ಬೆಂಗಳೂರು : ಅಬಕಾರಿ ನೀತಿ ಸಂಬಂಧಿತ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಆಮ್ ಆದ್ಮಿ ಪಕ್ಷದ ನಾಯಕ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಕುರಿತು ನನಗೆ ಸಂಪೂರ್ಣ ನಿರಾಶೆಯಾಗಿದೆ ಎಂದು ಸುಪ್ರೀಂ ಕೋರ್ಟ್ ಮಾಜಿ ನ್ಯಾಯಾಧೀಶ ಹಾಗೂ ನಿವೃತ್ತ ಲೋಕಾಯುಕ್ತ ಎನ್. ಸಂತೋಷ್ ಹೆಗ್ಡೆ ಶುಕ್ರವಾರ ಹೇಳಿದ್ದಾರೆ.
ಈ ಹಿಂದೆ ಅಣ್ಣಾ ಹಜಾರೆ ಅವರು ಭಾರತದ ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡಿದ್ದರು. ಅದಕ್ಕೆ ನಾನು ಹಾಗೂ ಕೇಜ್ರಿವಾಲ್ ಸಾಥ್ ನೀಡಿದ್ದೆವು. ಅವರ ಹೋರಾಟಕ್ಕೆ ಸಾಥ್ ನೀಡಿದ್ದ ಕೇಜ್ರಿವಾಲ್ ಉತ್ತಮ ಆಡಳಿತ ನೀಡುತ್ತಾರೆ ಎಂದು ಭಾವಿಸಿದ್ದೆ. ಆದರೆ ಅವರ ಆಡಳಿತದಲ್ಲಿ ಈಗ ಭ್ರಷ್ಟಾಚಾರವೇ ತೀವ್ರ ಗಮನ ಸೆಳೆಯುತ್ತಿದೆ. ಅಧಿಕಾರ ಹಾಗೂ ದುರಾಸೆ ಕೇಜ್ರಿವಾಲ್‌ರನ್ನು ಹಿಂದಿಕ್ಕುತ್ತದೆ ಎಂಬುದು ಅವರ ಪ್ರಕರಣದಿಂದ ಸಂಪೂರ್ಣವಾಗಿ ತಿಳಿಯುತ್ತಿದೆ. ಆಪ್ ಆಡಳಿತವು ಅಧಿಕಾರವನ್ನು ಸಂಪೂರ್ಣವಾಗಿ ಭ್ರಷ್ಟಾಚಾರಕ್ಕೆ ಬಳಸುತ್ತಿದೆ ಎಂದು ಸಂತೋಷ್ ಹೆಗ್ಡೆ ಬೇಸರ ವ್ಯಕ್ತಪಡಿಸಿದರು.






























































