ಮೆಂತೆಯ ಆರೋಗ್ಯ ಲಾಭಗಳು

ಸಾಂಬಾರು ಪದಾರ್ಥಗಳಲ್ಲಿ ಒಂದಾದ ಮೆಂತೆ ಸ್ವಾದವನ್ನು ಅಷ್ಟೇ ಅಲ್ಲದೆ ಆರೋಗ್ಯಕ್ಕೂ ಕೂಡ ಉತ್ತಮವೆನಿಸಿಕೊಂಡಿದೆ. ಮೆಂತೆಯನ್ನು ಅನೇಕ ರೀತಿಯಲ್ಲಿ ನಾವು ದಿನನಿತ್ಯವೂ ಬಳಸುತ್ತೇವೆ. ಮೆಂತ್ಯೆ ಸೊಪ್ಪಿನಿಂದ ಅನೇಕ ರುಚಿಕರ ಅಡುಗೆ ಹಾಗು ಮೆಂತೆಕಾಳಿನಿಂದ ಅನೇಕ ಪದಾರ್ಥಗಳನ್ನು ಮಾಡುವುದುಂಟು. ಸಂಸ್ಕೃತದಲ್ಲಿ ಮೆಂತೆಯನ್ನು ಮೆಥಿಕಾ ಎಂದು ಕರೆಯುತ್ತಾರೆ. ಆಯುರ್ವೇದದ ಅನೇಕ ಔಷಧಿಗಳಲ್ಲಿ ಮೆಂತೆಯನ್ನು ಬಳಸುತ್ತಾರೆ .

ಮೆಂತ್ಯೆ ಕಾಳುಗಳು ನೋಡಲು ಎಷ್ಟು ಚಿಕ್ಕವು ಅದರ ಗುಣ ವಿಶೇಷತೆಗಳು ಅಷ್ಟೇ ದೊಡ್ಡದು. ಮೆಂತೆಯು ಉಷ್ಣವೀರ್ಯ, ಲಘು, ಕಟು ರಸ, ಕಟು ವಿಪಾಕ, ವಾತ ಹಾಗು ಕಫ ದೋಷವನ್ನು ಕಡಿಮೆಗೊಳಿಸುತ್ತದೆ. ಇದರ ಉಪಯೋಗಗಳನ್ನು ಇಂತಿವೆ….,

  1. ಮೆಂತೆಯು ಅಗ್ನಿದೀಪನ ಕಾರ್ಯ ಮಾಡುವುದರಿಂದ ಅಜೀರ್ಣ, ಅಗ್ನಿಮಾಂದ್ಯ, ಬಾಯಿರುಚಿ ಇಲ್ಲದವರಿಗೆ ಒಳ್ಳೆಯದು. ಸ್ವಲ್ಪ ಮೆಂತೆ ಕಾಳನ್ನು ಅಗಿಯುವುದರಿಂದ ಅಥವಾ ಅದರ ಪದಾರ್ಥ ಸೇವನೆಯಿಂದ ಗುಣವಾಗುವುದು.
  2. ಮೆಂತೆಯು ಕಫ ದೋಷವನ್ನು ಕಡಿಮೆಗೊಳಿಸುವುದರಿಂದ ಉಬ್ಬಸ ,ಕೆಮ್ಮು, ಗಂಟಲು ಕೆರೆತದಲ್ಲಿ ಇದರ ಸೇವನೆ ಹಿತಕರ .
  3. ವಾತ ದೋಷವನ್ನು ಕಡಿಮೆಗೊಳಿಸುವುದರಿಂದ ಸಂದು ನೋವಿನಿಂದ ಬಳಲುವವರಿಗೆ ಮೆಂತೆಯು ಉತ್ತಮ ಪರಿಹಾರ ನೀಡುತ್ತದೆ .
  4. ಸಕ್ಕರೆ ಕಾಯಿಲೆಯವರಿಗೆ ಮೆಂತೆಯು ಉತ್ತಮ ಔಷಧವಾಗಬಲ್ಲದು. ರಾತ್ರಿ ಮೂರು ಚಮಚ ಮೆಂತ್ಯೆಕಾಳನ್ನು ಎರಡು ಗ್ಲಾಸ್ ನೀರಿನಲ್ಲಿ ನೆನೆಸಿಟ್ಟು ಮರುದಿನ ಖಾಲಿ ಹೊಟ್ಟೆಯಲ್ಲಿ ಈ ನೀರನ್ನು ಸೇವಿಸುವುದರಿಂದ ಸಕ್ಕರೆ ಕಾಯಿಲೆ ಕಡಿಮೆಯಾಗುತ್ತದೆ.
  5. ಮೆಂತ್ಯೆಯ ಸೇವನೆಯಿಂದ ಜ್ವರ, ಫ್ಯಾಟಿಲಿವರ್, ಹೈಪೊಥೈರಾಯ್ಡಿಸಂ, ಬೊಜ್ಜುತನ ,ಕೊಲೆಸ್ಟ್ರಾಲ್ ಅಸಿಡಿಟಿ ಕಡಿಮೆಯಾಗುತ್ತದೆ.
  6. ಮೆಂತ್ಯೆ ಕಾಳನ್ನು ಹೀಗೆ ಸೇವಿಸಿ – ರಾತ್ರಿ ಮೂರು ಚಮಚ ಮೆಂತ್ಯೆ ಕಾಳನ್ನು ಬಿಸಿನೀರಲ್ಲಿ ನೆನೆಸಿ ಮರುದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಈ ನೆನೆಸಿದ ಮೆಂತ್ಯೆ ಕಾಳನ್ನು ಜೇನುತುಪ್ಪದ ಜೊತೆ ಸೇವಿಸುವುದರಿಂದ ಕಫ ರೋಗಗಳು ದೂರವಾಗುವುದು. ವಾತರೋಗಗಳಲ್ಲಿ ಮೆಂತ್ಯಸೊಪ್ಪನ್ನು ತುಪ್ಪದಲ್ಲಿ ಹುರಿದು ಅಥವಾ ಅದರ ಪದಾರ್ಥವನ್ನು ಮಾಡಿ ಸೇವಿಸುವುದರಿಂದ ಲಾಭವಾಗುವುದು.
  7. ಮೆಂತೆಯು ಕೂದಲಿನ ಆರೈಕೆಗೆ ಉತ್ತಮ ಟಾನಿಕ್. ರಾತ್ರಿ ನಾಲ್ಕು ಚಮಚ ಮೆಂತ್ಯೆ ಕಾಳನ್ನು ನೀರಿನಲ್ಲಿ ನೆನೆಸಿ ಮರುದಿನ ಅದರ ಕಲ್ಕವನ್ನು ತಯಾರಿಸಿ ಅದಕ್ಕೆ ಮೊಸರನ್ನು ಬೆರೆಸಿ ತಲೆಗೆ ಹಾಗೂ ಕೂದಲಿಗೆ ಹಚ್ಚುವುದರಿಂದ ಕೂದಲಿನ ಸಮಸ್ಯೆ ಹಾಗೂ ಡ್ಯಾಂಡ್ರಫ್ ದೂರ ಸರಿಯುವುದು. ಮೆಂತೆಯಿಂದ ತಯಾರಿಸಿದ ಎಣ್ಣೆಯು ಕೂದಲಿಗೆ ಹಚ್ಚುವುದರಿಂದ ಕೂದಲು ಕಪ್ಪು ಹಾಗೂ ಸೊಂಪಾಗಿ ಬೆಳೆಯುತ್ತದೆ. ಒಂದು ಬಟ್ಟಳು ತೆಂಗಿನ ಎಣ್ಣೆಗೆ ಮೂರು ಚಮಚ ಮೆಂತ್ಯೆ ಕಾಳಿನ ಪುಡಿಯನ್ನು ಹಾಕಿ ಕುದಿಸಬೇಕು. ಹದಿನೈದು ಇಪ್ಪತ್ತು ನಿಮಿಷ ಸರಿಯಾಗಿ ಕುದಿಬಂದ ಮೇಲೆ ಅದನ್ನ ಆರಿಸಿ ಉಪಯೋಗಿಸಬಹುದು. ಈ ಎಣ್ಣೆಯು ಕೂದಲಿನ ಎಲ್ಲ ಸಮಸ್ಯೆಗಳಿಗೆ ರಾಮಬಾಣ .
  8. ಹಾಲುಣಿಸುವ ತಾಯಂದಿರಿಗೆ ಇದು ಉತ್ತಮವಾದ ಆಹಾರ. ತುಪ್ಪದಲ್ಲಿ ಹುರಿದ ಮೆಂತೆಸೊಪ್ಪನ್ನು ಸೇವಿಸುವುದು ಒಳ್ಳೆಯದು. ಮೊಳಕೆಯೊಡೆದ ಮೆಂತ್ಯಕಾಳು ಕೂಡ ಆರೋಗ್ಯಕರ .
  9. ಮೆಂತೆಯು ಉಷ್ಣವಿರುವುದರಿಂದ ಪಿತ್ತ ಪ್ರಕೃತಿಯ ವ್ಯಕ್ತಿಗಳಿಗೆ , ಗರ್ಭಿಣಿಯವರಿಗೆ, ಮೂಗಿನಿಂದ ರಕ್ತಸ್ರಾವಯಾದವರಿಗೆ,ಅತಿಸಾರ ಇರುವವರಿಗೆ ಅಧಿಕ ಸೇವನೆ ಹಿತವಲ್ಲ .
  10. ಮೆಂತ್ಯೆ ಕಾಫಿಯನ್ನು ಕೂಡ ಮಾಡಿ ಸೇವಿಸಬಹುದು ಒಂದು ಕಪ್ ಬಿಸಿ ಹಾಲಿಗೆ ಒಂದು ಚಮಚ ಹುರಿದ ಮೆಂತ್ಯೆ ಕಾಳಿನ ಹುಡಿಯನ್ನು ಬೆರೆಸಿ ಕುದಿಸಿ, ನಂತರ ಅದಕ್ಕೆ ಬೆಲ್ಲವನ್ನು ಬೆರೆಸಿ ಕುಡಿಯಿರಿ ಇದು ರುಚಿಕರ ಹಾಗೂ ಆರೋಗ್ಯಕ್ಕೂ ಒಳ್ಳೆಯದು.






error: Content is protected !!
Scroll to Top