ಬಿಸಿಲ ಬೇಗೆಗೆ ತತ್ತರಿಸಿದ ಜನ
ಬೆಂಗಳೂರು : ರಾಜ್ಯದಲ್ಲಿ ಮಳೆ ಕೊರತೆ ಒಂದಡೆಯಾದರೆ ಮತ್ತೊಂದೆಡೆ ಬಿಸಿಲಿನ ಬೇಗೆ ತೀವ್ರಗೊಂಡಿದ್ದು, ಜನರು ತತ್ತರಿಸುವಂತಾಗಿದೆ. ಕಳೆದೆರಡು ತಿಂಗಳಿನಿಂದ ನಿರಂತರವಾಗಿ ಬಿಸಿಲಿನ ಬೇಗೆ ಹೆಚ್ಚಾಗಿದ್ದು, ಜನರು ಬಸವಳಿದಿದ್ದಾರೆ. ಮೇ 1ರಂದು ರಾಜ್ಯದ 25 ಜಿಲ್ಲೆಗಳಲ್ಲಿ ಬರೋಬ್ಬರಿ 40 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಈ ಪೈಕಿ ರಾಯಚೂರು, ಕಲಬುರಗಿ, ಯಾದಗಿರಿ ಜಿಲ್ಲೆಗಳಲ್ಲಿ ಅತಿ ಹೆಚ್ಚು 46 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಕಂಡುಬಂದಿದೆ.
ರಾಜ್ಯದಲ್ಲಿ ಈಗಾಗಲೇ ಕಳೆದ ವರ್ಷದ ಮಳೆಯಿಲ್ಲದೇ ಬರಗಾಲವನ್ನು ಎದಿರಿಸಲಾಗಿದೆ. ಬರದಿಂದ ಬೇಸತ್ತಿರುವ ರಾಜ್ಯದ ಜನತೆಗೆ ಈ ವರ್ಷದ ಮಳೆಗಾಲ ಆರಂಭಕ್ಕೂ ಮುನ್ನವೇ ನೆತ್ತರನ್ನು ಸುಡುವ ಬೇಸಿಗೆ ಆರಂಭವಾಗಿದೆ. ನಮ್ಮ ರಾಜ್ಯದ 29 ಜಿಲ್ಲೆಗಳ ಪೈಕಿ 25 ಜಿಲ್ಲೆಗಳಲ್ಲಿಯೂ 40 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಉಳಿದಂತೆ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉತ್ತರ ಕನ್ನಡ ಹಾಗೂ ಉಡುಪಿ ಹಾಗೂ ಗುಡ್ಡಗಾಡು ಪ್ರದೇಶವಾದ ಕೊಡಗು ಜಿಲ್ಲೆಯಲ್ಲಿ ಮಾತ್ರ 40 ಡಿಗ್ರಿ ಸೆಲ್ಸಿಯಸ್‌ನಿಂದ ಕಡಿಮೆ ಉಷ್ಣಾಂಶವಿದೆ.

ಸರ್ವಕಾಲಕ್ಕೂ ಸಮಶೀತೋಷ್ಣವನ್ನು ಹೊಂದಿರುತ್ತಿದ್ದ ಬೆಂಗಳೂರು ನಗರ ಜಿಲ್ಲೆಯ ಹೊರಭಾಗ ಕೆಂಗೇರಿಯಲ್ಲಿ ಶೇ.41 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗುವ ಮೂಲಕ ಕಳೆದ ನಾಲ್ಕು ದಶಕಗಳ ಹಿಂದೆ ದಾಖಲೆಉಯೊಂದನ್ನು ಸರಿಗಟ್ಟಿದಂತಾಗಿದೆ. ಉಳಿದಂತೆ ಬೆಂಗಳೂರು ನಗರದ ನೆರೆಹೊರೆ ಜಿಲ್ಲೆಗಳಾದ ಬೆಂಗಳೂರು ಗ್ರಾಮಾಂತರ 40.6, ರಾಮನಗರ 42, ಕೋಲಾರ 43, ಚಿಕ್ಕಬಳ್ಳಾಪುರ 41 ಡಿಡ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿರುವ ವರದಿಯಾಗಿದೆ.





















