ಕ್ರಿಮಿನಲ್ ಅಪರಾಧಗಳ ತನಿಖೆ – ಪೊಲೀಸರ ಅಧಿಕಾರ ಮತ್ತು ಕರ್ತವ್ಯಗಳು

ಸಾರ್ವಜನಿಕ ವಲಯದಲ್ಲಿನ ವಿವಿಧ ರೀತಿಯ ಅಪರಾಧಗಳನ್ನು ಪತ್ತೆ ಹಚ್ಚಿ ಕೃತ್ಯದಲ್ಲಿ ಭಾಗಿಯಾದ ಅಪರಾಧಿಗಳನ್ನು ಕಾನೂನಿನ ಚೌಕಟ್ಟಿನೊಳಗೆ ಬಂಧಿಸಿ ಅವರಿಗೆ ಕಾನೂನು ಪ್ರಕಾರ ನಿಗದಿಸಲ್ಪಟ್ಟ ಶಿಕ್ಷೆಗೆ ಗುರಿಪಡಿಸುವುದು ಹಾಗೂ ಅಪರಾಧಗಳನ್ನು ನಿಯಂತ್ರಿಸಿ ನಾಗರಿಕರಿಗೆ ರಕ್ಷಣೆ ನೀಡುವುದು ಪೊಲೀಸ್ ಇಲಾಖೆಯ ಆದ್ಯ ಕರ್ತವ್ಯವಾಗಿರುತ್ತದೆ. ಅಪರಾಧದ ತನಿಖೆ ಎಂದರೆ ನಡೆದಿದೆ ಎನ್ನಲಾದ ಯಾವುದೇ ಅಪರಾಧದ ಕುರಿತಂತೆ ವಿವಿಧ ಸುಳಿವು ಮತ್ತು ಮಾಹಿತಿಗಳ ಸಂಗ್ರಹಣೆ, ಅಪರಾಧ ನಡೆಸಿದ ವ್ಯಕ್ತಿಯ ಪತ್ತೆ, ಅಪರಾಧವನ್ನು ನ್ಯಾಯಾಲಯದಲ್ಲಿ ರುಜುವಾತು ಪಡಿಸಲು ಅಗತ್ಯವುಳ್ಳ ವಿವಿಧ ಸಾಕ್ಷ್ಯಾಧಾರಗಳ ಸಂಗ್ರಹಣೆ ಇತ್ಯಾದಿಗಳನ್ನು ಪೊಲೀಸರು ಕಾನೂನಿನ ಚೌಕಟ್ಟಿನ ಒಳಗೆ ಸಂಗ್ರಹಿಸಿ ಸಂಬಂಧಪಟ್ಟ ದಂಡಾಧಿಕಾರಿ ಅಂದರೆ ನ್ಯಾಯಾಧೀಶರ ಮುಂದೆ ಹಾಜರು ಪಡಿಸುವ ಪ್ರಕ್ರಿಯೆಯಾಗಿರುತ್ತದೆ. ಈ ಪ್ರಕ್ರಿಯೆ ಎರಡು ಪ್ರಮುಖ ಅಂಶಗಳನ್ನು ಒಳಗೊಂಡಿದ್ದು ಮೊದಲನೆಯದಾಗಿ ಅಪರಾಧ ಕೃತ್ಯದ ಶೋಧನೆಯನ್ನು ನಡೆಸಿ ಆರೋಪಿಯನ್ನು ಬಂಧಿಸುವುದು ಮತ್ತು ಎರಡನೆಯದಾಗಿ ಬಂಧಿಸಲ್ಪಟ್ಟ ಆರೋಪಿಯನ್ನು ನ್ಯಾಯಾಲಯದ ಸಮಕ್ಷಮ ಹಾಜರು ಪಡಿಸಿ ಆತನ ವಿರುದ್ಧದ ಅಪರಾಧಗಳ ಬಗ್ಗೆ ದೋಷಾರೋಪಣ ಪಟ್ಟಿಯೊಂದಿಗೆ (ಚಾರ್ಜ್ ಶೀಟ್) ಸೂಕ್ತ ಸಾಕ್ಷಿ ಪುರಾವೆಯನ್ನು ನ್ಯಾಯಾಲಯಕ್ಕೆ ಒದಗಿಸುವುದು.

ಯಾವುದೇ ಒಂದು ಕ್ರಿಮಿನಲ್ ಅಪರಾಧದ ಬಗ್ಗೆ ತನಿಖೆಯನ್ನು (ಇನ್ವೆಸ್ಟಿಗೇಷನ್) ಮಾಡುವ ಅಧಿಕಾರವನ್ನು ಪೊಲೀಸರು ಹೊಂದಿದ್ದರೆ ಪೊಲೀಸರ ತನಿಖೆಯ ಆಧಾರದಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಲ್ಪಡುವ ಪ್ರಕರಣವನ್ನು ವಿಚಾರಣೆ ನಡೆಸುವ ಮತ್ತು ಸಂಬಂಧಪಟ್ಟ ವ್ಯಕ್ತಿಯ ಮೇಲಿನ ಆಪಾದನೆಯ ಕುರಿತು ನಿಜಾಂಶದ ಬಗ್ಗೆ ಸೂಕ್ತ ತೀರ್ಮಾನವನ್ನು ನೀಡಿ ಆರೋಪಿಗೆ ಸೂಕ್ತ ಶಿಕ್ಷೆ ನೀಡುವ ಅಥವಾ ಆತನನ್ನು ನಿರ್ದೋಷಿ ಎಂದು ತೀರ್ಮಾನಿಸಿ ಬಿಡುಗಡೆ ಮಾಡುವ ಅಂತಿಮ ಅಧಿಕಾರವನ್ನು ನ್ಯಾಯಾಲಯವು ಹೊಂದಿರುತ್ತದೆ. ಯಾವುದೇ ಒಂದು ಕ್ರಿಮಿನಲ್ ಪ್ರಕರಣದಲ್ಲಿನ ತನಿಖೆಯನ್ನು ಪೊಲೀಸರು ಕಾನೂನಿನ ನಿಯಮಾನುಸಾರವಾಗಿ ಮತ್ತು ನಿಷ್ಷಕ್ಷಪಾತವಾಗಿ ನಡೆಸದೆ ಸುಳ್ಳು, ಏಕಪಕ್ಷೀಯ ಅಥವಾ ಅಪೂರ್ಣ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ ಸಂದರ್ಭದಲ್ಲಿ ಅನ್ಯಾಯಕ್ಕೊಳಗಾದ ವ್ಯಕ್ತಿಗಳು ಪೊಲೀಸ್ ವರದಿಯನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿ, ಆಕ್ಷೇಪ ಸಲ್ಲಿಸುವ ಮತ್ತು ತಮ್ಮ ಆಕ್ಷೇಪಕ್ಕೆ ಪೂರಕವಾಗಿ ಸೂಕ್ತ ದಾಖಲೆ ಅಥವಾ ಸಾಕ್ಷಾಧಾರಗಳನ್ನು ನ್ಯಾಯಾಲಯಕ್ಕೆ ಸಲ್ಲಿಸುವ ಕಾನೂನುಬದ್ಧ ಅಧಿಕಾರವನ್ನು ಹೊಂದಿರುತ್ತಾರೆ.

ಕ್ರಿಮಿನಲ್ ಅಪರಾಧಗಳಲ್ಲಿ ಎರಡು ವಿಧದ ಅಪರಾಧಗಳಿರುತ್ತದೆ. ಮೊದಲನೆಯದಾಗಿ ಸಂಜ್ಞೇಯ ಅಪರಾಧಗಳು ಮತ್ತು ಎರಡನೆಯದಾಗಿ ಅಸಂಜ್ಞೇಯ ಅಪರಾಧಗಳು. ಸಂಜ್ಞೇಯ (ಕೋಗ್ನಿಜಿಬಲ್) ಅಪರಾದಲ್ಲಿ ಭಾಗಿಯಾದ ವ್ಯಕ್ತಿಯನ್ನು ಪೊಲೀಸರು ಯಾವುದೇ ವಾರಂಟ್ ಇಲ್ಲದೇ ದಸ್ತಗಿರಿ ಮಾಡಬಹುದಾಗಿದೆ. ಆದರೆ ಅಸಂಜ್ಞೇಯ (ನೋನ್ ಕೋಗ್ನಿಜಿಬಲ್) ಅಪರಾದಲ್ಲಿ ಭಾಗಿಯಾದ ವ್ಯಕ್ತಿಯನ್ನು ದಸ್ತಗಿರಿ ಮಾಡಲು ಪೊಲೀಸರಿಗೆ ವಾರಂಟ್‌ನ ಅಗತ್ಯವಿದೆ. ಇಂತಹ ಅಸಂಜ್ಞೇಯ ಅಪರಾಧಗಳ ಕುರಿತು ಪೊಲೀಸ್ ಅಧಿಕಾರಿ ಯಾರಿಂದಾದರೂ ಮಾಹಿತಿ ಪಡೆದ ಸಂದರ್ಭದಲ್ಲಿ ಅಂತಹ ಮಾಹಿತಿಯನ್ನು ದಾಖಲು ಮಾಡಿಕೊಂಡು ಸಂಬಂಧಪಟ್ಟ ನ್ಯಾಯಾಧೀಶರಿಂದ ಅಪ್ಪಣೆ ಪಡೆದು ವಿಚಾರಣೆ ನಡೆಸಬಹುದಾಗಿದೆ. ಈ ಸಂದರ್ಭದಲ್ಲಿ ನ್ಯಾಯಾಧೀಶರ ಅನುಮತಿಯೊಂದಿಗೆ ಪೊಲೀಸ್ ಅಧಿಕಾರಿ ತನ್ನ ಠಾಣೆಯ ಸರಹದ್ದಿನ ಹೊರಗೆ ಸಹಾ ತನಿಖೆಯನ್ನು ಮಾಡುವ ಅಧಿಕಾರವನ್ನು ಹೊಂದಿರುತ್ತಾನೆ. ಯಾವುದೇ ಒಂದು ಅಪರಾಧ ಕೃತ್ಯದ ಬಗ್ಗೆ ಪೊಲೀಸರಿಗೆ ದೂರು ಬಾರದಿದ್ದರೂ ಪೊಲೀಸರಿಗೆ ಅಪರಾಧ ಕೃತ್ಯದ ಬಗ್ಗೆ ಸ್ವತ: ಮಾಹಿತಿ ಲಭ್ಯವಾದಲ್ಲಿ ಪೊಲೀಸರು ಸತ್ಯಾ ಸತ್ಯದ ಬಗ್ಗೆ ತನಿಖೆ ನಡೆಸುವ ಉದ್ದೇಶಕ್ಕಾಗಿ ಸ್ಥಳಕ್ಕೆ ಧಾವಿಸಿ ಸ್ಥಳವನ್ನು ಶೋಧಿಸಿ ಅಪರಾಧ ಪತ್ತೆ ಮಾಡಬಹುದಾಗಿದೆ. ಈ ಸಂದರ್ಭದಲ್ಲಿ ಕೃತ್ಯದ ಸ್ಥಳವನ್ನು ಮತ್ತು ಕೃತ್ಯದ ಬಗ್ಗೆ ಭೌತಿಕ ಪುರಾವೆ ಮತ್ತು ಸಾಕ್ಷ್ಯಾಧಾರಗಳನ್ನು ರಕ್ಷಣೆ ಮಾಡುವ ಹೊಣೆಯನ್ನು ಪೊಲೀಸರು ಹೊಂದಿರುತ್ತಾರೆ.















































error: Content is protected !!
Scroll to Top