ಕಠಿಣ ಅಭ್ಯಾಸವೇ ಸಾಧನೆಗೆ ದಾರಿ: ಡಾ. ವಿಂಧ್ಯಾ ಆನಂದ್‌ ಪೈ

ಕಾರ್ಕಳ: ಕೌಶಲಗಳನ್ನು ಹೊಂದಿದ ವಿದ್ಯಾಭ್ಯಾಸಕ್ಕೆ ಇವತ್ತು ಹೆಚ್ಚು ಮಹತ್ವ ಇರುವುದರಿಂದಲೇ ಮಣಿಪಾಲ ಜಗತ್ತನ್ನು ಗೆದ್ದಿದೆ. ಅಂತಹ ಕೌಶಲಗಳ ಜೊತೆಗೆ ಕಠಿಣ ಅಭ್ಯಾಸವೂ ವಿದ್ಯಾರ್ಥಿಗಳಿಗೆ ಅಗತ್ಯ ಎಂದು ಭುವನೇಂದ್ರ ಕಾಲೇಜಿನ ಸಂಸ್ಥಾಪಕರಾದ ಡಾ. ಟಿ.ಎಂ.ಎ ಪೈಯವರ ಮೊಮ್ಮಗಳು ಪ್ರಸಿದ್ಧ ಚರ್ಮರೋಗ ತಜ್ಞೆ ಡಾ. ವಿಂಧ್ಯಾ ಆನಂದ್ ಪೈ ಹೇಳಿದರು.

ಕಾಲೇಜು ವಾರ್ಷಿಕೋತ್ಸವ ಪ್ರಯುಕ್ತ ನಡೆದ ಸಂಸ್ಥಾಪಕರ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಈ ಸಂಸ್ಥೆಯ ಬಗ್ಗೆ ನನಗೆ ಅಭಿಮಾನ ಮತ್ತು ತುಂಬು ಗೌರವ ಇದೆ. ನನ್ನ ಹಿರಿಯ ತಲೆಮಾರು ವಿದ್ಯಾಭ್ಯಾಸದ ಹಿನ್ನೆಲೆಯಲ್ಲಿ ಈ ಕಾಲೇಜಿಗೆ ಕೊಟ್ಟ ಕೊಡುಗೆ ನಮಗೆ ಸದಾ ಆದರ್ಶವಾಗಿದೆ. ಅದಕ್ಕಿಂತಲೂ ನಾನವರ ಮೊಮ್ಮಗಳಾಗಿ ಇರುವುದು ನನ್ನ ಪಾಲಿನ ಸಂತಸ ಎಂದರು.

ಮತ್ತೋರ್ವ ಮುಖ್ಯ ಅತಿಥಿ ಸ್ಕಿಲ್ ಡೆವೆಲಪ್‌ಮೆಂಟ್ ಸೆಂಟರ್ ರಿಜಿಸ್ಟ್ರಾರ್ ಡಾ. ಅಂಜಯ್ಯ ದೇವಿನೇನಿ ಮಾತನಾಡಿ, ಜಗತ್ತಿನ ವಿಶ್ವವಿದ್ಯಾಲಯಗಳಲ್ಲಿ ಪ್ರಮುಖ ಸ್ಥಾನದಲ್ಲಿರುವ ಮಣಿಪಾಲ ತನ್ನ ಸ್ಕಿಲ್ ಡೆವಲಪ್‌ಮೆಂಟ್‌ನಿಂದಾಗಿ ಇಡೀ ಜಗತ್ತನ್ನು ತನ್ನೆಡೆಗೆ ನೋಡುವಂತೆ ಮಾಡಿದೆ. ಅದರ ಆಡಳಿತಕ್ಕೊಳಪಟ್ಟ ಭುವನೇಂದ್ರ ಕಾಲೇಜು ಕೂಡಾ ಡಾ. ಮಾಧವ ತೋನ್ಸೆ ಅನಂತ್ ಪೈಯವರ ಆಶೋತ್ತರಗಳ ಪ್ರತೀಕವಾಗಿದೆ. ಇಲ್ಲಿಯ ವಿದ್ಯಾರ್ಥಿಗಳಿಗೆ ಮಣಿಪಾಲ ಯಾವತ್ತೂ ಮುಂದಿನ ಸ್ಕಿಲ್ ಡೆವಲಪ್‌ಮೆಂಟ್ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಡುತ್ತದೆ ಎಂದರು. ಪದವಿ ವಿದ್ಯಾಭ್ಯಾಸದ ಜೊತೆಗೆ ಕೌಶಲಯುಕ್ತವಾದ ಕೋರ್ಸ್‌ಗಳ ಕುರಿತು ಮಾಹಿತಿ ನೀಡಿ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯುವಂತೆ ತಿಳಿಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಸಿಎ ಶಿವಾನಂದ ಪೈ, ಕಲಿಕೆಯ ಉದೇಶದಿಂದ ಡಾ.ಟಿಎಂಎ ಪೈಯವರು ಸ್ಥಾಪಿಸಿದ ಈ ಕಾಲೇಜು ಅವರ ಉದ್ದೇಶಗಳನ್ನು ಈಡೇರಿಸುತ್ತಿದೆ. ಹಾಗಾಗಿಯೇ ಅವರನ್ನು ನೆನಪಿಸುವ ಸಲುವಾಗಿ ಈ ದಿನವನ್ನು ಆಚರಿಸುವ ಉದ್ದೇಶವನ್ನು ಕಾಲೇಜು ನಡೆಸಿಕೊಂಡು ಬರುತ್ತಿದೆ. ಮಣಿಪಾಲ ಆಡಳಿತಕ್ಕೊಳಪಟ್ಟ ಈ ಕಾಲೇಜಿನಲ್ಲಿ ಇರುವ ಎಲ್ಲ ಸೌಲಭ್ಯಗಳನ್ನು ವಿದ್ಯಾರ್ಥಿಗಳು ಬಳಸಿಕೊಳ್ಳಬೇಕು. ಒತ್ತಡಗಳಿಲ್ಲದ ಕಲಿಕೆ ನಿಮ್ಮದಾಗಬೇಕು ಮತ್ತು ಈ ಕಾಲೇಜಿನ ಘನತೆಯನ್ನು ಹೆಚ್ಚಿಸಬೇಕು ಎಂದರು.

ಈ ಬಾರಿಯ ಡಾ. ಟಿಎಂಎ ಪೈ ಬಂಗಾರದ ಪದಕವನ್ನು ಪಡೆದುಕೊಂಡ ಬಿಎ ವಿಭಾಗದ ಶ್ವೇತಾ, ಬೆಸ್ಟ್ ಆಲ್ ರೌಂಡರ್ ಸ್ವಾತಿ ಕೇಶಿನಿ ಪೈ, ಆಕಾಶ್ ಶಶಿಕಾಂತ್ ಶೆಟ್ಟಿ, ನಿರೀಕ್ಷಾ ಇವರನ್ನು ಹಾಗೂ ಕಳೆದ ಬಾರಿ ಮಂಗಳೂರು ವಿಶ್ವ ವಿದ್ಯಾಲಯ ಮಟ್ಟದಲ್ಲಿ ರ‍್ಯಾಂಕ್ ವಿಜೇತರಾದ ತೃಪ್ತಿ ನಾಯಕ್, ದೀಪ್ತಿ ವೇಲಂಕರ್, ಜೋಯ್ಲಿನ್ ಡಿಸೋಜಾ ಹಾಗೂ ಪದವಿಪೂರ್ವ ವಿಭಾಗದ ರಾಜ್ಯ ಮಟ್ಟದಲ್ಲಿ ಅತಿಹೆಚ್ಚು ಅಂಕ ಗಳಿಸಿದ ನಾಗೇಂದ್ರ ಕುಡ್ವ, ಪವಿತ್ರಾ ಅಶೋಕ್ ಕಾಮತ್, ವಿಶ್ವವಿದ್ಯಾಲಯ ಮಟ್ಟದ ಬಂಗಾರದ ಪದಕ ವಿಜೇತೆ ಅನಿಶಾ ಅವರನ್ನು ಸನ್ಮಾನಿಸಲಾಯಿತು.

ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ದತ್ತಾತ್ರೇಯ ಮಾರ್ಪಳ್ಳಿ ಉಪಸ್ಥಿತರಿದ್ದರು. ಪದವಿ ಕಾಲೇಜು ಪ್ರಾಂಶುಪಾಲ ಡಾ. ಮಂಜುನಾಥ ಎ. ಕೋಟ್ಯಾನ್ ಸ್ವಾಗತಿಸಿ ಸಹವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ. ನಂದಕಿಶೋರ್ ಕೆ ಕಾರ್ಯಕ್ರಮ ನಿರೂಪಿಸಿದರು. ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಪ್ರೊ. ರಮೇಶ್ ಎಸ್ ಸಿ ವಂದಿಸಿದರು.





























































































error: Content is protected !!
Scroll to Top