಿದೆ.

ಆರೋಗ್ಯದ ಸಮಸ್ಯೆ
ಧೂಳಿನಿಂದಾಗಿ ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿದೆ. ಧೂಳು ಅನೇಕರಿಗೆ ಶ್ವಾಸಕೋಶ, ಗಂಟಲು ನೋವು, ಕೆಮ್ಮು, ಚರ್ಮ ರೋಗ ಸೇರಿದಂತೆ ಹತ್ತಾರು ಕಾಯಿಲೆಗೆ ತುತ್ತಾಗುವಂತೆ ಮಾಡಿದೆ. ಸಾರ್ವಜನಿಕರು ಹಿಡಿಶಾಪ ಹಾಕುತ್ತಲೇ ಧೂಳಿನ ರಸ್ತೆಗಳಲ್ಲಿ ಓಡಾಡುತ್ತಿದ್ದಾರೆ. ಜನತೆ ನರಕಯಾತನೇ ಅನುಭವಿಸುತ್ತಿದ್ದರೂ ಪರಿಹಾರ ಮಾತ್ರ ಸಿಗುತ್ತಲೇ ಇಲ್ಲ.
65 ಕೋಟಿ ರೂ. ಯೋಜನೆ
ಕೆಯುಡಬ್ಲ್ಯುಎಸ್ (karnataka urban water supply and drainage board) ವತಿಯಿಂದ ಅಮೃತ್ 2.0 ಯೋಜನೆಯಡಿ ಕಾರ್ಕಳ ಪುರಸಭಾ ವ್ಯಾಪ್ತಿಯಲ್ಲಿ ಸುಧಾರಿತ ವ್ಯವಸ್ಥೆ ಜಾರಿಗೆ 65 ಕೋಟಿ ರೂ. ಅನುದಾನ ಮಂಜೂರಾಗಿದೆ. ಕೇಂದ್ರ ಹಾಗೂ ರಾಜ್ಯ ಸರಕಾರದ ಅನುದಾನದಲ್ಲಿ ಈ ಕಾಮಗಾರಿ ನಡೆಯುತ್ತಿದೆ.

ಕಾರ್ಕಳ ನಗರದಲ್ಲಿ ಈಗಾಗಲೇ 100 ಕಿ. ಮೀ. ದೂರ ಪೈಪ್ ಅಳವಡಿಕೆ ಕಾರ್ಯವಾಗಿದೆ. ಮುಂಡ್ಲಿಯಿಂದ ತೆಳ್ಳಾರಿಗೆ ಮೈನ್ ಲೈನ್ ಸಂಪರ್ಕ ಕಾಮಗಾರಿ ಪ್ರಾರಂಭವಾಗಬೇಕಿದೆ. ಧೂಳಿರುವ ಪ್ರದೇಶಕ್ಕೆ ದಿನಂಪ್ರತಿ ಬೆಳಿಗ್ಗೆ ಹಾಗೂ ಸಂಜೆ ವೇಳೆ ನೀರು ಸಿಂಪಡಿಸಲಾಗುವುದು. ಆಗಸ್ಟ್ ವೇಳೆಗೆ ಕಾಮಗಾರಿ ಪೂರ್ಣಗೊಳ್ಳಲಿದೆ.
ರಕ್ಷಿತ್ (9035877570)
ಎಇ, ಕೆಯುಡಬ್ಲ್ಯುಎಸ್
ಹೊಣೆ ಯಾರು ?
ಕಾಂಟ್ರಾಕ್ಸ್ ವಹಿಸಿಕೊಂಡವರು ರಸ್ತೆ ಅಗೆದು ಪೈಪ್ ಲೈನ್ ಅಳವಡಿಸಿದ್ದಾರೆ. ಆದರೆ, ಸರಿಯಾದ ರೀತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಿಲ್ಲ. ಕ್ರಮಬದ್ಧವಾಗಿ, ವ್ಯವಸ್ಥಿತವಾಗಿ ಕಾಮಗಾರಿ ನಡೆಯುತ್ತಿದ್ದಲ್ಲಿ ಸಮಸ್ಯೆಯಾಗುತ್ತಿರಲಿಲ್ಲ. ಮಳೆಗಾಲದಲ್ಲಿ ಚರಂಡಿ ವ್ಯವಸ್ಥೆ ಇಲ್ಲದೇ ರಸ್ತೆಯಲ್ಲೇ ನೀರು ಹರಿಯುತ್ತಿದ್ದರೆ ಬೇಸಿಗೆಯಲ್ಲಿ ಈ ಪೈಪ್ಲೈನ್ ನಿಂದಾಗಿ ರಸ್ತೆ ಧೂಳುಮಯ. ಪುರಸಭೆಯಲ್ಲಿ ಈ ಕುರಿತು ವಿಚಾರಿಸಿದರೆ ಕೆಯುಡಬ್ಲ್ಯುಎಸ್ ನವರು ಕಾಮಗಾರಿ ನಡೆಸುತ್ತಿರುವುದು ಎನ್ನುತ್ತಾರೆ. ಅವರನ್ನು ಸಂಪರ್ಕಿಸಲು ಸಾರ್ವಜನಿಕರಿಗೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಇದರ ಹೊಣೆ ಹೊರುವವರು ಯಾರು ಎನ್ನುವುದೇ ಪ್ರಶ್ನೆ.

ಕೆಯುಡಬ್ಲ್ಯುಎಸ್ ಕಾಮಗಾರಿಯಿಂದ ಸಾರ್ವಜನಿಕರಿಗೆ ಆಗುತ್ತಿರುವ ಸಮಸ್ಯೆ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿದ್ದೇನೆ. ವೃತ್ತಿಪರ ಪ್ಲಂಬರ್ ಸಿಬ್ಬಂದಿಯಿಂದ ಸೂಕ್ತ ರೀತಿಯಲ್ಲಿ ಕೆಲಸ ಕಾರ್ಯಗಳನ್ನು ನಡೆಸಿಕೊಡುವಂತೆ ಸಂಬಂಧಪಟ್ಟ ಇಂಜಿನೀಯರ್ ಅವರಿಗೆ ತಿಳಿಸಿದ್ದೇನೆ.
ರೂಪ ಶೆಟ್ಟಿ
ಮುಖ್ಯಾಧಿಕಾರಿ, ಪುರಸಭೆ
ಡಸ್ಟ್ ಅಲರ್ಜಿಯಿಂದ ಕೆಮ್ಮು, ಅಸ್ತಮಾ, ಉಸಿರಾಟದಂತಹ ತೊಂದರೆ ಕಂಡುಬರುತ್ತಿದೆ. ಸಾರ್ವಜನಿಕರು ಆರೋಗ್ಯದ ಹಿತದೃಷ್ಟಿಯಿಂದ ರಸ್ತೆ ಬದಿ ನಡೆದುಕೊಂಡು ಹೋಗುವಾಗ ಮಾಸ್ಕ್ ಧರಿಸುವುದು ಉತ್ತಮ.
ಡಾ. ಕೆ.ಆರ್. ಜೋಶಿ
ವೈದ್ಯರು
ಬೇಕಾಬಿಟ್ಟಿ ಕಾಮಗಾರಿಯಿಂದ ಕೋರ್ಟ್ ರಸ್ತೆ, ತೆಳ್ಳಾರು ರಸ್ತೆಯಲ್ಲಿ ಸಂಚರಿಸುವಂತಿಲ್ಲ. ಶಾಲಾ ಮಕ್ಕಳಿಗೆ ಬಹಳ ಸಮಸ್ಯೆಯಾಗುತ್ತಿದೆ. ಸಮರ್ಪಕವಾಗಿ ಕಾಮಗಾರಿ ನಡೆಸುವಲ್ಲಿ ಸಂಬಂಧಪಟ್ಟವರು ಮುತುವರ್ಜಿ ವಹಿಸಬೇಕು.
ಪದ್ಮಪ್ರಸಾದ್ ಜೈನ್
ವಕೀಲರು
ಮನೆ ಮನೆಗೆ ನೀರು ಸರಬರಾಜಿಗಾಗಿ ಪೈಪ್ಲೈನ್ ಅಳವಡಿಸುತ್ತಿರುವ ಯೋಜನೆ ಒಳ್ಳೆಯದೆ. ಆದರೆ, ಯೋಜನೆಯ ಅನುಷ್ಟಾನದಲ್ಲಿ ಸಮರ್ಪಕವಾದ ಕಾಮಗಾರಿ ನಡೆಯದೆ ಸಮಸ್ಯೆಗೆ ಸಿಲುಕುವಂತಾಗಿದೆ. ಅಗೆದ ರಸ್ತೆಯಲ್ಲಿ ವಾಹನ ಸ್ಕಿಡ್ ಆಗಿ ಅಪಘಾತವಾಗುವ ಭಯ ಒಂದೆಡೆಯಾದರೆ, ರಸ್ತೆ ತುಂಬೆಲ್ಲಾ ತುಂಬಿದ ಧೂಳಿನಿಂದ ಆರೋಗ್ಯ ಸಮಸ್ಯೆ ಎದುರಿಸುವಂತಾಗಿದೆ.
ರಮೇಶ್ ಆಚಾರ್ಯ






























































