ಕ್ರಿಮಿನಲ್ ಅಪರಾಧದಲ್ಲಿ ಪೊಲೀಸ್ ಕಂಪ್ಲೈಂಟ್‌ನ ಮಹತ್ವ

ಯಾವುದೇ ಕ್ರಿಮಿನಲ್ ಕೃತ್ಯದಲ್ಲಿ ಭಾಗಿಯಾದ ವ್ಯಕ್ತಿಯ ವಿರುದ್ಧ ಪೊಲೀಸರು ಅಪರಾಧಿಕ ಕಾನೂನನ್ನು ಚಾಲನೆಗೊಳಿಸುವ ದೃಷ್ಟಿಯಿಂದ ಮತ್ತು ಆತ ನಡೆಸಿದ ಕ್ರಿಮಿನಲ್ ಕೃತ್ಯವನ್ನು ಸಮರ್ಪಕವಾದ ಮತ್ತು ನಂಬಲರ್ಹವಾದ ಸಾಕ್ಷ್ಯಾಧಾರಗಳೊಂದಿಗೆ ನ್ಯಾಯಾಲಯದಲ್ಲಿ ಸಾಬೀತು ಪಡಿಸಿ ಆರೋಪಿಗೆ ಶಿಕ್ಷೆಯನ್ನು ಕೊಡಿಸುವಲ್ಲಿ ಘಟನೆ ಸಂಬಂಧ ಪೊಲೀಸರಿಗೆ ನೀಡುವ ಕಂಪ್ಲೈಂಟ್ ಅಂದರೆ ಮಾಹಿತಿ ಅತ್ಯಂತ ಮಹತ್ವವನ್ನು ಹೊಂದಿರುತ್ತದೆ. ಕಾನೂನಿನ ಪ್ರಕಾರ ಇದನ್ನು ಪ್ರಕರಣದ ತಳಕಟ್ಟು ಅಂದರೆ ಬುನಾದಿ ಎಂದು ಪರಿಗಣಿಸಲ್ಪಡುತ್ತದೆ.

ಯಾವುದೇ ಒಂದು ಅಪರಾಧಿಕ ಘಟನೆ ಅಥವಾ ಕೃತ್ಯ ನಡೆದ ಸಂದರ್ಭಗಳಲ್ಲಿ ಅಪರಾಧಿಕ ಘಟನೆಗೆ ಒಳಗಾದ ನೊಂದ ವ್ಯಕ್ತಿಯೇ ಪೊಲೀಸರಿಗೆ ದೂರು ಇಲ್ಲವೇ ಮಾಹಿತಿಯನ್ನು ನೀಡಬೇಕೆಂಬ ಕಡ್ಡಾಯ ನಿಯಮವಿರುವುದಿಲ್ಲ. ಅಪರಾಧಿಕ ಘಟನೆಯನ್ನು ವೀಕ್ಷಿಸಿದ ಮತ್ತು ಅದರ ಬಗ್ಗೆ ಸರಿಯಾದ ಮಾಹಿತಿಯನ್ನು ಪಡೆದ ವ್ಯಕ್ತಿ ಕೂಡಾ ಪೊಲೀಸರಿಗೆ ದೂರನ್ನು ನೀಡಬಹುದು. ಈ ರೀತಿಯ ದೂರು, ಮಾಹಿತಿಯನ್ನು ಪೊಲೀಸರಿಗೆ ಲಿಖಿತವಾಗಿ ಮತ್ತು ಮೌಖಿಕವಾಗಿ ಸಲ್ಲಿಸಬಹುದಾಗಿದೆ. ದೂರುದಾರರಿಂದ ಪಡೆದ ದೂರು ಅಥವಾ ಮಾಹಿತಿಯನ್ನು ಸಂಬಂಧಪಟ್ಟ ಪೊಲೀಸ್ ಠಾಣಾಧಿಕಾರಿಯು ಠಾಣೆಯ ದೈನಿಕ ದಿನಚರಿಯಲ್ಲಿ ನಮೂದಿಸಿಕೊಂಡು ಅದನ್ನು ಫಸ್ಟ್ ಇನ್‌ಫಾರ್‌ಮೇಶನ್ ರಿಪೋರ್ಟ್ (ಎಫ್.ಐ.ಆರ್.) ಎಂದು ಪರಿಗಣಿಸಿ ನಿಗದಿತ ನಮೂನೆಯಲ್ಲಿ ದಾಖಲಿಸಿ ಪೊಲೀಸ್ ಇಲಾಖೆಯ ವರಿಷ್ಠಾಧಿಕಾರಿಯವರಿಗೆ ಹಾಗೂ ಸಂಬಂಧಪಟ್ಟ ನ್ಯಾಯಾಲಯಕ್ಕೆ ಎಫ್.ಐ.ಆರ್. ಸಲ್ಲಿಸಬೇಕಾಗುತ್ತದೆ. ಯಾವುದೇ ಕ್ರಿಮಿನಲ್ ಕೃತ್ಯದ ಬಗ್ಗೆ ಪೊಲೀಸರು ದೂರುದಾರರಿಂದ ಪಡೆಯುವ ಎಲ್ಲಾ ಪ್ರಾರಂಭಿಕ ವಿವರಣೆಗಳು ಎಫ್.ಐ.ಆರ್. ನಲ್ಲಿ ಅಡಕವಾಗಬೇಕಾಗಿರುವುದರಿಂದ ಪೋಲೀಸರಿಗೆ ಕಂಪ್ಲೈಂಟ್ ನೀಡುವ ಸಂದರ್ಭದಲ್ಲಿ ಘಟನೆಗೆ ಸಂಬಂಧಪಟ್ಟ ಎಲ್ಲಾ ವಿವರಗಳನ್ನು ಅಂದರೆ ಕ್ರಿಮಿನಲ್ ಕೃತ್ಯವನ್ನು ನೇರವಾಗಿ ಮತ್ತು ಪ್ರಚೋದಾತ್ಮಕವಾಗಿ ನಡೆಸಿದ ವ್ಯಕ್ತಿಗಳ ಹೆಸರು, ಅಂದಾಜು ಪ್ರಾಯ ಮತ್ತು ವಿಳಾಸ, ಕೃತ್ಯ ನಡೆದ ಸ್ಥಳ ಮತ್ತು ಸಮಯ, ಕೃತ್ಯ ನಡೆಸಿದ ಉದ್ದೇಶ, ಕೃತ್ಯಕ್ಕೆ ಬಳಸಲಾದ ಆಯುಧಗಳ, ಉಪಕರಣಗಳ ಮತ್ತು ವಾಹನಗಳ ವಿವರ, ಕೃತ್ಯ ನಡೆಸಿದ ವ್ಯಕ್ತಿಗಳು ತಕ್ಷೀರು ಸ್ಥಳದಲ್ಲಿ ಬಿಟ್ಟು ಹೋದ ಯಾವುದೇ ಕುರುಹು ಅಥವಾ ವಸ್ತುವಿನ ವಿವರ ಇತ್ಯಾದಿಗಳನ್ನು ವಿವರವಾಗಿ ನಮೂದಿಸುವುದರಿಂದ ಪೊಲೀಸರು ಕೃತ್ಯದ ವಿಚಾರಣೆಯನ್ನು ಪರಿಣಾಮಕಾರಿಯಾಗಿ ಮತ್ತು ಸಮರ್ಪಕವಾಗಿ ನಡೆಸಿ ಯಾವುದೇ ದೋಷ ರಹಿತವಾದ ಅಂತಿಮ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬಹುದಾಗಿದೆ. ಘಟನೆಯಿಂದಾಗಿ ನೊಂದಿತ ವ್ಯಕ್ತಿಯ ಬಟ್ಟೆ ಹರಿದು ಹೋದಲ್ಲಿ ಅಥವಾ ಆತ ಧರಿಸಿದ ಬಟ್ಟೆಗೆ ರಕ್ತ ಅಥವಾ ಮಣ್ಣು ಇತ್ಯಾದಿ ವಸ್ತುಗಳು ಅಂಟಿಕೊಂಡಲ್ಲಿ ಅದನ್ನು ಕಂಪ್ಲೈಂಟ್‌ನೊಂದಿಗೆ ಪೊಲೀಸರಿಗೆ ನೀಡುವುದರಿಂದ ಪೊಲೀಸರು ಅದನ್ನು ಘಟನೆಗೆ ಸಂಬಂಧಪಟ್ಟ ಸಾಕ್ಷ್ಯಾಧಾರದ ಅಂಶವೆಂದು ಪರಿಗಣಿಸಿ ಜಪ್ತಿ ಮಾಡಿ ಅಂತಿಮ ವರದಿಯೊಂದಿಗೆ ನ್ಯಾಯಾಲಯಕ್ಕೆ ಹಾಜರುಪಡಿಸಬಹುದಾಗಿದೆ. ಕ್ರಿಮಿನಲ್ ಕೃತ್ಯ ಅಥವಾ ಘಟನೆ ನಡೆದ ಕೂಡಲೆ ತಡ ಮಾಡದೇ ಪೊಲೀಸರಿಗೆ ಮಾಹಿತಿಯನ್ನು ನೀಡಬೇಕೆನ್ನುವ ನಿಯಮ ಇರುವುದರಿಂದ ಪೊಲೀಸರಿಗೆ ಕೃತ್ಯದ ಬಗ್ಗೆ ದೂರನ್ನು ನೀಡುವ ಸಂದರ್ಭದಲ್ಲಿ ವಿಳಂಬ ಉಂಟಾದಲ್ಲಿ ಈ ಬಗ್ಗೆ ಸಮಂಜಸವಾದ ಕಾರಣವನ್ನು ದೂರಿನಲ್ಲಿ ನಮೂದಿಸಬೇಕಾಗುತ್ತದೆ.















































error: Content is protected !!
Scroll to Top