ದೆಹಲಿ : ಕೋವಿಡ್ -19 ಲಸಿಕೆಗಳಿಗಾಗಿ ನೀಡಲಾದ ಪ್ರಮಾಣಪತ್ರಗಳಿಂದ ಪ್ರಧಾನಿ ನರೇಂದ್ರ ಮೋದಿಯವರ ಫೋಟೋವನ್ನು ತೆಗೆದುಹಾಕಲಾಗಿದೆ. ಪ್ರಧಾನಿ ಮೋದಿಯವರ ಚಿತ್ರವನ್ನು ಮುದ್ರಿಸಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು “ಒಟ್ಟಿಗೆ, ಭಾರತವು ಕೋವಿಡ್ -19 ಅನ್ನು ಸೋಲಿಸುತ್ತದೆ” ಎಂಬ ಉಲ್ಲೇಖಿಸಿ, ಪ್ರಮಾಣ ಪತ್ರಗಳನ್ನು ನೀಡಿತ್ತು.
ಮೋದಿಯವರ ಚಿತ್ರ ತೆಗೆದುಹಾಕಿದ್ದನ್ನು ಬುಧವಾರ ಸಾಮಾಜಿಕ ಮಾಧ್ಯಮ ಬಳಕೆದಾರರು ಗಮನಸೆಳೆದಿದ್ದಾರೆ. ಲೋಕಸಭೆ ಚುನಾವಣೆಗೆ ಮಾದರಿ ನೀತಿ ಸಂಹಿತೆ (ಎಂಸಿಸಿ) ಜಾರಿಯಲ್ಲಿರುವ ಕಾರಣ ಲಸಿಕೆ ಪ್ರಮಾಣಪತ್ರದಿಂದ ಚಿತ್ರವನ್ನು ತೆಗೆದುಹಾಕಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಧಿಕಾರಿಗಳು ದಿ ಪ್ರಿಂಟ್ಗೆ ತಿಳಿಸಿದ್ದಾರೆ.
ಕೋವಿಡ್ ವ್ಯಾಕ್ಸಿನೇಷನ್ ಪ್ರಮಾಣಪತ್ರದಿಂದ ಮೋದಿ ಅವರ ಫೋಟೋವನ್ನು ತೆಗೆದುಹಾಕಿರುವುದು ಇದೇ ಮೊದಲಲ್ಲ ಎಂಬುದು ಗಮನಿಸಬೇಕಾದ ಸಂಗತಿ. 2022 ರಲ್ಲಿ, ಉತ್ತರ ಪ್ರದೇಶ, ಉತ್ತರಾಖಂಡ, ಪಂಜಾಬ್, ಮಣಿಪುರ ಮತ್ತು ಗೋವಾ ಎಂಬ ಐದು ರಾಜ್ಯಗಳಲ್ಲಿ ನೀಡಲಾದ ಲಸಿಕೆ ಪ್ರಮಾಣಪತ್ರದಿಂದ ಮೋದಿಯವರ ಭಾವಚಿತ್ರವನ್ನು ತೆಗೆದುಹಾಕಲಾಯಿತು. ಆ ರಾಜ್ಯಗಳ ವಿಧಾನಸಭಾ ಚುನಾವಣೆಯ ತಯಾರಿಗಾಗಿ ಭಾರತೀಯ ಚುನಾವಣಾ ಆಯೋಗ (ಇಸಿಐ) ಈ ಕ್ರಮವನ್ನು ಕಡ್ಡಾಯಗೊಳಿಸಿದೆ.





















