ಕರ್ನಾಟಕ ಸಿವಿಲ್ ನ್ಯಾಯಾಲಯಗಳ ಅಧಿನಿಯಮ 1967

ಕರ್ನಾಟಕ ರಾಜ್ಯದಲ್ಲಿ ಉದ್ಭವಿಸುವ ಸಿವಿಲ್ ವಿವಾದಗಳನ್ನು ಕಾನೂನಾತ್ಮಕವಾಗಿ ಮತ್ತು ಪರಿಣಾಮಕಾರಿಯಾಗಿ ಇತ್ಯರ್ಥಗೊಳಿಸುವ ಉದ್ದೇಶದಿಂದ ಮತ್ತು ನ್ಯಾಯದಾನ ವ್ಯವಸ್ಥೆಯನ್ನು ಅಂದರೆ ನ್ಯಾಯಾಲಯಗಳ ರಚನೆ, ನ್ಯಾಯಾಲಯಗಳ ಕಾರ್ಯವ್ಯಾಪ್ತಿ, ವಿವಾದಕ್ಕೆ ಸಂಬಂಧಪಟ್ಟಂತೆ ಪ್ರಕರಣಗಳನ್ನು ನ್ಯಾಯಾಲಯಕ್ಕೆ ಸಲ್ಲಿಸುವ ಬಗ್ಗೆ ವ್ಯವಸ್ಥೆ, ಹಾಗೂ ನ್ಯಾಯಾಲಯಕ್ಕೆ ಸಲ್ಲಿಕೆಯಾದ ಯಾವುದೇ ಪ್ರಕರಣಗಳನ್ನು ಮತ್ತು ಅದಕ್ಕೆ ಸಂಬಂಧಪಟ್ಟ ವಿವಾದವನ್ನು ತೀರ್ಮಾನಿಸುವ ಬಗ್ಗೆ ನ್ಯಾಯಾಲಯವು ಅನುಸರಿಸಬೇಕಾದ ರೀತಿ ಮತ್ತು ನಿಯಮಗಳು ಇತ್ಯಾದಿಗಳ ಕುರಿತು ಕರ್ನಾಟಕ ಸಿವಿಲ್ ನ್ಯಾಯಾಲಯಗಳ ಅಧಿನಿಯಮ 1967 ಎಂಬ ಕಾನೂನು ಜ್ಯಾರಿಯಲ್ಲಿರುತ್ತದೆ.

ಕರ್ನಾಟಕದಲ್ಲಿ ಸಿವಿಲ್ ವಿವಾದಗಳ ಕುರಿತಂತೆ ನ್ಯಾಯದಾನ ವ್ಯವಸ್ಥೆಯ ಬಗ್ಗೆ ಲಘು ವ್ಯವಹಾರಗಳ ನ್ಯಾಯಾಲಯಗಳು, ಕಿರಿಯ ಶ್ರೇಣಿಯ ಸಿವಿಲ್ ನ್ಯಾಯಾಲಯಗಳು, ಹಿರಿಯ ಶ್ರೇಣಿಯ ಸಿವಿಲ್ ನ್ಯಾಯಾಲಯಗಳು ಮತ್ತು ಜಿಲ್ಲಾ ನ್ಯಾಯಾಲಯಗಳು ಇರುತ್ತವೆ. ಸದ್ಯಕ್ಕೆ ಕಿರಿಯ ಶ್ರೇಣಿಯ ಸಿವಿಲ್ ನ್ಯಾಯಾಲಯಗಳು ಐದು ಲಕ್ಷದವರೆಗಿನ ಮೌಲ್ಯದ ಸಿವಿಲ್ ವಿವಾದಗಳನ್ನು, ವಿಚಾರಿಸಿ ನಿರ್ಣಯಿಸುವ ಕಾರ್ಯವ್ಯಾಪ್ತಿಯನ್ನು ಹೊಂದಿರುತ್ತದೆ. ಅದೇ ರೀತಿಯಾಗಿ ಐದು ಲಕ್ಷಕ್ಕಿಂತ ಜಾಸ್ತಿ ಮೌಲ್ಯಾಪನೆಯ ಸಿವಿಲ್ ವಿವಾದಗಳನ್ನು ನಿರ್ಧರಿಸುವ ಕಾರ್ಯವ್ಯಾಪ್ತಿಯನ್ನು ಹಿರಿಯ ಶ್ರೇಣಿಯ ಸಿವಿಲ್ ನ್ಯಾಯಾಲಯಗಳು ಹೊಂದಿರುತ್ತವೆ. ಮೇಲ್ಕಾಣಿಸಿದ ಕಾನೂನಿನ 28ನೇ ಕಲಂ ಪ್ರಕಾರ ಸಾಮಾನ್ಯವಾಗಿ ಏಪ್ರಿಲ್ ಹಾಗೂ ಡಿಸೆಂಬರ್ ತಿಂಗಳಲ್ಲಿ ಸಿವಿಲ್ ನ್ಯಾಯಾಲಯಗಳು ಹೊಂದುವ ದೀರ್ಘಕಾಲದ ರಜಾ ಅವಧಿಯಲ್ಲಿ (ವೆಕೇಶನ್) ಪ್ರತಿಯೊಂದು ಜಿಲ್ಲೆಯಲ್ಲಿ ತಾತ್ಕಾಲಿಕವಾಗಿ ರಜಾ ಅವಧಿಯ ನ್ಯಾಯಾಲಯಗಳು ಇರುತ್ತವೆ. ಈ ನ್ಯಾಯಾಲಯಗಳು ಸಿವಿಲ್ ವಿವಾದಗಳಿಗೆ ಸಂಬಂಧಪಟ್ಟ ಯಾವುದೇ ತುರ್ತು ವಿಷಯಗಳನ್ನು ಮಾತ್ರ ವಿಚಾರಿಸಿ ಅಗತ್ಯವಿದ್ದಲ್ಲಿ ಸೂಕ್ತ ಆದೇಶವನ್ನು ನೀಡಬಹುದಾಗಿದೆ.

ಮೇಲ್ಕಾಣಿಸಿದ ಕಾನೂನಿನ ಪ್ರಕಾರ ಬೆಂಗಳೂರು ನಗರ ಪ್ರದೇಶಗಳ ವ್ಯಾಪ್ತಿಯೊಳಗಿನ ಸಿವಿಲ್ ದಾವೆ ಅಥವಾ ವಿವಾದಗಳನ್ನು ಇತ್ಯರ್ಥಗೊಳಿಸಲು ಬೆಂಗಳೂರು ನಗರ ಸಿವಿಲ್ ನ್ಯಾಯಾಲಯಗಳ ಕಾಯ್ದೆ ರಂತೆ ಬೆಂಗಳೂರು ನಗರದಲ್ಲಿ ಸಿಟಿ ಸಿವಿಲ್ ನ್ಯಾಯಾಲಯಗಳನ್ನು ಸ್ಥಾಪಿಸಲಾಗಿದೆ. ಹಕ್ಕಿನ ಕುರಿತಂತೆ ವಿವಾದವಿಲ್ಲದ ವಿಷಯಗಳಿಗೆ ಸಂಬಂಧಪಟ್ಟ ದಾವೆಯನ್ನು ಇತ್ಯರ್ಥಗೊಳಿಸಲು ಲಘು ವ್ಯವಹಾರಗಳ ನ್ಯಾಯಾಲಯಗಳನ್ನು ಕರ್ನಾಟಕ ಲಘು ವ್ಯವಹಾರಗಳ ನ್ಯಾಯಾಲಯಗಳ ಕಾಯ್ದೆ ರಚಿಸಲಾಗಿರುತ್ತದೆ. ಅದೇ ರೀತಿ ವೈವಾಹಿಕ ಹಾಗೂ ಕೌಟುಂಬಿಕ ವಿವಾದಗಳನ್ನು ಸೌಹಾರ್ದಯುತವಾಗಿ ಮತ್ತು ತ್ವರಿತವಾಗಿ ಇತ್ಯರ್ಥಪಡಿಸುವ ಉದ್ದೇಶದಿಂದ ಕುಟುಂಬ ನ್ಯಾಯಾಲಯಗಳ ಕಾಯ್ದೆ ಪ್ರಕಾರ ಪ್ರತಿಯೊಂದು ಜಿಲ್ಲೆಯಲ್ಲಿ ಕೌಟುಂಬಿಕ ನ್ಯಾಯಾಲಯಗಳನ್ನು ಸ್ಥಾಪಿಸಲಾಗಿದೆ.

ಯಾವುದೇ ಒಂದು ಸಿವಿಲ್ ವಿವಾದಕ್ಕೆ ಸಂಬಂಧಪಟ್ಟ ಸಿವಿಲ್ ದಾವೆಯನ್ನು ಇತ್ಯರ್ಥಪಡಿಸಲು ಅಂದರೆ ಕರ್ನಾಟಕ ಸಿವಿಲ್ ನ್ಯಾಯಾಲಯಗಳ ಅಧಿನಿಯಮ 1967 ಹಾಗೂ ಸಿವಿಲ್ ಪ್ರಕ್ರಿಯ ಸಂಹಿತೆ (ಸಿವಿಲ್ ಪ್ರೊಸೀಜರ್ ಕೋಡ್) ಕೆಲವು ಹಂತಗಳನ್ನು ತಿಳಿಸಿದ್ದು, ಅದರಂತೆ ಪ್ರಥಮವಾಗಿ ನೊಂದಿತ ಪಕ್ಷಗಾರ ನಿಗಧಿತ ನ್ಯಾಯಾಲಯ ಶುಲ್ಕದೊಂದಿಗೆ ತನ್ನ ವಾದ ಪತ್ರವನ್ನು ಸಂಬಂಧಪಟ್ಟ ದಾಖಲೆಗಳೊಂದಿಗೆ ನ್ಯಾಯಾಲಯಕ್ಕೆ ಸಲ್ಲಿಸಬೇಕಾಗಿರುತ್ತದೆ. ಆ ನಂತರ ನ್ಯಾಯಾಲಯವು ಸಿವಿಲ್ ದಾವೆ ಅಂದರೆ ಪ್ರಕರಣವನ್ನು ನೋಂದಾಯಿಸಿಕೊಂಡು ಪ್ರತಿವಾದಿಗಳಿಗೆ ಸದರಿ ಪ್ರಕರಣದ ಬಗ್ಗೆ ಹೇಳಿಕೆ ನೀಡಲು ಅವಕಾಶ ನೀಡುವುದಕ್ಕಾಗಿ ಮುಂದಿನ ದಿನಾಂಕವನ್ನು ನಿರ್ಧರಿಸಿ ಎದುರು ಪಕ್ಷಗಾರರಿಗೆ ಅಂದರೆ ಪ್ರತಿವಾದಿಗಳಿಗೆ ತಿಳುವಳಿಕೆ ಪತ್ರ (ಸಮನ್ಸ್) ಜ್ಯಾರಿಗೊಳಿಸುವಂತೆ ಆದೇಶ ಮಾಡುತ್ತದೆ. ಈ ರೀತಿಯಾಗಿ ಪ್ರತಿವಾದಿಗಳ ಹಾಜರಾತಿಗಾಗಿ ನಿರ್ಧರಿಸಿದ ದಿನಾಂಕದಂದು ಪ್ರತಿವಾದಿಗಳು ನ್ಯಾಯಾಲಯಕ್ಕೆ ಹಾಜರಾಗದೇ ಇದ್ದ ಸಂದರ್ಭದಲ್ಲಿ ಅವರ ಗೈರು ಹಾಜರಿಯಲ್ಲಿ ಸೂಕ್ತ ಆದೇಶವನ್ನು ಮಾಡುವ ಅಧಿಕಾರವನ್ನು ನ್ಯಾಯಾಲಯವು ಹೊಂದಿರುತ್ತದೆ. ಒಂದು ವೇಳೆ ನಿಗಧಿತ ದಿನಾಂಕದಂದು ಪ್ರತಿವಾದಿಗಳು ಸ್ವತ: ಅಥವಾ ತಮ್ಮ ವಕೀಲರ ಮೂಲಕ ನ್ಯಾಯಾಲಯಕ್ಕೆ ಹಾಜರಾದ ಸಂದರ್ಭದಲ್ಲಿ ನ್ಯಾಯಾಲಯವು ಪ್ರತಿವಾದಿಗಳಿಗೆ ತಮ್ಮ ಹೇಳಿಕೆ ಕುರಿತಂತೆ ಆಕ್ಷೇಪಣಾ ಪತ್ರ ಅಥವಾ ಪ್ರತಿವಾದ ಪತ್ರವನ್ನು ಸಲ್ಲಿಸಲು ಅವಕಾಶ ನೀಡಿ ಮುಂದಿನ ದಿನಾಂಕವನ್ನು ನಿರ್ಧರಿಸುತ್ತದೆ. ಪ್ರತಿವಾದಿಗಳು ತಮ್ಮ ಆಕ್ಷೇಪಣಾ ಪತ್ರ ಅಥವಾ ಪ್ರತಿವಾದ ಪತ್ರವನ್ನು ಸಲ್ಲಿಸಿದ ನಂತರ ನ್ಯಾಯಾಲಯವು ವಿವಾದದ ಇತ್ಯರ್ಥ ಕುರಿತಂತೆ ವಿವಾದಾಂಶಗಳನ್ನು ರಚಿಸಿ, ದಾವೆಗೆ ಸಂಬಂಧಪಟ್ಟ ಪಕ್ಷಗಾರರನ್ನು ಮತ್ತು ಅವರ ಸಾಕ್ಷಿದಾರರನ್ನು ವಿಚಾರಿಸಿ, ವಾದಿ ಪ್ರತಿವಾದಿಯರ ವಾದ ವಿವಾದಗಳನ್ನು ಆಲಿಸಿ ತೀರ್ಪನ್ನು ನೀಡುತ್ತದೆ. ವಿವಾದಕ್ಕೆ ಸಂಬಂಧಪಟ್ಟ ಪಕ್ಷಗಾರರ ಪೈಕಿ ಯಾರೊಬ್ಬರು ನ್ಯಾಯಾಲಯಕ್ಕೆ ತುರ್ತು ಅಥವಾ ತಾತ್ಕಾಲಿಕ ಪರಿಹಾರವನ್ನು ಕೋರಿ ಮಧ್ಯಂತರ ಅರ್ಜಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ ಸಂದರ್ಭದಲ್ಲಿ, ನ್ಯಾಯಾಲಯವು ಅಂತಹ ಅರ್ಜಿಯನ್ನು ಆಲಿಸಿ ಎದುರು ಪಕ್ಷಗಾರರಿಗೆ ನೋಟೀಸು ನೀಡದೇ ಏಕಪಕ್ಷೀಯ ಸೂಕ್ತ ಮಧ್ಯಂತರ ಆದೇಶವನ್ನು ನೀಡಿ ಪ್ರತಿವಾದಿಗಳ ಹಾಜರಾತಿಗಾಗಿ ಮುಂದಿನ ದಿನಾಂಕವನ್ನು ನಿರ್ಧರಿಸಬಹುದಾಗಿದೆ. ಈ ಕಾರಣಕ್ಕಾಗಿ ವಿವಾದಕ್ಕೆ ಸಂಬಂಧಪಟ್ಟ ಯಾವುದೇ ಪಕ್ಷಗಾರರ ಪೈಕಿ ಯಾರಾದರೂ ನ್ಯಾಯಾಲಯಕ್ಕೆ ಸುಳ್ಳು ಮಾಹಿತಿ ನೀಡಿ ಏಕಪಕ್ಷೀಯ ತಾತ್ಕಾಲಿಕ ಆದೇಶವನ್ನು ಪಡೆಯುವುದನ್ನು ತಡೆಗಟ್ಟುವ ಉದ್ದೇಶದಿಂದ ನ್ಯಾಯಾಲಯಕ್ಕೆ ಕೇವಿಯಟ್ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಕೇವಿಯಟ್ ಅರ್ಜಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ ದಿನಾಂಕದಿಂದ 90 ದಿನಗಳ ಅವಧಿಯವರೆಗೆ ಎದುರು ಪಕ್ಷಗಾರರು ಕೇವಿಯಟ್ ಅರ್ಜಿದಾರರ ವಿರುದ್ಧ ಯಾವುದೇ ಸಿವಿಲ್ ದಾವೆಯನ್ನು ದಾಖಲಿಸಿ ಮಧ್ಯಂತರ ಆದೇಶವನ್ನು ಕೇಳಿದ್ದಲ್ಲಿ ನ್ಯಾಯಾಲಯವು ಕೇವಿಯಟ್ ಅರ್ಜಿದಾರರರಿಗೆ ಸೂಕ್ತ ನೋಟೀಸು ನೀಡಿ, ಅವರಿಗೆ ಆಕ್ಷೇಪಣೆಯನ್ನು ಸಲ್ಲಿಸಲು ಅವಕಾಶ ನೀಡಿ ಉಭಯ ಪಕ್ಷಗಾರರನ್ನು ಆಲಿಸಿದ ನಂತರವೇ ಸೂಕ್ತ ಆದೇಶವನ್ನು ಮಾಡುವ ಅಧಿಕಾರವನ್ನು ಹೊಂದಿರುತ್ತದೆ. ಇದರಿಂದಾಗಿ ವಿವಾದಕ್ಕೆ ಸಂಬಂಧಪಟ್ಟ ಪಕ್ಷಗಾರರ ಪೈಕಿ ಯಾರು ಕೂಡ ಕಾನೂನನ್ನು ದುರ್ಬಳಕೆ ಮಾಡದಂತೆ ಮತ್ತು ನ್ಯಾಯಾಲಯಕ್ಕೆ ಸುಳ್ಳು ಹೇಳಿ, ತನ್ನ ಎದುರು ಪಕ್ಷಗಾರರ ವಿರುದ್ಧ ಏಕಪಕ್ಷೀಯ ಮಧ್ಯಂತರ ಆದೇಶವನ್ನು ಪಡೆಯದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಬಹುದಾಗಿದೆ.









































error: Content is protected !!
Scroll to Top