ಶಿವಪುರ ಕುಲಾಲ ಸಂಘದ ಮಹಾಸಭೆ, ಸತ್ಯನಾರಾಯಣ ಪೂಜೆ
ಶಿವಪುರ : ದೈವ ದೇವರ ಆಶೀರ್ವಾದದೊಂದಿಗೆ ಹಿರಿಯರ ಮಾರ್ಗದರ್ಶನದಲ್ಲಿ ಸಾಗುವ ಸಮುದಾಯ ಪ್ರಗತಿಯಾಗುತ್ತದೆ. ಶಿವಪುರದ ಮಣ್ಣಿನಲ್ಲಿ ದೇವರ ಆಶೀರ್ವಾದ ಮತ್ತು ಸತ್ವಶಕ್ತಿ ಧಾರಾಳ ಇದೆ ಎಂದು ನಡುಬೊಟ್ಟು ಶ್ರೀ ಉದ್ಭವ ರೌದ್ರನಾಥೇಶ್ವರ ದೇವಾಲಯದ ಧರ್ಮದರ್ಶಿ ರವಿ ಎನ್. ಹೇಳಿದರು.
ಭಾನುವಾರ ಶಿವಪುರ ಶಂಕರ ದೇವ ದೇವಾಲಯದ ಸಭಾಭವನದಲ್ಲಿ ನಡೆದ ಕುಲಾಲ ಸಂಘ ಶಿವಪುರ ಇದರ 9ನೇ ವಾರ್ಷಿಕ ಮಹಾಸಭೆ, ಸತ್ಯನಾರಾಯಣ ಪೂಜೆ ಮತ್ತು ವಿದ್ಯಾರ್ಥಿವೇತನ ವಿತರಣಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಉಡುಪಿ ಜಿಲ್ಲೆ ಮಾನ್ಯತೆ ಪಡೆದಿರುವ ವಿದ್ಯುತ್ ಗುತ್ತಿಗೆದಾರರ ಸಂಘದ ಉಪಾಧ್ಯಕ್ಷ ಕೃಷ್ಣ ಕುಲಾಲ್ ಮಾತನಾಡಿ, ಕಷ್ಟದಲ್ಲಿ ಇರುವವರಿಗೆ ನೀಡುವ ಸಹಾಯದಲ್ಲಿ ಸಾರ್ಥಕ್ಯ ಇದೆ. ಸಂಘಟನೆಯ ಮೂಲಕ ಸಮುದಾಯದ ಜನಸಾಮಾನ್ಯರಿಗೆ ಸಹಾಯವಾಗಬೇಕು ಎಂದರು.
ಶೋಷಿತ ಸಮುದಾಯಗಳು ಸಂಘಟನೆಯ ಮೂಲಕ ಸಾಮಾಜಿಕ ಸ್ಥಾನಮಾನ ಪಡೆಯಬಹುದು. ಆ ನಿಟ್ಟಿನಲ್ಲಿ ಶಿವಪುರ ಸಂಘದ ಕಾರ್ಯ ಅಭಿನಂದನೀಯ ಎಂದು ಸಾಮಾಜಿಕ ಕಾರ್ಯಕರ್ತ ಅಣ್ಣಪ್ಪ ಕುಲಾಲ ಹೆಬ್ರಿ ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಉದಯ ಕುಲಾಲ್ ಪಾಂಡುಕಲ್ಲು ಮಾತನಾಡಿ, ಸಂಘಗಳ ಮೂಲಕ ಸಮಾಜದ ಬಾಂಧವ್ಯ ವೃದ್ಧಿಯಾಗಬೇಕು. ಶಿಕ್ಷಣ, ಸಂಘಟನೆ ಮತ್ತು ಬಾಂಧವ್ಯ ವೃದ್ಧಿ ಸಂಘಟನೆಗಳ ಉದ್ದೇಶವಾಗಿರಬೇಕು. ಅಂತಹ ಕಾರ್ಯ ಶಿವಪುರ ಕುಲಾಲ ಸಂಘದಿಂದ ಆಗುತ್ತಿದೆ ಎಂದರು.
ಧಾರ್ಮಿಕ ಸೇವೆಗಾಗಿ ಧರ್ಮದರ್ಶಿ ರವಿ ಎನ್, ಹಿರಿಯ ನಾಗರಿಕರಾದ ಪದ್ದು ಹಾಂಡ್ತಿ ವಾಂಟ್ಯಾಳ ಮತ್ತು ಶೈಕ್ಷಣಿಕ ಸಾಧನೆ ಮಾಡಿದ ಡಾ. ನಿಶಾ ಕುಲಾಲ್, ಸುಶ್ಮಿತಾ ಕುಲಾಲ್ ಅವರನ್ನು ಸನ್ಮಾನಿಸಲಾಯಿತು. ವಿದ್ಯಾ ಪ್ರೋತ್ಸಾಹಧನ, ವೈದ್ಯಕೀಯ ನೆರವು ನೀಡಲಾಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ನೀಡಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಪೆರ್ಡೂರು ಕುಲಾಲ ಸಂಘದ ಅಧ್ಯಕ್ಷ ಕಾಳು ಕುಲಾಲ್, ಸಂಘದ ಕಾರ್ಯದರ್ಶಿ ಶರತ್ ಕುಲಾಲ್, ಮಹಿಳಾ ಘಟಕದ ಅಧ್ಯಕ್ಷೆ ಪೂರ್ಣಿಮಾ ಗಣೇಶ ಹಾಂಡ, ಜಿಲ್ಲೆಯ ಇತರ ಕುಲಾಲ ಸಂಘದ ಪದಾಧಿಕಾರಿಗಳು, ಶಿವಪುರ ಕೆರೆಬೆಟ್ಟು ಗ್ರಾಮದ ಕುಲಾಲ ಸಮಾಜದವರು ಉಪಸ್ಥಿತರಿದ್ದರು.
ಸಂಘದ ಪದಾಧಿಕಾರಿಗಳಾದ ಸಂತೋಷ ಕುಲಾಲ್ ಸ್ವಾಗತಿಸಿ, ಸುನಂದ ಕುಲಾಲ್ ವಂದಿಸಿದರು. ಉಮೇಶ ಕುಲಾಲ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಅಧ್ಯಾಪಕಿ ಗೀತಾ ಮಂಜುನಾಥ ಕುಲಾಲ್ ಶಿವಪುರ ಕಾರ್ಯಕ್ರಮ ನಿರೂಪಿಸಿದರು.



































































