ಸ್ನೇಹಿತರನ್ನು ರಕ್ಷಿಸಲು ಯತ್ನಿಸಿ ಕೊಚ್ಚಿಹೋದ ಯುವಕ
ಮಂಗಳೂರು: ಮೂಲ್ಕಿ ಸಮೀಪ ಮುಂಡಾ ಬೀಚ್‌ನಲ್ಲಿ ಯುವಕನೊಬ್ಬ ನೀರು ಪಾಲಾದ ಘಟನೆ ಭಾನುವಾರ ಸಂಭವಿಸಿದೆ. ಕೊಳಚಿ ಕಂಬಳ ಬೀಚ್ ಬಳಿಯಿಂದ ಸಸಿಹಿತ್ಲು ಮುಂಡಾ ಬೀಚ್ ಬಳಿಯ ಸಮುದ್ರದ ಅಳಿವೆ ಬಾಗಿಲಿನಲ್ಲಿ ಬಜಪೆಯ ಅದ್ಯಪಾಡಿಯಿಂದ ಬಂದ ಯುವಕರ ತಂಡ ಚಿಪ್ಪು ಹೆಕ್ಕಲು ಹೋಗಿ, ಓರ್ವ ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದಾನೆ.
ನಾಪತ್ತೆಯಾದ ಯುವಕನನ್ನು ಬಜಪೆಯ ಅದ್ಯಪಾಡಿಯ ಹಳೆ ವಿಮಾನ ನಿಲ್ದಾಣ ಬಳಿಯ ನಿವಾಸಿ ಅಭಿಲಾಷ್(24) ಎಂದು ಗುರುತಿಸಲಾಗಿದೆ. ಮುಲ್ಕಿಯ ಕೊಳಚಿಕಂಬಳದ ಬಳಿಯ ಸಸಿಹಿತ್ಲು ಮುಂಡಾ ಬೀಚ್ ತೀರದ ಅಳಿವೆ ಪ್ರದೇಶಕ್ಕೆ ಭಾನುವಾರ ಬೆಳಗ್ಗೆ ಬಜಪೆಯ ಆದ್ಯಪಾಡಿಯ ಹಾಗೂ ಹತ್ತಿರದ ಪ್ರದೇಶದ ಸುಮಾರು 10 ಯುವಕರು ಮರುವಾಯಿ ಹೆಕ್ಕಲು ಬಂದಿದ್ದರು. ಶಾಂಭವಿ ನದಿಯಲ್ಲಿ ನೀರಿನ ಇಳಿತವಿದ್ದ ಕಾರಣ ಸುಮಾರು ಎರಡು ಕಿಲೋಮೀಟರ್ ನಡೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ. ಈ ಸಂದರ್ಭ ಸಸಿಹಿತ್ಲು ಮುಂಡಾ ಬೀಚ್ ಅಳಿವೆ ಬಾಗಿಲು ಬಳಿ ನೀರಿನ ಆಳ ಗೊತ್ತಾಗದೆ ಈಜು ಬಾರದ ಧನುಷ್ ಮತ್ತು ಜೀವನ್ ಎಂಬವರು ನೀರಿನಲ್ಲಿ ಮುಳುಗಿದ್ದು ಅವರನ್ನು ರಕ್ಷಿಸಲು ಈಜಲು ಗೊತ್ತಿದ್ದ ಅಭಿಲಾಷ್ ಮುಂದಾಗಿದ್ದಾರೆ. ಆದರೆ ಅವರನ್ನು ರಕ್ಷಿಸುವ ಯತ್ನದಲ್ಲಿ ಉಳಿದವರ ಕಣ್ಣೆದುರೇ ನೀರಿನ ರಭಸಕ್ಕೆ ತಾನು ನೀರಿನಲ್ಲಿ ಮುಳುಗಿದ್ದಾರೆ ಎನ್ನಲಾಗಿದೆ.
ಉಳಿದವರ ಬೊಬ್ಬೆ ಕೇಳಿ ಸ್ಥಳಕ್ಕೆ ಹೆಜಮಾಡಿ ಮೀನುಗಾರರ ತಂಡದ ಸದಾಶಿವ ಕೋಟ್ಯಾನ್ ಧಾವಿಸಿ ಧನುಷ್ ಮತ್ತು ಜೀವನ್‌ರವರನ್ನು ರಕ್ಷಿಸಿದ್ದಾರೆ. ಆದರೆ ನೀರಿನಲ್ಲಿ ಮುಳುಗಿದ ಅಭಿಲಾಷ್ ಪತ್ತೆಯಾಗಿಲ್ಲ.
ಅಭಿಲಾಷ್ ಅವಿವಾಹಿತರಾಗಿದ್ದು ಮಂಗಳೂರು ರೈಲ್ವೆಲ್ಲಿ ಗುತ್ತಿಗೆದಾರನಾಗಿ ಕಾರ್ಯನಿರ್ವಹಿಸುತ್ತಿದ್ದರು. ಭಾನುವಾರ ರಜಾ ದಿನವಾದ ಕಾರಣ ಮರುವಾಯಿ ಹೆಕ್ಕಲು ಬಂದಿದ್ದರು ಎಂದು ಮಿತ್ರರು ಹೇಳಿದ್ದಾರೆ. ಅಭಿಲಾಷ್ ಪತ್ತೆಗೆ ಎಸ್‌ಡಿಆರ್‌ಎಫ್ ತಂಡ, ಕರಾವಳಿ ಕಾವಲು ಪಡೆಯ ಹೆಜ್ಮಾಡಿ, ಮುಲ್ಕಿ ಹಾಗೂ ಸುರತ್ಕಲ್ ಪೊಲೀಸರ ತಂಡ ಶ್ರಮಿಸುತ್ತಿದೆ.































































