ಕಾರ್ಮಿಕರ ನಿಯೋಜನೆ, ಮನೆ ಬಾಡಿಗೆ ನೀಡುವ ವೇಳೆ ಸೂಕ್ತ ದಾಖಲೆ ಪಡೆಯುವುದು ಕಡ್ಡಾಯ : ಜಿಲ್ಲಾಧಿಕಾರಿ

ಉಡುಪಿ : ಕಾರ್ಮಿಕರನ್ನು ನಿಯೋಜಿಸಿಕೊಳ್ಳುವ ಮೊದಲು ಮಾಲೀಕರು ಅವರ ಗುರುತಿನ ಚೀಟಿ, ಶಾಶ್ವತ ಹಾಗೂ ತಾತ್ಕಾಲಿಕ ವಾಸ ಸ್ಥಾನದ ವಿವರಗಳನ್ನು ಕಡ್ಡಾಯವಾಗಿ ಪಡೆದುಕೊಳ್ಳಬೇಕು. ಈ ವಿವರಗಳನ್ನು ಸಂಬಂಧಿಸಿದ ಸರಾಕರಿ ಕಚೇರಿಗಳಿಗೆ ತಪ್ಪದೇ ನೀಡಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ. ವಿದ್ಯಾ ಕುಮಾರಿ ಹೇಳಿದರು.

ಅವರು ನ. 5ರಂದು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಅಕ್ರಮ ಬಾಂಗ್ಲಾ ದೇಶೀಯ ವಲಸೆ ಕಾರ್ಮಿಕರಿಗೆ ಹಾಗೂ ನಾಗರೀಕರಿಗೆ ಸಂಬಂಧಿಸಿದಂತೆ ವಿವಿಧ ಸಂಸ್ಥೆಗಳ ಮೂಲಕ ಜಿಲ್ಲೆಯ ಜನರನ್ನು ಜಾಗೃತಗೊಳಿಸುವ ಕುರಿತ ಸಭೆಯಲ್ಲಿ ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಅಕ್ರಮವಾಗಿ ಬಾಂಗ್ಲಾ ದೇಶದ ನಾಗರೀಕರು ಜೀವನೋಪಾಯಕ್ಕಾಗಿ ಜಿಲ್ಲೆಯಲ್ಲಿ ವಿವಿಧ ಕೆಲಸ ಕಾರ್ಯಗಳಲ್ಲಿ ತೊಡಗಿರುವುದು ಗಮನಕ್ಕೆ ಬಂದಿದೆ. ಸ್ಥಳೀಯವಾಗಿ ಕೆಲವು ದಾಖಲೆಗಳನ್ನು ಸೃಷ್ಠಿಸಿಕೊಂಡು ಕಾನೂನು ಬಾಹಿರವಾಗಿ ವಾಸವಿರುವ ಬಗ್ಗೆ ದೂರುಗಳು ಕೇಳಿಬರುತ್ತಿದ್ದು ಈ ಬಗ್ಗೆ ಎಚ್ಚರ ವಹಿಸಲು ಸರಕಾರ ನಿರ್ದೇಶನ ನೀಡಿದೆ ಎಂದು ಡಿಸಿ ಹೇಳಿದರು.

ಕಟ್ಟಡ ನಿರ್ಮಾಣ ಮಾಡುವ ಗುತ್ತಿಗೆದಾರರು, ಮೀನುಗಾರಿಕೆ ಕಾರ್ಮಿಕರು, ಅಪಾರ್ಟ್ಮೆಂಟ್ ಸೇರಿದಂತೆ ಪ್ರತಿಯೊಬ್ಬ ಮಾಲೀಕರು ತಮ್ಮಲ್ಲಿ ಕೆಲಸಕ್ಕೆ ನಿಯೋಜನೆಗೊಳ್ಳುವ ಕಾರ್ಮಿಕರ ಆಧಾರ್ ಇನ್ನಿತರ ಅಧಿಕೃತ ದಾಖಲೆ ಪತ್ರಗಳನ್ನು ಪಡೆಯಬೇಕು. ಇವುಗಳ ಮಾಹಿತಿಯನ್ನು ಸಂಬಂಧಿಸಿದ ಇಲಾಖೆಗಳಿಗೆ ನೀಡಬೇಕು ಎಂದ ಡಿಸಿಯವರು ಅಧಿಕಾರಿಗಳು ಇವುಗಳನ್ನು ಪಡೆದ ಅನಂತರ ಪರಿಶೀಲನೆ ಮಾಡಬೇಕು. ಇವುಗಳ ಜೊತೆಗೆ ಆಗ್ಗಿಂದಾಗ್ಗೆ ಅವರು ಕೆಲಸ ನಿರ್ವಹಿಸುವ ಸ್ಥಳಗಳಿಗೆ ಅನೀರಿಕ್ಷಿತ ಭೇಟಿ ಮಾಡಿ ತಪಾಸಣೆ ನಡೆಸಬೇಕೆಂದರು.

ಮನೆಯನ್ನು ಬಾಡಿಗೆ ನೀಡುವ ಮುನ್ನ ದಾಖಲೆ ಪಡೆಯಿರಿ
ಮನೆಯ ಮಾಲೀಕರು ತಮ್ಮ ಮನೆಯನ್ನು ಬಾಡಿಗೆಗೆ ನೀಡುವ ಮುನ್ನ ಸೂಕ್ತ ದಾಖಲೆಗಳನ್ನು ಪಡೆದುಕೊಳ್ಳುವುದು ಅಗತ್ಯ ಎಂದು ತಿಳಿಸಿದ ಡಿಸಿಯವರು ಕಾರ್ಮಿಕರು, ಉದ್ಯೋಗ ಪರ ಸಂಘಟನೆಗಳು ಸಹ ಅಕ್ರಮ ವಿದೇಶಿ ವಲಸಿಗರ ಬಗ್ಗೆ ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕು ಎಂದರು. ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಅರುಣ್ ಕೆ., ಕರಾವಳಿ ಕಾವಲು ಪಡೆಯ ಎಸ್ಪಿ ಮಿಥುನ್ ಎಚ್.ಎನ್., ಅಪರ ಜಿಲ್ಲಾಧಿಕಾರಿ ಮಮತಾ ದೇವಿ ಜಿ.ಎಸ್., ಜಿಲ್ಲಾ ಕಾರ್ಮಿಕ ಅಧಿಕಾರಿ ಕಮಲ್ ಷಾ ಅಲ್ತಾಫ್ ಅಹಮದ್, ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ನಾಗರಾಜ್ ವಿ. ನಾಯಕ್, ವಿವಿಧ ಸಂಘಟಣೆಗಳ-ಸಂಸ್ಥೆಗಳ ಪ್ರತಿನಿಧಿಗಳು, ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.































































































































































error: Content is protected !!
Scroll to Top