ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಅಧಿನಿಯಮ ಎಂಬ ಕಾನೂನು ಬಹಳ ಹಳೆಯದಾದ ಕಾನೂನುಗಳ ಪೈಕಿ ಒಂದಾಗಿದ್ದು, ಸಾರ್ವಜನಿಕ ಹಿತಾಸಕ್ತಿ ಹೊಂದಿರುವ ವಿವಿಧ ಹಿಂದೂ ದೇವಸ್ಥಾನ ಮತ್ತು ಹಿಂದೂ ಧಾರ್ಮಿಕ ಸಂಸ್ಥೆಗಳನ್ನು ಅಂದರೆ ರಾಜ್ಯ ಸರಕಾರದ ಆಡಳಿತಕ್ಕೊಳಪಟ್ಟಿರುವ, ರಾಜ್ಯ ಸರಕಾರದಿಂದ ವರ್ಷಾಶನ ಅಥವಾ ಇತರ ಅನುದಾನಗಳನ್ನು ಸ್ವೀಕರಿಸುತ್ತಿರುವ ವಿವಿಧ ದೇವಾಲಯಗಳನ್ನು ಮತ್ತು ಧರ್ಮಾದಾಯ ದತ್ತಿಗಳನ್ನು ಕ್ರಮಬದ್ಧಗೊಳಿಸುವ ಮತ್ತು ಅದರ ಆಡಳಿತ ವ್ಯವಸ್ಥೆಯನ್ನು ನಿಯಂತ್ರಿಸಿ ಚುರುಕುಗೊಳಿಸುವ ಹಾಗೂ ಇಂತಹ ಧಾರ್ಮಿಕ ಸಂಸ್ಥೆಗಳಲ್ಲಿನ ಯಾವುದೇ ರೀತಿಯ ಅವ್ಯವಸ್ಥೆ, ಲೋಪದೋಷ ಮತ್ತು ಅಕ್ರಮಗಳನ್ನು ಹೋಗಲಾಡಿಸುವ ಉದ್ದೇಶದಿಂದ ಈ ಮೇಲ್ಕಾಣಿಸಿದ ಕಾನೂನನ್ನು ರಚಿಸಿ ಕಾಲಕಾಲಕ್ಕೆ ತಿದ್ದುಪಡಿಗೊಳಿಸಲಾಗಿದೆ. ಸದ್ಯಕ್ಕೆ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಅಧಿನಿಯಮ 1997 ಎಂಬ ಹೆಸರಿನಲ್ಲಿ ಈ ಕಾನೂನು ಜಾರಿಯಲ್ಲಿದೆ.
ಮೇಲ್ಕಾಣಿಸಿದ ಕಾನೂನಿನಲ್ಲಿ ಈ ಮೊದಲು ಇದ್ದ ವಿವಿಧ ತೊಡಕುಗಳನ್ನು ಮತ್ತು ವಿವಾದಾಂಶಗಳನ್ನು ವಿವರವಾಗಿ ಪರಿಶೀಲಿಸುವುದಕ್ಕಾಗಿ ಭಾರತದ ಸರ್ವೋಚ್ಛ ನ್ಯಾಯಾಲಯವು ಈ ಹಿಂದೆ ಒಂದು ಉನ್ನತ ಮಟ್ಟದ ಸಮಿತಿಯನ್ನು ರಚಿಸಿ ಸದರಿ ಸಮಿತಿಯ ವರದಿಯನ್ನು ಪರಿಶೀಲಿಸಿ ಸರಕಾರಕ್ಕೆ ನೀಡಿರುವ ನಿರ್ದೇಶನಗಳನ್ನು ಪರಿಗಣಿಸಿ ನಮ್ಮ ಕನಾರ್ಟಕ ರಾಜ್ಯ ಸರಕಾರವು ಮೇಲ್ಕಾಣಿಸಿದ ಕಾನೂನನ್ನು ತಿದ್ದುಪಡಿ ಮಾಡಿರುತ್ತದೆ. ತಿದ್ದುಪಡಿಯಾದ ಕಾನೂನಿನ ಪ್ರಕಾರ ಮಠಾಧಿಪತಿಗಳು ಮಠಗಳ ಮುಖ್ಯಸ್ಥರಾಗಿರುವುದರಿಂದ ಮತ್ತು ಅದರ ನಿರ್ವಹಣೆಯನ್ನು ನೋಡಿಕೊಳ್ಳುವುದರಿಂದ ಮಠಗಳು ಮತ್ತು ಮಠಗಳಿಗೆ ಸೇರಿದ ದೇವಸ್ಥಾನಗಳನ್ನು ಈ ಅಧಿನಿಯಮದ ವ್ಯಾಪ್ತಿಯಿಂದ ಹೊರಗಿಡಲಾಗಿದೆ. ಆದರೆ ಸಂದರ್ಭಕ್ಕನುಸಾರವಾಗಿ ಖಾಸಗಿ ದೇವಸ್ಥಾನಗಳ ನೊಂದಣಿಗಾಗಿ ಉಪಬಂಧವನ್ನು ಕಲ್ಪಿಸಲಾಗಿದೆ. ವಿವಿಧ ಧಾರ್ಮಿಕ ಸಂಸ್ಥೆಗಳ ಉತ್ತಮ ಆಡಳಿತ ನಿರ್ವಹಣೆಗಾಗಿ ಅದರ ಆಡಳಿತವನ್ನು ನೋಡಿಕೊಳ್ಳಲು ಮತ್ತು ವಿವಾದಗಳನ್ನು ಇತ್ಯರ್ಥಪಡಿಸಲು ರಾಜ್ಯ ಮಟ್ಟದಲ್ಲಿ ರಾಜ್ಯ ಧಾರ್ಮಿಕ ಪರಿಷತ್ ಮತ್ತು ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಧಾರ್ಮಿಕ ಪರಿಷತ್ ಅನ್ನು ರಚಿಸಲಾಗಿದೆ. ನೊಂದಾಯಿತ ಟ್ರಸ್ಟಿನ, ಅರ್ಚಕರ ಮತ್ತು ದೇವಸ್ಥಾನದ ನೌಕರರ ವಂಶಪಾರ್ಯ ಹಕ್ಕುಗಳನ್ನು ಸಂರಕ್ಷಿಸಲು ಅವಕಾಶವನ್ನು ಕಲ್ಪಿಸಲಾಗಿದೆ. ದೇವಸ್ಥಾನದ ಹುಂಡಿಯ ಹಣದಲ್ಲಿ ಮತ್ತು ದೇವಸ್ಥಾನದ ನೌಕರರ ಆದಾಯದಲ್ಲಿ ಪಾಲು ಪಡೆಯುವುದನ್ನು ನಿಷೇದಿಸಲಾಗಿದೆ. ಖಾಸಗಿ ವ್ಯಕ್ತಿಗಳು ಮತ್ತು ಸಂಘ ಸಂಸ್ಥೆಗಳು ದೇವಸ್ಥಾನದ ಹೆಸರಿನಲ್ಲಿ ಸಾರ್ವಜನಿಕರಿಂದ ನಿಧಿ ಸಂಗ್ರಹಿಸುವುದನ್ನು ನಿಷೇಧಿಸಲಾಗಿದೆ. ದೇವಸ್ಥಾನದ ಅಭಿವೃದ್ಧಿ ಕಾಮಗಾರಿಗಳಿಗೆ ರಾಜ್ಯ ಮಟ್ಟದ ವಾಸ್ತುಶಿಲ್ಪ ಸಮಿತಿಯನ್ನು ರಚಿಸುವುದಕ್ಕಾಗಿ ಅವಕಾಶ ಕಲ್ಪಿಸಲಾಗಿದೆ. ದೇವಸ್ಥಾನದ ಭೂಮಿ ಮತ್ತು ಸ್ವತ್ತಿನ ಒತ್ತುವರಿಯನ್ನು ತಪ್ಪಿಸುವುದಕ್ಕಾಗಿ ಮೋಜಣಿ ಅಂದರೆ ಸರ್ವೇ ವಿಭಾಗವನ್ನು ಸ್ಥಾಪಿಸಲಾಗಿದೆ ಹಾಗೂ ದೇವಸ್ಥಾನದ ಆಡಳಿತದ ನಿರ್ವಹಣೆಗಾಗಿ ಅವಶ್ಯಕವಾದ ಕೆಲವು ನಿಯಮಗಳನ್ನು ರಚಿಸುವುದಕ್ಕಾಗಿ ಉಪಬಂಧಗಳನ್ನು ಕಲ್ಪಿಸಲಾಗಿದೆ.
ಈ ಕಾನೂನಿನ ಪರಿಮಿತಿಯೊಳಗಿನ ಯಾವುದೇ ಹಿಂದೂ ಧಾರ್ಮಿಕ ಸಂಸ್ಥೆಗೆ ಸೇರಿದ ದೇವಸ್ಥಾನದ ಅರ್ಚಕರನ್ನು ಮತ್ತು ನೌಕರರನ್ನು ನೇಮಿಸುವ ಅಧಿಕಾರವನ್ನು ರಾಜ್ಯ ಸರಕಾರ ಹೊಂದಿರುತ್ತದೆ. ಒಬ್ಬರಿಗಿಂತ ಹೆಚ್ಚು ಅರ್ಚಕರನ್ನು ನೇಮಕ ಮಾಡಿದಲ್ಲಿ, ಅವರ ಪೈಕಿ ಹಿರಿಯನಾದವನು ಪ್ರಧಾನ ಅರ್ಚಕನಾಗಿರತಕ್ಕದ್ದು. ಅರ್ಚಕರು ಮತ್ತು ಪ್ರಧಾನ ಅರ್ಚಕರು ನೇಮಕವಾಗಿದ್ದಲ್ಲಿ ಅವರು, ಆಡಳಿತ ಸಮಿತಿಯು ನಿರ್ದಿಷ್ಟಪಡಿಸಬಹುದಾದಂಥ ಕರ್ತವ್ಯಗಳನ್ನು ನಿರ್ವಹಿಸಬೇಕಾಗುತ್ತದೆ. ಅರ್ಚಕನ ನೇಮಕಾತಿ ಸಂದರ್ಭದಲ್ಲಿ ಆತನು ಮನ್ನಣೆ ಪಡೆದ ಯಾವುದೇ ಸಂಸ್ಕೃತ ಪಾಠಶಾಲೆಯಿಂದ ಅಥವಾ ರಾಜ್ಯ ಸರ್ಕಾರವು ಸರಕಾರಿ ರಾಜ್ಯ ಪತ್ರದಲ್ಲಿ ಅಧಿಸೂಚನೆ ಹೊರಡಿಸುವ ಮೂಲಕ ನಿರ್ದಿಷ್ಟ ಪಡಿಸಬಹುದಾದ ಇತರ ಯಾವುದೇ ಸಂಸ್ಥೆಯಿಂದ ದೇವಸ್ಥಾನದ ಪರಂಪರೆಯ ಆಗಮದಲ್ಲಿ ಕನಿಷ್ಠ ಪಕ್ಷ ಸರ್ಟಿಫಿಕೇಟ್ ಕೋರ್ಸ್ನಲ್ಲಿ ಉತ್ತೀರ್ಣನಾಗಿರತಕ್ಕದ್ದು ಅಥವಾ ದೇವಾಲಯದ ಪರಂಪರೆಯಲ್ಲಿ ಕನಿಷ್ಟ ಪಕ್ಷ ಮೂರು ವರ್ಷಗಳ ಕಾಲ ಅರ್ಚಕನಾಗಿ ಸೇವೆ ಸಲ್ಲಿಸಿರಬೇಕು. ವಿಶೇಷ ಸಂದರ್ಭದಲ್ಲಿ ದೇವಸ್ಥಾನದಲ್ಲಿ ಪೂಜೆ ನಿರ್ವಹಿಸಲು ಯಾವುದೇ ದೇವಸ್ಥಾನದಲ್ಲಿ ನೇಮಕ ಮಾಡಲಾದ ಆಗಮಿಕ ಅಥವಾ ತಂತ್ರಿಯು, ಆಡಳಿತ ಸಮಿತಿಯು ನಿರ್ದಿಷ್ಟಪಡಿಸಬಹುದಾದಂಥ ಪ್ರಕಾರ್ಯಗಳನ್ನು ನಿರ್ವಹಿಸುವುದನ್ನು ಮುಂದುವರಿಸಬೇಕು. ವೇದ ಮಂತ್ರಗಳನ್ನು, ಶ್ಲೋಕಗಳನ್ನು ಪಠಿಸುವುದು ಕಡ್ಡಾಯವಾಗಿಲ್ಲದಿರುವ ದೇವಸ್ಥಾನಗಳನ್ನು ಹೊರತುಪಡಿಸಿ, ಸಂಬಂಧಪಟ್ಟ ದೇವಸ್ಥಾನದಲ್ಲಿ ಧಾರ್ಮಿಕ ವಿಧಿಗಳಿಗೆ ಸಂಬಂಧಪಟ್ಟ ವೇದ ಮಂತ್ರಗಳನ್ನು ಅಥವಾ ಶ್ಲೋಕಗಳನ್ನು ಸ್ಪಷ್ಟವಾಗಿ ಮತ್ತು ಯಾವುದೇ ತಪ್ಪಿಲ್ಲದಂತೆ ಪಠಿಸಲು ಸಮರ್ಥನಾಗಿರಬೇಕು. ನೇಮಕಾತಿ ಬಯಸುವ ಅರ್ಚಕನು ಸಪ್ತವ್ಯಸನಗಳಿಂದ ಅಂದರೆ ಜೂಜಾಟ, ಮದ್ಯಪಾನ, ಮಾದಕ ದ್ರವ್ಯ ಸೇವನೆ, ಧೂಮಪಾನ, ಅನೈತಿಕ ಲೈಂಗಿಕ ವರ್ತನೆ, ಕಳ್ಳತನ ಮತ್ತು ಮೋಸ ಇವುಗಳಿಂದ ಮುಕ್ತನಾಗಿರಬೇಕು. ಮೇಲ್ಕಾಣಿಸಿದ ಕಾನೂನಿನ ಪ್ರಕಾರ ನೊಂದಾಯಿಸಲ್ಪಟ್ಟ ಹಿಂದೂ ದೇವಾಲಯ ಅಥವಾ ಧಾರ್ಮಿಕ ಸಂಸ್ಥೆಯು ದೇವರ ಪ್ರಸಾದ ಅಥವಾ ತೀರ್ಥವನ್ನು ವಿತರಿಸುವ ಸಂದರ್ಭದಲ್ಲಿ ಜಾತಿ, ಲಿಂಗ, ಜನ್ಮಸ್ಥಳ ಅಥವಾ ಇತರ ಯಾವುದೇ ಕಾರಣದ ಆಧಾರದಲ್ಲಿ ತಾರತಮ್ಯ ಮಾಡುವುದನ್ನು ನಿಷೇಧಿಸಲಾಗಿದೆ.
























