ಯಾವುದೇ ಸಿವಿಲ್ ಅಥವಾ ಕ್ರಿಮಿನಲ್ ಪ್ರಕರಣವನ್ನು ನ್ಯಾಯಾಲಯವು ವಿಚಾರಣೆ ಮಾಡುವ ಸಂದರ್ಭದಲ್ಲಿ ವಿವಾದಕ್ಕೆ ಸಂಬಂಧಪಟ್ಟ ನಿರ್ದಿಷ್ಟ ವಿಷಯಗಳನ್ನು ಸಾಕ್ಷ್ಯಾಧಾರಗಳ ಮೂಲಕ ರುಜುವಾತು ಪಡಿಸಲು, ಪ್ರಕರಣಕ್ಕೆ ಸಂಬಂಧಪಟ್ಟ ಪಕ್ಷಗಾರರಿಗೆ ಅವಕಾಶ ನೀಡಬೇಕಾಗುತ್ತದೆ. ಈ ಸಂದರ್ಭದಲ್ಲಿ ನ್ಯಾಯಾಲಯಕ್ಕೆ ದಾಖಲೆಗಳನ್ನು ಇತರ ಸಾಕ್ಷಿ ಆಧಾರಗಳೊಂದಿಗೆ ಹಾಜರುಪಡಿಸುವುದು ಅತ್ಯಗತ್ಯವಾಗಿರುತ್ತದೆ. ಯಾವುದೇ ಒಂದು ಬರಹದಿಂದ ಕೂಡಿದ ದಸ್ತಾವೇಜು, ಮುದ್ರಿತವಾದ ಕಲ್ಲಚ್ಚು ಮಾಡಿದ ಅಥವಾ ಛಾಯಾಚಿತ್ರಿತ ಪದಗಳಿಂದ ಕೂಡಿದ ನಕಾಶೆ, ಲೋಹಪಟ್ಟಿಯ ಮೇಲೆ ಅಥವಾ ಶಿಲೆಯ ಮೇಲೆ ಕೆತ್ತಿದ ಬರಹ ವ್ಯಂಗ್ಯಚಿತ್ರ, ಕಂಪ್ಯೂಟರ್ ಲ್ಯಾಪ್‌ಟಾಪ್, ಸ್ಮಾರ್ಟ್ಫೋನ್‌ಗಳಲ್ಲಿನ ಇ-ಮೇಲ್‌ಗಳು, ಸರ್ವರ್ ಲಾಗ್‌ಗಳು, ಸಂದೇಶಗಳು, ಜಾಲತಾಣಗಳು, ಸ್ಥಾನಿಕ ಸಾಕ್ಷ್ಯ ಮತ್ತು ಡಿಜಿಟಲ್ ಸಾಧನಗಳಲ್ಲಿ ಸಂಗ್ರಹವಾದ ಧ್ವನಿ ಮುದ್ರಿತವಾದ ಮೇಲ್ ಸಂದೇಶಗಳು ಭಾರತೀಯ ಸಾಕ್ಷ್ಯ ಅಧಿನಿಯಮದ ಪ್ರಕಾರ ದಸ್ತಾವೇಜು ಅಥವಾ ದಾಖಲೆ ಮೂಲಕದ ಸಾಕ್ಷ್ಯಾಧಾರವೆಂದು ಪರಿಗಣಿಸಲಾಗುತ್ತದೆ.
ದಾಖಲೆ ಅಥವಾ ದಸ್ತಾವೇಜುಗಳಲ್ಲಿ ಸಾರ್ವಜನಿಕ ಮತ್ತು ಖಾಸಗಿ ದಾಖಲೆ ಎಂಬ ಎರಡು ರೀತಿಯ ದಾಖಲೆಗಳಿರುತ್ತದೆ. ದಾಖಲೆಗಳ ಮೂಲಕ ನೀಡುವ ಸಾಕ್ಷ್ಯವು ಪ್ರಾಥಮಿಕ ಸಾಕ್ಷ್ಯ, (ಪ್ರೈಮರಿ ಎವಿಡೆನ್ಸ್) ಮತ್ತು ಎರಡನೆಯ ಸಾಕ್ಷ್ಯ (ಸೆಕೆಂಡರಿ ಎವಿಡೆನ್ಸ್) ಎಂಬ ಎರಡು ವಿಧದ ಸಾಕ್ಷ್ಯಗಳಿರುತ್ತದೆ. ಪ್ರಾಥಮಿಕ ಸಾಕ್ಷ್ಯ ಎಂದರೆ ನ್ಯಾಯಾಲಯದ ಪರಿಶೀಲನೆಗಾಗಿ ಮೂಲ ದಸ್ತಾವೇಜು ಅಥವಾ ಮೂಲ ದಾಖಲೆಗಳನ್ನು ಹಾಜರುಪಡಿಸುವುದು. ಸಾರ್ವಜನಿಕ ಪ್ರಾಧಿಕಾರದ, ಸರಕಾರಿ ನಿಕಾಯಗಳ ಮತ್ತು ನ್ಯಾಯಾಧಿಕರಣಗಳ ಮತ್ತು ಭಾರತ ಅಥವಾ ರಾಷ್ಟ್ರ ಸಮುದಾಯದ ಯಾವುದೇ ಭಾಗದ ಅಥವಾ ಹೊರ ದೇಶದ ಕಾನೂನಾತ್ಮಕ, ನ್ಯಾಯಿಕ ಮತ್ತು ಕಾರ್ಯಾಂಗದ ಸರಕಾರಿ ಅಧಿಕಾರಿಗಳು ತಮ್ಮ ಸಾರ್ವಜನಿಕ ಕಾರ್ಯಗಳನ್ನು ಅಥವಾ ದಾಖಲೆಗಳನ್ನು ರಚಿಸುವ ದಸ್ತಾವೇಜುಗಳು ಅಥವಾ ಖಾಸಗಿ ದಸ್ತಾವೇಜುಗಳನ್ನು ಅಥವಾ ಯಾವುದೇ ರಾಜ್ಯದಲ್ಲಿ ಸಾರ್ವಜನಿಕ ದಾಖಲೆಗಳನ್ನಾಗಿ ಇರಿಸಿರುವ ಖಾಸಗಿ ದಸ್ತಾವೇಜುಗಳನ್ನು ಸಾರ್ವಜನಿಕ ದಸ್ತಾವೇಜುಗಳನ್ನಾಗಿ ಪರಿಗಣಿಸಬೇಕಾಗುತ್ತದೆ. ಮತ್ತು ಇತರ ಎಲ್ಲಾ ದಸ್ತಾವೇಜು ಅಥವಾ ದಾಖಲೆಗಳನ್ನು ಖಾಸಗಿ ದಸ್ತಾವೇಜುಗಳನ್ನಾಗಿ ಪರಿಗಣಿಸಬೇಕಾಗುತ್ತದೆ.
ಸಾರ್ವಜನಿಕ ದಸ್ತಾವೇಜುಗಳ ಪ್ರಮಾಣಿತ ಪ್ರತಿಗಳನ್ನು ಸಂಬಂಧಪಟ್ಟ ಸಾರ್ವಜನಿಕ ಅಧಿಕಾರಿಯು ಅಧಿಕೃತವಾಗಿ ತನ್ನ ಸಹಿ ಹಾಗೂ ಮೊಹರಿನೊಂದಿಗೆ ನೀಡಿದಲ್ಲಿ ಅವುಗಳನ್ನು ಸಾರ್ವಜನಿಕ ದಸ್ತಾವೇಜುಗಳ ಪ್ರಮಾಣಿತ ಪ್ರತಿಗಳು ಎಂದು ಪರಿಗಣಿಸಲ್ಪಡಬೇಕಾಗುತ್ತದೆ. ರಾಜ್ಯ ಪತ್ರಗಳು, ವೃತ್ತ ಪತ್ರಿಕೆಗಳು, ಖಾಸಗಿ ಅಧಿನಿಯಮದ ಅಧಿಕೃತ ಪ್ರತಿಗಳು, ಎಲೆಕ್ಟ್ರಾನಿಕ್ ನಮೂನೆಗಳಲ್ಲಿರುವ ರಾಜ್ಯ ಪತ್ರಗಳು, ಸರಕಾರದ ಪ್ರಾಧಿಕಾರದಿಂದ ಮಾಡಿರುವ ನಕ್ಷೆ ಅಥವಾ ಭೂಪಟಗಳು, ನ್ಯಾಯಾಲಯದ ಅಥವಾ ಸರಕಾರದ ಯಾವುದೇ ಪ್ರಾಧಿಕಾರದಿಂದ ಕಾನೂನು ಬದ್ಧವಾಗಿ ನೀಡಲ್ಪಟ್ಟ ತೀರ್ಮಾನಗಳು, ಯಾವುದೇ ನ್ಯಾಯಾಲಯದ ನ್ಯಾಯಾಧೀಶರಿಂದ, ನೋಟರಿಯಿಂದ ಅಥವಾ ಭಾರತ ದೇಶದ ಅಥವಾ ವಿದೇಶದ ಕಾನ್ಸುಲೇಟ್ ಜನರಲ್ ರಿಂದ ಅಧಿಕೃತವಾಗಿ ಧೃಢೀಕರಿಸಿ ಸಹಿ ಮತ್ತು ಮೊಹರು ಹೊಂದಿರುವ, ಪವರ್ ಆಫ್ ಎಟೋರ್ನಿ, ಎಲೆಕ್ಟ್ರಾನಿಕ್ ದಾಖಲೆಗಳು, ತಂತಿ ಸುದ್ದಿಗಳು, ೩೦ ವರ್ಷಗಳಿಗಿಂತ ಹಳೆಯದಾದ ದಸ್ತಾವೇಜುಗಳು, ೫ ವರ್ಷಗಳಿಗೂ ಹಳೆಯದಾದ ಎಲೆಕ್ಟ್ರಾನಿಕ್ ದಾಖಲೆಗಳು, ವಗೈರೆಗಳು ಭಾರತ ಸಾಕ್ಷ್ಯ ಅಧಿನಿಯಮದ ಪ್ರಕಾರ ವಿಶೇಷವಾದ ಪೂರ್ವಭಾವನೆಗಳನ್ನು (ಪ್ರಿಸಂಶನ್) ಹೊಂದಿರುತ್ತದೆ.


























