ಮಳೆಯಿಂದ ಮಣ್ಣು ಕೊಚ್ಚಿ ಹೋಗಿ ಕಾಂಕ್ರೀಟ್ ರಸ್ತೆಗೆ ಅಪಾಯ
ಹೆಬ್ರಿ : ಹೆಬ್ರಿಯ ಶ್ರೀ ಕಾಡ್ಯಸ್ಥಾನ ಕಾನ್ಬೆಟ್ಟು ಸಂಪರ್ಕಿಸುವ ಪ್ರಮುಖ ರಸ್ತೆಗೆ ಬಯಲುಮನೆ ಹತ್ತಿರ ಮಳೆಯಿಂದಾಗಿ ಹಾನಿಯಾಗಿದೆ. ಕಾಂಕ್ರೀಟ್ ರಸ್ತೆಯ ಬದಿಯ ಮಣ್ಣು ಕೊಚ್ಚಿಹೋಗಿ ರಸ್ತೆಗೆ ಹಾನಿಯಾಗುವ ಸಾಧ್ಯತೆಯಿದೆ. ಇದೇ ರಸ್ತೆಯ ಕಿರಿದಾದ ಸೇತುವೆಯ ಬುಡದವರೆಗೂ ಮಣ್ಣು ಕೊಚ್ಚಿಕೊಂಡು ಹೋಗಿ ಅಡಿಪಾಯದಲ್ಲಿರುವ ಕಲ್ಲುಗಳು ಶಿಥಿಲಗೊಂಡಿವೆ. ದೊಡ್ಡ ವಾಹನಗಳು ಸಂಚರಿಸಿದರೆ ಈ ಸೇತುವೆ ಕುಸಿದುಬೀಳುವ ಸ್ಥಿತಿಯಲ್ಲಿದೆ.
ಹೆಬ್ರಿ ತಾಲೂಕು ಕಾರ್ಯನಿರ್ವಣಾಧಿಕಾರಿ ಶಶಿಧರ್ ಕೆ.ಜಿ. ಸ್ಥಳಕ್ಕೆ ಭೇಟಿ ನೀಡಿ ರಸ್ತೆ ಮತ್ತು ಸೇತುವೆಯನ್ನು ಪರಿಶೀಲಿಸಿ ಸಂಬಂಧಪಟ್ಟ ಇಂಜಿನಿಯರ್ಗೆ ಮಾಹಿತಿ ನೀಡಿ ಸೇತುವೆ ಮತ್ತು ರಸ್ತೆಯನ್ನು ದುರಸ್ತಿ ಮಾಡುವ ಭರವಸೆ ನೀಡಿದ್ದಾರೆ. ಸ್ಥಳೀಯರಾದ ಬಾಲಕೃಷ್ಣ ಶೆಟ್ಟಿ ಮೇಲ್ಮನೆ, ಉದಯ್ ಶೆಟ್ಟಿ ಕೆಳಮನೆ, ಉಷಾ ಶೆಟ್ಟಿ, ಜಯರಾಮ್ ಶೆಟ್ಟಿ, ಸದಾಶಿವ ಶೆಟ್ಟಿ ಮೇಲ್ಮನೆ ಸೇತುವೆ ಮತ್ತು ರಸ್ತೆಗೆ ಅಪಾಯ ಎದುರಾಗಿರುವ ಕುರಿತು ಕಾರ್ಯನಿರ್ವಣಾಧಿಕಾರಿ ಶಶಿಧರ್ ಕೆ.ಜಿ. ಅವರಿಗೆ ಈ ಸಂದರ್ಭದಲ್ಲಿ ವಿವರ ನೀಡಿದರು.

































































