ವಿಕ್ರಂ ಗೌಡ ಎನ್‌ಕೌಂಟರ್‌ – ಜಯಂತ ಗೌಡರನ್ನು ವಿಚಾರಣೆಗೆ ಕರೆದ ಹೆಬ್ರಿ ಪೊಲೀಸರು

ಹೆಬ್ರಿ : ಕಬ್ಬಿನಾಲೆ ಅರಣ್ಯ ಪ್ರದೇಶದ ಪಿತಬೈಲುವಿನಲ್ಲಿ ನ. 18ರಂದು ಎಎನ್‌ಎಫ್‌ ಮತ್ತು ನಕ್ಸಲರ ನಡುವೆ ನಡೆದ ಚಕಮಕಿಯಲ್ಲಿ ನಕ್ಸಲ್ ನಾಯಕ ವಿಕ್ರಂ ಗೌಡ ಹತನಾಗಿದ್ದು, ಘಟನೆ ಸಂಬಂಧ ಎನ್‌ಕೌಂಟರ್‌ ನಡೆದ ಮನೆಯ ನಿವಾಸಿ ಜಯಂತ ಗೌಡರನ್ನು ನ. 22ರಂದು ಹೆಬ್ರಿ ಪೊಲೀಸರು ವಿಚಾರಣೆಗೆ ಕರೆದೊಯ್ದಿದ್ದಾರೆ. ಇದನ್ನು ವಿರೋಧಿಸಿ ಮಲೆಕುಡಿಯ ಸಮಾಜದ ಮುಖಂಡರು ಹಾಗೂ ಸ್ಥಳೀಯರಿಂದ ಹೆಬ್ರಿ ಪೊಲೀಸ್‌ ಠಾಣೆಗೆ ಮುತ್ತಿಗೆ ಹಾಕಿದ ಘಟನೆಯೂ ನಡೆಯಿತು.

ಪೊಲೀಸರು ಶುಕ್ರವಾರ ಜಯಂತ ಗೌಡ ಅವರ ಮನೆಗೆ ತೆರಳಿ ವಿಚಾರಣೆಗಾಗಿ ಹೆಬ್ರಿ ಠಾಣೆಗೆ ಕರೆತಂದರು. ಇದರಿಂದ ತೀವ್ರ ಆಕ್ರೋಶಗೊಂಡ ಮಲೆಕುಡಿಯ ಪ್ರಮುಖರು ಹಾಗೂ ಸ್ಥಳೀಯರು ಠಾಣೆಗೆ ಮುತ್ತಿಗೆ ಹಾಕಿ ವಿಚಾರಣೆ ನೆಪದಲ್ಲಿ ಜಯಂತರಿಗೆ ಕಿರುಕುಳ ನೀಡಬಾರದು. ಹಿಂಸೆ ಕೊಡಬಾರದೆಂದು ಹೇಳಿದರು.
ಜಯಂತ ಗೌಡ ಅಮಾಯಕರು. ಅವರ ವಿಚಾರಣೆಗೊಳಪಡಿಸಿರುವುದು ಸರಿಯಲ್ಲ. ಅವರನ್ನು ಕೂಡಲೇ ಠಾಣೆಯಿಂದ ಬಿಡುಗಡೆ ಮಾಡದಿದ್ದಲ್ಲಿ ನಾವು ಪೊಲೀಸ್‌ ಠಾಣೆಯಿಂದ ನಿರ್ಗಮಿಸಲಾರೆವು ಎಂದಿದ್ದಾರೆ.
ಠಾಣಾಧಿಕಾರಿ ಮಹೇಶ್‌ ಟಿ. ಪ್ರತಿಕ್ರಿಯಿಸಿ, ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗಾಗಿ ಜಯಂತ್‌ ಗೌಡ ಅವರನ್ನು ಠಾಣೆಗೆ ಕರೆದುಕೊಂಡು ಬಂದಿದ್ದೇವೆ. ವಿಚಾರಣೆ ಮುಗಿದ ಬಳಿಕ ಮೇಲಾಧಿಕಾರಿಗಳ ಸೂಚನೆಯಂತೆ ಇವತ್ತೆ ಬಿಡುಗಡೆಗೊಳಿಸುತ್ತೇವೆ ಎಂದು ತಿಳಿಸಿದ್ದಾರೆ.

ಮಲೆ ಕುಡಿಯ ಸಂಘದ ರಾಜ್ಯಾಧ್ಯಕ್ಷ ಶ್ರೀಧರ್‌ ಗೌಡ ಈದು, ಉಡುಪಿ ಜಿಲ್ಲಾ ಮಲೆ ಕುಡಿಯ ಸಂಘದ ಅಧ್ಯಕ್ಷ ಗಂಗಾಧರ್‌ ಗೌಡ,
ಪೂರ್ವಾಧ್ಯಕ್ಷ ಸುಧಾಕರ ಗೌಡ ನಾಡ್ಪಾಲು, ಹೆಬ್ರಿ ಗ್ರಾ. ಪಂ. ತಾರನಾಥ್‌, ನಾಡ್ಪಾಲು ಗ್ರಾ. ಪಂ. ಅಧ್ಯಕ್ಷ ನವೀನ್‌ ಕುಮಾರ್‌, ವಿಜಯ ಶೆಟ್ಟಿ, ಸುಧಾಕರ್‌ ಹೆಗ್ಡೆ ಸೇರಿದಂತೆ ಗ್ರಾಮಸ್ಥರು ಠಾಣೆಯಲ್ಲಿ ಜಮಾಯಿಸಿದ್ದಾರೆ.





























































































































error: Content is protected !!
Scroll to Top