ಅಪರಾಧ ಮತ್ತು ಬಾಲಾಪರಾಧಗಳ ಕುರಿತು ತಿಳಿದುಕೊಳ್ಳುವುದರ ಜೊತೆಗೆ ಅವುಗಳನ್ನು ತಡೆಗಟ್ಟುವ ವಿಧಾನಗಳ ಮತ್ತು ಅಪರಾಧಿ ಹಾಗೂ ಬಾಲಾಪರಾಧಿಗಳಿಗೆ ಕೊಡುವ ಶಿಕ್ಷೆ ಅಥವಾ ಚಿಕಿತ್ಸಾ ವಿಧಾನಗಳು ಮುಂತಾದ ವಿಷಯಗಳ ಬಗ್ಗೆ ವಿವೇಚನೆ ಮಾಡುವ ಅದ್ಯಯನವನ್ನು ಅಪರಾಧ ಶಾಸ್ತ್ರ ಅಂದರೆ ಕ್ರಿಮಿನಾಲಜಿ ಎನ್ನುತ್ತಾರೆ. ಅಪರಾಧ ಶಾಸ್ತ್ರಕ್ಕೆ ತನ್ನದೆ ಆದ ವಿಶಿಷ್ಟ ಸ್ಥಾನವಿದೆ. ಅಪರಾಧ ಶಾಸ್ತ್ರದ ಪ್ರಕಾರ ಸಾಮಾಜಿಕ ನಿಯಮಗಳಿಗೆ ವ್ಯತಿರಿಕ್ತವಾಗಿ ವರ್ತಿಸಿ ಅವುಗಳನ್ನು ಉಲ್ಲಂಘಿಸಿ ಶಿಕ್ಷೆಗೆ ಒಳಗಾದ ವ್ಯಕ್ತಿಯನ್ನು ಅಪರಾಧಿ ಎನ್ನುತ್ತಾರೆ. ಈ ಸಂದರ್ಭದಲ್ಲಿ ಕೇವಲ ಅಪರಾಧದ ಆರೋಪವನ್ನು ಎದುರಿಸಿ ವಿಚಾರಣೆಗೆ ಒಳಪಡಬೇಕಾಗುವ ವ್ಯಕ್ತಿಯನ್ನು ವಿಚಾರಣೆ ಮುಗಿಯುವ ತನಕ ಆರೋಪಿ ಎನ್ನುತ್ತಾರೆ. ಅಂದರೆ ಅಪರಾಧ ಶಾಸ್ತ್ರದ ಪ್ರಕಾರ ಯಾವುದೇ ಒಂದು ಕ್ರಿಮಿನಲ್ ಅಪರಾಧವನ್ನು ಎದುರಿಸುವ ವ್ಯಕ್ತಿಯನ್ನು ಅಪರಾಧಿ ಎಂಬುದಾಗಿ ಸಂಭೋದಿಸಲಾಗುತ್ತದೆ. ಅಪರಾಧ ಶಾಸ್ತ್ರದ ಪ್ರಕಾರ ಯಾವುದೇ ಒಂದು ಕೃತ್ಯವನ್ನು ಅಪರಾಧ ಕೃತ್ಯವೆಂದು ನಿರ್ಧರಿಸುವ ಸಂದರ್ಭದಲ್ಲಿ ಪ್ರಮುಖವಾಗಿ ಕೆಲವು ವಿಚಾರಗಳನ್ನು ಪರಿಗಣಿಸುವುದು ಅವಶ್ಯಕವಾಗಿರುತ್ತದೆ. ಮೊದಲನೆದಾಗಿ ವ್ಯಕ್ತಿ ನಡೆಸಿದ ಕೃತ್ಯವು ಬಾಹ್ಯ ಪರಿಣಾಮ ಮತ್ತು ಹಾನಿ ಮಾಡುವ ಉದ್ದೇಶದಿಂದ ಕೂಡಿರುತ್ತದೆಯೋ ಮತ್ತು ಎರಡನೆದಾಗಿ ನಡೆದ ಕೃತ್ಯವು ಕಾನೂನಿನ ನಿಯಮಾನುಸಾರವಾಗಿ ನಿಷೇಧಿಸಲ್ಪಟ್ಟಿರುವುದೇ ಮತ್ತು ಕೃತ್ಯವನ್ನು ನಡೆಸಿರುವ ವ್ಯಕ್ತಿಯು ದುರುದ್ದೇಶ ಪೂರ್ವಕವಾಗಿ ಮತ್ತು ದೋಷಿತ ಇಚ್ಚೆ (ಮೆನ್ಸ್ರಿಯಾ)ಯಿಂದ ಕೃತ್ಯವನ್ನು ನಡೆಸಿರುವನೇ ಎಂಬ ವಿಷಯವು ಬಹಳ ಮುಖ್ಯವಾಗಿರುತ್ತದೆ.
ಅಪರಾಧ ಶಾಸ್ತ್ರದ ಪ್ರಕಾರ ಹುಟ್ಟಿನಿಂದಾದ ಅಪರಾಧಿಗಳು ಅಂದರೆ ತಮ್ಮ ಶಾರೀರಿಕ ಮತ್ತು ಮಾನಸಿಕ ದೋಷದಿಂದ ಹುಟ್ಟಿನಿಂದ ಬಂದ ಅಪರಾಧ ಪ್ರವೃತ್ತಿಯ ಅಪರಾಧಿಗಳು, ಮಾನಸಿಕ ಅಪರಾಧಿಗಳು ಅಂದರೆ ಮಾನಸಿಕವಾಗಿ ಅಸಾಮಾನ್ಯ ಮತ್ತು ಮಾನಸಿಕ ರೋಗಗಳಿಂದ ಬಳಲುತ್ತಿರುವ ಅಪರಾಧಿಗಳು, ಅತೀ ಉದ್ರೇಕ ಭಾವದ ಅಪರಾಧಿಗಳು ಅಂದರೆ ಅತೀ ಕಾಮಾಸಕ್ತಿಯ ಸ್ಥಿರ ಚಿತ್ತತೆ ಹೊಂದಿರದ ಉದ್ರೇಕ ಪ್ರವೃತ್ತಿಯ ವ್ಯಕ್ತಿಗಳು, ಆಕಸ್ಮಿಕ ಅಪರಾಧಿಗಳು ಅಂದರೆ ಯಾವುದೇ ಮಾನಸಿಕ ಮತ್ತು ಶಾರೀರಿಕ ನ್ಯೂನತೆಗಳಿಂದ ಕೂಡಿರದ ವ್ಯಕ್ತಿಗಳು, ನಿದರ್ಶನ ಅಪರಾಧಿಗಳು ಅಂದರೆ ಕ್ರೂರತೆ ಮತ್ತು ಅಹಂಬಾವದ ನೈತಿಕತೆಯ ಅಭಾವವನ್ನು ಹೊಂದಿರುವ ಮತ್ತು ದಯೆ ಇಲ್ಲದ ವ್ಯಕ್ತಿಗಳು, ವೈರತ್ವಗಳ ಪ್ರೇರಣೆಗಳಿಂದ ಕೂಡಿದ ಹಿಂಸಾತ್ಮಕ ವ್ಯಕ್ತಿಗಳು, ಕನಿಕರವಿಲ್ಲದ ಮತ್ತು ಸಾಚಾ ಗುಣವಿಲ್ಲದ ಪ್ರಮಾಣಿಕತೆಯ ಅಭಾವದ ಅಪರಾಧಿಗಳು ಮತ್ತು ಕಾಮುಕ ಪ್ರೇರಣೆ ಮತ್ತು ಲಂಪಟತನದ ಪ್ರವೃತ್ತಿಯ ಕಾಮುಕ ಅಪರಾಧಿಗಳು ಈ ರೀತಿಯ ಹಲವಾರು ವಿಧದ ಅಪರಾಧಿಗಳನ್ನು ನಾವು ಸಮಾಜದಲ್ಲಿ ಕಾಣಬಹುದಾಗಿದೆ. ಇದಲ್ಲದೆ ಅಪರಾಧ ನಡೆಸುವುದನ್ನೇ ತಮ್ಮ ಜೀವನದ ವೃತ್ತಿಯನ್ನಾಗಿ ಮಾಡಿಕೊಂಡಿರುವ ಮತ್ತು ತಮ್ಮ ಉಪ ಜೀವನಕ್ಕಾಗಿ ದಿನಂಪ್ರತಿ ಅಪರಾಧವನ್ನು ನಡೆಸುತ್ತಿರುವ ಮತ್ತು ಅಪರಾಧ ಕೃತ್ಯಗಳಲ್ಲಿ ನೈಪುಣ್ಯತೆಯನ್ನು ಹೊಂದಿರುವ ವೃತ್ತಿ ಅಪರಾಧಿಗಳನ್ನು, ವಾಣಿಜ್ಯ ವ್ಯವಹಾರಗಳ ನೀತಿಯ ಆಧಾರದ ಮೇಲೆ ಮತ್ತು ಆಧುನಿಕ ಆರ್ಥಿಕ ಉದ್ದಿಮೆಗಳ ಬೆಳವಣಿಗೆಯ ಸಮಸ್ಯೆಗಳನ್ನು ಹಿನ್ನಲೆಯಾಗಿಟ್ಟುಕೊಂಡು ಶ್ವೇತ ವಸ್ತ್ರಧಾರಿಗಳು ಅಂದರೆ ಸಮಾಜದ ಗೌರವಸ್ಥ ಮತ್ತು ಪ್ರತಿಷ್ಠಿತ ವ್ಯಕ್ತಿಗಳು ಸ್ವಾರ್ಥ ದೃಷ್ಟಿಯಿಂದ ತಮ್ಮ ಜೀವನೋಪಾಯದ ವ್ಯವಹಾರಗಳಿಗೆ ಕಾನೂನು ಬಾಹಿರ ಕೃತ್ಯಗಳನ್ನು ಮಾಡಿ ಇತರರಿಗೆ ಹಾನಿಯನ್ನುಂಟುಮಾಡುವ ಶ್ವೇತ ವಸ್ತ್ರಧಾರಿ ಅಪರಾಧಿಗಳನ್ನು ಸಹಾ ನಾವು ಸಮಾಜದಲ್ಲಿ ಕಾಣಬಹುದು. ಶ್ವೇತ ವಸ್ತ್ರಧಾರಿ ಅಪರಾಧಿಗಳು ತಮ್ಮ ನೌಕರಿ, ಉದ್ಯೋಗ ಮತ್ತು ವ್ಯವಹಾರಗಳಲ್ಲಿ ನಡೆಸುವ ಕಾನೂನು ಬಾಹಿರ ಕೃತ್ಯಗಳನ್ನು ಮತ್ತು ಅಪರಾಧಗಳನ್ನು ಸಾಮಾನ್ಯ ವ್ಯಕ್ತಿಗಳ ಕಣ್ಣಿಗೆ ಕಾಣಿಸದಂತೆ ಮತ್ತು ಇತರ ಅಪರಾಧಿಗಳಂತೆ ನೇರವಾಗಿ ಅಪರಾಧಕ್ಕೆ ಸಿಲುಕಿಕೊಳ್ಳದಂತೆ ಚಾಣಾಕ್ಷತನದಿಂದ ನಡೆಸುತ್ತಾರೆ ಮತ್ತು ತಾವು ಹೊಂದಿರುವ ಪ್ರಭಾವ, ಹಣ ಮತ್ತು ಬಲದ ಆಧಾರದಿಂದ ತಮ್ಮ ವಿರುದ್ಧದ ಅವ್ಯವಹಾರಗಳ ಅಪರಾಧದ ಕಪ್ಪು ಛಾಯೆಯನ್ನು ಮುಚ್ಚುವಲ್ಲಿ ಸಫಲರಾಗಿ ಸಮಾಜದಲ್ಲಿ ಗೌರವಸ್ಥ ಸ್ಥಾನವನ್ನು ಹೊಂದಿರುತ್ತಾರೆ. ಆದರೆ ಇಂತಹ ಶ್ವೇತವಸ್ತ್ರಧಾರಿಗಳ ಕಾಲಕಾಲದ ಆಸ್ತಿಯ ನಿರ್ಧರಣಾ ಪಟ್ಟಿಯನ್ನು ಪರೀಕ್ಷಿಸಿ ಅಂತಹ ವ್ಯಕ್ತಿಗಳ ಚಲನ ವಲನಗಳನ್ನು ಅತ್ಯಂತ ಸೂಕ್ಷವಾಗಿ ಗಮನಿಸುವ ಮೂಲಕ ಸೂಕ್ತ ಸಾಕ್ಷಾಧಾರಗಳಿಂದ ಶ್ವೇತವಸ್ತçಧಾರಿಗಳ ಅಪರಾಧವನ್ನು ಪತ್ತೆಹಚ್ಚಬಹುದಾಗಿದೆ.






















