ಮೋದಿ ಬೆಂಬಲಿಗರನ್ನು ಮುಟ್ಟಿ ನೋಡಲಿ ಸಚಿವ ತಂಗಡಗಿಗೆ ಮುಟ್ಲುಪಾಡಿ ಸತೀಶ್ ಸವಾಲು

ಕಾರ್ಕಳ : ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯತೆಯಿಂದ ಕoಗೆಟ್ಟಿರುವ ಕಾಂಗ್ರೆಸ್‌ ಮೋದಿಯವರನ್ನು ಅವಹೇಳನ ಮಾಡುವುದೇ ತನ್ನ ಕಾರ್ಯವೆಂದು ಸಾರುತ್ತಿದೆ. ಅಂದು ಸೋನಿಯಾ ಗಾಂಧಿ ಮೋದಿಯವರನ್ನು ಸಾವಿನ ವ್ಯಾಪಾರಿ ಎಂದಿದ್ದರು. ಖರ್ಗೆ ಮೋದಿಯವರನ್ನು ವಿಷ ಸರ್ಪ ಎಂದು ಜರೆದರು. ಮುಖ್ಯಮಂತ್ರಿ ಸಿದ್ದರಾಮಯ್ಯ ನರಹಂತಕ ಎಂದು ಸಂಭೋದಿಸಿದರು. ಅದರ ಮುಂದುವರೆದ ಭಾಗವಾಗಿ ಈಗ ಸಚಿವ ಶಿವರಾಜ್‌ ತಂಗಡಗಿ ಮೋದಿ ಬೆಂಬಲಿಸುವ ಯುವಕರಿಗೆ ಕಪಾಳಕ್ಕೆ ಹೊಡೆಯಿರಿ ಎಂದಿದ್ದಾರೆ. ಕಪಾಳಕ್ಕೆ ಹೊಡೆಯುವುದು ದೂರದ ಮಾತು. ಶಿವರಾಜ್ ತಂಗಡಗಿ ತಾಕತ್ತಿದ್ದರೆ ಮೋದಿ ಮೋದಿ ಎನ್ನುವ ಕೋಟ್ಯಾಂತರ ಮೋದಿ ಅಭಿಮಾನಿಗಳನ್ನು ಮುಟ್ಟಿ ನೋಡಲಿ ಎಂದು ಬಿಜೆಪಿ ಜಿಲ್ಲಾ ವಕ್ತಾರ ಸತೀಶ್ ಶೆಟ್ಟಿ ಮುಟ್ಲುಪಾಡಿ ಸವಾಲು ಹಾಕಿದ್ದಾರೆ.

ಚುನಾವಣಾ ಸೋಲಿನ ಭೀತಿಯಿಂದ ಕಾಂಗ್ರೆಸ್‌ ಮೋದಿಯವರ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿದೆ. ದೇಶದಲ್ಲಿ ಪಾತಾಳಕ್ಕೆ ಕುಸಿದಿರುವ ಕಾಂಗ್ರೆಸ್‌, ರಾಜ್ಯದಲ್ಲೂ ಪಾತಾಳಕ್ಕಿಳಿಯುವ ಭಯದಿಂದ ಈ ರೀತಿಯ ಹೇಳಿಕೆಗಳನ್ನು ನೀಡುತ್ತಿದೆ. ಮೋದಿ ಪರ ಘೋಷಣೆ ಕೂಗಿದವರಿಗೆ ಕಪಾಳ ಮೋಕ್ಷ ಮಾಡುವ ಸಚಿವರ ಕರೆ ಮಹಾತ್ಮ ಗಾಂಧಿಯವರ ಅಹಿಂಸಾತ್ಮಕ ಆದರ್ಶಗಳಿಗೆ ವಿರುದ್ಧವಾಗಿದೆ. ಇದು ಕಾಂಗ್ರೆಸ್ ಪಕ್ಷದ ನೀತಿಯಲ್ಲಿ ಆತಂಕಕಾರಿ ಬದಲಾವಣೆಯನ್ನು ಸೂಚಿಸುತ್ತದೆ. ಹಿಂಸಾಚಾರಕ್ಕೆ ಪ್ರಚೋದನೆ ನೀಡುವ ಕಾಂಗ್ರೆಸ್ ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಧಕ್ಕೆಯೊಡ್ಡುತ್ತಿದೆ ಎಂದು ಸತೀಶ್‌ ಕಿಡಿಕಾರಿದರು.

ಯುವಕರ ಉತ್ಸಾಹ ನೋಡಲಾಗುತ್ತಿಲ್ಲ
ದೇಶದ ಯುವ ಜನತೆ ಮೋದಿ ಆಡಳಿತವನ್ನು ಮೆಚ್ಚಿ ಮೂರನೇ ಬಾರಿಗೆ ಮೋದಿಯವರನ್ನು ಪ್ರಧಾನಿಯನ್ನಾಗಿಸಲು ತೋರುತ್ತಿರುವ ಉತ್ಸಾಹವನ್ನು ಕಾಂಗ್ರೆಸ್ಸಿಗೆ ನೋಡಲಾಗುತ್ತಿಲ್ಲ. ಮೋದಿಯವರ ಆಡಳಿತಾವಧಿಯಲ್ಲಿ ನಿರುದ್ಯೋಗದ ಪ್ರಮಾಣ ಶೇ. 4.7%ರಷ್ಟು ಕುಸಿದಿದೆ. ಆರ್ಥಿಕತೆಯಲ್ಲಿ ಭಾರತ 5ನೇ ಸ್ಥಾನಕ್ಕೇರಿರುವ ಪರಿಣಾಮ ಯುವಕರಿಗೆ ಹೆಚ್ಚಿನ ಉದ್ಯೋಗವಕಾಶಗಳು ದೊರಕಿವೆ. ಅದಕ್ಕಾಗಿ ಯುವಜನತೆ ಮೋದಿ ಮೋದಿ ಎನ್ನುತ್ತಾರೆ. ಇದನ್ನು ಸಹಿಸದ ಕಾಂಗ್ರೆಸ್‌ ತೀರ ಕೆಳಮಟ್ಟಕ್ಕೆ ಇಳಿದು ತನ್ನ ನಾಲಿಗೆಯನ್ನು ಹರಿಯಬಿಡುತ್ತಿದೆ ಎಂದು ಸತೀಶ್‌ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಕ್ಷಮೆ ಕೇಳಲಿ
2022-23 ರ ಅವಧಿಯಲ್ಲಿ 5.20 ಲಕ್ಷ ಯುವಕರು ರಾಜ್ಯದಲ್ಲಿ ಪದವಿ ಪಾಸ್‌ ಮಾಡಿರುತ್ತಾರೆ. ಆದರೆ 3, 500 ವಿದ್ಯಾರ್ಥಿಗಳಿಗೆ ಮಾತ್ರ ಕಾಂಗ್ರೆಸ್ಸಿನ ಯುವ ನಿಧಿ ಯೋಜನೆಯಡಿ ಭತ್ಯೆ ದೊರೆತಿದೆ. ಯುವಕರಿಗೆ ಸುಳ್ಳು ಹೇಳಿ ಮೋಸ ಮಾಡಿದ ಕಾಂಗ್ರೆಸ್‌ ರಾಜ್ಯದ ಯುವ ಜನತೆಯ ಕ್ಷಮೆ ಕೇಳಬೇಕೆಂದು ಸತೀಶ್‌ ಆಗ್ರಹಿಸಿದರು.

ಮಹಿಳಾ ವಿರೋಧಿ ಧೋರಣೆ
ಮಹಿಳಾ ಸಬಲೀಕರಣದ ಬಗ್ಗೆ ಉದ್ದುದ್ದ ಬಾಷಣ ಮಾಡುವ ರಾಹುಲ್‌ ಗಾಂಧಿ ಕಂಗನಾ ರಣಾವತ್‌ ಬಗ್ಗೆ ಕಾಂಗ್ರೆಸ್‌ ವಕ್ತಾರೆ ಸುಪ್ರಿಯಾ ತೋರಿರುವ ವರ್ತನೆಯನ್ನು ಖಂಡಿಸಿಲ್ಲ. ಕಾಂಗ್ರೆಸ್‌ ಪಕ್ಷ ರಾಜೀವ್‌ ಗಾಂಧಿ ಕಾಲದಿಂದಲೂ ಮಹಿಳಾ ವಿರೋಧಿ ಧೋರಣೆಯನ್ನು ಅನುಸರಿಸಿಕೊಂಡು ಬಂದಿದೆ. ಅಂದು ಶಾ ಬಾನು ಪ್ರಕರಣದಲ್ಲಿ ಮುಸ್ಲಿಂ ಹೆಣ್ಣು ಮಕ್ಕಳ ಜೀವನಕ್ಕೆ ಕೊಳ್ಳಿ ಇಟ್ಟಿತ್ತು ಎಂದು ತಿಳಿಸಿರುವ ಸತೀಶ್‌ ಅವರು ಸಂಸ್ಕೃತಿಯ ಗಂಧ ಗಾಳಿ ಅರಿವಿಲ್ಲದ ಶಿವರಾಜ್ ತಂಗಡಿಗೆ ಕಾಂಗ್ರೆಸ್ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಹೊಣೆ ನೀಡಿರುವುದು ನಾಚಿಕೆಗೇಡಿನ ಸಂಗತಿ. ತಂಗಡಗಿ ಹೇಳಿಕೆಯಿಂದ ಕಾಂಗ್ರೆಸ್ ಗೂಂಡಾಗಿರಿಯ ಪರಮಾವಧಿಯನ್ನು ದಾಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.





























































































































error: Content is protected !!
Scroll to Top