ಎಲ್ಲಿ ಅಡಗಿದ್ದರೂ ತಂದು ನಿಲ್ಲಿಸುತ್ತೇನೆ ಎಂದಿದ್ದ ದೈವದ ನುಡಿ ನಿಜವಾಯಿತು
ಕಾಪು : ಕಳೆದ ವರ್ಷ ಫೆ. 5ರಂದು ಪಾಂಗಾಳದಲ್ಲಿ ದೈವದ ಕೋಲ ನಡೆಯುತ್ತಿರುವಾಗಲೇ ನಡೆದಿದ್ದ ಪಾಂಗಾಳ ಮಂಡೇಡಿಯ ಶರತ್ ಶೆಟ್ಟಿ (42) ಕೊಲೆ ಪ್ರಕರಣದ ಪ್ರಮುಖ ಆರೋಪಿ ಯೋಗೀಶ್ ಆಚಾರ್ಯ ನ್ಯಾಯಾಲಯಕ್ಕೆ ಶರಣಾಗಿದ್ದಾನೆ. ಅವನನ್ನು ಮೇ 30ರ ವರೆಗೆ ಕಾಪು ಪೊಲೀಸರು ಕಸ್ಟಡಿಗೆ ಪಡೆದುಕೊಂಡಿದ್ದಾರೆ.
ಶರತ್ ಶೆಟ್ಟಿ ಕೊಲೆ ಬಳಿಕ ಆರೋಪಿ ಯೋಗೀಶ್ ಆಚಾರ್ಯ ತಲೆಮರೆಸಿಕೊಂಡಿದ್ದ. ಇದೀಗ ಆತ ತಾನಾಗಿಯೇ ಮೇ 23ರಂದು ಉಡುಪಿಯ 3ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಮತ್ತು ಪ್ರಥಮ ದರ್ಜೆ ನ್ಯಾಯಾಲಯಕ್ಕೆ ವಕೀಲರ ಮೂಲಕ ಹಾಜರಾಗಿ ಶರಣಾಗಿದ್ದನು. ಬಳಿಕ ವಿಚಾರಣೆ ನಡೆಸಿದ ಕೋರ್ಟ್ 14 ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಿತ್ತು. ಪ್ರಕರಣದ ಪ್ರಸ್ತುತ ತನಿಖಾಧಿಕಾರಿಯಾಗಿರುವ ಕಾಪು ವೃತ್ತ ನಿರೀಕ್ಷಕಿ ಜಯಶ್ರೀ ಮಾನೆ ಅವರು ಆರೋಪಿ ಯೋಗೀಶ್ನ್ನು ನ್ಯಾಯಾಂಗ ಬಂಧನದಿಂದ ಹೆಚ್ಚಿನ ತನಿಖೆ ನಡೆಸಲು ಪೊಲೀಸ್ ಕಸ್ಟಡಿಗೆ ತೆಗೆದುಕೊಂಡಿರುತ್ತಾರೆ.
ಕೊಲೆ ನಡೆದು ಹಲವು ದಿನಗಳಾದರೂ ಆರೋಪಿ ಪತ್ತೆಯಾಗದೆ ಇರುವುದರಿಂದ ಹತಾಶರಾಗಿದ್ದ ಶರತ್ ಶೆಟ್ಟಿ ಮನೆಯವರು ದೈವದ ಮುಂದೆ ಅರಿಕೆ ಸಲ್ಲಿಸಿದ್ದರು. ಆಗ ದೈವ ತಪ್ಪು ಮಾಡಿದಾತ ಯಾವ ಪಾತಾಳದಲ್ಲಿ ಅಡಗಿದ್ದರೂ ತಂದು ನಿಲ್ಲಿಸುವುದಾಗಿ ಅಭಯ ನೀಡಿತ್ತು. ಅದರಂತೆ ಸರಿಯಾಗಿ ಒಂದು ವರ್ಷ ಮೂರು ತಿಂಗಳಾಗುವಷ್ಟರಲ್ಲಿ ಆರೋಪಿ ತಾನಾಗಿಯೇ ಬಂದು ಶರಣಾಗಿರುವುದರಿಂದ ದೈವದ ನುಡಿ ನಿಜವಾಗಿದೆ ಎಂದು ಜನರಾಡಿಕೊಳ್ಳುತ್ತಿದ್ದಾರೆ.
ಧಾರ್ಮಿಕ, ಸಾಮಾಜಿಕ ಕಾರ್ಯಗಳಲ್ಲಿ ಸಕ್ರಿಯರಾಗಿದ್ದ ಶರತ್ ಶೆಟ್ಟಿಯವರನ್ನು ದೈವದ ಕೋಲ ನಡೆಯುತ್ತಿರುವಾಗಲೇ ಮಾತುಕತೆಗೆಂದು ದೂರ ಕರೆದುಕೊಂಡು ಹೋಗಿ ಡ್ರ್ಯಾಗನ್ನಿಂದ ಇರಿದು ಬರ್ಬರವಾಗಿ ಸಾಯಿಸಿದ್ದರು. ಈ ಕೊಲೆ ಪ್ರಕರಣ ಕರಾವಳಿಯಲ್ಲಿ ಭಾರಿ ಚರ್ಚೆಗೆ ಕಾರಣವಾಗಿತ್ತು.

ಆರೋಪಿ ಯೋಗೀಶ್ನೊಂದಿಗೆ ಪೊಲೀಸರು ವಿವಿಧೆಡೆ ಸ್ಥಳ ಮಹಜರು ನಡೆಸಿದ್ದಾರೆ. ತನಿಖೆಗಾಗಿ ಆರೋಪಿಯ ಮನೆ, ಹತ್ಯೆ ನಡೆದಿದ್ದ ಪರಿಸರ, ಪಾಂಗಳ ಹೊಳೆ ಸೇರಿ ವಿವಿಧೆಡೆ ಕರೆದೊಯ್ದಿದ್ದಾರೆ. ಆರೋಪಿ ಯೋಗೀಶ್, ಶರತ್ ಶೆಟ್ಟಿ ಹತ್ಯೆಗೆ ಸಂಬಂಧಿಸಿದಂತೆ ಮಹತ್ವದ ಮಾಹಿತಿಯನ್ನು ಪೊಲೀಸರಿಗೆ ತಿಳಿಸಿದ್ದಾನೆ ಎನ್ನಲಾಗಿದೆ.






























































